

ಕೊಪ್ಪಳ, 24 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಬುಧವಾರ ನಡೆದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಾಧಕ ರೈತ ಮತ್ತು ರೈತ ಮಹಿಳೆಯರಿಗೆ ಸನ್ಮಾನಿಸಲಾಯಿತು.
ರಾಷ್ಟ್ರೀಯ ರೈತ ದಿನಾಚರಣೆಯನ್ನು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೃಷಿ ಇಲಾಖೆ ಆತ್ಮ ಯೋಜನೆ, ತೋಟಗಾರಿಕೆ ಇಲಾಖೆ, ಕರ್ನಾಟಕ ಪ್ರದೇಶ ಕೃಷಿಕ ಸಮಾಜ, ಕೊಪ್ಪಳ ಜಿಲ್ಲೆ, ಕೃಷಿ ತಂತ್ರಜ್ಞರ ಸಂಸ್ಥೆ ಕೊಪ್ಪಳ ಇವರ ಸಹಯೋಗದಲ್ಲಿ ಘೋಷ ವಾಕ್ಯ “ವಿಕಸಿತ ಭಾರತ 2047-ಭಾರತೀಯ ಕೃಷಿಯನ್ನು ಜಾಗತೀಕರಣ ಗೊಳಿಸುವಲ್ಲಿ ಎಫ್.ಪಿ.ಓ.ಗಳ ಪಾತ್ರ” ಎಂಬ ಉದ್ದೇಶದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ತಿಮ್ಮಣ್ಣ ಸೋಮಪ್ಪ ಚವಡಿ ಅವರು ಮಾತನಾಡಿ, ಚೌದರಿ ಚರಣಸಿಂಗ್ ರವರು ಭಾರತ ದೇಶದ ರೈತರ ಸ್ನೇಹಿತರಂತೆ ಅವರ ಬಗ್ಗೆ ಕಾಳಜಿತೋರಿಸಿ, ಸಾಧಿಸಿ ಯಶಸ್ವಿಯಾದ ಧೀಮಂತ ನಾಯಕರಾಗಿದ್ದರು. ಅವರು ಸಾಧಿಸಿರುವ ಸಾಧನೆಗಳನ್ನು ಪರಿಗಣಿಸಿ ರೈತರ ಕಾಯಕಕ್ಕೆ ಗೌರವ ಅರ್ಪಿಸಲು ಭಾರತ ಸರ್ಕಾರವು ಇವರ ಜನ್ಮದಿನವಾದ ಡಿಸೆಂಬರ್ 23ನ್ನು ರಾಷ್ಟ್ರೀಯ ರೈತರ ದಿನಾಚರಣೆಯಾಗಿ ಪ್ರತೀ ವರ್ಷ ಆಚರಿಸಲಾಗುತ್ತಿದೆ ಎಂದರು.
ರೈತರು ಆಚರಿಸುವ ಎರಡು ಹಬ್ಬಗಳಾದ ಮಣ್ಣೆತ್ತಿನ ಅಮವಾಸ್ಯೆ ಮತ್ತು ಎಳ್ಳ ಅಮವಾಸ್ಯೆಗಳು ಕೃಷಿಕರ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ವ್ಯವಸಾಯವನ್ನು ಯಾವತ್ತು ತೊರೆಯಬಾರದೆಂದು ತಿಳಿಸಿದರು.
ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಪ್ರಾಧ್ಯಾಪಕರು ಮತ್ತು ವಿಸ್ತರಣಾ ಮುಂದಾಳು ಡಾ. ಎಂ.ವಿ.ರವಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಚೌದರಿ ಚರಣಸಿಂಗ್ ರವರು ಮೂಲತಃ ರೈತ ಕುಟುಂಬದವರಾಗಿದ್ದು, ಉತ್ತರಪ್ರದೇಶದ ಫೌಜಿಯಾಬಾದ್ ಜಿಲ್ಲೆಯ ನೂರ್‍ಪೂರ್ ಎಂಬ ಕುಗ್ರಾಮದಲ್ಲಿ 1902ರ ಡಿಸೆಂಬರ್ 23 ರಂದು ಜನಿಸಿದರು. ಇವರು ಆರ್ಯಸಮಾಜ ಸ್ಥಾಪಕರಾದ ಸ್ವಾಮಿ ದಯಾನಂದ ಸರಸ್ವತಿ ಯವರ ಪ್ರಭಾವಕ್ಕೆ ಒಳಗಾಗಿದ್ದು, ಮಹಾತ್ಮಾ ಗಾಂಧಿಯಿಂದ ಪ್ರೇರೇಪಿತರಾಗಿ ಸ್ವತಂತ್ರ ಚಳುವಳಿಯಲ್ಲಿ ಭಾಗವಹಿಸಿದ್ದರು. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು ಕಾನೂನು ಪದವಿ ಪಡೆದಿದ್ದ ಅವರು ವಿವಿಧ ಇಲಾಖೆಗಳಾದ ಕಂದಾಯ, ಆರೋಗ್ಯ, ನ್ಯಾಯ ಮತ್ತು ಮಾಹಿತಿ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಅಲ್ಲದೇ 1937ರಲ್ಲಿ ವಪ್ರಾಲಿಭಾಗವತ್ ಕ್ಷೇತ್ರದಿಂದ ಶಾಸಕರಾಗಿದ್ದರು. 1960ರಲ್ಲಿ ಉತ್ತರಪ್ರದೇಶದ ಗೃಹ ಮತ್ತು ಕೃಷಿ ಸಚಿವರಾಗಿ, 1962-63 ರಲ್ಲಿ ಕೃಷಿ ಮತ್ತು ಅರಣ್ಯ ಸಚಿವರಾಗಿ ಸೇವೆಸಲ್ಲಿಸಿ, ರೈತ ಸಮುದಾಯವು ಹಿಂದೆಂದೂ ಕಂಡರಿಯದ ಊಹಿಸಲಾರದಂತಹ ಹೊಸಯೋಜನೆಗಳನ್ನು ಜಾರಿಗೆತರುವಲ್ಲಿ ಯಶಸ್ವಿಯಾದರು. ಅದರಲ್ಲಿ ಮುಖ್ಯವಾದ ಯೋಜನೆಗಳೆಂದರೆ, ದೇಶಾದ್ಯಂತ ಜಾರಿಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ವಿಧೇಯಕ, ಕೃಷಿ ಪರಿಕರಗಳ ಮೇಲಿನ ತೆರಿಗೆ ಕಡಿತ, ಜಮೀನ್ದಾರಿ ಪದ್ಧತಿ ನಿಷೇದ, ಭೂಸುಧಾರಣೆ ಕಾಯ್ದೆಜಾರಿ, ಕಾರ್ಮಿಕ ಕಾಯ್ದೆಗೆ ಹೊಸರೂಪರೇಷೆ, ರೈತರು ಮತ್ತು ಮಧ್ಯವರ್ತಿಗಳ ನಡುವೆ ದಳ್ಳಾಳಿಗಳ ಕಾಟತಪ್ಪಿಸಲು ‘ಮಂಡಿ ಕಾಯ್ದೆ’ ಜಾರಿಗೊಳಿಸಿದರು ಎಂದರು.
ಗ್ರಾಮೀಣ ಪ್ರದೇಶದಲ್ಲಿ ವಿದ್ಯುತೀಕರಣ ಪಟ್ವಾರಿ ಪದ್ಧತಿಯ ನಿಷೇಧ, ಸಣ್ಣ ನೀರಾವರಿ ಪದ್ಧತಿ ಯೋಜನೆ ಅನುಷ್ಠಾನ, ನಬಾರ್ಡ್‍ಬ್ಯಾಂಕ್ ಸ್ಥಾಪಿಸಿ, ಕೃಷಿ ಸಾಲ ಯೋಜನೆ ಅನುಷ್ಠಾನ, ಗ್ರಾಮೀಣ ಅಭಿವೃದ್ಧಿಯೋಜನೆಗಳಿಗೆ ಒತ್ತು, ತಳಿಗಳ ರಕ್ಷಣೆ ಹಾಗೂ ರೈತರ ಹಕ್ಕುಗಳ ಸ್ಥಾಪನೆ, ಕೃಷಿ ಕ್ಲೀನಿಕ್ ಹಾಗೂ ಕೃಷಿ ಉದ್ಯೋಗ ಕೇಂದ್ರ ಸ್ಥಾಪನೆ, ಕೃಷಿ ತಂತ್ರಜ್ಞಾನ ವಿಸ್ತರಣೆಗೆ ಆಧ್ಯತೆ, ಗ್ರಾಮೀಣ ಪ್ರದೇಶದಲ್ಲಿ ಗೋದಾಮುಗಳ ಸ್ಥಾಪನೆಯ ಅನುಷ್ಠಾನ, ಮೂರುವರೆ ಎಕರೆ ಜಮೀನು ಇರುವ ರೈತರಿಗೆ ಕಂದಾಯ ಕಟ್ಟುವಲ್ಲಿ ವಿನಾಯಿತಿ ಮುಂತಾದವುಗಳನ್ನು ಜಾರಿಗೊಳಿಸಿದರು ಎಂದು ಹೇಳಿದರು.
ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಕೃಷ್ಣ ಉಕ್ಕುಂದ ಅವರು ಮಾತನಾಡಿ, ತೋಟಗಾರಿಕೆ ಒಂದು ಉತ್ತಮ ಆದಾಯ ತರುವ ಕೃಷಿ ಪದ್ದತಿಯಾಗಿದ್ದು, ರೈತರು ನಿರಂತರ ಆದಾಯ ಹಾಗೂ ಆರೋಗ್ಯವನ್ನು ಪಡೆದುಕೊಳ್ಳಲು ತೋಟಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡುತ್ತಾ ಇಲಾಖೆಯಲ್ಲಿ ಲಭ್ಯವಿರುವ ಹನಿ ನೀರಾವರಿ ಹಾಗೂ ಇತರ ಯೋಜನೆಗಳ ಬಗ್ಗೆ ಮಾಹತಿ ನೀಡಿದರು.
ಕೃಷಿ ಇಲಾಖೆ ಉಪ ನಿರ್ದೇಶಕ ಸಿದ್ದೇಶ್ವರ ಅವರು ಮಾತನಾಡಿ, ರೈತರಿಗಾಗಿ ದುಡಿದ ಚೌದರಿ ಚರಣಸಿಂಗ್ ರವರು 28ನೇ ಜುಲೈ 1979ರಲ್ಲಿ ದೇಶದ 5ನೇ ಪ್ರಧಾನಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ್ದರು. ಅವರು ಮೇ 29, 1987ರಲ್ಲಿ ನಿಧನರಾದರು. ಇಂತಹ ಮಹಾನ್ ವ್ಯಕ್ತಿಯ ನೆನಪಿಗೋಸ್ಕರ ಆಚರಿಸುವ ಕಿಸಾನ್ ದಿವಸದ ಅಂಗವಾಗಿ ರೈತರ ಆದಾಯವನ್ನು ಹೆಚ್ಚಿಸುವ ಕೆಲವು ಸಲಹೆ ಸೂಚನೆಗಳಾದ ಮಣ್ಣು ಪರೀಕ್ಷೆ ಆಧಾರಿತ ರಸಗೊಬ್ಬರಗಳ ಬಳಕೆ, ಕಾಂಪೋಸ್ಟ್ ಮತ್ತು ಎರೆಗೊಬ್ಬರ ತಯಾರಿಕೆ, ಕೃಷಿಯಲ್ಲಿ ಮಾಹಿತಿ ತಂತ್ರಜ್ಞಾನದ ಅಳವಡಿಕೆ (ವಾಟ್ಸ್‍ಆಪ್, ವಿಡಿಯೋ, ಆಡಿಯೋ ಮುಖಾಂತರ), ಹೆಚ್ಚು ಇಳುವರಿ ಕೊಡುವ ತಳಿಗಳ ಬಳಕೆ ಮತ್ತು ದೀರ್ಘಾವಧಿ ಬಿತ್ತನೆ ಬೀಜಗಳ ಬಳಕೆಯನ್ನು ಮಾಡಬೇಕೆಂದು ತಿಳಿಸಿದರು.
ಕೊಪ್ಪಳ ತಾಲ್ಲೂಕ ಕೃಷಿಕ ಸಮಾಜದ ಸದಸ್ಯರಾದ ವಿರುಪಣ್ಣ (ನವೋದಯ) ಹಳ್ಳಿಗುಡಿ ಅವರು ಮಾತನಾಡಿ, ಹವಾಮಾನ ವೈಫರಿತ್ಯ ಆಧಾರಿತ ಕೃಷಿ, ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳಬೇಕೆಂದು ರೈತರಿಗೆ ತಿಳಿಸಿದರು.
ಕೃಷಿಕ ಸಮಾಜದ ಅಧ್ಯಕ್ಷರಾದ ಸಣ್ಣ ಹನುಮಪ್ಪ ಹುಳ್ಳಿ ಅವರು ಮಾತನಾಡಿ, ಹಂತ-ಹಂತವಾಗಿ ಸಾವಯವ ಕೃಷಿಗೆ ಬದಲಾಗುವುದು ಹಾಗೂ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಬೇಕೆಂದು ರೈತರಿಗೆ ತಿಳಿಸಿದರು.
ಹಾಪ್‍ಕಾಮ್ಸ್ ಸಂಸ್ಥೆಯ ಅಧ್ಯಕ್ಷರಾದ ಯಂಕಣ್ಣಾ ಯರಾಶಿ ಅವರು ಮಾತನಾಡುತ್ತಾ ಸಂಸ್ಕರಣೆ ಮತ್ತು ಮೌಲ್ಯವರ್ಧನೆಗೆ ಹೆಚ್ಚು ಒತ್ತು ಕೊಡುವುದು, ರೈತ ಉತ್ಪಾದಕರ ಸಂಸ್ಥೆಗೆ ಒತ್ತುನೀಡುವುದರ ಮುಖಾಂತರ ಮಾರುಕಟ್ಟೆಗೆ ಪ್ರೋತ್ಸಾಹಿಸುವುದು ಹಾಗೂ ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳೊಂದಿಗೆ ರೈತರು ಸಂಪರ್ಕ ಮಾಡುವುದು ಹಾಗೂ ರೈತರಿಗೆ ತರಬೇತಿ ಕಾರ್ಯಕ್ರಮ ಸಂವಾದ ಹಾಗೂ ಚರ್ಚೆಗಳನ್ನು ಏರ್ಪಡಿಸಬೇಕೆಂದರು.
ಕೃಷಿ ತಂತ್ರಜ್ಞರ ಸಂಸ್ಥೆಯ ಕೊಪ್ಪಳ ವಲಯ ಉಪಾಧ್ಯಕ್ಷರಾದ ವೀರಣ್ಣ ಕೆ. ಕಮತರ ಅವರು ಮಾತನಾಡಿ, ರೈತ ಉತ್ಪಾದಕರ ಕಂಪನಿ ಮೂಲಕ ಆಧುನಿಕ ತಂತ್ರಜ್ಞಾನಗಳನ್ನು ಉತ್ತಮ ರೀತಿಯಲ್ಲಿ ಅಳವಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸುತ್ತಾ ಎಫ್.ಪಿ.ಓ. ಕುರಿತು ಮಾಹಿತಿ ನೀಡಿದರು.
ನಿವೃತ್ತ ಕೃಷಿ ಅಧಿಕಾರಿ ಎಂ.ಕೆ. ಪಾಟೀಲ ಅವರು ರೈತರ ದಿನಾಚರಣೆಯನ್ನು ಪ್ರತಿವರ್ಷ ಡಿಸೆಂಬರ್ 23 ರಂದು ಆಚರಿಸಲಾಗುತ್ತಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನೂತನ ತಂತ್ರಜ್ಞಾನಗಳ ಬಗ್ಗೆ ತಿಳಿದುಕೊಂಡು ಆದಾಯವನ್ನು ಹೆಚ್ಚಿಸಿಕೊಳ್ಳಬೇಕೆಂದು ಕರೆ ನೀಡಿದರು.
ತಳಕಲ್ ಗ್ರಾಮದ ಪ್ರಗತಿಪರ ರೈತರಾದ ಹನುಮಂತ ವಾಲೀಕಾರ ಅವರು ರೈತರನ್ನು ಉದ್ದೇಶಿಸಿ ಮಾತನಾಡಿ, ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿ ಕುರಿತು ಮಾಹಿತಿ ನೀಡಿದರು ಮತ್ತು ನೇರ ಮಾರುಕಟ್ಟೆಯಿಂದ ಮಾತ್ರ ರೈತರ ಉತ್ಪನ್ನಗಳಿಗೆ ಯೋಗ್ಯ ಬೆಲೆ ಸಿಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆತ್ಮಾ ಯೋಜನೆ, ಕೃಷಿ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು. ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಸಹಾಯಕ ಪ್ರಾಧ್ಯಾಪಕರಾದ ವಾಮನಮೂರ್ತಿ ಪುರೋಹಿತ ಅವರು ಸ್ವಾಗತಿಸಿದರು ಹಿರಿಯ ಪ್ರಯೋಗ ಶಾಲಾ ಸಹಾಯಕ ಪ್ರಕಾಶ ಬಣಕಾರ ಅವರು ಕೊನೆಯಲ್ಲಿ ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್