ಬಳ್ಳಾರಿ, 02 ಜನವರಿ (ಹಿ.ಸ.) :
ಆ್ಯಂಕರ್ : ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಗೌರವಧನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಜನವರಿ 7 ರಿಂದ ಫ್ರೀಡಂಪಾರ್ಕ್‍ನಲ್ಲಿ ಹಮ್ಮಿಕೊಂಡಿರುವ ಅನಿರ್ಧಿಷ್ಟಾವಧಿ ಹೋರಾಟದ ಪೋಸ್ಟರ್ ಅನ್ನು ಗುರುವಾರ ಬಿಡುಗಡೆ ಮಾಡಲಾಯಿತು.
ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಅವರು ಸುದ್ದಿಗಾರರಿಗೆ ಈ ಮಾಹಿತಿ ನೀಡಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಆಶಾ ಕಾರ್ಯಕರ್ತೆಯರಿಗೆ ಪಾವತಿ ಆಗುತ್ತಿರುವ ಗೌರವಧನ ಸೇರಿಸಿ ಒಟ್ಟು ರೂ. 15000 ಮಾಸಿಕ ಗೌರವಧನ ಪಾವತಿಯಾಗಬೇಕು. ನಗರ ಆಶಾ ಕಾರ್ಯಕರ್ತೆಯರ ಹೆಚ್ಚುವರಿ ಕೆಲಸ ಮತ್ತು ನಗರ ಜೀವನದ ದುಬಾರಿ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ಕನಿಷ್ಠ ರೂ.2000ರಷ್ಟು ಗೌರವಧನವನ್ನು ಹೆಚ್ಚಿಗೆ ಮಾಡಬೇಕು ಎಂದರು.
ರಾಜ್ಯದಾದ್ಯಂತ ಬಾಕಿ ಇರುವ 2-3 ತಿಂಗಳ ಆಶಾ ಕಾರ್ಯಕರ್ತೆಯರ ಪ್ರೋತ್ಸಾಹಧನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಆಶಾ ಕಾರ್ಯಕರ್ತೆಯರು ಸ್ಮಾರ್ಟ್ ಫೋನ್ ಬಳಕೆ ಬಗ್ಗೆ ದಿ: 28-11-2024 ರಂದು ಹೊರಡಿಸಿದ ಅಧಿಕೃತಜ್ಞಾಪನಾ ಪತ್ರ (ಎಸ್.ಎನ್.ಓ (ಆಶಾ)/41/2023-24 ವನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು. ಆಶಾಗಳದಲ್ಲದ ಕೆಲಸವನ್ನು ಅಧಿಕೃತವಾಗಿ ಮಾಡಲು ಹೇಳಿರುವ ಆದೇಶ ವಾಪಾಸಾಗಲೇಬೇಕು ಎಂದು ಆಗ್ರಹಿಸಿದರು.
ಸೇವಾ ನಿವೃತ್ತಿ ಪಡೆಯುವ ಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಇರುವಂತೆ ರೂ.5 ಲಕ್ಷಕ್ಕೆ ಹೆಚ್ಚಿಸುವುದು.
ತೀವ್ರವಾದ ಅನಾರೋಗ್ಯ, ಚಿಕಿತ್ಸೆ ಪಡೆಯುವ ಅವಧಿಯಲ್ಲಿ ಕನಿಷ್ಠ 3 ತಿಂಗಳುಗಳ ಕಾಲ ರಾಜ್ಯ ಸರ್ಕಾರದ ನಿಶ್ಚಿತ ಗೌರವಧನ ಮತ್ತು ರೊಟೀನ್ ಚಟುವಟಿಕೆಗಳ ನಿಗದಿತ ಧನ ನೀಡಬೇಕು. ಆಶಾ ಸೇವೆಯಲ್ಲಿ ಇದ್ದಾಗ ಘಟಿಸುವ
ಅನಾಹುತಗಳಿಗೆ ಇಲಾಖೆಯೇ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದರು.
ಪ್ರತೀ ವರ್ಷ ಆಶಾ ಕಾರ್ಯಕರ್ತೆಗೆ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಬೇಕು. ತೀವ್ರ ಕಾಯಿಲೆಗಳಿದ್ದಲ್ಲಿ ಕೂಡಲೇ ಉಚಿತ ಚಿಕಿತ್ಸೆ ನೀಡಬೇಕು. ಈ ಬಾರಿಯ ಆರ್‍ಒಪಿ 2024-26 ನಲ್ಲಿ ಅನುಮೋದನೆ ಆಗಿರುವಂತೆ ಏಪ್ರಿಲ್ 2024ರಿಂದ ಆಶಾ ಸುಗಮಕಾರರಿಗೆ ರೂ.7500 ರಂತೆ ಗೌರವಧನÀ ನೀಡಿ, ಕೆಲ ಜಿಲ್ಲೆಗಳಲ್ಲಿ 3-4 ತಿಂಗಳಿಂದ ಬಾಕಿ ಉಳಿದಿರುವ ಸುಗಮಕಾರರ ಗೌರವಧನವನ್ನು ಕೂಡಲೇ ಪಾವತಿ ಮಾಡಬೇಕು ಎಂದು ಅಗ್ರಹಿಸಿದರು.
ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಿ, ಕನಿಷ್ಠ ವೇತನ, ಗ್ರಾಜ್ಯುಟಿ, ಪಿಎಫ್-ಇಎಸ್‍ಐ ಸೌಲಭ್ಯ ನೀಡಿರಿ ಎಂದು ಅವರು ಆಗ್ರಹಿಸಿದರು.
ಎಐಯುಟಿಯುಸಿ ಜಿಲ್ಲಾಧ್ಯಕ್ಷ ಎ. ದೇವದಾಸ್, ಜಿಲ್ಲಾ ಕಾರ್ಯದರ್ಶಿ ಡಾ. ಎನ್. ಪ್ರಮೋದ್ ಮತ್ತು ಆಶಾ ಸಂಘದ ಜಿಲ್ಲಾ ಗೌರವಾಧ್ಯಕ್ಷೆ ಎ. ಶಾಂತಾ, ಜಿಲ್ಲಾಧ್ಯಕ್ಷೆ ಎಂ. ಗೀತಾ, ನಗರ ಗೌರವಾಧ್ಯಕ್ಷೆ ರುಜಿ ರಾಮಕ್ಕ, ಸದಸ್ಯರುಗಳಾದ ಖೈರೂನ್ ಬೀ, ಹಸೀನಾ, ಗೀತಾ, ಪ್ರಭಾವತಿ ಅವರು ಈ ಸಂದರ್ಭದಲ್ಲಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್