ಬೆಂಗಳೂರಿನಲ್ಲಿ ಮಂಕಿಪಾಕ್ಸ್ ಕಟ್ಟೆಚ್ಚರ: ವಿಮಾನ ನಿಲ್ದಾಣದಲ್ಲಿ ಶಂಕಿತರ ಪರೀಕ್ಷೆ, ಸ್ಕ್ರೀನಿಂಗ್, ಟ್ರ್ಯಾಕಿಂಗ್ ಶುರು
ಬೆಂಗಳೂರು,13 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಮಂಕಿಪಾಕ್ಸ್ ಮತ್ತೆ ಬಾಲ ಬಿಚ್ಚಿದೆ. ನೂರಾರು ದೇಶಗಳಲ್ಲಿ ಸಾವಿರಾರು ಮಂದಿಯನ್ನು ಬಲಿಪಡೆದಿರುವ ಹೆಮ್ಮಾರಿ ಮಂಕಿಪಾಕ್ಸ್ ಈಗ ಭಾರತಕ್ಕೆ ಕಾಲಿಟ್ಟಿದೆ. ಕಳೆದ ನಾಲ್ಕು ದಿನಗಳ ಹಿಂದೆ ಪ್ರಕರಣ ವರದಿಯಾಗುತ್ತಿದ್ದಂತೆಯೇ ರಾಜ್ಯ ಆರೋಗ್ಯ ಇಲಾಖೆ ಕಟ್ಟೆಚ್ಚರ
Monkeypox alert in Bengaluru: Testing, screening,


ಬೆಂಗಳೂರು,13 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಮಂಕಿಪಾಕ್ಸ್ ಮತ್ತೆ ಬಾಲ ಬಿಚ್ಚಿದೆ. ನೂರಾರು ದೇಶಗಳಲ್ಲಿ ಸಾವಿರಾರು ಮಂದಿಯನ್ನು ಬಲಿಪಡೆದಿರುವ ಹೆಮ್ಮಾರಿ ಮಂಕಿಪಾಕ್ಸ್ ಈಗ ಭಾರತಕ್ಕೆ ಕಾಲಿಟ್ಟಿದೆ. ಕಳೆದ ನಾಲ್ಕು ದಿನಗಳ ಹಿಂದೆ ಪ್ರಕರಣ ವರದಿಯಾಗುತ್ತಿದ್ದಂತೆಯೇ ರಾಜ್ಯ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಲು ಮುಂದಾಗಿದೆ. ಆರಂಭದಲ್ಲಿಯೇ ವೈರಸ್ ನಿಯಂತ್ರಣಕ್ಕೆ ಕಠಿಣ ಕ್ರಮಕ್ಕೆ ಆರೋಗ್ಯ ಇಲಾಖೆ ಮುಂದಾಗಿದ್ದು, ರಾಜಧಾನಿಯಲ್ಲಿ ಮಂಕಿಪಾಕ್ಸ್​​​ಗೆ ಪರೀಕ್ಷೆ, ಟ್ರ್ಯಾಕಿಂಗ್ ಮತ್ತು ಸ್ಕ್ರೀನಿಂಗ್ ಶುರು ಮಾಡಲಾಗಿದೆ.

ಮಂಕಿಪಾಕ್ಸ್ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್

ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಪಾಸಿಟಿವ್ ಕಂಡುಬಂದ ದೇಶದಿಂದ ಬರುವ ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಲು ತಿಳಿಸಿದೆ.‌ ಮಂಕಿಪಾಕ್ಸ್ ಗುಣಲಕ್ಷಣಗಳು ಇದ್ದರೆ ಐಸೊಲೇಷನ್​ನಲ್ಲಿ ಇಡಲು ತಿಳಿಸಲಾಗಿದೆ. ಸಿಲಿಕಾನ್ ಸಿಟಿಗೆ ದಿನನಿತ್ಯ ಬೇರೆ ದೇಶದಿಂದ ಬರುವ ನೂರಾರು ಪ್ರಯಾಣಿಕರ ಮೇಲೆ ಆರೋಗ್ಯ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಹೀಗಾಗಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇನ್ಮುಂದೆ ಶಂಕಿತರ ಟ್ರ್ಯಾಕಿಂಗ್ ಮಾಡಲಾಗುತ್ತದೆ.

ಏರ್​ಪೋರ್ಟ್​ನಲ್ಲಿ ಕಣ್ಗಾವಲು ಅಧಿಕಾರಿ ನೇಮಕ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಣ್ಗಾವಲು ಅಧಿಕಾರಿಗಳ ನೇಮಕ ಮಾಡಿದ್ದು ಏರ್ ಪೋರ್ಟ್​​ನಲ್ಲಿ ಟೆಸ್ಟಿಂಗ್ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಮಂಕಿಪಾಕ್ಸ್ ಗುರುತಿಸಲು ಹಾಗೂ ಅದನ್ನ ಟ್ರಾಕಿಂಗ್ ಪರೀಕ್ಷೆ ಮಾಡಲು ಆರೋಗ್ಯ ಸಿಬ್ಬಂದಿಗೆ ತರಬೇತಿ ಕೂಡಾ ನೀಡಲಾಗುತ್ತಿದ್ದು, ಟಾಸ್ಕ್ ಫೋರ್ಸ್ ತಜ್ಞರ ಸಲಹೆ ಮೇರೆಗೆ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದೆ ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ತಿಳಿಸಿದ್ದಾರೆ.

ಮಂಕಿಪಾಕ್ಸ್ ಶಂಕಿತರು ಕಂಡುಬಂದರೆ ಅಂತಹವರ ಮಾದರಿಯನ್ನು ಬಿಎಂಸಿ ಲ್ಯಾಬ್​ಗೆ ಕಳಿಸಲು ಆರೋಗ್ಯ ಇಲಾಖೆ ಸೂಚಿಸಿದ್ದು, ಪಾಸಿಟಿವ್ ಕಂಡುಬಂದರೆ 21 ದಿನಗಳ ಕ್ವಾರಂಟೈನ್ ಮಾಡಲು ಇಲಾಖೆ ಮುಂದಾಗಿದೆ. ಮೈ ಮೇಲೆ ದದ್ದು, ಜ್ವರ, ತೀವ್ರವಾದ ತಲೆನೋವು, ಬೆನ್ನುನೋವು, ಸ್ನಾಯು ಸೆಳೆತ ಮಂಕಿಪಾಕ್ಸ್ ಗುಣಲಕ್ಷಣಗಳು ಕಂಡು ಬಂದರೆ ಎಚ್ಚರವಹಿಸುವಂತೆ ಇಂದಿರಾ ಗಾಂಧಿ ಆಸ್ಪತ್ರೆ ನಿರ್ದೇಶಕ, ತಜ್ಞ ವೈದ್ಯರಾದ ಡಾ ಸಂಜಯ್ ಸಲಹೆ ನೀಡಿದ್ದಾರೆ.

ಮಂಕಿಪಾಕ್ಸ್ ಗುಣಲಕ್ಷಣಗಳೇನು?

ದೇಹದ ಮೇಲೆ ಗುಳ್ಳೆ ಥರದ ದದ್ದುಗಳು

ಮೈ ಮೇಲೆ ಗುಳ್ಳೆಗಳ ಜತೆ ಜ್ವರ

ತೀವ್ರವಾದ ತಲೆನೋವು

ಬೆನ್ನು ನೋವು, ಸ್ನಾಯು ಸೆಳೆತ

2 ವಾರದಿಂದ 4 ವಾರಗಳ ಕಾಲ ಬಾಧಿಸುವ ರೋಗ

ಅಂಗೈ, ಪಾದಗಳ ಮೇಲೆ ವ್ಯಾಪಕವಾದ ದದ್ದುಗಳು

ಒಟ್ಟಿನಲ್ಲಿ ಮಂಕಿಪಾಕ್ಸ್ ಭಾರತಕ್ಕೂ ಕಾಲಿಟ್ಟಾಗಿದೆ. ಹೀಗಾಗಿ ಜನರು ದೇಹದ ಮೇಲೆ ಗುಳ್ಳೆ ಥರದ ರಾಶ್, ಜ್ವರ, ತೀವ್ರವಾದ ತಲೆನೋವು, ಬೆನ್ನು ನೋವು, ಸ್ನಾಯು ಸೆಳೆತ ಕಂಡು ಬಂದರೆ ನಿರ್ಲಕ್ಷ್ಯ ಮಾಡಬಾರದು. ಮಂಕಿಪಾಕ್ಸ್​​ಗೆ ನಿರ್ದಿಷ್ಟ ಚಿಕಿತ್ಸೆ ಜೊತೆಗೆ ಔಷಧಿ ಇಲ್ಲದ ಕಾರಣ ಮುನ್ನೆಚ್ಚರಿಕೆಯೇ ಇದಕ್ಕೆ ಕಡಿವಾಣ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande