ಕೋಲಾರ, ೧೩ ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಇತ್ತಿಚೆಗೆ ಬಿದ್ದ ಬಾರಿ ಮಳೆಗೆ ನಷ್ಟವಾದ ರೈತರ ಬೆಳೆಗಳಿಗೆ ಕೂಡಲೇ ಪರಿಹಾರ ಕೊಡಬೇಕೆಂದು ನರಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಮಾರ್ ಒತ್ತಾಯಿಸಿದರು.
ಕೋಲಾರ ತಾಲೂಕಿನ ನರಸಾಪುರ ಗ್ರಾಮದಲ್ಲಿ ಮಳೆಯ ನೀರು ಹರಿದು ನಷ್ಟವಾಗಿರುವ ಕೃಷಿ ಜಮೀನುಗಳ ವೀಕ್ಷಣೆಗಾಗಿ ಭೇಟಿ ನೀಡಿ ಬೆಳೆಗಳ ಪರಿವೀಕ್ಷಣೆ ಮಾಡಿ ಮಾತನಾಡಿ ಕೆ.ಸಿ ವ್ಯಾಲಿ ಯೋಜನೆಯ ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿಯಿಂದ ೩ ವರ್ಷಗಳ ಹಿಂದೆ ಇದೇ ಸಮಸ್ಯೆ ಉಂಟಾಗಿ ಅನೇಕ ರೈತರು ನಷ್ಟ ಅನುಭವಿಸಿದರು. ಮಳೆಯಿಂದ ಮಳೆಯ ನೀರು ಮತ್ತು ಕೆ.ಸಿ ವ್ಯಾಲಿ ನೀರು ಎರಡು ಜೋಡಣೆಯಾಗಿ ಹರಿದ ಪರಿಣಾಮ ರೈತರ ಜಮೀನುಗಳಿಗೆ ನೀರು ನುಗ್ಗಿ ಸುಮಾರು ೨೦೦ ರಿಂದ ೨೫೦ ಎಕರೆ ಕೃಷಿ ಭೂಮಿಯಲ್ಲಿ ಬೆಳೆದಂತ ತರಕಾರಿ ಬೆಳೆಗಳು ನಷ್ಟವಾಗಿದ್ದು, ರೈತರು ಲಕ್ಷಾಂತರ ರೂಗಳ ನಷ್ಟ ಅನುಭವಿಸಿದ್ದಾರೆ, ಕೆಸಿ ವ್ಯಾಲಿ ಯೋಜನೆಯ ಕಾಲುವೆ ನಿರ್ಮಾಣ ಸಂದರ್ಭದಲ್ಲಿ ಕಾಲುವೆಯ ಕಟ್ಟಡವನ್ನು ಎತ್ತರ ಮಾಡಿದ್ದರೆ ಹಾಗೂ ತಡೆಗೋಡೆಯನ್ನು ಸರಿ ಯಾಗಿ ನಿರ್ಮಾಣ ಮಾಡಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಆರೋಪಿಸಿದರು.
ರೈತರ ತೊಂದರೆಗಳಿಗೆ ಕೆ.ಸಿ ವ್ಯಾಲಿ ಅಧಿಕಾರಿಗಳೇ ನೇರ ಹೊಣೆಗಾರರಾಗಿದ್ದಾರೆ ಯೋಜನೆಯ ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿಯಿಂದ ಅವಾಂತರ ಸೃಷ್ಟಿಯಾಗಿದೆ, ಸಂಬಂಧಪಟ್ಟ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ರೈತರ ಬಗ್ಗೆ ಕಾಳಜಿ ವಹಿಸ ಬೇಕಿತ್ತು ಅನಾಹುತವನ್ನು ತಪ್ಪಿಸಬಹುದಾಗಿತ್ತು, ನರಸಾಪುರ ದಿನ್ನೆಹೊಸಳ್ಳಿ ಡಾಂಬರು ರಸ್ತೆಯ ಮೇಲೆ ನೀರು ಹರಿದು ರಸ್ತೆ ಕಿತ್ತು ಹೋಗಿದೆ ಕೂಡಲೇ, ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ಬಣಿ ಶಿವಪ್ಪ ಮಾತನಾಡಿ ಕೆ.ಸಿ ವ್ಯಾಲಿ ಯೋಜನೆಯ ಇಂಜಿನಿಯರ್ ಗಳು ಕಾಮಗಾರಿಯನ್ನು ಮಾಡುವ ಸಂದರ್ಭದಲ್ಲಿ ಸಣ್ಣ ಕಾಲುವೆಯನ್ನು ನಿರ್ಮಾಣ ಮಾಡಿಲ್ಲ ಅದರಿಂದಲೇ ರೈತರ ತೋಟಗಾರಿಕಾ ಬೆಳೆ ಮತ್ತು ಕೃಷಿ ಬೆಳೆಗಳ ಮೇಲೆ ಹರಿದು ನಷ್ಟ ಅನುಭವಿಸಿದ್ದಾರೆ ಮುಂದಿನ ದಿನಗಳಲ್ಲಿ ಆಗಬಹುದಾದಂತಹ ಸಮಸ್ಯೆಗಳ ಬಗ್ಗೆ ಗಮನದಲ್ಲಿಟ್ಟುಕೊಂಡು ಕಾಲುವೆ ಕಟ್ಟಡ ನಿರ್ಮಾಣ ಮಾಡಬೇಕು ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯ ದಿಂದ ಈ ರೀತಿಯ ಮಳೆ ಹೆಚ್ಚಾಗಿ ಬಿದ್ದಾಗ ರೈತರು ನಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂದು ಆರೋಪಿಸಿದರು.
ಸ್ಥಳದಲ್ಲಿ ಇದ್ದ ನರಸಾಪುರ ಕಂದಾಯ ವೃತ್ತದ ಕಂದಾಯ ನಿರೀಕ್ಷಕ ಲೋಕೇಶ್ ಮಾತನಾಡಿ ತೋಟಗಾರಿಕಾ ಮತ್ತು ಕೃಷಿ ಬೆಳಿಗಳಿಗೆ ಮಳೆ ನೀರು ಹರಿದಿದ್ದು ಈ ವಿಚಾರವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುತ್ತದೆ ಹಾಗೂ ಅವರ ಸ್ಥಳ ವೀಕ್ಷಣೆಗೆ ಕರೆದುಕೊಂಡು ಬರುವ ಪ್ರಯತ್ನ ಮಾಡಲಾಗುತ್ತದೆ, ನೀರು ಹರಿದಿರುವಂತಹ ಹಾಗೂ ನಷ್ಟ ಉಂಟಾಗಿರುವಂತಹ ರೈತರು ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪುಸ್ತಕ ಮತ್ತು ತಮ್ಮ ಜಮೀನಿನ ಪಹಣಿಯನ್ನು ಗ್ರಾಮ ಆಡಳಿತ ಅಧಿಕಾರಿಗೆ ನೀಡಿದರೆ ಅದನ್ನು ಸಂಬಂಧಪಟ್ಟ ಇಲಾಖೆಗೆ ವರದಿಯನ್ನು ಕಳುಹಿಸಿ ಪರಿಹಾರ ವನ್ನು ಕೊಡಿಸುವಂತಹ ಪ್ರಯತ್ನ ಮಾಡಲಾ ಗುತ್ತದೆ, ಮುಂದಿನ ದಿನಗಳಲ್ಲಿ ಈ ರೀತಿಯಾಗಿ ಆಗದಂತೆ ನೋಡಿಕೊಳ್ಳಲು ಈ ಯೋಜನೆಯ ಅಧಿಕಾರಿಗಳಿಗೆ ತಿಳಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ನರಸಾಪುರ ಕಂದಾಯ ಗ್ರಾಮ ಆಡಳಿತ ಅಧಿಕಾರಿ ರಮ್ಯ, ಕೋಲಾರ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ದಿನ್ನೆಹೊಸಳ್ಳಿ ರಮೇಶ್, ರೈತರಾದ ಶಶಿಕುಮಾರ್, ಮಂಜುನಾಥ್, ಶಿವಕುಮಾರ್, ರಾಮಚಂದ್ರ, ಚಿಕ್ಕ ಅಣ್ಣಗಿರಿಯಪ್ಪ, ಪೈಲ್ವಾನ್ ವೆಂಕಟೇಶ್, ಮುನಿರಾಜು ಪುರುಷೋತ್ತಮ್, ವೆಂಕಟೇಶ್, ಮಂಜುನಾಥ್ ಹಾಗೂ ರೈತರು ಹಾಜರಿದ್ದರು.
ಚಿತ್ರ : ಕೋಲಾರ ತಾಲೂಕಿನ ನರಸಾಪುರ ಗ್ರಾಮದಲ್ಲಿ ಮಳೆಯ ನೀರು ಹರಿದು ನಷ್ಟವಾಗಿರುವ ಕೃಷಿ ಜಮೀನುಗಳ ನರಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಮಾರ್ ಭೇಟಿ ನೀಡಿ ಬೆಳೆಗಳ ಪರಿವೀಕ್ಷಣೆ ಮಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್