ಮುಂಬೈ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯ ಹಿರಿಮೆ –ಗರಿಮೆ
ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯಾ
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ
ಪೌರುಷದ ಬಲದಿಂದ ಅವಲೋಹದ ಕೇಡು ನೋಡಯ್ಯಾ
ಕೂಡಲ ಸಂಗನ ಶರಣರ ಅನುಭಾವದ ಬಲದಿಂದ ಎನ್ನ ಭವದ ಕೇಡು ನೋಡಯ್ಯಾ ||
ಇಲ್ಲಿ ಜ್ಞಾನ ಜ್ಯೋತಿ ಸತ್ಯ ಪುರುಷ ಶರಣರ ಅನುಭಾವದಿಂದ ತನ್ನ ಅನುಭವದ ಕೇಡು ಆಯಿತು ಎಂದು ಹೇಳುವುದರ ಮೂಲಕ ಬಸವಣ್ಣನವರು ಅರಿವಿಗೆ ಮಹತ್ವ ಕೊಟ್ಟಿದ್ದಾರೆ. ಇಂತಹ ಮಹಾ ಶರಣರ ತತ್ವವನ್ನನಸರಿಕೊಂಡ ವಿದ್ಯಾ ಪ್ರೇಮಿಗಳಾದ ಮಹಾತ್ಮ ಜ್ಯೋತಿಭಾ ಫುಲೆ ಮತ್ತು ಸಾವಿತ್ರಿ ಬಾಯಿ ಫುಲೆ ದಂಪತಿಗಳು ಮಹಾರಾಷ್ಟ್ರದ ಪುಣೆಯಲ್ಲಿ ಬಡ ಮಕ್ಕಳಿಗಾಗಿ ಶಿಕ್ಷಣವನ್ನು ಕೊಡಿಸಲು ರಾತ್ರಿ ಶಾಲೆಯನ್ನು ತೆರೆದರು. ಇದು ಮಹಾರಾಷ್ಟ್ರದಲ್ಲಿ ಪ್ರಥಮ ರಾತ್ರಿ ಶಾಲೆ ಎಂದು ಹೇಳಬಹುದು.
ಕನ್ನಡ ರಾತ್ರಿ ಶಾಲೆಗಳನ್ನು ಸ್ಥಾಪಿಸಿದ ಕೀರ್ತಿ ತುಳು ಕನ್ನಡಿಗರಿಗೆ ಸಲ್ಲುತ್ತದೆ : ಸುಮಾರು ಶತಮಾನದ ಪೂರ್ವದಲ್ಲಿ ಯಾಂತ್ರಿಕ ಗಾಳಿ ಇಂದಿನಷ್ಟು ಪ್ರಭಾವಿತವಾಗಿರಲಿಲ್ಲ. ಉದಾತ್ತ ವಿಚಾರಗಳನ್ನು ಮೈಗೂಡಿಸಿಕೊಂಡ ನಮ್ಮ ಪೂರ್ವಜರು ಶಿಕ್ಷಣದ ಮಹತ್ವನ್ನರಿತು ರಾತ್ರಿ ಶಾಲೆಗಳನ್ನು ಕಟ್ಟಿ ಬೆಳೆಸಿದರು. ಬದುಕಿನಲ್ಲಿ ನೆರಳಾಗಿ ಕಾಡುತ್ತಾ ಬಂದ ಬಡತನವನ್ನು ರಟ್ಟೆಯ ಹಸಿವಿನಿಂದ ನೀಗಿಸುವ ಕನಸಿನೊಂದಿಗೆ ಮುಂಬಯಿಗೆ ವಲಸೆ ಬಂದ ಬಡ ಮಕ್ಕಳಿಗೆ ವಿದ್ಯೆ ದೊರೆಯಬೇಕು. ಭಾಷೆ ಉಳಿಯಬೇಕು. ಕನ್ನಡ ಸಂಸ್ಕಾರ ಬೆಳೆಯಬೇಕು.ಎಂಬ ನಿಟ್ಟಿನಲ್ಲಿ ಮುಂಬೈಯಲ್ಲಿ ಕನ್ನಡ ರಾತ್ರಿ ಶಾಲೆಗಳನ್ನು ಸ್ಥಾಪಿಸಿದ ಕೀರ್ತಿ ತುಳು ಕನ್ನಡಿಗರಿಗೆ ಸಲ್ಲುತ್ತದೆ. ಅಂತಹ ಹಿರಿಮೆ ಪಡೆದ ತುಳು ಕನ್ನಡಿಗರು ಇಂದಿನ ಜನಾಂಗಕ್ಕೆ ನೈತಿಕ ಸ್ಫೂರ್ತಿಯನ್ನೀಯುವ ಆಧರಣಿಯ ಹಿರಿಯರು.
ಇದು ತುಳು ಕನ್ನಡಿಗರ ಪ್ರಥಮ ಶಾಲೆ : 1908 ರಲ್ಲಿ ಕೋಟೆಯ ಪರಿಸರದಲ್ಲಿ ಪ್ರಾರಂಭಿಸಿದ ಮೊಗವೀರ ರಾತ್ರಿ ಪ್ರೌಢ ಶಾಲೆ.ಇದು ತುಳು ಕನ್ನಡಿಗರ ಪ್ರಥಮ ಶಾಲೆ ಮಾತ್ರವಲ್ಲ, ಅಖಿಲ ಭಾರತದ ರಾತ್ರಿ ಶಾಲೆಗಳಲ್ಲಿಯೇ ಎರಡನೇ ಸ್ಥಾನ ಹೊಂದಿದೆಎಂಬ ಹೆಗ್ಗಳಿಕೆ ಮೊಗವೀರ ವ್ಯವಸ್ಥಾಪಕ ಮಂಡಳಿಗೆ ಸಲ್ಲುತ್ತದೆ.1939ರಲ್ಲಿ ಮುಂಬಯಿ ವಿಶ್ವವಿದ್ಯಾಲಯದಿಂದ ಪ್ರೌಢ ಶಾಲೆಗೆ ಮಾನ್ಯತೆ ದೊರಕಿದ್ದು ಬಡ ಮಕ್ಕಳಿಗೆ ಸಾಕ್ಷರ ಜ್ಯೋತಿ ಬೆಳಗಿದೆ. ತದನಂತರಈ ಶಾಲೆಯು 1990ರಲ್ಲಿ ಖಾರ್ರೋಡಿಗೆ ಸ್ಥಳಾಂತರಗೊಂಡಿತು. ವಿದ್ಯಾರ್ಥಿಗಳ ಕೊರತೆಯಿಂದಾಗಿ ಈ ಶಾಲೆಯು ಮುಚ್ಚಲ್ಪಟ್ಟಿರುವುದು ವಿಷಾದನೀಯ ಸಂಗತಿ. ಶಿಕ್ಷಣ ಪ್ರೇಮಿ, ಶ್ರೇಷ್ಠ ಶಿಕ್ಷಕರಾದ ಎಂ.ಎಸ್. ರಾವ್ ಅವರು. 1948 ರಲ್ಲಿ ಜವಾಹರ ಲಾಲ್ ಪ್ರೌಢ ಶಾಲೆ ಸ್ಥಾಪಿಸಿದರು. ನಂತರ ಕಾರಣಾಂತರಗಳಿಂದ ಈ ಶಾಲೆಯು ತನ್ನ ಸರಕಾರಿ ಮಾನ್ಯತೆಯನ್ನುಕಳೆದುಕೊಂಡಿತು.
ವಿದ್ಯಾರ್ಥಿಗಳ ಜ್ಞಾನದ ಬೆಳಕಿಗೆ ನಾಂದಿ : ಆಗ ಮುಂಬೈ ಬಿಲ್ಲವರ ಅಸೋಸಿಯೇಶನ್ ಈ ಶಾಲೆಯನ್ನು ತನ್ನ ಆಡಳಿತಕ್ಕೆ ತಗೆದುಕೊಂಡು ಮರು ಮಾನ್ಯತೆಯನ್ನು ಪಡೆಯುವಲ್ಲಿ ಯಶಸ್ವಿಯಾಯಿತು. ಕೆಲವು ವರ್ಷ ಚೆನ್ನಾಗಿ ನಡೆಯಿತು.ಅದು ರೇಲ್ವೆನಿಲುಮನೆಗೆ ದೂರವಿದ್ದ ಕಾರಣ ಮಕ್ಕಳ ಸಂಖ್ಯೆ ಕಡಿಮೆಯಾದಾಗ ಜವಾಹರ ರಾತ್ರಿ ಪ್ರೌಢ ಶಾಲೆಯನ್ನು ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯ ಜೊತೆ ವಿಲೀನಗೊಂಡಿತು. ಇದರ ದಾಖಲೆ ಪತ್ರಗಳು ಮಾತ್ರಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯಲ್ಲಿವೆ. ಇದರ ಸಂಚಾಲಿತ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯು ಮೊದಲಿಗೆ ಬೋರಾಬಜಾರ್ನಲ್ಲಿ 1961 ರ ಜೂಲೈ 24 ರಂದು ನಗರಸಭಾಸದಸ್ಯರಾಗಿರುವ ಬೊಮ್ಮನ್ಬೆಹರನ್ ಅವರ ದಿವ್ಯ ಹಸ್ತದಿಂದ ನೇರವೇರಿತು. ಆದರೆ 1961ರಿಂದ 1963ರವರೆಗೆ ವಿದ್ಯಾರ್ಥಿಗಳ ಜ್ಞಾನದ ಬೆಳಕಿಗೆ ನಾಂದಿ ಹಾಡಿದರು. ಶಾಲೆಗೆ ಮಹಾರಾಷ್ಟ್ರ ಸರಕಾರದ ಮಾನ್ಯತೆ ಸಿಗಲಿಲ್ಲ. ಆಗಿನ ಸಂಸ್ಥೆಯ ಪದಾಧಿಕಾರಿಗಳಾಗಿದ್ದ ಶ್ರೀಯುತ ಎಂ.ಎಸ್.ಕೋಟ್ಯಾನ, ವಕೀಲರಾದ ನಾಗೇಶ ಕೋಟ್ಯಾನ ಹಾಗೂ ಕೆ. ಕೆ. ಸುವರ್ಣ ಇವರಗಳ ಪ್ರಯತ್ನದಿಂದಾಗಿ ಮಹಾರಾಷ್ಟ್ರ ಸರಕಾರದ ವಿದ್ಯಾ ಮಂತ್ರಿಗಳಾಗಿದ್ದ ಶ್ರೀಯುತ ಶಾಂತಿಲಾಲ ಶಾಹ ಅವರು ಶಾಲೆಗೆ ಮಾನ್ಯತೆ ಕೊಡುವಂತೆ ವಿದ್ಯಾಧಿಕಾರಿಗಳಿಗೆ ಅದೇಶಿಸಿ ಶಾಲೆಗೆ ಮಾನ್ಯತೆ ಕೊಡಿಸಿದರು.ಆಗ ಮಾತೃ ಸಂಸ್ಥೆಯು ತನ್ನದೇ ಆದ ಈ ಶಾಲೆಗೆ ಪ್ರಥಮ ಬಾರಿಗೆಮುಖ್ಯಾಧ್ಯಾಪಕಾರಾಗಿ ಶಿಕ್ಷಕ ಎಸ್.ಆರ್.ರಾವ್ ಅವರನ್ನು ನೇಮಕ ಮಾಡಿದರು.
ಇದಕ್ಕೆ ಕಾರಣಕರ್ತರು ಅಧ್ಯಾಪಕ ವೃಂದದವರು : 1984ರಲ್ಲಿ ಹತ್ತನೇ ಬೋರ್ಡ ಪರೀಕ್ಷೆಯಲ್ಲಿ ಮುಂಬೈ ಕನ್ನಡ ಶಾಲೆಗಳಲ್ಲಿಯೇ ಪ್ರಥಮ ಸ್ಥಾನ ಮತ್ತು 2002 ರಲ್ಲಿ ಶೇ 80%ರಷ್ಟು ಬಂದಿರುವುದು.2007ರಲ್ಲಿ ಒಬ್ಬ ವಿದ್ಯಾರ್ಥಿ ಎಸ್. ಎಸ್. ಸಿ ಬೋರ್ಡ ಪರೀಕ್ಷೆಯಲ್ಲಿ ಶೇ 75.69 ರಷ್ಟು ಅಂಕ ಪಡೆದು ಮುಂಬಯಿ ಕನ್ನಡ ರಾತ್ರಿ ಪ್ರೌಢ ಶಾಲೆಗಳಲ್ಲಿಯೇ ಪ್ರಥಮ ಸ್ಥಾನ ಪಡೆದಿರುವುದು.2008 ರಲ್ಲಿ ಪ್ರತಿಶತ 91ರಷ್ಟು ಫಲಿತಾಂಶ ಪಡೆದು ಮುಂಬೈ ಕನ್ನಡ ರಾತ್ರಿ ಪ್ರೌಢ ಶಾಲೆಗಳಲ್ಲಿ ಪ್ರಥಮ ಬ0ದಿರುವುದು.2009ರಲ್ಲಿ ನಡೆದ ಎಸ್ ಎಸ್ ಸಿ ಬೋರ್ಡ ಪರೀಕ್ಷೆಯಲ್ಲಿ ಓರ್ವ ವಿದ್ಯಾರ್ಥಿನಿ ಶೇ 78 ರಷ್ಟು ಫಲಿತಾಂಶ ಪಡೆದು ರಾತ್ರಿ ಶಾಲೆಗಳಲ್ಲಿಯೇ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿರುವಳು.ಇದಕ್ಕೆ ಕಾರಣಕರ್ತರು ಅಧ್ಯಾಪಕ ವೃಂದದವರು.ಅವರ ಬೋಧನೆ ಪರಿಶ್ರಮ ವಿದ್ಯಾ ಪ್ರೇಮ ಹಾಗೂ ಶಿಕ್ಷಣ ಸಮಿತಿಯ ಸಲಹೆ ಸೂಚನೆ ಮತ್ತು ಬಿಲ್ಲವರ ಅಸೋಸಿಯೇಶನ್ ಇದರ ಕಾರ್ಯಕಾರಿ ಸಮಿತಿಯ ಪ್ರೋತ್ಸಾಹ ಸಹಕಾರದಿಂದ ನಮ್ಮ ಶಾಲೆಯು ಸುವ್ಯವಸ್ಥಿತವಾಗಿ ನಡೆದು ಬರುತ್ತಿರುವುದು ಮಾತೃ ಸಂಸ್ಥೆಗೆ ಹೆಮ್ಮೆ ತರುತ್ತದೆ.
4 ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ : ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯು 1961ರಿಂದ 1996ರ ವರೆಗೆ ಪೋರ್ಟಿನ ಬೋರಾ ಬಜಾರದಲ್ಲಿ ನಡೆಯುತ್ತಿದ್ದ ಶಾಲೆಯನ್ನು ಸ್ಥಳದ ಅಭಾವದಿಂದ ಡೋಂಗ್ರಿ ಮುನಸಿಪಲ್ ಶಾಲೆಗೆ ವರ್ಗಾಯಿಸಲಾಯಿತು.ನಂತರ ಸಂಸ್ಥೆಯ ಪದಾಧಿಕಾರಿಗಳ ಪ್ರಯತ್ನದಿಂದಾಗಿ 1970 ರಲ್ಲಿ ಪೋರ್ಟಿನಲ್ಲಿರುವ ಜಿಪಿಓ ಎದುರಿಗೆ ಇರುವ ಮುನಸಿಪಲ್ ಶಾಲೆಗೆ ವರ್ಗಾಯಿಸಲಾಯಿತು.ಈ ದಿಶೆಯಲ್ಲಿ ಶ್ರೀಯುತ ಎಲ್. ಡಿ. ಕೋಟ್ಯಾನ್ ಅವರ ಸೇವೆ ಪ್ರಶಂಸನೀಯವಾದದು. ಕಾರ್ಯ ನಿರ್ವಹಿಸಿ ವಿದ್ಯಾರ್ಥಿಗಳ ಅನುಕೂಲತೆಗಾಗಿ ಸಂತಾಕ್ರೂಜ್ ಸ್ಥಳಕ್ಕೆ ಸ್ಥಲಾಂತರಗೊಂಡು ತನ್ನ ಕಾರ್ಯ ಸಾಧನೆಯಲ್ಲಿ ಯಶಸ್ವಿ ಕಂಡ ಶಾಲೆ ಇದಾಗಿದೆ.ಈ ಶಾಲೆಯಲ್ಲಿ ಹೆಣ್ಣು ಮಕ್ಕಳು ಪಡೆಯುತ್ತಿರುವುದು ಪ್ರಶಂಸನೀಯ. 4 ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಿ ಅವರ ಬದುಕಿನ ದಿಕ್ಕನ್ನೇ ಬದಲಾಯಿಸಿರುವುದು ಇಂದು ದಾಖಲೆಯಾಗಿರುವುದು.
176 ರಾತ್ರಿ ಪ್ರೌಢ ಶಾಲೆಗಳಲ್ಲಿಯೇ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆ ಪ್ರಥಮ : 2011 ರಲ್ಲಿ ಶಾಲೆಯು ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡಿದೆ. ಈ ಶಾಲೆಯು ಮಹಾರಾಷ್ಟ್ರದ 10ನೆಯ ಬೋರ್ಡ ಪರೀಕ್ಷೆಯಲ್ಲಿ ಹೆಚ್ಚಿನ ಮಕ್ಕಳೊಂದಿಗೆ 5 ಬಾರಿ ಶೇ 100ರಷ್ಟು ಫಲಿತಾಂಶ ಪಡೆದಿರುವುದು ಮಾತೃಸಂಸ್ಥೆಯಾದ ಬಿಲ್ಲವರ ಅಸೋಸಿಯೇಶನ್ ಇದಕ್ಕೆ ಕೀರ್ತಿ ತಂದು ಕೊಟ್ಟಿದೆ. ಅಷ್ಟೇ ಅಲ್ಲದೇ 2015,16 ಮತ್ತು 2016,17 ನೇ ಸಾಲಿನ 10ನೇ ಬೋರ್ಡ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಬ್ಬರು ಪ್ರಥಮ ಸ್ಥಾನ ಪಡೆದು ಮಹಾರಾಷ್ಟ್ರದ 176 ರಾತ್ರಿ ಪ್ರೌಢ ಶಾಲೆಗಳಲ್ಲಿಯೇ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯು ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿದ್ಯಾರ್ಥಿರಿಬ್ಬರನ್ನು ಕೇಂದ್ರ ಸಚಿವರಾದ ಸನ್ಮಾನ್ಯ ಪ್ರಕಾಶ ಜಾವಡೇಕರ ಅವರು ಗೌರವಿಸಿ ಸತ್ಕರಿಸಿದ್ದು ಉಲ್ಲೇಖಿನಿಯ.
ನಮ್ಮ ಶಾಲೆಗೆ ಎಸ್. ಎಸ್. ಸಿ ಬೋರ್ಡ ಪರೀಕ್ಷೆ ಯಲ್ಲಿಉತ್ತಮ ಫಲಿತಾಂಶ ಪಡೆದ ವಿವರ
1) 2013-14ರಲ್ಲಿ ಶಾಲೆಗೆ ಶೇ 100ರಷ್ಟು ಫಲಿತಾಂಶ ದೊರಕಿದೆ.ವಿದ್ಯಾರ್ಥಿ ಶಿವ ಲಕ್ಷ್ಮಣ ಧನಗರ ಇವರುಶೇ 83 ರಷ್ಟು ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ.
2) 2014-15 ರಲ್ಲಿ ಶಾಲೆಗೆ ಶೇ 100ರಷ್ಟು ಫಲಿತಾಂಶ ದೊರಕಿದೆ. ವಿದ್ಯಾರ್ಥಿ ಶರಣಪ್ಪ ಪ್ರಕಾಶ ಪಾಟೀಲ್ ಇವರು ಶೇ 85 ರಷ್ಟು ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾನೆ
3) 2015-16 ರಲ್ಲಿ ಶೇ 100 ರಷ್ಟು ಫಲಿತಾಂಶ ಪಡೆದಿದೆ.ವಿದ್ಯಾರ್ಥಿ ಸುನೀಲ ಬಾಬು ಡಂಗಾಪುರ ಶೇ 89ರಷ್ಟು ಅಂಕಗಳನ್ನು ಪಡೆದು ಮುಂಬಯಿ ಎಲ್ಲಾ ಮಾಧ್ಯಮದ 173 ರಾತ್ರಿ ಪ್ರೌಢ ಶಾಲೆಗಳಲ್ಲಿಯೇ ಪ್ರಥಮ ಸ್ಥಾನ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾನೆ.
7) 2019-20 ರಲ್ಲಿ ಶಾಲೆಗೆ ಶೇ 90 ರಷ್ಟು ಫಲಿತಾಂಶ ದೊರಕಿದೆ. ಕೊರೋನಾ ಕಾಲಘಟ್ಟದಲ್ಲಿ ವಿದ್ಯಾರ್ಥಿನಿ ಐಶ್ವರ್ಯ ರೇವಣಸಿದ್ಧಪ್ಪ ಪೂಜಾರಿ ಇವರು ಶೇ 91ರಷ್ಟು ಅಂಕಗಳನ್ನು ಪಡೆದು ಮುಂಬೈ ಎಲ್ಲಾ ಮಾಧ್ಯಮ ರಾತ್ರಿ ಪ್ರೌಢ ಶಾಲೆಗಳಲ್ಲಿಯೇ ತೃತೀಯ ಸ್ಥಾನ ಪಡೆದು ಶಾಲೆಗೆ ಶ್ರೇಯ ತಂದಿದ್ದಾಳೆ.
8) 2020-21 ರಲ್ಲಿ ಶಾಲೆಗೆ ಶೇ 100ರಷ್ಟು ಫಲಿ ತಾಂಶ ದೊರಕಿದೆ ಕೊರೋನಾ ಕಾಲ ಘಟ್ಟದಲ್ಲಿಯೂ ವಿದ್ಯಾರ್ಥಿನಿ ಲಕ್ಷ್ಮೀ ಹನುಮಂತ ಕುಡಗುಂಟಿ ಇವರು ಶೇ.91ರಷ್ಟು ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಕೀರ್ತಿ ತಂದಿದ್ದಾಳೆ
9) 2021-22 ರಲ್ಲಿ ಶಾಲೆಗೆ ಶೇ 100 ರಷ್ಟು ಫಲಿತಾಂಶ ಸಿಕ್ಕಿದೆ. ವಿದ್ಯಾರ್ಥಿನಿ ಸೌಂದರ್ಯ ರೇವಣಸಿದ್ಧಪ್ಪ ಪೂಜಾರಿ ಇವರು ಶೇ 83 ರಷ್ಟು ಫಲಿತಾಂಶ ಪಡೆದು ಶಾಲೆಯಲ್ಲಿಯೇ ಪ್ರಥಮ ಸ್ಥಾನ ಪಡೆದಿದ್ದಾಳೆ.
10) 2022-23ರಲ್ಲಿ ಶಾಲೆಗೆ ಶೇ 100 ರಷ್ಟು ಫಲಿತಾಂಶ ದೊರಕಿದೆ. ವಿದ್ಯಾರ್ಥಿ ಆಕಾಶ ರಾಜು ಮೊಗವೀರ ಇವರು ಶೇ 80.20ರಷ್ಟು ಅಂಕಗಳನ್ನು ಪಡೆದು ಶಾಲೆಯಲ್ಲಿ ಪ್ರಥಮ ಪಡೆದಿದ್ದಾನೆ.
11) 2023-24ರಲ್ಲಿ ಶಾಲೆಗೆ ಶೇ 100ರಷ್ಟು ಫಲಿತಾಂಶ ದೊರಕಿದೆ. ವಿದ್ಯಾರ್ಥಿನಿ ಮೀನಾಕ್ಷಿ ಹೇಮನಾಥ ಪೂಜಾರಿ ಇವರು ಶೇ 82.ರಷ್ಟು ಅಂಕಗಳನ್ನು ಪಡೆದು ಮುಂಬೈಯಲ್ಲಿರುವ ಕನ್ನಡ ಮಾಧ್ಯಮದ ರಾತ್ರಿ ಪ್ರೌಢ ಶಾಲೆಗಳಲ್ಲಿಯೇ ಪ್ರಥಮ ಸ್ಥಾನ ಗಳಿಸಿ ಶಾಲೆಗೆ ಮಾತೃ ಸಂಸ್ಥೆಗೆ ಕೀರ್ತಿ ತಂದಿದ್ದಾಳೆ.
4) 2016-17 ರಲ್ಲಿ ಶಾಲೆಗೆ ಶೇ 100 ರಷ್ಟು ಫಲಿತಾಂಶ ದೊರಕಿದೆ.ವಿದ್ಯಾರ್ಥಿನಿ ಪ್ರೀತಿ ಸೀನಾ ಮೂಲ್ಯ ಅವರು ಶೇ, 92ರಷ್ಟು ಅಂಕಗಳನ್ನು ಪಡೆದು ಮುಂಬೈಯ ಎಲ್ಲಾ ಮಾಧ್ಯಮ ರಾತ್ರಿ ಪ್ರೌಢ ಶಾಲೆಗಳಲ್ಲಿಯೇ ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆ.
5) 2017-18ರಲ್ಲಿ ಶೇ 100 ರಷ್ಟು ಫಲಿತಾಂಶ ಪಡೆದಿದೆ.ವಿದ್ಯಾರ್ಥಿ ಕಿಶೋರ ಶಂಕರ ಪವಾರ ಇವರು ಶೇ 77 ರಷ್ಟು ಅಂಕಗಳನ್ನು ಪಡೆದು ಶಾಲೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾನೆ.
6) 2018-19 ರಲ್ಲಿ ಶೇ 100ರಷ್ಟು ಪಡೆದ ಫಲಿತಾಂಶ ದೊರಕಿದೆ. ವಿದ್ಯಾರ್ಥಿನಿ ಪೂಜಾ ದಶರಥ ಚವ್ಹಾಣ ಇವರು ಶೇ. 89ರಷ್ಟು ಅಂಕಗಳನ್ನು ಪಡೆದು ಮುಂಬಯಿದಲ್ಲಿರುವ ಎಲ್ಲಾ ಮಾಧ್ಯಮದ 136 ರಾತ್ರಿ ಪ್ರೌಢ ಶಾಲೆಗಳಲ್ಲಿಯೇ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾಳೆ.
2035 ರಲ್ಲಿ ವಜ್ರಮಹೋತ್ಸವ ಆಚರಿಸುವ ಕನಸು: ಈಗ ಶಾಲೆಯು ಸಾಗಿ ಬಂದು 64 ವರ್ಷ ಪೂರೈಸಿದೆ. 2035 ರಲ್ಲಿ ವಜ್ರಮಹೋತ್ಸವ ಆಚರಿಸುವ ಕನಸು ನನಸಾಗಿಸುವ ನಿಟ್ಟಿನಲ್ಲಿ ಶಾಲೆ ಉಳಿಸಿ ಬೆಳೆಸುವಲ್ಲಿ ಶ್ರಮಿಸೋಣ. ನಮ್ಮ ಶಾಲೆಯಲ್ಲಿ ವಿದ್ಯಾಭ್ಯಾಸ ಪೂರೈಸಿದ ವಿದ್ಯಾರ್ಥಿಗಳು ವಿವಿಧ ಕ್ಷೇತ್ರದಲ್ಲಿ ಪದವಿ ಪಡೆದು ರಾಜ್ಯ ರಾಷ್ಟ್ರ ವಿದೇಶಗಳಲ್ಲಿ ಉನ್ನತ ಮಟ್ಟದಲ್ಲಿ ಮಿಂಚುತ್ತಿದ್ದಾರೆ.ಇತ್ತೀಚೆಗೆ ವಿದ್ಯಾರ್ಥಿಗಳು ವಿಜ್ಞಾನ, ಇಂಜಿನಿಯರಿಂಗ್. ಹೋಟೆಲ್ ಮ್ಯಾನೇಜಮೆಂಟ್ ಮತ್ತು ಬೈ ಟೇಕ್ನಾಲಾಜಿ. ವಿವಿಧ ಕ್ಷೇತ್ರ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನಮ್ಮ ಶಾಲೆಯಲ್ಲಿ ಕಲಿತ ಮತ್ತು ಕಲಿಯುತ್ತಿರುವ ವಿದ್ಯಾರ್ಥಿಗಳು ಪ್ರತಿಭಾವಂತರೆನಿಸಿಕೊಂಡಿದ್ದಾರೆ. ನಮ್ಮ ರಾತ್ರಿ ಪ್ರೌಢ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಸಾಧ್ಯವಾದ ಎಲ್ಲಾ ಸವಲತ್ತುಗಳನ್ನು ಒದಗಿಸಿ ಅವರನ್ನು ವಿದ್ಯಾ ಸಂಸ್ಥೆಯಲ್ಲಿ ವ್ಯಾಸಂಗ ಮಾಡಲು ಬಿಲ್ಲವರ ಅಸೋಸಿಯೇಶನ್ ಇದು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ.
ವಿಶೇಷ ಜ್ಯೂರಿ ಪ್ರಶಸ್ತಿ : ಈ ಮಾತೃಸಂಸ್ಥೆಯ ಮಾಜಿ ಅಧ್ಯಕ್ಷ,ಗೌರವಾಧ್ಯಕ್ಷರಾಗಿದ್ದ ಸನ್ಮಾನ್ಯ ಜಯ ಸಿ. ಸುವರ್ಣ ಅವರ ಪ್ರೋತ್ಸಾಹ ಮಾಜಿ ಅಧ್ಯಕ್ಷರುಗಳಾದ ಎಲ್.ವಿ.ಅಮೀನ್, ನಿತ್ಯಾನಂದ.ಡಿ. ಕೋಟ್ಯಾನ್ ಅವರ ಮಾರ್ಗದರ್ಶನಗಳಿಂದ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆ ಪ್ರತಿಷ್ಠಿತ ಶಾಲೆ ಎಂದು ಖ್ಯಾತಿ ಪಡೆದಿದೆ. ಐವತ್ತು ವರ್ಷಗಳ ಸುದೀರ್ಘ ನಡೆಯಲ್ಲಿ ಶ್ರಮಿಸಿದ ಅನೇಕ ಮಹಿನೀಯರು ಹೊನ್ನ ಹಬ್ಬದ ಸಂದರ್ಭ ಸ್ಮರಣಾರ್ಥರು. ಪ್ರಸ್ತುತ ಬಿಲ್ಲವರ ಅಸೋಸಿಯೇಶನ್ ಇದರ ಅಧ್ಯಕ್ಷರಾದ ಶ್ರೀ ಹರೀಶ. ಜಿ. ಅಮೀನ್ ಅವರ ಮಾರ್ಗದರ್ಶನದಿಂದಲೇ ಶೈಕ್ಷಣಿಕ ಕ್ಷೇತ್ರವು ಪ್ರಗತಿ ಪಥದತ್ತ ಸಾಗಿದೆ.ಹೀಗಾಗಿ ಮಾತೃಸಂಸ್ಥೆಯು ಬಿಲ್ಲವರ ಸಮುದಾಯದ ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಗೆ ಈ ಬಾರಿ MAHARASHTRA EDUCATION.COM ವತಿಯಿಂದ 2023 ಅಕ್ಟೋಬರ್ 4ರಂದು ವಿಶೇಷ ಜ್ಯೂರಿ ಪ್ರಶಸ್ತಿ ದೊರಕಿದೆ.
ಶಾಲಾ ಶಿಕ್ಷಕರಿಗೂ ಕೂಡಾ ಸ್ಮರಣಿಕೆ : ಮಾಸೂಮ ಸಂಸ್ಥೆಯ ಮುಖೇನ ವಾರ್ಷಿಕ ಕ್ರೀಡಾ ಮಾಹೋತ್ಸವದಲ್ಲಿ ಏರ್ಪಡಿಸಲಾಗಿದ್ದ ಮುಂಬೈ ಎಲ್ಲಾ ಮಾಧ್ಯಮದ ರಾತ್ರಿ ಪ್ರೌಢ ಶಾಲೆಗಳಲ್ಲಿ ಗುರು ನಾರಾಯಣ ರಾತ್ರಿ ಪ್ರೌಢ ಶಾಲಾ ವಿದ್ಯಾರ್ಥಿನಿಯರು ಡಾಜ್ ಬಾಲ್ ಆಟದಲ್ಲಿ ಪ್ರಥಮ ದ್ವಿತೀಯ ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.ಎಸ್ ಎಸ್ ಸಿ ಗುಣ ಗೌರವ ಸಮಾರಂಭದಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಐದಾರು ಬಾರಿ ಸ್ಮರಣಿಕೆ ನೀಡಿ ಸತ್ಕಾರ ಮಾಡಿದ್ದಾರೆ. ಆಷ್ಟೇ ಅಲ್ಲದೇ ಆಯಾ ಕನ್ನಡ, ಹಿಂದಿ, ಮರಾಠಿ,ಇಂಗ್ಲೀಷ್,ಗಣಿತ ವಿಜ್ಞಾನ ಸಮಾಜ ಶಾಸ್ತ್ರ ವಿಷಯಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ನಮ್ಮ ಶಾಲಾ ಶಿಕ್ಷಕರಿಗೂ ಕೂಡಾ ಸ್ಮರಣಿಕೆ ಕೊಟ್ಟು ಸತ್ಕರಿದ್ದಾರೆ.
ಗುರು ನಾರಾಯಣ ರಾತ್ರಿ ಶಾಲೆ ತನ್ನ ಹಿರಿಮೆ, ಗರಿಮೆಗೆ ಹೆಸರು : ಹೀಗಾಗಿ ಪ್ರತಿಭೆಯುಳ್ಳ ಶಿಕ್ಷಕರಿದ್ದ ಕಾರಣ ವಿದ್ಯಾರ್ಥಿಗಳು ಎಸ್ ಎಸ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಮಾತೃಸಂಸ್ಥೆ ಬಿಲ್ಲವರ ಅಸೋಸಿಯೇಶನ್ ಇದರ ಸಂಚಾಲಿತ ಗುರು ನಾರಾಯಣ ರಾತ್ರಿ ಶಾಲೆ ತನ್ನ ಹಿರಿಮೆ, ಗರಿಮೆಗೆ ಹೆಸರಾಗಿದೆ ನಮ್ಮ ಮಾತೃ ಸಂಸ್ಥೆಯ ನೆರವಿನಿಂದಲೇ ಪ್ರತಿವರ್ಷ ಏರ್ಪಡಿಸಲಾಗುತ್ತಿರುವ ವಾರ್ಷಿಕ ಕ್ರೀಡೋತ್ಸವ ನಡೆಸಲಾಗುತ್ತಿದೆ.
ಕ್ರೀಡೆಗಳಲ್ಲಿ ಭಾಗವಹಿಸಿ ಬಹುಮಾನ : ವಿದ್ಯಾರ್ಥಿಗಳು ಕಬಡ್ಡಿ, ಕೋಕೋ, ರನ್ನಿಂಗ್ ರೇಶ್ ಹೀಗೆ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದು ಕೊಂಡಿದ್ದಾರೆ. ಶಾಲೆಯಲ್ಲಿ ಪ್ರತಿವರ್ಷ ನಮ್ಮ ಶಾಲಾ ಮಕ್ಕಳಿಗಾಗಿ ವಾರ್ಷಿಕ ಕ್ರೀಡೋತ್ಸವ ಏರ್ಪಡಿಸಿ ವಾರ್ಷಿಕೋತ್ಸವದ ಶುಭಗಳಿಗೆಯಲ್ಲಿ ಬಹುಮಾನ ನೀಡಿ ಸತ್ಕರಿಸಲಾಗುತ್ತದೆ. ಕನ್ನಡ ಸಂಘ ಸಂಸ್ಥೆಗಳು ಆಯೋಜಿಸಿದ ಅಂತರಶಾಲಾ ಪ್ರತಿಭಾ ಸ್ಪರ್ಧೆಯಲ್ಲಿ ನಮ್ಮ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾವಗೀತೆ,ಭಾಷಣ,ರಸಪ್ರಶ್ನೆ, ಸಮೂಹಗಾನ, ಏಕಾಭಿನಯ ಪಾತ್ರ ನಾಟಕ ನೃತ್ಯ ಹೀಗೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಬಹಮಾನ ಪಡೆದು ಕೊಂಡಿದ್ದಾರೆ. ನಮ್ಮ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ-ಸಾಹಿತ್ಯಕವಾಗಿ ಹೊರ ಹೊಮ್ಮಿದ್ದಾರೆ.
ಶಾಲೆಗಳಲ್ಲಿ ಸರಕಾರದಡಿಯಲ್ಲಿ ಬರುವ ಸಾರ್ವಜನಿಕ ರಾಷ್ಟೀಯ ಉತ್ಸವ,ಸ್ವಾತಂತ್ರ್ಯ ದಿನಾಚರಣೆ,ಶಿಕ್ಷಕರ ದಿನಾಚಾರಣೆ,ಮಕ್ಕಳ ದಿನಾಚರಣೆ, ಶಾರದಾಪೂಜೆ, ಮುಂತಾದ ಸಾಂಸ್ಕೃತಿಕವಾಗಿ ಹಬ್ಬ ಹರಿದಿನಗಳನ್ನು ಆಚರಿಸಲಾಗುತ್ತದೆ. ಶಾಲೆಯ ಪ್ರಗತಿಗಾಗಿ ಕಾರ್ಯಾಧ್ಯಕ್ಷರ ಹಗಲಿರಳು ಶ್ರಮಿಸಿದ್ದಾರೆ.ಅಂತಹವರಲ್ಲಿ ಕಾರ್ಯಧ್ಯಕ್ಷರಾಗಿ ದಿ||ಎಮ್. ಎಸ್. ಕೋಟ್ಯಾನ, ದಿ|| ಎಲ್ ಡಿ ಕೋಟ್ಯಾನ್, ಶ್ರೀ ಡಿ. ಯು ಸಾಲ್ಯಾನ್, ಶ್ರೀ ಎಸ್, ಡಿ ಅಂಚನ್, ದಿ.ಆರ್. ಪಿ. ಅಂಚನ್,ಡಿ. ಕೆ. ಅಂಚನ್,ಎನ್. ಎಲ್. ಸುವರ್ಣ ಶ್ರೀ ಜಿ.ಎಸ್. ಕರ್ಕೇರ, ಎಮ್. ಬಿ. ಸನಿಲ್, ಚಂದ್ರಮೋಹನ್.ಅಂಚನ್ ಸುವರ್ಣ,ದಿ.ಎಮ್, ಎನ್, ಸುವರ್ಣ ಮತ್ತು ಬನ್ನಂಜೆ ರವೀಂದ್ರ ಅಮೀನ್, ಪ್ರಸ್ತುತ ಜಯ ವಿ. ಪೂಜಾರಿ ಇವರೆಲ್ಲರೂ ಕಾಲಕ್ಕೆ ತಮ್ಮ ಬೆಳೆಯುಳ್ಳ ಸಲಹೆ ಸೂಚನೆಗಳಿಂದ ಶಾಲಾ ಆಡಳಿತವನ್ನು ನಡೆಸುವಲ್ಲಿ ಸಹಕರಿಸುವುದನ್ನು ನಾವು ಮರೆಯುವಂತಿಲ್ಲ.
ರಾತ್ರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ : ಒಂದು ಕಾಲದಲ್ಲಿ ಕರ್ನಾಟಕದಿಂದ ಹೋಟೆಲ್ ಮತ್ತು ಕಾರ್ಖಾನೆಗಳಲ್ಲಿ ಕೆಲಸ ಮಾಡಲು ಮುಂಬೈಗೆ ವಲಸೆ ಬರುತ್ತಿದ್ದರು. ಅಂತಹ ಮಕ್ಕಳು ದಿನದಲ್ಲಿ ಕೆಲಸ ಮಾಡಿ ಸಂಜೆಯ ವೇಳೆ ರಾತ್ರಿ ಶಾಲೆಗಳಲ್ಲಿ ಶಿಕ್ಷಣ ಪಡೆಯುವರ ಸಂಖ್ಯೆ ಹೆಚ್ಚಾಗಿ ಇರುವುದು ಕಂಡು ಬರುತ್ತಿತ್ತು. ಆದರೆ ಕ್ರಮೇಣವಾಗಿ ಊರಿನಲ್ಲಿಯೇ ಎಲ್ಲಾ ಅನುಕೂಲತೆಗಳು ಸಿಗುವುದರಿಂದ ಮುಂಬೈಗೆ ದುಡಿಯಲು ಬರುವರ ಸಂಖ್ಯೆ ಕಡಿಮೆಯಾಗುತ್ತಾ ಬಂದಿದೆ. ಆದ್ದರಿಂದ ಕನ್ನಡ ಮಾಧ್ಯಮದ ಹಗಲು ಮತ್ತು ರಾತ್ರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಸತ್ಯ. ಮತ್ತು ಪಾಲಕರಲ್ಲಿ ಹೆಚ್ಚುತ್ತಿರುವ ಇಂಗ್ಲೀಷ್ ವ್ಯಾಮೋಹದ ಕಡೆಗೆ ಒಲವು ಹರಿಸಿ ಆಂಗ್ಲ ಮಾಧ್ಯಮದಲ್ಲಿ ಮಕ್ಕಳಿಗೆ ಶಿಕ್ಷಣ ನೀಡುತ್ತಾರೆ.
ಬಿಲ್ಲವರ ಸಂಸ್ಥೆಯ ಸಹಕಾರ ಪ್ರೋತ್ಸಾಹ : ಅಷ್ಟೇ ಅಲ್ಲದೇ ಸರಕಾರವು ಇಂಗ್ಲೀಷ್ ಶಾಲೆಗಳನ್ನು ತೆರೆಯುವುದರ ಮೂಲಕ ಕನ್ನಡ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗುತ್ತಾ ಬಂದಿರುವುದು ಖೇದಕರ ಸಂಗತಿ. ಇಂತಹ ವಿಷಮ ಪರಿಸ್ಥಿತಿಯಲ್ಲಿಯೂ ಮುಂಬೈಯಂತಹ ನಗರದಲ್ಲಿ ಕನ್ನಡ ಶಾಲೆಗಳನ್ನು ನಡೆಸುವುದು ಮತ್ತಷ್ಟು ಕಷ್ಟವಾಗಿರುತ್ತದೆ. ಬಿಲ್ಲವರ ಸಂಸ್ಥೆಯ ಸಹಕಾರ ಪ್ರೋತ್ಸಾಹದಿಂದಲೇ ಗುರು ನಾರಾಯಣ ರಾತ್ರಿ ಶಾಲೆಯೂ ಉಳಿಸಿ ಬೆಳೆಸಬೇಕು ಎಂಬ ಸದುದ್ಧೇಶದಿಂದಲೇ ವೃತ್ತಿಯಲ್ಲಿ ಶಿಕ್ಷಕ ಪ್ರವೃತ್ತಿಯಲ್ಲಿ ಸಾಹಿತಿಯಾಗಿರುವಈ ಶಾಲೆಯ ಮುಖ್ಯಾಧ್ಯಾಪಕ ಮಲ್ಲಿಕಾರ್ಜುನ ಬಡಿಗೇರ ಮತ್ತು ಶಿಕ್ಷಕರು ಜೊತೆಗೂಡಿ ಕನ್ನಡಿಗಿರುವ ನೆಲ ಹುಡುಕಿ ಕಾರ್ಮಿಕರ ಮಕ್ಕಳನ್ನು ಕರೆತಂದು ಶಿಕ್ಷಣ ನೀಡುವುದರ ಜೊತೆಗೆ ಶಾಲೆಯ ಪ್ರಗತಿಗೆ ಶ್ರಮಿಸುತ್ತಿರುವುದು. ಶ್ರೀಯುತ ಬಡಿಗೇರರ ಕಾರ್ಯ ಮೆಚ್ಚುವಂತಹದು.
ಮುಂಬೈ ನಗರದಲ್ಲಿ ತುಳು ಕನ್ನಡಿರು ಸಂಘ ಸಂಸ್ಥೆ : ಒಟ್ಟಾರೆ ಬಹು ಭಾಷಾ ಸಂಸ್ಕೃತಿ ಹೊಂದಿರುವ ಮುಂಬೈ ನಗರದಲ್ಲಿ ತುಳು ಕನ್ನಡಿರು ಸಂಘ ಸಂಸ್ಥೆಗಳನ್ನು ಕಟ್ಟುವ ಮೂಲಕ ಕನ್ನಡತನ ಮೆರೆದಿದ್ದಾರೆ.ಇಂತಹ ಸಂಸ್ಥೆಗಳಲ್ಲಿ ಒಂದಾದ ಬಿಲ್ಲವರ ಅಸೋಸಿಯೇಶನ್ ಇದು ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕವಾಗಿ ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಅಷ್ಟೇ ಅಲ್ಲದೇ ಶಿಕ್ಷಣದಿಂದ ವಂಚಿತರಾಗಿರುವ ಕೂಲಿ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ದೊರೆಯಬೇಕೆಂಬ ದ್ಯೇಯ ಉದ್ದೇಶದಿಂದ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆ ಸ್ಥಾಪಿಸುವ ಮುಖೇನ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ವರದಾನವಾಗಿದೆ.ಈ ಮಹಾನ್ ವಿದ್ಯಾ ಸಂಸ್ಥೆಗಾಗಿ ತಮ್ಮ ಜೀವನವನ್ನು ಮೂಡುಪಾಗಿಟ್ಟು ಶ್ರಮಿಸಿದ ಎಲ್ಲಾ ಹಿರಿಯ ಚೇತನಗಳನ್ನು ಸ್ಮರಣೆಗೈಯುತ್ತ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯು ನಿತ್ಯದಲ್ಲಿ ಜ್ಞಾನ ದೀವಿಗೆ ಬೆಳಗುತ್ತಿರಲಿ ವಜ್ರ ಮಹೋತ್ಸವ ಆಚರಿಸುವ ಶುಭ ಸಂಧರ್ಭ ಒದಗಿ ಬರಲಿ ಎಂದು ವಿದ್ಯಾ ಪ್ರೇಮಿಗಳು ಗುರು ವೃಂದದವರು ಶುಭಾಷಯ ಕೋರೋಣ.
-ಮಲ್ಲಿಕಾರ್ಜುನ. ಈ. ಬಡಿಗೇರ
(ಮುಖ್ಯಾಧ್ಯಾಪಕರು)
ಗುರು ನಾರಾಯಣ ರಾತ್ರಿ ಪ್ರೌಢ ಶಾಲೆ ಮುಂಬಯಿ
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ