ಬಳ್ಳಾರಿ, 18 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಅನುಭವದ ಜೊತೆಯಲ್ಲಿ ಅನುಭಾವವನ್ನು ಕೂಡಿಸಿ ರೂಪಿಸಿದ್ದೇ ಜಗತ್ತಿನ ಮೊದಲ ಸಂಸತ್ತು `ಅನುಭವನ ಮಂಟಪ' ಎಂದು ನಿರಂಜನ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ತಿಳಿಸಿದ್ದಾರೆ.
ಕೊಟ್ಟೂರುಸ್ವಾಮಿ ಮಠದಲ್ಲಿ ನಡೆದ ಶಿವಾನುಭವ ಸಂಪದ - 08ರ ದಿವ್ಯಸಾನಿಧ್ಯವಹಿಸಿ ಆಶೀರ್ವಾದ ಮಾಡಿದ ಶ್ರೀಗಳು, ಅನುಭವ ಹುಟ್ಟು - ಸಾವುಗಳನ್ನು ಹೊಂದಿದ್ದರೆ, ಅನುಭಾವ ಅಗೋಚರವಾದದ್ದು. ಜಗತ್ತಿನ ಮೂಲೆ ಮೂಲೆಗಳಿಂದ ಅನುಭವ ಮಂಟಪಕ್ಕೆ ಬಂದಿದ್ದ ಸಾಧಕರು ಅನುಭವ ಮಂಟಪವನ್ನು ಧಾರ್ಮಿಕ, ಆಧ್ಯಾತ್ಮಕ, ಆದರ್ಶ, ವ್ಯಕ್ತಿತ್ವ, ಜೀವನ ಮೌಲ್ಯಗಳು, ಮಾನವೀಯತೆ ಮತ್ತು ನಿಸ್ವಾರ್ಥ ಶ್ರೀಮಂತಿಕೆಯನ್ನು ತುಂಬಿ ವಚನ ಸಾಹಿತ್ಯ ರೂಪಿಸಲು ಪ್ರೇರಣಾ ಸ್ಥಳವನ್ನಾಗಿ - ಸಮಾಜವನ್ನು ತಿದ್ದುವ ಸಂಸ್ಥೆಯನ್ನಾಗಿ ರೂಪಿಸಿದ್ದರು ಎಂದರು.
ವಿಶ್ವಸಾಹಿತ್ಯ ಕ್ಷೇತ್ರಕ್ಕೆ ಕನ್ನಡ ಭಾಷೆಯು ವಚನ ಸಾಹಿತ್ಯದ ಮೂಲಕ ಅಮೂಲಾಗ್ರವಾದ ಕೊಡುಗೆಯನ್ನು ನೀಡಿದೆ. ವಚನ ಸಾಹಿತ್ಯಕ್ಕೆ 12ನೇ ಶತಮಾನದ ಆಗು-ಹೋಗುಗಳು ಕಾರಣವಾಗಿದ್ದು, ಅಲ್ಲಮ ಪ್ರಭುಗಳ ಅನುಭವ ಮಂಟಪವು ಸ್ಪೂರ್ತಿಯ ಕ್ರಿಯಾಶೀಲ ಕೇಂದ್ರವಾಗಿತ್ತು. ಕ್ರಿಯಾಶೀಲತೆಯು ಗುರಿಯನ್ನು ತಲುಪಿಸುತ್ತದೆ ಎಂದರು.
ಉಪನ್ಯಾಸಕ ಎ.ಎಂ.ಪಿ. ವೀರೇಶಸ್ವಾಮಿ ಅವರು, `ಜಗದ ಮೊದಲ ಸಂಸತ್ತು ಅನುಭವ ಮಂಟಪ'ದ ಕುರಿತು ಉಪನ್ಯಾಸ ನೀಡಿ, ಸ್ಥಾವರವಲ್ಲದ ಅನುಭವ ಮಂಟಪವು ಇಂದಿಗೂ ಪ್ರಸ್ತುತವಾಗಿದೆ. ಅಲ್ಲಮಪ್ರಭುಗಳ ದೂರದೃಷ್ಟಿ, ಜಾತ್ಯಾತೀತತೆ, ಸಮಾನತೆ, ಆದರ್ಶ-ನಿಸ್ವಾರ್ಥ, ಸ್ವಾತಂತ್ರ್ಯ-ಭಾತೃತ್ವ, ಸಾಂಸ್ಕøತಿಕ - ಧಾರ್ಮಿಕ ಪ್ರಜ್ಞೆಗಳನ್ನು ಪ್ರತಿಯೊಬ್ಬರಲ್ಲೂ ಮೂಡಿಸಿ ಶಾಂತಿ - ಸಮಾಧಾನದ ಸಮಾಜವನ್ನು - ವ್ಯಕ್ತಿತ್ವವನ್ನು ರೂಪಿಸಲು ಪೂರಕವಾಗಿತ್ತು ಎಂದರು.
ಮುಖ್ಯ ಅತಿಥಿಗಳಾಗಿದ್ದ ನಾಟಕಕಾರ, ನಿರ್ದೇಶಕ ಕೆ. ಜಗದೀಶ್ ಅವರು, ಡಾ. ಸಂಗನಬಸವ ಮಹಾಸ್ವಾಮಿಗಳ ಸಮಾಜಮುಖಿ ಚಿಂತನೆಗಳು, ಶಿಕ್ಷಣ ಪ್ರೇಮ, ಅಕ್ಷರ ಪ್ರೀತಿಗಳು ತಮ್ಮನ್ನು ಸೆಳೆದು ಬೆಳೆಸಿವೆ. ಕೊಟ್ಟೂರುಸ್ವಾಮಿ ಮಠವನ್ನೂ ಬೆಳೆಸಿ - ಬೆಳಗಿಸಿವೆ ಎಂದರು.
ಪ್ರಥಮದರ್ಜೆ ಗುತ್ತಿಗೆದಾರ ಚನ್ನವೀರನಗೌಡ್ರು, ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಕೋರಿ ವಿರೂಪಾಕ್ಷಪ್ಪ ಅವರು ಮುಖ್ಯ ಅತಿಥಿಗಳಾಗಿದ್ದರು.
ಶ್ರೀಗುರು ಪುಟ್ಟರಾಜ ಗವಾಯಿಗಳ ಸಂಗೀತ ಪಾಠಶಾಲೆ ತಂಡವು ಸಂಗೀತ ಸೇವೆ ಸಲ್ಲಿಸಿತು. ಕುಮಾರಿ ಭಾವನ ಭಕ್ತಿಗೀತೆ ಗಾಯನ ಮಾಡಿದರು. ಅಕ್ಕನಬಳಗದ ಸದಸ್ಯರು ಪ್ರಾರ್ಥನೆ ಸಲ್ಲಿಸಿದರು. ಶ್ರೀಮತಿ ಮಧುಮತಿ ರಮೇಶ್ ಪಾಟೀಲ್ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಶ್ರೀಮತಿ ಶಕುಂತಲ ಅವರು ವಂದನಾರ್ಪಣೆ ಸಲ್ಲಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್