ಜಾತಿಗಣತಿ ಸಮೀಕ್ಷೆ ವಿಚಾರದಲ್ಲಿ ನ್ಯಾಯಾಲಯದ ಆದೇಶ ಉಲ್ಲಂಘನೆ : ಆರ್. ಅಶೋಕ ಆಕ್ರೋಶ
ಬೆಂಗಳೂರು, 18 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ರಾಜ್ಯ ಸರ್ಕಾರ ಉಚ್ಚ ನ್ಯಾಯಾಲಯ ನೀಡಿರುವ ಸ್ಪಷ್ಟ ಆದೇಶವನ್ನು ನಿರ್ಲಕ್ಷ್ಯ ಮಾಡಿದೆಯೆಂದು ಪ್ರತಿ ಪಕ್ಷದ ನಾಯಕ ಆರ್. ಅಶೋಕ ಕಿಡಿಕಾರಿದ್ದಾರೆ. ಜಾತಿಗಣತಿ ಸಮೀಕ್ಷೆಯ ಬಗ್ಗೆ ನ್ಯಾಯಾಲಯ ನೀಡಿದ ಸ್ಪಷ್ಟೀಕರಣದಂತೆ “ಭಾಗವಹಿಸುವುದು ಕಡ್ಡಾಯವಲ್ಲ” ಮತ್ತು
Ashok


ಬೆಂಗಳೂರು, 18 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ರಾಜ್ಯ ಸರ್ಕಾರ ಉಚ್ಚ ನ್ಯಾಯಾಲಯ ನೀಡಿರುವ ಸ್ಪಷ್ಟ ಆದೇಶವನ್ನು ನಿರ್ಲಕ್ಷ್ಯ ಮಾಡಿದೆಯೆಂದು ಪ್ರತಿ ಪಕ್ಷದ ನಾಯಕ ಆರ್. ಅಶೋಕ ಕಿಡಿಕಾರಿದ್ದಾರೆ.

ಜಾತಿಗಣತಿ ಸಮೀಕ್ಷೆಯ ಬಗ್ಗೆ ನ್ಯಾಯಾಲಯ ನೀಡಿದ ಸ್ಪಷ್ಟೀಕರಣದಂತೆ “ಭಾಗವಹಿಸುವುದು ಕಡ್ಡಾಯವಲ್ಲ” ಮತ್ತು “ಪ್ರಜೆಗಳು ನೀಡುವ ಮಾಹಿತಿಯ ಗೌಪ್ಯತೆ ಕಾಪಾಡಬೇಕು” ಎಂಬ ಎರಡೂ ಅಂಶಗಳನ್ನು ಕಾಂಗ್ರೆಸ್ ಸರ್ಕಾರ ಉಲ್ಲಂಘಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಅಶೋಕ ಅವರು ಸಾಮಾಜಿಕ ಮಾಧ್ಯಮದಲ್ಲಿ ನೀಡಿದ ಹೇಳಿಕೆಯಲ್ಲಿ, “ಹೈಕೋರ್ಟ್ ಸ್ಪಷ್ಟವಾಗಿ ಹೇಳಿದ್ದರೂ ಸಹ, ಸರ್ಕಾರ ಅಧಿಕಾರಿಗಳ ಮೂಲಕ ಜನರನ್ನು ಬೆದರಿಸುವ ರೀತಿಯಲ್ಲಿ ವರ್ತಿಸುತ್ತಿದೆ. ಇದು ನ್ಯಾಯಾಂಗ ನಿಂದನೆಗೆ ಸಮಾನ,” ಎಂದು ಹೇಳಿದ್ದಾರೆ.

“ಬೆಂಗಳೂರು ನಗರದಲ್ಲಿ ಹದಗೆಟ್ಟಿರುವ ರಸ್ತೆಗಳ ಕುರಿತು ಖ್ಯಾತ ಉದ್ಯಮಿಗಳು ದನಿ ಎತ್ತಿದಾಗ ಕಾಂಗ್ರೆಸ್ ನಾಯಕರು ‘ನಿಮ್ಮ CSR ನಿಧಿಯಲ್ಲಿ ನೀವೇ ರಸ್ತೆಗುಂಡಿ ಮುಚ್ಚಿ’, ‘ಲೆಕ್ಕಕೊಡಿ’ ಎಂದು ಬೆದರಿಸಿ ಅವಮಾನ ಮಾಡಿದರು. ಈಗ ‘ಇನ್ಫೋಸಿಸ್ ನವರು ಬೃಹಸ್ಪತಿಗಳಾ?’, ‘ಸಮೀಕ್ಷೆಯಲ್ಲಿ ಭಾಗವಹಿಸದವರು ದೇಶದ್ರೋಹಿಗಳು’ ಎಂದು ನಿಂದಿಸುತ್ತಿರುವುದು ದರ್ಪದ ನಿದರ್ಶನ,” ಎಂದು ಟೀಕಿಸಿದ್ದಾರೆ.

“ನಿಮ್ಮ ಸರ್ಕಾರವೇ ನ್ಯಾಯಾಲಯದ ಮುಂದೆ ಮಾಹಿತಿಯ ಗೌಪ್ಯತೆ ಕಾಪಾಡುತ್ತೇವೆ ಎಂದು ಹೇಳಿದೆ. ಹಾಗಾದರೆ ಶ್ರೀಮತಿ ಸುಧಾಮೂರ್ತಿ ಹಾಗೂ ನಾರಾಯಣಮೂರ್ತಿ ಅವರ ಕುಟುಂಬದ ಮಾಹಿತಿ ಹೇಗೆ ಬಹಿರಂಗವಾಯಿತು? ಮಾಹಿತಿ ಸೋರಿಕೆ ಮಾಡಿದ ಸರ್ಕಾರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೀರಾ?” ಎಂದು ಪ್ರಶ್ನಿಸಿದರು.

“ಹೈಕೋರ್ಟ್ ಸ್ಪಷ್ಟವಾಗಿ ಈ ಸಮೀಕ್ಷೆ ಕಡ್ಡಾಯವಲ್ಲ ಎಂದು ಹೇಳಿದೆ. ಹಾಗಿದ್ದರೂ ಭಾಗವಹಿಸದವರನ್ನು ದೇಶದ್ರೋಹಿಗಳು ಎಂದು ಕರೆಯುವುದು ನ್ಯಾಯಾಂಗಕ್ಕೆ ಮಾಡಿದ ಅವಮಾನ. ಉದ್ಯೋಗ ನೀಡುವ, ಆರ್ಥಿಕತೆಯನ್ನು ಬಲಪಡಿಸುವ ಉದ್ಯಮಿಗಳನ್ನು ನಿಂದಿಸುವ ಕಾಂಗ್ರೆಸ್ ನಾಯಕರಿಗೆ ಕನಿಷ್ಠ ನಾಚಿಕೆ ಇರಬೇಕು,” ಎಂದು ಅಶೋಕ ಕಿಡಿಕಾರಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande