
ಬೆಂಗಳೂರು, 27 ನವೆಂಬರ್ (ಹಿ.ಸ.) :
ಆ್ಯಂಕರ್ : ಒಂದೆಡೆ ಅಮೇರಿಕಾದ ಸುಂಕ ಏರಿಕೆ, ಇನ್ನೊಂದೆಡೆ ಕೇಂದ್ರ ಸರ್ಕಾರ ಕೈಗೊಂಡ ಜಿಎಸ್‌ಟಿ ಕಡಿತದ ಕ್ರಮ ಭಾರತಕ್ಕೆ ವರದಾನವಾಗಿ ಪರಿಣಮಿಸಿದೆ. ಅತ್ತ ಟ್ರಂಪ್ ಪ್ರತಿ ದೇಶಕ್ಕೂ ಒಂದೊಂದು ಸುಂಕ ಹೇರುತ್ತಿದ್ದರೆ ಇತ್ತ ಪ್ರಧಾನಿ ಮೋದಿ ಜಿಎಸ್‌ಟಿ ಯನ್ನು ಕಡಿತಗೊಳಿಸುವುದು ಭಾರತ ಮಾತ್ರವಲ್ಲ ಜಗತ್ತಿಗೆ ಒಂದು ಹೊಸ ತಿರುವು ನೀಡಿದೆ.
ಕೇಂದ್ರ ಸರ್ಕಾರ ಜಿಎಸ್‌ಟಿ ಯನ್ನು ದ್ವಿಸ್ತರಕ್ಕೆ ಇಳಿಸಿದ ಪರಿಣಾಮ ಮತ್ತು ಭಾರತದ ಸ್ಥಿರ-ಸ್ನೇಹಮಯಿ ವಿದೇಶಿ ನೀತಿಗಳಿಂದಾಗಿ ಭಾರತದ ರಫ್ತು ವಲಯ ಮತ್ತಷ್ಟು ಬಲಿಷ್ಠವಾಗಿದೆ. ವಿದೇಶಿ ಮಾರುಕಟ್ಟೆಗಳಲ್ಲಿ ನಮ್ಮ ಜವಳಿ, ರತ್ನಾಭರಣ ಮತ್ತು ಸಮುದ್ರೋತ್ಪನ್ನಗಳು ಹೊಸ ಅಲೆಯನ್ನೇ ಸೃಷ್ಟಿಸಿವೆ.
2025ರ ಜನವರಿ - ಸೆಪ್ಟೆಂಬರ್ ಅವಧಿಯಲ್ಲಿ ಅಮೆರಿಕೇತರ ದೇಶಗಳ ಮಾರುಕಟ್ಟೆಗಳಲ್ಲಿ ಭಾರತದ ಉತ್ಪನ್ನಗಳದ್ದೇ ಭರಾಟೆ. ಸಮುದ್ರೋತ್ಪನ್ನಗಳ ರಫ್ತು ಬರೋಬ್ಬರಿ ಶೇ.15.6ರಷ್ಟು ಏರಿಕೆ ಕಂಡಿದೆ. ವಾಣಿಜ್ಯ ಸಚಿವಾಲಯ ಪ್ರಕಟಿಸಿದ ಇತ್ತೀಚಿನ ವರದಿಯಂತೆ ಭಾರತದ ಉತ್ಪನ್ನಗಳ ಹೊರಸಾಗಣೆ ಹೊಸ ದಿಕ್ಕಿನತ್ತ ಸಾಗಿದೆ.
ಕೇಂದ್ರ ಸರ್ಕಾರದ ಆರ್ಥಿಕ ಸುಧಾರಣೆಗಳ ಪ್ರಭಾವ:
ವಿದೇಶಿ ಮಾರುಕಟ್ಟೆಗಳಲ್ಲಿ ಭಾರತದ ಉತ್ಪನಗಳು ಸ್ಥಿರ ನೆಲೆ ಕಂಡುಕೊಳ್ಳುವಲ್ಲಿ ಗುಣಮಟ್ಟ, ಸ್ಪರ್ಧಾತ್ಮಕ ಬೆಲೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಜಿಎಸ್‌ಟಿ ಇಳಿಕೆಯಂತಹ ಸುಧಾರಣಾ ಕ್ರಮಗಳು ಭಾರತದ ರಫ್ತು ವಲಯಕ್ಕೆ ಉತ್ತೇಜನ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಜಾರಿಗೊಳಿಸಿದ ಆರ್ಥಿಕ ಮತ್ತು ವಾಣಿಜ್ಯ ಸುಧಾರಣಾ ನೀತಿಗಳು ರಫ್ತು ವಲಯದಲ್ಲಿ ಗಮನಾರ್ಹ ಪ್ರಭಾವ ಬೀರಿದೆ. ಪಿಎಲ್‌ಐ ಯೋಜನೆಗಳು, ಮೇಕ್ ಇನ್ ಇಂಡಿಯಾ ಮತ್ತು ರಫ್ತು ಕೇಂದ್ರೀಯ ಮೂಲಸೌಕರ್ಯ ಹೂಡಿಕೆಗಳು ದೇಶದ ಉತ್ಪಾದನಾ ಕ್ಷೇತ್ರಕ್ಕೆ ಬೆನ್ನೆಲುಬಾಗಿವೆ.
ಉದಯೋನ್ಮುಖ ಖರೀದಿ ಕೇಂದ್ರಗಳ ಏರಿಕೆ:
ಯುಎಇ, ವಿಯೆಟ್ನಾಂ, ಬೆಲ್ಜಿಯಂ ಮತ್ತು ಸೌದಿ ಅರೇಬಿಯಾ ದೇಶಗಳಿಗೆ ಭಾರತದ ರಫ್ತು ಪ್ರಮಾಣ ತೀವ್ರ ವೇಗದಲ್ಲಿದೆ. ಏಷ್ಯಾ, ಯುರೋಪ್ ಮತ್ತು ಪಶ್ಚಿಮ ಏಷ್ಯಾದಲ್ಲೂ ಬೇಡಿಕೆ ಹೆಚ್ಚಿದ್ದರಿಂದ ಭಾರತದ ಉತ್ಪನ್ನ ವಲಯವೂ ವ್ಯಾಪಕ ವಿಸ್ತರಣೆ ಕಾಣುತ್ತಿದೆ.
ಸಮುದ್ರೋತ್ಪನ್ನ ರಫ್ತು ಏರಿಕೆ:
ಸಮುದ್ರೋತ್ಪನ್ನ ರಫ್ತಿನಲ್ಲಿ ವರ್ಷದಿಂದ ವರ್ಷಕ್ಕೆ ಶೇ.15.6ರಷ್ಟು ಏರಿಕೆಯಾಗಿದ್ದು, ಒಟ್ಟು ಮೌಲ್ಯ USD 4.83 ಬಿಲಿಯನ್‌ಗೆ ತಲುಪಿದೆ. ಅಮೆರಿಕೇತರ ಮಾರುಕಟ್ಟೆಗಳೇ ಈ ಬೆಳವಣಿಗೆಯನ್ನು ಹೆಚ್ಚಿಸುತ್ತಿವೆ ಎಂಬದು ವರದಿಯಿಂದ ದೃಢಪಟ್ಟಿದೆ.
ಜಾಗತಿಕವಾಗಿ ಅಮೆರಿಕಾ ಪ್ರಮುಖ ಖರೀದಿ ಕೇಂದ್ರವಾಗಿದ್ದರೂ, ಭಾರತದ ಉತ್ಪನ್ನಗಳಿಗೆ ವಿಯೆಟ್ನಾಂ ಶೆ.100.4, ಬೆಲ್ಜಿಯಂ ಶೇ.73 ಮತ್ತು ಥೈಲ್ಯಾಂಡ್ ಶೇ.54.4ರಷ್ಟು ಏರಿಕೆಯೊಂದಿಗೆ ಭಾರತಕ್ಕೆ ಹೊಸ ವೇಗದ ಮಾರುಕಟ್ಟೆಗಳಾಗಿ ರೂಪುಗೊಂಡಿವೆ. ರಫ್ತು ನಕ್ಷೆಯಲ್ಲಿ ನಡೆಯುತ್ತಿರುವ ಈ ಬದಲಾವಣೆ ಭಾರತದ ವಾಣಿಜ್ಯ ಕ್ಷೇತ್ರಕ್ಕೆ ಹೆಚ್ಚಿನ ಬಲ ನೀಡುತ್ತಿದೆ.
ಚೀನಾ ಶೇ.9.8, ಮಲೇಶಿಯಾ ಶೇ.64.2 ಮತ್ತು ಜಪಾನ್ ಅಲ್ಲಿ ಶೇ.9.8ರಷ್ಟು ಭಾರತದ ಸಮುದ್ರೋತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದು ಭಾರತೀಯ ಉತ್ಪನ್ನಗಳ ವಿಶ್ವಾಸಾರ್ಹತೆ ಮತ್ತು ಗುಣಮಟ್ಟದ ಮೇಲೆ ಜಾಗತಿಕ ನಂಬಿಕೆ ಹೆಚ್ಚುತ್ತಿರುವುದನ್ನು ಪ್ರತಿಬಿಂಬಿಸುತ್ತದೆ.
ಸ್ಮಾರ್ಟ್ ಪೋರ್ಟ್‌ಗಳು, ಲಾಜಿಸ್ಟಿಕ್ಸ್ ಕಾರಿಡಾರ್‌ಗಳು, ನೀತಿ-ಸ್ಥಿರತೆ, ವ್ಯಾಪಾರ ಸ್ನೇಹಿ ಸುಧಾರಣೆ ಮತ್ತು ಹಲವು ಮುಕ್ತ ವ್ಯಾಪಾರ ಮಾತುಕತೆ ಹಾಗೂ ಸರಬರಾಜು ಸರಪಳಿಯ ಬಲವರ್ಧನೆ ಈ ಸುಧಾರಣೆಗಳು ರಫ್ತು ವೆಚ್ಚಗಳನ್ನು ಕಡಿಮೆ ಮಾಡಿ, ಭಾರತದ ಜಾಗತಿಕ ಸ್ಪರ್ಧಾತ್ಮಕತೆಯನ್ನು ಮತ್ತಷ್ಟು ಬಲಪಡಿಸುತ್ತಿವೆ.
ಉದಯೋನ್ಮುಖ ಮಾರುಕಟ್ಟೆಗಳ ಬಲ:
ವಿಯೆಟ್ನಾಂ ಮತ್ತು ಬೆಲ್ಜಿಯಂ ಮೊದಲಾದ ಉದಯೋನ್ಮುಖ ಮಾರುಕಟ್ಟೆಗಳು ಭಾರತಕ್ಕೆ ನಿರಂತರ ಖರೀದಿ ಕೇಂದ್ರಗಳಾಗುತ್ತಿದ್ದು, ಏಷ್ಯನ್ ಪಾಲುದಾರರು ಆಮದು ಪ್ರಮಾಣವನ್ನು ಹೆಚ್ಚಿಸುತ್ತಿದ್ದಾರೆ. ಇದು ಭಾರತದ ಜಾಗತಿಕ ಮಾರುಕಟ್ಟೆಯನ್ನು ಮತ್ತಷ್ಟು ಗಾಢಗೊಳಿಸಿದೆ.
ಜವಳಿ ರಫ್ತುವಿನಲ್ಲೂ ಹೊಸ ಬೆಳವಣಿಗೆ ಕಂಡಿದ್ದು, ಪೆರು ಮತ್ತು ನೈಜೀರಿಯಾ ದೇಶಗಳಲ್ಲಿ ಭಾರತೀಯ ಉತ್ಪನ್ನಗಳಿಗೆ ಬೇಡಿಕೆ ಅಧಿಕಗೊಂಡಿದೆ. ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾ ಭಾರತದ ಹೊಸ ವಿಸ್ತರಣೆ ವಲಯಗಳಾಗುತ್ತಿವೆ.
ಭಾರತ ಜಾಗತಿಕ ರಫ್ತು ಕೇಂದ್ರವಾಗುವತ್ತ ವೇಗದ ಹೆಜ್ಜೆ:
ಮೋದಿ ಸರ್ಕಾರದ ನೇತೃತ್ವದಲ್ಲಿ ಜಾರಿಯಾದ ಪರಿಣಾಮಕಾರಿ ನೀತಿಗಳು, ಮಾರುಕಟ್ಟೆ ವೈವಿಧ್ಯೀಕರಣ ತಂತ್ರಗಳು ಹಾಗೂ ಉತ್ಪಾದನಾ–ರಫ್ತು ಪ್ರೋತ್ಸಾಹ ಕ್ರಮಗಳ ಪರಿಣಾಮವಾಗಿ ಭಾರತ ಜಾಗತಿಕ ಮಟ್ಟದಲ್ಲಿ ಪ್ರಮುಖ ರಫ್ತು ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಅಮೆರಿಕಾ ಮಾರುಕಟ್ಟೆ ಹೊರತಾಗಿಯೂ ಬಹು ವಿಸ್ತರಣೆಗೊಂಡಿದ್ದು, ಮುಂದಿನ ವರ್ಷಗಳಲ್ಲಿ ರಫ್ತು ಇನ್ನಷ್ಟು ವೇಗವಾಗಿ ಹೆಚ್ಚುವ ನಿರೀಕ್ಷೆಯಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa