ಹೊಸಪೇಟೆ , 04 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅವರು ಹೊಸಪೇಟೆ ನಗರದಲ್ಲಿನ ತಾಲೂಕು ಕಚೇರಿಗೆ ಸೆಪ್ಟೆಂಬರ್ 3ರಂದು ಅನಿರೀಕ್ಷಿತವಾಗಿ ಭೇಟಿ ನೀಡಿದ್ದಾರೆ.
ತಹಶೀಲ್ದಾರರ ಕಚೇರಿಯಲ್ಲಿನ ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿಗೆ ದೂರು ಸ್ವೀಕೃತವಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ತಹಶೀಲ್ದಾರರ ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ಕೈಗೊಂಡರು.
ಜಿಲ್ಲಾಧಿಕಾರಿಗಳು ಉಪ ನೋಂದಣಿ ಕಚೇರಿಗೆ ಸಹ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯ ಬಗ್ಗೆ ಪರಿಶೀಲಿಸಿದರು. ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಸರಿಯಾದ ವ್ಯವಸ್ಥೆಗಳನ್ನು ಮಾಡಬೇಕು. ಸಾರ್ವಜನಿಕರಿಗೆ ಸರಿಯಾಗಿ ಸ್ಪಂದನೆ ನೀಡಬೇಕು ಎಂದು ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಸಲಹೆ ಮಾಡಿದರು.
ಎನಿವೇರ್ ನೋಂದಣಿ ವ್ಯವಸ್ಥೆ ವಿಜಯನಗರ ಜಿಲ್ಲೆಗೂ ವಿಸ್ತರಣೆಯಾಗಿದೆ. ಎನಿವೇರ್ ನೋಂದಣಿಯಲ್ಲಿ ದಸ್ತಾವೇಜನ್ನು ಸ್ಥಿರಾಸ್ತಿ ಇರುವ ಜಿಲ್ಲೆಯ ಯಾವುದಾದರೂ ಉಪನೋಂದಣಿ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಈ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಉಪ ನೋಂದಣಿ ಕಚೇರಿಯಲ್ಲಿ ಯಾವುದೇ ಅನಧಿಕೃತ ವ್ಯಕ್ತಿಗಳು ಇರದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಪ್ರತಿ ಸೋಮವಾರ, ಮಂಗಳವಾರ ಪೌತಿ, ವಾರಸು ಖಾತೆ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಗ್ರಾಮ ಆಡಳಿತ ಅಧಿಕಾರಿಗಳಿಗೆ ನೇರವಾಗಿ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಪೌತಿ ಖಾತೆ ಬದಲಾವಣೆ ಮಾಡಿಸಿ ಕೊಳ್ಳಬಹುದು. ಈ ಬಗ್ಗೆ ಗ್ರಾಮ ಆಡಳಿತ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸೂಚನೆ ನೀಡಿದರು.
ಆಹಾರ ಇಲಾಖೆಯಲ್ಲಿ ಸಾರ್ವಜನಿಕರ ಕೆಲಸಗಳು ಮಂದಗತಿಯಲ್ಲಿ ಆಗುತ್ತಿವೆ ಎನ್ನುವ ದೂರುಗಳಿದ್ದು ಈ ಬಗ್ಗೆ ಇಲಾಖಾ ಅಧಿಕಾರಿಗಳು ಗಮನ ಹರಿಸಬೇಕು. ಯಾವುದೇ ಕೆಲಸಕ್ಕೆ ಸಾರ್ವಜನಿಕರು ಕಾಯಬಾರದು ಎಂದು ತಿಳಿಸಿದರು.
ವಾರ್ತಾ ಇಲಾಖೆಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಯ ಹಾಜರಾತಿ ಪರಿಶೀಲಿಸಿ ಸಿಬ್ಬಂದಿಯ ಕೆಲಸ ಕಾರ್ಯದ ಬಗ್ಗೆ ವಿಚಾರಿಸಿದರು.
ಶುಚಿತ್ವದ ಕಡೆ ಗಮನ ನೀಡಿ: ವಿವಿಧ ತಾಲೂಕು ಕಚೇರಿಗಳನ್ನು ಹೊಂದಿರುವ ತಾಲೂಕು ಕಚೇರಿ ಸಂಕೀರ್ಣದ ಸುತ್ತಲು ಶುಚಿತ್ವ ಕಾಯ್ದುಕೊಳ್ಳಬೇಕು. ಇಲ್ಲಿ ಸಾರ್ವಜನಿಕ ಶೌಚಾಲಯ ಸರಿಯಾಗಿ ನಿರ್ವಹಣೆ ಆಗಬೇಕು. ವಿವಿಧ ಕಚೇರಿಗಳಿಗೆ ಬರುವ ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು. ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಬೇಕು. ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿಯನ್ನು ಕೂಡಲೇ ತೆರವುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಹವಾಲು ಸ್ವೀಕಾರ: ಹೊಸಪೇಟೆ ತಹಶೀಲ್ದಾರ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೆಲವು ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ತಮ್ಮ ಅಹವಾಲುಗಳನ್ನು ನೀಡಿದರು. ಇದೇ ವೇಳೆ ವಿದ್ಯಾರ್ಥಿಗಳು, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಎನ್‍ಇಪಿ ಪದವಿ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ದೂರು ನೀಡಿದರು. ಜಿಲ್ಲಾಧಿಕಾರಿಗಳು, ಸಂಬಂಧಿಸಿದ ಅಧಿಕಾರಿಗಳಿಗೆ ಸ್ಥಳದಲ್ಲೇ ದೂರವಾಣಿಯೊಂದಿಗೆ ಮಾತನಾಡಿ ಸ್ಪಂದನೆ ನೀಡಿದರು.
ಈ ಸಂದರ್ಭದಲ್ಲಿ ಗ್ರೇಡ್-2 ತಹಶೀಲ್ದಾರರಾದ ವೆಂಕಟೇಶ್ ಆಶ್ರಿತ್, ಶೀರಸ್ತೇದಾರರಾದ ಶ್ರೀಧರ್ ಎಸ್ ಸೇರಿದಂತೆ ತಹಸೀಲ್ದಾರ ಕಚೇರಿ ಮತ್ತು ಇನ್ನೀತರ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್