ನವದೆಹಲಿ, 02 ಸೆಪ್ಟೆಂಬರ್(ಹಿ.ಸ.) :
ಆ್ಯಂಕರ್ : ಫ್ರಾನ್ಸ್‌ನ ಲಿಯೋನ್‌ನಲ್ಲಿ ಇದೇ ತಿಂಗಳು ೬ ರಿಂದ ನಡೆಯಲಿರುವ ೨೦೨೪ರ ವಿಶ್ವ ಕೌಶಲ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ಭಾರತೀಯ ಯುವ ಕೌಶಲ್ಯ ತಂಡ ಲಿಯೋನ್‌ಗೆ ಪ್ರಯಾಣ ಬೆಳೆಸಲಿದೆ. ಅತೀ ಹೆಚ್ಚು ಯುವಕರನ್ನು ಹೊಂದಿರುವ ಭಾರತ ತಂಡದಲ್ಲಿ ಕೌಶಲ್ಯಯುತ ೬೦ ಸ್ಪರ್ಧಿಗಳಿದ್ದು, ೬೧ ಕೌಶಲ್ಯ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ.
ವಿಶ್ವ ದರ್ಜೆಯ ಕೌಶಲ್ಯವನ್ನು ಪೋಷಿಸುವ ನಿಟ್ಟಿನಲ್ಲಿ ವಿಶ್ವ ಕೌಶಲ್ಯ ಸ್ಪರ್ಧೆಯಲ್ಲಿ ಭಾಗವಹಿಸುವುದು ರಾಷ್ಟ್ರದ ಬದ್ಧತೆಯ ಪ್ರಮಾಣ ಪತ್ರವಾಗಿದೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆಯ ಕಾರ್ಯದರ್ಶಿ ಅತುಲ್ ಕುಮಾರ್ ತಿವಾರಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಜಾಗತಿಕ ಮಟ್ಟದಲ್ಲಿ ತಮ್ಮ ಕೌಶಲ್ಯ ಪ್ರದರ್ಶಿಸುವ ನಿಟ್ಟಿನಲ್ಲಿ ಯುವ ಸ್ಪರ್ಧಾಳುಗಳಿಗೆ ತಜ್ಞರು ಹಾಗೂ ಉದ್ಯಮ ಮತ್ತು ಶೈಕ್ಷಣಿಕ ಪಾಲುದಾರರು ಅತ್ಯುತ್ತಮ ರೀತಿಯ ತರಬೇತಿ ನೀಡಿದ್ದಾರೆ ಎಂದು ಅವರು ಹೇಳಿದರು. ನವದೆಹಲಿಯ ಯಶೋಭೂಮಿಯಲ್ಲಿ ಜರುಗಿದ ಇಂಡಿಯಾ ಸ್ಕಿಲ್ಸ್ ನ್ಯಾಷನಲ್ಸ್ ೨೦೨೪ ರ ಸ್ಪರ್ಧೆಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು.
ಪ್ರಾದೇಶಿಕ ಸ್ಪರ್ಧೆಗಳಲ್ಲಿ ಸುಮಾರು ೨.೫ ಲಕ್ಷದಷ್ಟು ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು. ಮೊದಲ ಸುತ್ತಿನಲ್ಲಿ ಈ ಅಭ್ಯರ್ಥಿಗಳು ಸ್ಕಿಲ್ ಇಂಡಿಯಾ ಡಿಜಿಟಲ್ ಹಬ್‌ಗಳಲ್ಲಿ ಡಿಜಿಟಲ್ ಮಾಧ್ಯಮದ ಮೂಲಕ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಿದ್ದರು. ಭೌತಿಕವಾಗಿ ಮತ್ತು ಆನ್‌ಲೈನ್ ಮಾಧ್ಯಮದ ಮೂಲಕ ಸುಮಾರು ೨೦೦ ಕಾರ್ಯಾಗಾರಗಳನ್ನು ಆಯೋಜಿಸಲಾಗಿತ್ತು.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್