ಕೊಪ್ಪಳ, 15 ಜನವರಿ (ಹಿ.ಸ.) :
ಆ್ಯಂಕರ್ : ಜಿಲ್ಲೆಯ ಕೆರೆಹಳ್ಳಿ ಗ್ರಾಮ ಸೇರಿದಂತೆ ಸುತ್ತ ಮುತ್ತಲ ಹಲವಾರು ಗ್ರಾಮಗಳಲ್ಲಿ ಪರಿಸರ, ಐತಿಹಾಸಿಕ ಸ್ಮಾರಕಗಳ ರಕ್ಷಣೆ ಮತ್ತು ಜಾಗೃತಿ ಮೂಡಿಸುತ್ತಿರುವ ಉರಗ ಪ್ರೇಮಿ ವಸಂತ್ ಶಿಳ್ಳೆಕ್ಯಾತರ್ ಇವರಿಗೆ ವಿವೇಕಶ್ರೀ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ತಾಲೂಕಿನ ಗುಳದಳ್ಳಿಯ ಶ್ರೀ ಸ್ವಾಮಿ ವಿವೇಕಾನಂದ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ 14ನೇ ಶಾಲಾ ವಾರ್ಷಿಕೋತ್ಸವ, ಸಾಂಸ್ಕøತಿಕ ಕಾರ್ಯಕ್ರಮ, ಶ್ರೀ ಸ್ವಾಮಿ ವಿವೇಕಾನಂದರ 162ನೇ ಜಯಂತ್ಯೋತ್ಸವ ಹಾಗೂ ಸರಸ್ವತಿ ಪೂಜಾ ಸಮಾರಂಭದಲ್ಲಿ ವಸಂತ್ ಶಿಳ್ಳೆಕ್ಯಾತರ್ ಅವರಿಗೆ ಪ್ರಸಕ್ತ ಸಾಲಿನ ವಿವೇಕಶ್ರೀ ಪ್ರಶಸ್ತಿ ಪುರಸ್ಕಾರ ನೀಡಿ ಪೆÇ್ರೀತ್ಸಾಹಿಸಲಾಗಿದೆ.
ಶಾಲೆಯ ಕಾರ್ಯದರ್ಶಿ ರಮೇಶ್ ಫಕೀರಪ್ಪ ಹೊಳೆಯಾಚೆ ಇವರು ವಸಂತ್ ಅವರ ವನ್ಯಜೀವಿ ಕಾಳಜಿಯನ್ನು ಗುರುತಿಸಿ, ಸಂಸ್ಥೆಯ ವತಿಯಿಂದ ವನ್ಯಜೀವಿ ಕ್ಷೇತ್ರ ವಿಭಾಗದಲ್ಲಿ ಈ ಪ್ರಶಸ್ತಿ ನೀಡಿ ಪುರಸ್ಕರಿಸಿದ್ದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಸಂತ್ ಅವರಂತೆ ಎಲ್ಲ ಗ್ರಾಮಗಳ ಯುವಕರು ಇದೇರೀತಿ ವನ್ಯ ಜೀವಿಗಳನ್ನು ರಕ್ದಿಸಲು ಮುಂದಾಗಬೇಕೆಂಬ ಆಶಯ ವ್ಯಕ್ತಪಡಿಸಿದ್ದಾರೆ.
ಮೂಲತಃ ಕೆರೆಹಳ್ಳಿ ಗ್ರಾಮದ ವಸಂತ್ ಶಿಳ್ಳೆಕ್ಯಾತರ್ ಬಡತನದಲ್ಲಿ ಹುಟ್ಟಿದವರು. ಹುಚ್ಚಪ್ಪ ಮತ್ತು ಪಕ್ಕಿರಮ್ಮ ದಂಪತಿಗಳ ಪುತ್ರನಾಗಿರುವ ವಸಂತ್ ಬಾಲ್ಯದಲ್ಲಿ ಕುರಿ, ಆಡುಗಳನ್ನು ಮೇಯಿಸಿಕೊಂಡು ಸದಾ ಗುಡ್ಡಗಾಡು ಪ್ರದೇಶದಲ್ಲಿ ಜೀವನ ಕಳೆದವರು. ಯೌವನಾವಸ್ಥೆಗೆ ಬರುತ್ತಿದ್ದಂತೆ ಕುರಿ, ಆಡು ಮೇಯಿಸುವ ಕಾಯಕದಿಂದ ವಿಮುಖರಾಗಿ ಬೆಂಗಳೂರಿಗೆ ಹೊಟ್ಟೆಪಾಡು ಅರಸಿ ವಲಸೆ ಹೋಗಿದ್ದರು. ಬಳಿಕ ಮರಳಿ ಹುಟ್ಟೂರಿಗೆ ತೆರಳಿ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಹೀಗಿರುವಾಗ ಗ್ರಾಮವೊಂದರಲ್ಲಿ ಹಾವು ಕಂಡ ತಕ್ಷಣ ಸ್ಥಳೀಯರು ಸಾಯಿಸಲು ಹೊರಟಿದ್ದರು. `ಕೊಲ್ಲಬೇಡಿ, ಅವೂ ನಮ್ಮಂತೆ ಜೀವಿಗಳು' ಎಂದು ತಿಳುವಳಿಕೆ ಮೂಡಿಸಿ ಅಂದಿನಿಂದ ಹಾವುಗಳನ್ನು ಹಿಡಿಯುವ ಕಾಯಕ ಮಾಡಿಕೊಂಡಿದ್ದಾರೆ.
ಕೆರೆಹಳ್ಳಿ, ಗುಳದಳ್ಳಿ, ಶಹಪುರ, ಲಿಂಗದಹಳ್ಳಿ, ಬೇವಿನಹಳ್ಳಿ, ಚಂದ್ರಗಿರಿ, ಬೂದಗುಂಪಾ, ಗಬ್ಬೂರು, ದನಕನದೊಡ್ಡಿ, ಕೂಕನಪಳ್ಳಿ, ಇಂದರಗಿ, ನಾಗೇಶನಹಳ್ಳಿ, ಗಿಣಿಗೇರಿ, ಮುಕ್ಕುಂಪಿ, ಜಬ್ಬಲಗುಡ್ಡ, ಬಿಳೇಬಾವಿ, ಅಗಳಕೇರಿ, ಹಿಟ್ನಾಳ, ಬಸಾಪಟ್ಟಣ, ಕೊಪ್ಪಳ, ಬನ್ನಿಹಟ್ಟಿ, ಟಿಬಿ ಡ್ಯಾಂ, ಹೆಗ್ಗಡಳ್ಳಿ, ಬಂಡಿಕುಂಟಿ, ಕಲ್ಲಲಿಂಗನಹಳ್ಳಿ ಮತ್ತು ವಿಠಲಾಪುರ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಇದುವರೆಗೆ 6 ಸಾವಿರಕ್ಕೂ ಅಧಿಕ ಹಾವುಗಳನ್ನು ಹಿಡಿದು ರಕ್ಷಿಸಿದ್ದಾರೆ. ಗಾಯಗೊಂಡ ಹಾವುಗಳನ್ನು ಕಾಡಿಗೆ ಬಿಟ್ಟರೆ ಇರುವೆ ಮುತ್ತಿ, ಸಾವಿಗೀಡಾಗುವ ಸಂಭವ ಇರುವುದರಿಂದ ಅಂತಹ ಹಾವುಗಳಿಗೆ ಮನೆಯಲ್ಲಿಯೇ ಅರಣ್ಯ ಜೀವಿ ವೈದ್ಯರ ಸಲಹೆಗಳನ್ನು ಪಡೆದು ಉಪಚಾರ ಮಾಡಿ, ಬಳಿಕ ಕಾಡಿಗೆ ಬಿಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ನಾಗರಹಾವು, ಮಂಡಲ ಹಾವು, ಕೇರೆ ಹಾವು, ರಕ್ತ ಮಂಡಲ, ಬ್ಲೈಂಡ್ ಪೆಂಜರಿ, ಭರ್ಚಿ, ಮಿಡಿ ನಾಗರ, ಮಣ್ಮುಕ್ಕ ಹೀಗೆ ಹಲವಾರು ಸರೀಸೃಪಗಳಿಗೆ ಜೀವದಾನ ಮಾಡಿ ಕಾಡಿಗೆ ಬಿಡುವ ಕಾಯಕ ಮಡಿಕೊಂಡಿರುವ ವಸಂತ್ ಅವರ ವನ್ಯಜೀವಿ ಪ್ರೇಮಕ್ಕೆ ಪ್ರಶಸ್ತಿ ಸಂದಿರುವುದು ಖುಷಿ ತಂದಿದೆ ಎಂದು ವಸಂತ್ ಸಂಭ್ರಮಿಸಿದ್ದಾರೆ.
ಹಾವು ಕಂಡ ತಕ್ಷಣ ಯಾರೇ ಮೊಬೈಲ್ ಕರೆ ಮಾಡಿದರೆ ದಿನದ 24 ಗಂಟೆಯೂ ವಸಂತ್ ಹಾವುಗಳನ್ನು ಹಿಡಿಯುವಲ್ಲಿ ಸಿದ್ಧರಿದ್ದಾರೆ. ಮನೆ, ಕೊಟ್ಟಿಗೆ, ಗೋಡಾನ್, ಕಚೇರಿ, ಶಾಲೆ, ಕಾಲೇಜು ಆವರಣ, ಹೊಲ, ಗದ್ದೆಗಳಲ್ಲಿ ಹಾವು ಕಂಡರೆ ಕೊಲ್ಲಬೇಡಿ. ನನ್ನ ಈ 96638 33914 ಕರೆ ಮಾಡಿದರೆ ಹಾವುಗಳನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡುವುದಾಗಿ ವಸಂತ್ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್