ಕೋಲಾರ, ೨೩ ಜನವರಿ (ಹಿ.ಸ) :
ಆ್ಯಂಕರ್ : ಮಕ್ಕಳ ಹಸಿವು ನೀಗಿಸುವ ಪುಣ್ಯದ ಕೆಲಸ ಮಾಡುವಾಗ ಎಚ್ಚರಿಕೆ ವಹಿಸಿ, ಸುರಕ್ಷತೆ ದೃಷ್ಟಿಯಿಂದ ಯಾವುದೇ ಕಾರಣಕ್ಕೂ ಅಡುಗೆ ಮನೆಗೆ ಮಕ್ಕಳ ಪ್ರವೇಶಕ್ಕೆ ಅವಕಾಶ ನೀಡದಿರಿ ಎಂದು ಅಕ್ಷರದಾಸೋಹ ಜಿಲ್ಲಾ ಶಿಕ್ಷಣಾಧಿಕಾರಿ ಸಿ.ವಿ.ತಿಮ್ಮರಾಯಪ್ಪ ಕರೆ ನೀಡಿದರು.
ಕೋಲಾರ ತಾಲ್ಲೂಕಿನ ಮುದುವಾಡಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಜಿಪಂ ಪ್ರಧಾನ ಮಂತ್ರಿಶಕ್ತಿ ನಿರ್ಮಾಣ್ ಯೋಜನೆ ಆಶ್ರಯದಲ್ಲಿ ತಾಲ್ಲೂಕಿನ ಐತರಾಸನಹಳ್ಳಿ, ಹೋಳೂರು, ತೊರದೇವಂಡಹಳ್ಳಿ, ಮುದುವಾಡಿ ಕ್ಲಸ್ಟರ್‌ಗಳ ವ್ಯಾಪ್ತಿಯ ಬಿಸಿಯೂಟ ಸಿಬ್ಬಂದಿಗೆ ಅಡುಗೆ ಮನೆ ಸುರಕ್ಷತೆ, ಶುಚಿತ್ವದ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಡುಗೆ ಸಿಬ್ಬಂದಿ ವಿದ್ಯಾರ್ಥಿಗಳನ್ನು ನಿಮ್ಮ ಮಕ್ಕಳೇ ಎಂದು ಪರಿಗಣಿಸಿ, ಮನೆಯಲ್ಲಿ ನಿಮ್ಮ ಮಕ್ಕಳನ್ನು ಕಾಣುವಷ್ಟೇ ಪ್ರೀತಿಯಿಂದ ಅವರನ್ನೂ ಕಾಣಬೇಕು, ಅದು ನಿಮ್ಮ ಮಕ್ಕಳಿಗೂ ಶ್ರೇಯಸ್ಕರ ಎಂದು ಹೇಳಿದರು.
ಅಕ್ಷರದಾಸೋಹ ಕಾರ್ಯಕ್ರಮವನ್ನು ಕೋಲಾರ ತಾಲ್ಲೂಕಿನಲ್ಲಿ ಅತ್ಯಂತ ಯಶಸ್ವಿಯಾಗಿ ಯಾವುದೇ ಸಮಸ್ಯೆಗಳಿಲ್ಲದಂತೆ ನಿರ್ವಹಿಸಿಕೊಂಡು ಬರುತ್ತಿದ್ದೇವೆ, ಅಡುಗೆ ಸಾಮಗ್ರಿಗಳ ನಿರ್ವಹಣೆ, ಲೆಕ್ಕಪತ್ರಗಳನ್ನು ಸರಿಯಾಗಿ ನಿರ್ವಹಿಸಿ ಎಂದು ಕಿವಿಮಾತು ಹೇಳಿ, ಮಕ್ಕಳ ಹಾಜರಾತಿಗೆ ತಕ್ಕಂತೆ ಧಾನ್ಯಗಳ ಬಳಕೆ,ಸಂಗ್ರಹಣೆ ಇರಬೇಕು ಎಂದರು.
ಸಹಾಯಕ ನಿರ್ದೇಶಕ ಎಸ್.ಟಿ.ಸುಬ್ರಮಣಿ, ಅಡುಗೆ ಕೋಣೆ ಶುಭ್ರವಾಗಿದ್ದರೆ ಮಾತ್ರ ಅಡುಗೆಯಲ್ಲೂ ಶುಚಿತ್ವ ಕಾಪಾಡಲು ಸಹಕಾರಿಯಾಗುತ್ತದೆ ಎಂಬುದನ್ನು ಅರಿತು ಗಮನಹರಿಸಿ, ಪಾತ್ರೆಗಳ ಸ್ವಚ್ಚತೆ, ಶುದ್ದ ಕುಡಿಯುವ ನೀರು, ಗುಣಮಟ್ಟದ ತರಕಾರಿ ಬಳಕೆ ಉತ್ತಮ ಬಿಸಿಯೂಟ ತಯಾರಿಕೆಗೆ ಅತಿ ಮುಖ್ಯವಾಗಿದೆ, ಇವುಗಳು ಮಕ್ಕಳ ಆರೋಗ್ಯ ರಕ್ಷಣೆಗೂ ಸಹಕಾರಿಯಾಗಲಿದ್ದು, ಜವಾಬ್ದಾರಿಯಿಂದ ನಡೆದುಕೋಳ್ಳಿ ಎಂದರು.
ಒಟ್ಟಾರೆ ಮಕ್ಕಳ ಆರೋಗ್ಯ ಕಾಪಾಡುವುದು ಶಿಕ್ಷಕರ ಜತೆಗೆ ಅಡುಗೆ ಸಿಬ್ಬಂದಿಯ ಜವಾಬ್ದಾರಿಯಾಗಿದೆ, ಶಾಲೆಯ ಅಡುಗೆ ಮನೆ ನಿಮ್ಮ ಮನೆಯ ಅಡುಗೆ ಮನೆ ಎಂದೇ ಭಾವಿಸಿ, ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಿ, ಅಡುಗೆ ಮನೆಯಲ್ಲಿ ಜೇಡರ ಬಲೆ, ಹಲ್ಲಿ, ಇಲಿ,ಹೆಗ್ಗಣಗಳು ಇರದಂತೆ ಎಚ್ಚರವಹಿಸಿ ಎಂದು ಕಿವಿಮಾತು ಹೇಳಿದರು.
ಶಿಕ್ಷಣ ಸಂಯೋಜಕ ನಂಜುAಡಗೌಡ ಮಾತನಾಡಿ, ರುಚಿಕರ ಮತ್ತು ಪೌಷ್ಟಿಕಾಂಶಭರಿತ ಆಹಾರ ಮಕ್ಕಳಿಗೆ ಕೊಡುವ ಕಾರ್ಯ ಇಲಾಖೆ ಮಾಡುತ್ತಿದ್ದು, ಯಾವುದೇ ಕಾರಣಕ್ಕೂ ಶುಚಿ ಮತ್ತು ರುಚಿಯಲ್ಲಿ ವ್ಯತ್ಯಾಸ ಮಾಡದೇ ನಿಮ್ಮ ಮಕ್ಕಳೆಂದು ತಿಳಿದು ಅಡುಗೆ ಬಡಿಸಿ ಎಂದರು.
ಕೋಲಾರ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಮಾತನಾಡಿ, ಮಕ್ಕಳಿಗೆ ಸೊಪ್ಪು, ಹಸಿರು ತರಕಾರಿ ಹೆಚ್ಚು ಬಳಸಿ, ಮೊಟ್ಟೆ ನಿತ್ಯವೂ ನೀಡಿ, ಅಪೌಷ್ಟಿಕತೆ ನಿಯಂತ್ರಣ ಇಂದಿನ ಅಗತ್ಯವಾಗಿದೆ, ಅಡುಗೆ ಮನೆ ಮತ್ತು ಸುತ್ತಲೂ ಸ್ವಚ್ಚತೆ ಕಾಪಾಡಿಕೊಂಡು ರೋಗಗಳಿಗೆ ಅವಕಾಶ ನೀಡದಿರಿ ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳ ತಡೆ, ಸೊಳ್ಳೆಗಳ ನಾಶ ಮತ್ತಿತರ ಆರೋಗ್ಯ ರಕ್ಷಣಾ ಕಾರ್ಯಕ್ರಮಗಳ ಕುರಿತು ಮಕ್ಕಳಿಗೆ ಅರಿವು ನೀಡಿದ ಅವರು, ಶೌಚಕ್ಕೆ ಹೋದ ನಂತರ, ಊಟಕ್ಕೆ ಮುನ್ನಾ ತಪ್ಪದೇ ಕೈತೊಳೆಯುವ ಅಭ್ಯಾಸ ಮಾಡಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷ ರವೀಂದ್ರಬಾಬು, ಸಿಆರ್‌ಪಿ ರೂಪಾ, ಶಿಕ್ಷಕ ಸೊಣ್ಣಪ್ಪ ಮತ್ತಿತರರು ಹಾಜರಿದ್ದರು. ಕೇದಾರ್ ಗ್ಯಾಸ್ ಏಜೆನ್ಸಿ ಸಿಬ್ಬಂದಿ ಅಡುಗೆ ಅನಿಲ ಸುರಕ್ಷತೆ ಕುರಿತು ಮಾರ್ಗದರ್ಶನ ನೀಡಿದರು.
ಚಿತ್ರ : ಕೋಲಾರ ತಾಲ್ಲೂಕಿನ ಕೆಂಬೋಡಿ ಜನತಾ ಪ್ರೌಢಶಾಲೆ ಆವರಣದಲ್ಲಿ ಪ್ರಧಾನ ಮಂತ್ರಿಶಕ್ತಿ ನಿರ್ಮಾಣ್ ಯೋಜನೆ ಆಶ್ರಯದಲ್ಲಿ ಬಿಸಿಯೂಟ ಸಿಬ್ಬಂದಿಗೆ ಅಡುಗೆ ಮನೆಯಲ್ಲಿ ಅಗ್ನಿ ಅವಘಡ ತಪ್ಪಿಸುವ ಕುರಿತ ಕಾರ್ಯಾಗಾರದಲ್ಲಿ ಶಿಕ್ಷಣಾಧಿಕಾರಿ ತಿಮ್ಮರಾಯಪ್ಪ ಮಾತನಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್