ವಿಶಾಖಪಟ್ಟಣಂ, 8 ಜನವರಿ (ಹಿ.ಸ.) :
ಆ್ಯಂಕರ್ :ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಇಂದು ಆಂಧ್ರಪ್ರದೇಶಕ್ಕೆ ಭೇಟಿ ನೀಡಲಿದ್ದು, ವಿಶಾಖಪಟ್ಟಣಂನಲ್ಲಿ ೨ ಲಕ್ಷ ಕೋಟಿ ರೂಪಾಯಿ ವೆಚ್ಚದ ವಿವಿಧ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
೧ ಲಕ್ಷದ ೮೫ ಸಾವಿರ ಕೋಟಿ ರೂಪಾಯಿಗಳ ಅತ್ಯಾಧುನಿಕ ಎನ್‌ಟಿಪಿಸಿ ಗ್ರೀನ್ ಎನರ್ಜಿ ಲಿಮಿಟೆಡ್‌ನ, ಹಸಿರು ಹೈಡ್ರೋಜನ್ ಹಬ್ ಯೋಜನೆಗೆ ಪ್ರಧಾನಿ, ವಿಶಾಖಪಟ್ಟಣಂ ಬಳಿಯ ಪೂಡಿಮಢಾಕದಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು, ಇಂದು ಸಂಜೆ ವಿಶಾಖಪಟ್ಟಣಕ್ಕೆ ಆಗಮಿಸಲಿದ್ದು, ಆಂಧ್ರಪ್ರದೇಶದಲ್ಲಿ ೧ ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಮತ್ತು ಪ್ರಾದೇಶಿಕ ಪ್ರಗತಿಗೆ ಉತ್ತೇಜನ ನೀಡುವ ಸಾಮರ್ಥ್ಯವಿರುವ, ಮೂಲಸೌಕರ್ಯ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ.
ಪ್ರಧಾನಿಯವರು ರೋಡ್ ಶೋನಲ್ಲಿ ಭಾಗವಹಿಸಲಿದ್ದು, ಬಳಿಕ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಮತ್ತು ಉಪಮುಖ್ಯಮಂತ್ರಿ ಕೆ.ಪವನ್ ಕಲ್ಯಾಣ್ ಅವರೊಂದಿಗೆ ಆಂಧ್ರ ಯೂನಿವರ್ಸಿಟಿ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಎನ್‌ಟಿಪಿಸಿ ಹಸಿರು ಹೈಡ್ರೋಜನ್ ಯೋಜನೆಯ ಜೊತೆಗೆ, ವಿಶಾಖಪಟ್ಟಣಂನಲ್ಲಿನ ದಕ್ಷಿಣ ಕರಾವಳಿ ರೈಲ್ವೆ ಪ್ರಧಾನ ಕಛೇರಿ, ಅನಕಾಪಲ್ಲಿ ಜಿಲ್ಲೆಯ ನಕ್ಕಪಲ್ಲಿಯಲ್ಲಿ, ಬಲ್ಕ್ ಡ್ರಗ್ ಪಾರ್ಕ್ ಸೇರಿದಂತೆ, ೧೯ ಸಾವಿರದ ೫೦೦ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ವಿವಿಧ ರೈಲ್ವೆ ಮತ್ತು ರಸ್ತೆ ಯೋಜನೆಗಳಿಗೆ ಪ್ರಧಾನಮಂತ್ರಿ ಅಡಿಪಾಯ ಹಾಕಲಿದ್ದಾರೆ.
ಇದೇ ವೇಳೆ ಪ್ರಧಾನಿಯವರು, ಚೆನ್ನೈ- ಬೆಂಗಳೂರು ಕೈಗಾರಿಕಾ ಕಾರಿಡಾರ್ ಅಡಿಯಲ್ಲಿ, ತಿರುಪತಿ ಜಿಲ್ಲೆಯಲ್ಲಿ ನಿರ್ಮಾಣಗೊಳ್ಳಲಿರುವ ಕೈಗಾರಿಕಾ ಪ್ರದೇಶ- ಕೆ ಆರ್ ಐ ಎಸ್ ನಗರಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ ಪಿ .ವಿ