ಕೋಲಾರ, ೧೩ ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಬಿಡದಿ ಬಳಿಯ ಎಲೆಗೆನ್ಸ್ ಲೇಔಟ್ ನಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡದಲ್ಲಿ ಅಕ್ಟೋಬರ್ ೭ ರಂದು ವಾಸವಾಗಿದ್ದ ಕಾರ್ಮಿಕರ ವಸತಿಯಲ್ಲಿ ಸಂಭವಿಸಿದ ಬೆಂಕಿ ಅವಘಡದಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಲಸೆ ಕಾರ್ಮಿಕರಲ್ಲಿ ಇದುವರೆಗೂ ೬ ಕಾರ್ಮಿಕರು ಸಾವನಪ್ಪಿದ್ದರೂ ರಾಜ್ಯ ಸರ್ಕಾರ ಕಾರ್ಮಿಕ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಸಮರ್ಪಕ ಪರಿಹಾರವನ್ನು ಕೊಡಿಸುವಲ್ಲಿ ವಿಫಲವಾಗಿ ನೊಂದಕಾರ್ಮಿಕ ಕುಟುಂಬಗಳಿಗೆ ವಂಚನೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಐಟಿಯು) ತೀವ್ರ ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತಪಡಿಸಿದೆ.
ಪತ್ರಿಕಾ ಹೇಳಿಕೆ ಮೂಲಕ ಒತ್ತಾಯಿಸಿದ ಅವರು ಕಾರ್ಮಿಕರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಅಕ್ಟೋಬರ್ ೮ ರಂದು ಆಸ್ಪತ್ರೆಗೆ ಭೇಟಿ ನೀಡಿದ ಸಂಘಟನೆ ನಿಯೋಗ, ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಒತ್ತಾಯ ಮಾಡಿದ್ದು ಮಾತ್ರವಲ್ಲದೆ ಗಾಯಾಳುಗಳಿಗೆ ಕನಿಷ್ಟ ೧೦ ಲಕ್ಷ ಮತ್ತು ಮೃತರಾದವರ ಪ್ರತಿ ಕುಟುಂಬಕ್ಕೆ ೨೫ ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿತ್ತು. ಈ ಬಗ್ಗೆ ೧೧ ನೇ ತಾರೀಕು ಬೆಳಿಗ್ಗೆ ಸಂತ್ರಸ್ಥರ ಕುಟುಂಬದವರೊಂದಿಗೆ ಬಿಡದಿ ಪೋಲಿಸ್ ಠಾಣೆ ಹಾಗೂ ರಾಮನಗರ ಕಾರ್ಮಿಕ ಇಲಾಖೆಗೆ ಭೇಟಿ ನೀಡಿ ಚರ್ಚಿಸಬೇಕೆಂದೂ ನಿರ್ಧರಿಸಲಾಗಿತ್ತು. ಅಲ್ಲದೆ ನಿರ್ಮಾಣ ಸ್ಥಳದಲ್ಲಿ ನಡೆದಿರುವ ಈ ಘಟನೆ ಕುರಿತು ಮಾಹಿತಿ ನೀಡಿ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಸಿಇಓ ಹಾಗೂ ಉಪಕಾರ್ಮಿಕ ಆಯುಕ್ತರನ್ನು ಸೂಕ್ತ ಪರಿಹಾರ ವ್ಯವಸ್ಥೆಯನ್ನು ನೊಂದ ಕುಟುಂಬಗಳಿಗೆ ನಿರ್ಮಾಣ ಸಂಸ್ಥೆಯಿಂದ ಮಾಡಲು ಒತ್ತಾಯಿಸಿದರು.
ಸಿಐಟಿಯು ಮೃತಪಟ್ಟವರಿಗೆ ಕನಿಷ್ಟ೨೫ ಲಕ್ಷ ಪರಿಹಾರ ತೀವ್ರ ಗಾಯಾಳುಗಳಿಗೆ ೧೦. ಲಕ್ಷ ರುಪಾಯಿಗಳ ಬೇಡಿಕೆ ಮುಂದಿಟ್ಟು ಆಗ್ರಹಪಡಿಸುತ್ತಿರುವಾಗಲೇ ಕಾರ್ಮಿಕರ ನಡುವೆಯೇ ಇದ್ದ ಕೆಲವು ಮಧ್ಯವರ್ತಿಗಳು ಹಾಗೂ ಪ.ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಕೆಲ ತೃಣಮೂಲ ಕಾಂಗ್ರೆಸ್ ಏಜೆಂಟರು ಕೇವಲ ೨.೫ ಲಕ್ಷ ರೂಪಾಯಿ ಪರಿಹಾರಕ್ಕೆ ಒಪ್ಪಿಸಿ, ಮೃತ ಕಾರ್ಮಿಕರ ಬಂಧುಗಳು ಸಿಐಟಿಯುಗೆ ಸೇರಿದ ಕಟ್ಟಡ ಕಾರ್ಮಿಕ ಸಂಘದೊಂದಿಗೆ ಸಂಪರ್ಕಕ್ಕೆ ಬಾರದಂತೆ ತಡೆಯಲಾಗಿದೆ. ಮಾತ್ರವಲ್ಲದೆ ಬಿಡದಿಯ ಪೋಲೀಸರು ಕಂಪನಿಯ ಆಮಿಷಕ್ಕೆ ಬಲಿಯಾಗಿ ದೂರು ನೀಡಿದ ಮತ್ತು ಈಗ ಈ ಅವಘಡದಲ್ಲಿ ಮೃತಪಟ್ಟ ಕಾರ್ಮಿಕ ಹಸನ್ ಮಲ್ಲಿಕ್ ಎನ್ನುವನನ್ನೇ ಆರೋಪಿಯನ್ನಾಗಿ ಮಾಡಿ ಇಡೀ ನ್ಯಾಯ ವ್ಯವಸ್ಥೆಗೆ ಅಪಚಾರ ಮಾಡಿದ್ದಾರೆ. ಕಾರ್ಮಿಕ ಇಲಾಖೆಯ ಅಧಿಕಾರಿಗಳು ಕೂಡ ನೊಂದ ಕುಟುಂಬಗಳಿಗೆ ನ್ಯಾಯ ಹಾಗೂ ಪರಿಹಾರ ಕೊಡಿಸುವಲ್ಲಿ ಅತ್ಯಂತ ನಿರ್ಲಕ್ಷ್ಯ ವಹಿಸಿರುವ ಪಾತ್ರ ಕಣ್ಣಿಗೆ ರಾಚುತ್ತಿದೆ. ಇದರಿಂದಾಗಿ ನಿರ್ಮಾಣ ಸಂಸ್ಥೆಯ ನಿರ್ಲಕ್ಷ್ಯ ದಿಂದ ಕಾರ್ಮಿಕರು ಸಾಯುತ್ತಿದ್ದು ಅವರ ಕುಟುಂಬದವರು ದಿಕ್ಕಾಪಾಲು ಆಗುವಂತೆ ಆಗಿದೆ. ಇಷ್ಟಾದರೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಹಾಗೂ ಕಾರ್ಮಿಕ ಸಚಿವರು ಈ ಬಗ್ಗೆ ಅಗತ್ಯ ಕ್ರಮವಹಿಸದಿರುವ ಬಗ್ಗೆ ಸಿಐಟಿಯು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಸುಮಾರು ೮ ತಿಂಗಳ ಹಿಂದೆ ಬೆಂಗಳೂರಿನ ಬಾಬುಸಾಪಾಳ್ಯದಲ್ಲಿ ೯ ಜನ ಅಮಾಯಕ ಕಾರ್ಮಿಕರು ಸತ್ತಿದ್ದು, ೧೫ ದಿನಗಳ ಹಿಂದೆ ಮಡಿವಾಳದಲ್ಲಿ ೨, ಬಿಡದಿಯಲ್ಲಿ ೬, ನಿನ್ನೆ ಬೆಳ್ಳಂದೂರಿನಲ್ಲಿ ೨ ಕಾರ್ಮಿಕರು ಕಟ್ಟಡ ನಿರ್ಮಾಣ ಸ್ಥಳಗಳಲ್ಲಿನ ವಿವಿಧ ರೀತಿಯ ಅವಘಡದಿಂದ ಸಾವನಪ್ಪಿರುವ ಹೊರ ರಾಜ್ಯದ ವಲಸೆ ಕಾರ್ಮಿಕರಾಗಿದ್ದಾರೆ. ನಮ್ಮ ರಾಜ್ಯ ಅಭಿವೃದ್ಧಿಗೆ ತಮ್ಮದೇ ಶ್ರಮದಮೂಲಕ ಕೊಡುಗೆ ನೀಡುತ್ತಿದ್ದಾರೆ ಇಷ್ಟಾದರೂ ರಾಜ್ಯ ಸರಕಾರ ಎಚ್ಚೆತ್ತುಕೊಂಡಿಲ್ಲ. ಇದರಿಂದಾಗಿ ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲ ಎಂಬಂತಾಗಿದೆ. ಸರಕಾರ ಇಂತಹ ಘಟನೆಗಳಿಗೆ ತಡೆ ಹಾಕಬೇಕು. ಪೋಲಿಸ್ ಮತ್ತು ಕಾರ್ಮಿಕ ಇಲಾಖೆ ಬಡ ಕಾರ್ಮಿಕರ ಪರ ಕೆಲಸ ಮಾಡುವಂತೆ ಮಾನ್ಕ್ರ ಮುಖ್ಯಮಂತ್ರಿ ಗಳು ಸೂಕ್ತ ಆದೇಶ ನೀಡಬೇಕೆಂದು ಸಿಐಟಿಯು ಒತ್ತಾಯಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್