ಕುವೈತ್ , 21 ಜುಲೈ (ಹಿ.ಸ.) :
ಆ್ಯಂಕರ್ : ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಏರ್ ಕಂಡೀಷನರ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೇರಳ ಮೂಲದ ದಂಪತಿ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಕುವೈತ್‌ನ ಮನೆವೊಂದರಲ್ಲಿ ನಡೆದಿದೆ.
ಕೇರಳದ ಅಲಪ್ಪುಳದ ನೀರತ್ತುಪುರಂನವರಾದ ಮ್ಯಾಥ್ಯೂಸ್ ಮುಲಾಕಲ್, ಪತ್ನಿ ಲಿನಿ ಅಬ್ರಹಾಂ ಮತ್ತು ಇಬ್ಬರು ಮಕ್ಕಳು ಘಟನೆಯಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೇಸಿಗೆ ರಜೆಗೆಂದು ಕೇರಳಕ್ಕೆ ತೆರಳಿದ್ದ ಕುಟುಂಬ ಕುವೈತ್‌ಗೆ ವಾಪಸ್ ಆಗಿತ್ತು. ನಿನ್ನೆ ದಿನ ರಾತ್ರಿ 8 ಗಂಟೆಯ ಸುಮಾರಿಗೆ ಘಟನೆ ಸಂಭವಿಸಿದೆ. ವರದಿಗಳ ಪ್ರಕಾರ, ಮ್ಯಾಥ್ಯೂಸ್ ಮುಲಾಕಲ್ ಅವರು ಸುದ್ದಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಪತ್ನಿ ಲಿನಿ ಆಸ್ಪತ್ರೆಯೊಂದರಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು, ಘಟನೆಯಲ್ಲಿ ಮೃತಪಟ್ಟ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿದೆ. ರಾಯಭಾರ ಕಚೇರಿ ಕೇರಳದಲ್ಲಿರುವ ಮೃತರ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮೃತದೇಹಗಳನ್ನು ಕೇರಳಕ್ಕೆ ತಲುಪಿಸುವ ತಯಾರಿ ನಡೆಸುತ್ತಿದೆ ಎಂದು ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ