ನವದೆಹಲಿ, 21 ಜುಲೈ (ಹಿ.ಸ.) :
ಆ್ಯಂಕರ್ : ವಿಶ್ವ ಪರಂಪರೆ ಸಮಿತಿಯ ೪೬ನೇ ಅಧಿವೇಶನವನ್ನು ಇಂದು ಸಂಜೆ ೭ ಗಂಟೆಗೆ ದೆಹಲಿಯ ಭಾರತ್‌ಮಂಟಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಅಲ್ಲದೇ, ಪ್ರಧಾನಿ ಸಮಾವೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇದೇ ಮೊದಲ ಬಾರಿಗೆ ಭಾರತ ಅಧಿವೇಶನವನ್ನು ಆಯೋಜಿಸಿದೆ. ಅಧಿವೇಶನ ಈ ತಿಂಗಳ ಅಂತ್ಯದವರೆಗೂ ನಡೆಯಲಿದ್ದು, ಯುನೆಸ್ಕೋ ಸಂಸ್ಥೆಯ ಮಹಾ ನಿರ್ದೇಶಕಿ ಮೇಡಮ್ ಆಡ್ರೆ ಅಜೌಲೆ, ಯುನೆಸ್ಕೋ ವಿಶ್ವಪರಂಪರೆಯ ಸಚಿವಾಲಯದ ಹಿರಿಯ ಅಧಿಕಾರಿಗಳು, ವಿವಿಧ ದೇಶಗಳ ಸಾಂಸ್ಕೃತಿಕ ಸಚಿವರು, ರಾಯಭಾರಿಗಳು ಸೇರಿದಂತೆ ಉನ್ನತ ಮಟ್ಟದ ಪ್ರತಿನಿಧಿಗಳು ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಸ್ಕೃತಿ ಸಚಿವಾಲಯ ತಿಳಿಸಿದೆ.
ಈ ಕುರಿತು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಮಾಹಿತಿ ನೀಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೂರನೇ ಅವಧಿಯ ಸರ್ಕಾರದಲ್ಲಿ ಇಂತಹ ಒಂದು ದೊಡ್ಡ ಅಧಿವೇಶನವನ್ನು ಭಾರತ ಆಯೋಜಿಸಿದೆ ಎಂದರು. ದೇಶದ ಸಾಂಸ್ಕೃತಿಕ ವೈಭವ ಮತ್ತು ಪರಂಪರೆಯನ್ನು ಅತ್ಯಂತ ಎತ್ತರಕ್ಕೆ ಕೊಂಡೊಯ್ಯುವ ಉದ್ದೇಶದ ಜತೆಗೆ ವಿಶ್ವದ ವೈವಿಧ್ಯತೆ ಮತ್ತು ವಿಶಿಷ್ಟತೆಯನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ