ಬೆಂಗಳೂರು, 26 ಜುಲೈ (ಹಿ.ಸ.) :
ಆ್ಯಂಕರ್ : ಕರ್ನಾಟಕದಲ್ಲಿ ಮುಂಗಾರು ಚುರುಕುಗೊಂಡಿದೆ. ನಿರಂತರ ಮಳೆಗೆ ಹಲವು ಜಲಾಶಯಗಳು ಭರ್ತಿ ಆಗಿವೆ. ಮಹಾ ಮಳೆಗೆ ಹಲವೆಡೆ ಸಾಕಷ್ಟು ಅವಾಂತರಗಳು ಸಂಭವಿಸಿವೆ. ಹೀಗಾಗಿ ಮುಂಜಾಗ್ರತ ಕ್ರಮವಾಗಿ ಹಲವು ಜಿಲ್ಲೆಗಳಲ್ಲಿ ಅಂಗನವಾಡಿ ಸೇರಿದಂತೆ ಶಾಲಾ ಕಾಲೇಜುಗಳಿಗೆ ಇಂದು ಕೂಡ ರಜೆ ಘೋಷಣೆ ಮಾಡಲಾಗಿದೆ. ಧಾರವಾಡ, ಬೆಳಗಾವಿ, ಕೊಡಗು, ಜಿಲ್ಲೆಗಳಲ್ಲಿ ರಜೆ ನೀಡಲಾಗಿದೆ.
ಯಾವೆಲ್ಲಾ ಜಿಲ್ಲೆಗಳಲ್ಲಿ ರಜೆ
ಬೆಳಗಾವಿ ಜಿಲ್ಲೆಯಲ್ಲಿ ಮುಂದುವರೆದ ವ್ಯಾಪಕ ಮಳೆಯ ಹಿನ್ನೆಲೆ ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲೆಗಳಿಗೆ ಇಂದು ರಜೆ ಘೋಷಣೆ ಮಾಡಿ ಡಿಸಿ ಮೊಹಮ್ಮದ್ ರೋಷನ್ ಆದೇಶಿಸಿದ್ದಾರೆ.
ನಿನ್ನೆ ಜಿಲ್ಲೆಯ ಎಂಟು ತಾಲೂಕುಗಳಿಗೆ ರಜೆ ಘೋಷಣೆ ಮಾಡಿದ್ದರು. ನಾಳೆಯೂ ಹೆಚ್ಚಿನ ಮಳೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಣೆ ಮಾಡಲಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಮಳೆ ಆರ್ಭಟ ಜೋರಾಗಿದ್ದು ಇಂದು ಶಾಲಾ ಕಾಲೇಜುಗಳಿಗೆ ರಜೆ ನೀಡಿದೆ. ಧಾರವಾಡ ಜಿಲ್ಲೆಯಲ್ಲಿ ಮಕ್ಕಳಸುರಕ್ಷತೆ ದೃಷ್ಟಿಯಿಂದ ಅಂಗನವಾಡಿ, ಶಾಲೆ, ಪಿಯು ಕಾಲೇಜುಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ದಿವ್ಯಪ್ರಭು ಆದೇಶ ಹೊರಡಿಸಿದ್ದಾರೆ.
ಹಾವೇರಿ ಜಿಲ್ಲೆಯಾದ್ಯಂತ ಜುಲೈ 26 ಮತ್ತು 27 ಎರಡು ದಿನ ರಜೆ
ಹಾವೇರಿ ಜಿಲ್ಲಾದ್ಯಂತ ಬಿಟ್ಟು ಬಿಡದೆ ಮಳೆ ಸುರಿಯಿತ್ತಿದೆ. ಈ ಹಿನ್ನೆಲೆ ಜಿಲ್ಲೆಯಾದ್ಯಂತ ಜುಲೈ 26 ಮತ್ತು 27 ಎರಡು ದಿನ ರಜೆ ಘೋಷಿಸಲಾಗಿದೆ. ಅಂಗನವಾಡಿ , ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿ ಮಾತ್ರ ರಜೆ ನೀಡಿ ಜಿಲ್ಲಾಧಿಕಾರಿ ವಿಜಯಮಹಾಂತೇಶ್ ಆದೇಶಿಸಿದ್ದಾರೆ.
6 ತಾಲೂಕಿನ ಶಾಲೆಗಳಿಗೆ ರಜೆ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಕಡಿಮೆಯಾದರೂ ಬಿರುಗಾಳಿ ಹಿನ್ನೆಲೆ ಜಿಲ್ಲೆಯ 6 ತಾಲೂಕಿನ ಶಾಲೆಗಳಿಗೆ ಇಂದು ರಜೆ ಪ್ರಕಟಿಸಲಾಗಿದೆ. ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ 9 ತಾಲೂಕಿನ ಶಾಲೆ, ಕಾಲೇಜಿಗೆ ರಜೆ
ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಮುಂದುವರೆದಿದ್ದು, ಜಿಲ್ಲೆಯ 9 ತಾಲೂಕಿನ ಶಾಲೆ, ಕಾಲೇಜಿಗೆ ಇಂದು ರಜೆ ನೀಡಲಾಗಿದೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಾಟ್ಕಳ, ದಾಂಡೆಲಿ, ಜೋಯಿಡಾ, ಹಲಿಯಾಳ ಮತ್ತು ಯಲ್ಲಾಪುರ ತಾಲೂಕಿನ ಶಾಲಾ ಕಾಲೇಜ್ಗೆ ರಜೆ ನೀಡಿದ್ದು, ಶಿರಸಿ ಮುಂಡಗೋಡ, ಸಿದ್ದಾಪುರ ತಾಲೂಕಿನ ಶಾಲಾ ಕಾಲೇಜ್ಗಳಿಗೆ ರಜೆ ಇಲ್ಲ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ