ಬಳ್ಳಾರಿ, 13 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಆರ್‍ಸಿಹೆಚ್ ಕಾರ್ಯಕ್ರಮದಡಿ ಗರ್ಭಿಣಿ ತಾಯಿಯ ಆರೈಕೆಗೆ ಹೆಚ್ಚು ಒತ್ತು ನೀಡಿ, ಗರ್ಭಿಣಿ ತಾಯಿಯ ಆರೋಗ್ಯ ತಪಾಸಣೆ ನಡೆಸಿದ ನಂತರ ಆರೋಗ್ಯ ಕುರಿತು ಅವರಿಗೆ ಸರಿಯಾದ ಮಾಹಿತಿ ನೀಡಬೇಕು ಎಂದು ಕಲಬುರಗಿ ವಿಭಾಗೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಸಹನಿರ್ದೇಶಕ ಡಾ.ಶಂಕ್ರಪ್ಪ ಮೈಲಾರಿ ಅವರು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗರ್ಭಿಣಿ ತಾಯಿಯ ತಪಾಸಣೆ ನಡೆಸಿದ ತಾಯಿ ಕಾರ್ಡ್‍ನಲ್ಲಿ ಎಲ್ಲಾ ವರದಿ ತುಂಬಿ ಹಾಗೂ ಕಬ್ಬಿಣಾಂಶ ಮಾತ್ರೆ, ಕ್ಯಾಲ್ಸಿಯಂ ಮಾತ್ರೆ ತಪ್ಪದೇ ತೆಗೆದುಕೊಳ್ಳಬೇಕು ಎಂದು ಗರ್ಭಿಣಯರಿಗೆ ಮನವರಿಕೆ ಮಾಡಬೇಕು. ರಕ್ತಹೀನತೆಯಿಂದ ಆಗುವ ಸಮಸ್ಯೆಗಳನ್ನು ಅವರಿಗೆ ತಿಳಿಸಿ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.
ತೊಡಕಿನ ಗರ್ಭಿಣಿಯರಿಗೆ ಕಡ್ಡಾಯವಾಗಿ ಪಿ.ಎಮ್.ಎಸ್.ಎಮ್.ಎ ಹಾಗೂ ಇ.ಪಿ.ಎಮ್.ಎಸ್.ಎಮ್.ಎ ಕಾರ್ಯಕ್ರಮದಡಿ ಪ್ರಸೂತಿ ತಜ್ಞರಿಂದ ಹಾಗೂ ವೈದ್ಯಾಧಿಕಾರಿಗಳಿಂದ ಆರೋಗ್ಯ ತಪಾಸಣೆ ಮಾಡಬೇಕು. ಕ್ಷಯಮುಕ್ತ ಕರ್ನಾಟಕವನ್ನಾಗಿಸಲು ಪ್ರತಿಯೊಬ್ಬರೂ ಜಾಗುರಕರಾಗಿ ಸಂಘ ಸಂಸ್ಥೆಗಳ ಜೊತೆಗೆ ಕೈ ಜೋಡಿಸಿ ಸಾರ್ವಜನಿಕರಿಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದರು.
ಕುಟುಂಬ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಅರ್ಹ ದಂಪತಿಗಳಿಗೆ ಅಂತರ ವಿಧಾನಗಳನ್ನು ಅನುಸರಿಸುವ ಬಗ್ಗೆ ಜಾಗೃತಿ ಮೂಡಿಸಿಬೇಕು. ಎನ್.ಸಿ.ಡಿ ಕಾರ್ಯಕ್ರಮದಡಿಯಲ್ಲಿ 30ವರ್ಷ ಮೇಲ್ಪಟ್ಟ ಎಲ್ಲರಿಗೂ ಎನ್.ಸಿ.ಡಿ ಪೋರ್ಟಲ್‍ನಲ್ಲಿ ದಾಖಲಿಸಿದ ಬಗ್ಗೆ ಹಾಗೂ ಆರೋಗ್ಯ ತಪಾಸಣೆ ನಡೆಸಿರುವ ಕುರಿತು ಚರ್ಚಿಸಿದ ಅವರು, ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಡೆಂಗ್ಯೂ ಪ್ರಕರಣಗಳ ಬಗ್ಗೆ ಹಾಗೂ ಲಾರ್ವಾ ಸಮೀಕ್ಷೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಕುಷ್ಟರೋಗ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ ಎಲ್ಲಾ ತಾಲ್ಲೂಕಗಳಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಪ್ರಕರಣಗಳನ್ನು ಒಳಗೊಂಡು ಅಬ್ಸಲ್ಸ್ ಸಮೀಕ್ಷೆ ಮತ್ತು ಪ್ರತಿ ಗ್ರಾಮಗಳಲ್ಲಿ ಗುಂಪು ಸಭೆಗಳ ಮೂಲಕ ಪತ್ತೆ ಹಚ್ಚಬೇಕು. ಎಲ್.ಸಿ.ಡಿ.ಸಿ ಕಾರ್ಯಕ್ರಮವನ್ನ ನವೆಂಬರ್ 3 ರಿಂದ 19 ರವರೆಗೆ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಡಿಯಲ್ಲಿ ಆರೋಗ್ಯ ತಪಾಸಣೆ ಜೊತೆಗೆ ಟೆಲಿಮನಸ್ ಕುರಿತು ವ್ಯಾಪಕ ಪ್ರಚಾರ ನೀಡಬೇಕು ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಕಾರ್ಯಕ್ರಮಗಳ ಕುರಿತು ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು, ಜಿಲ್ಲಾ ಶಸ್ತ್ರಚಿಕಿತ್ಸ ಡಾ.ಎನ್.ಬಸರೆಡ್ಡಿ, ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಆರ್.ಅಬ್ದುಲ್ಲಾ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಮರಿಯಂಬಿ ವಿ.ಕೆ., ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪೂರ್ಣಿಮ ಕಟ್ಟಿಮನಿ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ಇಂದ್ರಾಣಿ ವಿ., ಜಿಲ್ಲಾ ಕುಷ್ಟರೋಗ ನಿರ್ಮೂಲನಾ ಅಧಿಕಾರಿ ಡಾ.ವೀರೇಂದ್ರ ಕುಮಾರ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಹನುಮಂತಪ್ಪ, ಪ್ರಭಾರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಶಿದ್ ಬೇಗಮ್, ಡಿಎನ್‍ಒ ಗಿರೀಶ್ ಸೇರಿದಂತೆ ಎಲ್ಲಾ ತಾಲ್ಲೂಕ ಆರೋಗ್ಯ ಅಧಿಕಾರಿಗಳು, ಆಡಳಿತ ವೈದ್ಯಾಧಿಕಾರಿಗಳು, ಎಲ್ಲಾ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ಹಾಗೂ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್