ಬೆಂಗಳೂರು, 25 ಜುಲೈ (ಹಿ.ಸ.) :
ಆ್ಯಂಕರ್ : ಮುಡಾ ಹಗರಣ, ವಾಲ್ಮೀಕಿ ನಿಗಮದ ಹಗರಣ ಸಂಬಂಧ ಮುಂದಿನ ದಿನಗಳಲ್ಲಿ ನಡೆಸಲಿರುವ ಹೋರಾಟದ ಕುರಿತು ನಾವು ಮತ್ತು ನಮ್ಮ ಎನ್‍ಡಿಎ ಭಾಗೀದಾರ ಪಕ್ಷ ಜೆಡಿಎಸ್ ಜೊತೆ ಚರ್ಚೆ ಮಾಡಿ ತೀರ್ಮಾನಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಪ್ರಕಟಿಸಿದರು.
ಕಲಾಪವನ್ನು ಅರ್ಧಕ್ಕೆ ಮೊಟಕುಗೊಳಿಸಿದ ಭ್ರಷ್ಟ ಕಾಂಗ್ರೆಸ್ ಸರಕಾರದ ವಿರುದ್ಧ ರಾಜ್ಯಪಾಲರಿಗೆ ಇಂದು ದೂರು ಸಲ್ಲಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಇ.ಡಿ ವಿರುದ್ಧ ಧರಣಿ ನಡೆಸಿದ್ದಲ್ಲದೆ, ಇ.ಡಿ ವಿರುದ್ಧ ಎಫ್‍ಐಆರ್ ದಾಖಲಿಸಿ ಬೆದರಿಸುವ ತಂತ್ರಗಾರಿಕೆ ಮಾಡಿದ್ದಾರೆ. ರಾಜ್ಯ ಹೈಕೋರ್ಟ್, ಇ.ಡಿ. ವಿರುದ್ಧ ಮಾಡಿದ ಎಫ್‍ಐಆರ್‍ಗೆ ತಡೆಯಾಜ್ಞೆ ಕೊಟ್ಟಿದೆ ಎಂದು ನುಡಿದರು.
ವಾಲ್ಮೀಕಿ ಹಗರಣ, ಎಲ್ಲಿ ತಮ್ಮ ಬುಡಕ್ಕೆ ಬರಲಿದೆಯೋ ಎಂದು ಮುಖ್ಯಮಂತ್ರಿಗಳು ಹೆದರಿಕೊಂಡಿದ್ದಾರೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯನವರು ವಿಸ್ತøತ ಚರ್ಚೆ ನಡೆಸಿ ವಿಪಕ್ಷಕ್ಕೆ ಸವಾಲು ಹಾಕಲಿದ್ದಾರೆ ಎಂದು ನಿರೀಕ್ಷೆಯಲಿದ್ದೆವು. ಆದರೆ, ಮುಖ್ಯಮಂತ್ರಿಗಳು ಪಲಾಯನವಾದ ಮಾಡಿದ್ದಾರೆ; ಚರ್ಚೆಯಿಂದ ಓಡಿ ಹೋಗುವ ಕೆಲಸ ಮಾಡಿದ್ದಾರೆ ಎಂದು ಟೀಕಿಸಿದರು.
ಇವತ್ತು ಗೌರವಾನ್ವಿತ ರಾಜ್ಯಪಾಲರನ್ನು ಭೇಟಿ ಮಾಡಿದ್ದೇವೆ. ಮುಡಾ (ಮೈಸೂರು ಅಭಿವೃದ್ಧಿ ಪ್ರಾಧಿಕಾರ) ಹಗರಣವನ್ನು ಸಿಬಿಐ ತನಿಖೆಗೆ ಕೊಡಬೇಕು; ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು ಎಂಬ ಒತ್ತಾಯವನ್ನು ರಾಜ್ಯಪಾಲರ ಗಮನಕ್ಕೂ ತಂದಿದ್ದೇವೆ ಎಂದು ವಿವರಿಸಿದರು.
ರಾಜ್ಯಪಾಲರು ನಿನ್ನೆ ಮುಖ್ಯಮಂತ್ರಿಗಳನ್ನು ಕರೆದು ಚರ್ಚೆ ಮಾಡಿದ್ದಾರೆ. ಮುಡಾ ಹಗರಣದ ಕುರಿತು ಕೆಲವು ವಿವರಣೆಯನ್ನೂ ಮುಖ್ಯಮಂತ್ರಿಗಳಿಗೆ ಕೇಳಿದ್ದಾರೆ. ನಾವು ಕಾದು ನೋಡಲಿದ್ದೇವೆ ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ