ಜಿಲ್ಲೆಯ ಸಮುದಾಯ ಭವನಗಳನ್ನು ಜ್ಞಾನ ಮತ್ತು ಕೌಶಲ್ಯ ಅಭಿವೃದ್ಧಿ ಕೇಂದ್ರವಾಗಿಸಲು ಕ್ರಮ
ಜಿಲ್ಲೆಯ ಸಮುದಾಯ ಭವನಗಳನ್ನು ಜ್ಞಾನ ಮತ್ತು ಕೌಶಲ್ಯ ಅಭಿವೃದ್ಧಿ ಕೇಂದ್ರವಾಗಿಸಲು ಕ್ರಮ
ಚಿತ್ರ : ಕೋಲಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ನಿಯಂತ್ರಣ) ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.


ಕೋಲಾರ, ೧೭ ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಕೋಲಾರ ಜಿಲ್ಲೆಯಲ್ಲಿ ಅನೇಕ ಸಮುದಾಯ ಭವನಗಳನ್ನು ನಿರ್ಮಾಣ ಮಾಡಿದ್ದು, ಬಳಸದೆ ಇರುವುದರಿಂದ ರಾಜ್ಯದಲ್ಲಿಯೇ ಮಾದರಿಯಾಗುವಂತೆ ಈ ಎಲ್ಲಾ ಭವನಗಳನ್ನು ಜ್ಞಾನ ಮತ್ತು ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನಾಗಿ ಮಾರ್ಪಡಿಸಿ ಸ್ಥಳೀಯ ಯುವಜನತೆಗೆ ಉಪಯೋಗವಾಗುವಂತಾಗಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ.ಎಂ.ಆರ್.ರವಿ ತಿಳಿಸಿದರು.

ಕೋಲಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ನಿಯಂತ್ರಣ) ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಗ್ರಾಮೀಣ ಭಾಗದ ಪರಿಶಿಷ್ಟ ಜಾತಿ ಪಂಗಡ ಜನರ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸಲು ಜಿಲ್ಲಾ ಜಾಗೃತಿ ಸಮಿತಿ ವತಿಯಿಂದ ಹೊಸ ವಿಚಾರಗಳನ್ನು ತೆಗೆದುಕೊಂಡು ಚಿಂತನ ಮಾಡಬೇಕಾಗಿದೆ. ಜಿಲ್ಲೆಯ ಎಲ್ಲಾ ಸಮುದಾಯ ಭವನಗಳನ್ನು ಜ್ಞಾನ ಮತ್ತು ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನಾಗಿಸಿ ಅದರಲ್ಲಿಯೇ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಡಿಜಿಟಲ್ ಗ್ರಂಥಾಲಯ ಸ್ಥಾಪಿಸುವುದರ ಜೊತೆಗೆ ಹೆಚ್ಚಿನ ಅರಿವು ಮೂಡಿಸುವ ವಿದ್ಯಾಭ್ಯಾಸದ ಪುಸ್ತಕಗಳನ್ನು ಇಡಬೇಕು. ಪ್ರತಿದಿನ ಸಂಜೆ ಭವನಗಳಲ್ಲಿ ಯಾವುದಾದರೂ ಒಂದು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು ಮಾಡಿದರೆ ಈ ಕೆಲಸವು ವೃತ್ತಿ ಜೀವನಕ್ಕೆ ಆಧಾರವಾಗುತ್ತದೆ ಮತ್ತು ಅವರ ಸಾಧನೆಗೆ ಸಹಕಾರವಾಗುತ್ತದೆ ಎಂದು ತಿಳಿಸಿದರು.

ಈಗಾಗಲೇ ಕೋಲಾರ ನಗರಸಭೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಯ ಉಳಿತಾಯ ಹಣವನ್ನು ಪಡೆದು ಅದರ ಜೊತೆಗೆ ಗ್ರಂಥಾಲಯ ಸಮಿತಿಯ ವಿಶೇಷ ಅನುದಾನವನ್ನು ಬಳಸಿಕೊಂಡು ಕೋಲಾರ ಜಿಲ್ಲಾ ಗ್ರಂಥಾಲಯದಲ್ಲಿ ‘ಡಾ. ಬಿ.ಆರ್.ಅಂಬೇಡ್ಕರ್ ಡಿಜಿಟಲ್ ಗ್ರಂಥಾಲಯ’ವನ್ನು ಒಳಗೊಂಡು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಇದು ಮುಂದಿನ ತಿಂಗಳು ಪೂರ್ಣಗೊಳ್ಳುವುದು. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೂಲಸೌಕರ್ಯ, ನಿವೇಶನ, ಸ್ಮಶಾನ, ಮನೆ, ಆರೋಗ್ಯ, ಶಿಕ್ಷಣ ಒದಗಿಸುವುದರಲ್ಲಿ ಯಾವುದೇ ಲೋಪವಾಗಬಾರದು ಎಂದು ತಿಳಿಸಿದರು.

ಪರಿಶಿಷ್ಟ ಜಾತಿ, ಪಂಗಡದವರ ವಿರುದ್ಧ ದೌರ್ಜನ್ಯ ಪ್ರಕರಣಗಳನ್ನು ಶೀಘ್ರ ಇತ್ಯರ್ಥ ಮಾಡಬೇಕು. ಪ್ರತಿ ಎರಡನೇ ಭಾನುವಾರ ಈ ಕುರಿತು ಸಭೆ ನಡೆಸಲಾಗುವುದೆಂದು ವರಿಷ್ಠಾಧಿಕಾರಿ ಬಿ.ನಿಖಿಲ್ ತಿಳಿಸಿದರು.

ಬಂಗಾರಪೇಟೆ ತಾಲ್ಲೂಕು ವಸತಿ ಶಾಲೆಯಲ್ಲಿ ಸರ್ಕಾರಿ ಶಾಲೆಯ ಮಕ್ಕಳನ್ನು ಜೊತೆಗೂಡಿಸಿ ಶಾಲೆಯನ್ನು ನಡೆಸುತ್ತಿದ್ದು, ಇದರ ಬಗ್ಗೆ ಕ್ರಮವಹಿಸಲು ಸಭೆಗೆ ತಿಳಿಸಿದರು. ಇದಕ್ಕೆ ಶಿಕ್ಷಣ ಇಲಾಖೆ ರವರು ವಾರದೊಳಗೆ ಕ್ರಮವಹಿಸಲಾಗುವುದೆಂದು ಸಭೆಗೆ ತಿಳಿಸಿದರು. ೨ ವಾರದೊಳಗಾಗಿ ಶಾಲೆ ನಡೆಸಲು ಅನುಕೂಲಕರವಾಗಿರುವ ಬಾಡಿಗೆ ಕಟ್ಟಡವನ್ನು ಹುಡುಕಿ ಶಾಲಾ ಮಕ್ಕಳನ್ನು ಸ್ಥಳಾಂತರಿಸಲು ಕ್ರಮವಹಿಸುವಂತೆ ಮಾನ್ಯ ಜಿಲ್ಲಾಧಿಕಾರಿಗಳು ಸಾರ್ವಜನಿಕ ಶಿಕ್ಷಣ ಇಲಾಖೆ ರವರಿಗೆ ಸೂಚಿಸಿದರು.

ಜಿಲ್ಲೆಯ ಎಲ್ಲಾ ವಿದ್ಯಾರ್ಥಿನಿಲಯಗಳಲಿ ವಿದ್ಯಾರ್ಥಿಗಳಿಗೆ ನೀಡುವ ಊಟ, ಕೊಠಡಿ, ಅಡುಗೆಗಳ ಶುಚಿತ್ವವನ್ನು ಸಂಬಂಧಪಟ್ಟ ಅಧಿಕಾರಿಗಳು ಅನರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದು ತಿಳಿಸಿದರು.

ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ, ಕೈಮಗ್ಗ ಮತ್ತು ಜವಳಿ ಇಲಾಖೆ, ಖಾದಿಬೋರ್ಡ್ ಇಲಾಖೆ, ಮತ್ತು ರೇಷ್ಮೆ ಇಲಾಖೆಯಲ್ಲಿರುವ ಯೋಜನೆಗಳ ಬಗ್ಗೆ ಅರಿವು ಇರುವುದಿಲ್ಲ. ಈ ಬಗ್ಗೆ ಕ್ರಮವಹಿಸಲು ಸದಸ್ಯರು ಕೋರಿದರು. ಆಯಾ ಇಲಾಖೆಗಳಿಗೆ ಸಂಬಂಧಿಸಿದಂತೆ ಕಾರ್ಯಕ್ರಮವಾರು ಪಂಚಾಯಿತಿಗಳಲ್ಲಿ ಪ್ರಕಟಣೆ ಮಾಡಲು ಕ್ರಮವಹಿಸುವಂತೆ ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ ಇವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಕಾರ್ಯನಿರ್ವಾಹಕ ಅಧಿಕಾರಿಗಳು ತಾಲ್ಲೂಕು ಪಂಚಾತಯತಿ ಮತ್ತು ತಹಶೀಲ್ದಾರ್, ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕುಂದು ಕೊರತೆ ಸಭೆ ತಪ್ಪದೇ ನಡೆಸಲು ಸದಸ್ಯರು ಕೋರಿದರು. ಈಗಾಗಲೇ ಮುಳಬಾಗಿಲು ಮತ್ತು ಶ್ರೀನಿವಾಸಪುರ ತಾಲ್ಲೂಕುಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕುಂದು ಕೊರತೆ ಸಭೆಗಳನ್ನು ನಡೆಸಲಾಗಿರುತ್ತದೆ. ಮುಂದಿನ ದಿನಗಳಲ್ಲಿ ಎಲ್ಲಾ ತಾಲ್ಲೂಕುಗಳಲ್ಲಿ ಕುಂದು ಕೊರತೆಗಳ ಸಭೆ ಮಾಡುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ರವರು ಅಂಗನವಾಡಿ ಕೇಂದ್ರಗಳಲ್ಲಿ ಬಾಣಂತಿಯರಿಗೆ ಮತ್ತು ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಮೆನು ಚಾರ್ಟನ್ನು ಗೋಡೆ ಬರಹದಲ್ಲಿ ಬರೆಸಿ ಸಾರ್ವಜನಿಕರ ಗಮನಕ್ಕೆ ತರಲು ಸಭೆಗೆ ಮಾಹಿತಿ ನೀಡಲು ಸದಸ್ಯರು ಕೋರಿದರು. ಅದರಂತೆ ಕೋಲಾರ ಜಿಲ್ಲೆಯಲ್ಲಿ ೨೧೮೦ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಮೆನು ಚಾರ್ಟನ್ನು ಗೋಡೆಮೇಲೆ ಪ್ರದರ್ಶಿಸಲಾಗಿದೆಂದು ಉಪನಿರ್ದೇಶಕರು ಸಭೆಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಪ್ರವೀಣ್ ಪಿ ಬಾಗೇವಾಡಿ, ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಂಶು ರಜಪೂತ್ ಅಪರ ಜಿಲ್ಲಾಧಿಕಾರಿ ಎಸ್.ಎಂ..ಮಂಗಳ, ಉಪವಿಭಾಗಾಧಿಕಾರಿ ಡಾ. ಎಸ್ ಮೈತ್ರಿ, ಡಿವೈಎಸ್ಪಿ ವಸಂತ್ ಕುಮಾರ್, ಸರ್ಕಾರಿ ಅಭಿಯೋಜಕರಾದ ಮಾಧವ ಪದ್ಮನಾಭ ಗಾವ್ಕರ್, ಎಲ್ಲಾ ತಹಶೀಲ್ದಾರ್ಗಳು, ಜಿಲ್ಲಾ ಅನುಸೂಚಿತ,ಪಂಡಗಳ (ದೌರ್ಜನ್ಯ ನಿಯಂತ್ರಣ) ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರು ಸೇರಿದಂತೆ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಚಿತ್ರ : ಕೋಲಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ನಿಯಂತ್ರಣ) ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande