ಸೊಳ್ಳೆ ಕಡಿತದ ಬಗ್ಗೆ ನಿರ್ಲಕ್ಷ್ಯ ಬೇಡ, ಮಲೇರಿಯಾ ಮುಕ್ತದತ್ತ ಇರಲಿ ಸಮಾಜದ ಚಿತ್ತ
ಬೆಂಗಳೂರು, 25 ಏಪ್ರಿಲ್ (ಹಿ.ಸ):ಆ್ಯಂಕರ್: •ಒಂದು ಪೀಳಿಗೆಯೊಳಗೆ ಮಲೇರಿಯಾವನ್ನು ಕೊನೆಗೊಳಿಸುವ ಮತ್ತು ಮಲೇರಿಯಾ ಮ
ಮೇಮೇೋಮ


ಬೆಂಗಳೂರು, 25 ಏಪ್ರಿಲ್ (ಹಿ.ಸ):ಆ್ಯಂಕರ್:

•ಒಂದು ಪೀಳಿಗೆಯೊಳಗೆ ಮಲೇರಿಯಾವನ್ನು ಕೊನೆಗೊಳಿಸುವ ಮತ್ತು ಮಲೇರಿಯಾ ಮುಕ್ತ ಜಗತ್ತನ್ನು ನಿರ್ಮಾಣ ಮಾಡುವ ಜವಾಬ್ದಾರಿಯ ಮಹತ್ವವನ್ನು ಎತ್ತಿ ಹಿಡಿಯಲು, ಏಪ್ರಿಲ್ 25 ರಂದು ವಿಶ್ವ ಮಲೇರಿಯಾ ದಿನವನ್ನು ಆಚರಿಸಲಾಗುತ್ತದೆ.

ವರದಿ : ಡಾ. ವರ ಪ್ರಸಾದ್ ರಾವ್ ಪಿ. ವಿ

ಒಂದೊಂದು ಕಾಲಕ್ಕೆ ಒಂದೊಂದು ಬಗೆಯ ಜ್ವರ ಎನ್ನುವಂತೆ ಈಗ ಕಾಯಿಲೆಗಳು ಬರುತ್ತಿವೆ. ಆದರೆ ಯಾವಾಗ ಬೇಕಾದರೂ ಬರಬಹುದಾದ ಕಾಯಿಲೆ ಎಂದರೆ ಅದು ಮಲೇರಿಯಾ ಜ್ವರ. ಯಾಕೆಂದರೆ ವರ್ಷದ ಎಲ್ಲಾ ದಿನಗಳಲ್ಲೂ ಸೊಳ್ಳೆ ನಮ್ಮ ಸುತ್ತಮುತ್ತಲೇ ಇರುತ್ತವೆ. ಇದೀಗಾ ಬೇಸಿಗೆಯ ಕಾಲ ಬೇಸಿಗೆಯಲ್ಲಿ ಸಾಮಾನ್ಯವಾಗಿ ಅನೇಕ ಸಮಸ್ಯೆಗಳು ಹೆಚ್ಚು. ಇದರಲ್ಲಿ ಮಲೇರಿಯಾ ಕೂಡ ಒಂದು. ಹೀಗಾಗಿ ಮಲೇರಿಯಾ ಜ್ವರದ ಬಗ್ಗೆ ಜಾಗತಿಕವಾಗಿ ಜನರಿಗೆ ಅರಿವು ಮೂಡಿಸುವ ಸಲುವಾಗಿ ಏಪ್ರಿಲ್ 25ನ್ನು ಇದಕ್ಕಾಗಿ ಮೀಸಲಿರಿಸಲಾಗಿದೆ.ಮಲೇರಿಯಾ ಎಂಬ ಮಾರಣಾಂತಿಕ ಕಾಯಿಲೆಯಿಂದ ನಮ್ಮನ್ನು ನಾವು ಯಾವ ರೀತಿಯಲ್ಲಿ ಕಾಪಾಡಿಕೊಳ್ಳಬೇಕು ಎಂಬುದನ್ನು ಲೇಖನದ ಮೂಲಕ ತಿಳಿಯಿರಿ.

ಮಲೇರಿಯಾ ಇನ್ನೂ ಮರೆಯಾಗಿಲ್ಲ. ಜಾಗತಿಕವಾಗಿ ಅತೀಹೆಚ್ಚು ಜನರನ್ನು ಬಲಿತೆಗೆದುಕೊಳ್ಳುತ್ತಿರುವ ರೋಗವೆಂದರೆ ಮಲೇರಿಯಾನೇ ಎಂದು ಅಧ್ಯಯನವೊಂದು ಹೇಳುತ್ತದೆ. ಮಲೇರಿಯಾ ಎಂಬುವುದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ, ನಿರ್ಲಕ್ಷ್ಯ ಮಾಡಿದರೆ ಇದರಿಂದ ಮನುಷ್ಯರ ಪ್ರಾಣಕ್ಕೆ ಅಪಾಯ ಉಂಟಾಗುವುದು. ಮಲೇರಿಯಾವನ್ನು ನಿಯಂತ್ರಿಸುವುದು ನಗರಸಭೆ, ಪಾಲಿಕೆಯವರ ಕರ್ತವ್ಯವೆಂದು ಸುಮ್ಮನಿರದೆ ಸೊಳ್ಳೆಗಳ ನಿಯಂತ್ರಣಕ್ಕೆ ಪ್ರತಿಯೊಬ್ಬರು ಮುಂದಾಗಬೇಕು, ಆಗ ಮಾತ್ರ ಈ ಮಲೇರಿಯಾವನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸಾಧ್ಯ.

2001 ರಿಂದಲೂ ಆಫ್ರಿಕನ್ ದೇಶಗಳು ಪ್ರತಿ ವರ್ಷ ಮಲೇರಿಯಾ ದಿನವನ್ನು ಆಚರಿಸುತ್ತಿತ್ತು ನಂತರ 2007 ರಲ್ಲಿ ವಿಶ್ವ ಆರೋಗ್ಯ ಅಸೆಂಬ್ಲಿಯ 60 ನೇ ಅಧಿವೇಶನದಲ್ಲಿ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ ಒ) ಆಯೋಜಿಸಿದ ಸಭೆಯ ವೇಳೆ ಪ್ರಪಂಚದಾದ್ಯಂತದ ರಾಷ್ಟ್ರಗಳಲ್ಲಿ ಮಲೇರಿಯಾ ಹರಡುವಿಕೆಯನ್ನು ಗುರುತಿಸಲು ಮತ್ತು ರೋಗದ ಬಗ್ಗೆ ಜಾಗತಿಕವಾಗಿ ಜಾಗೃತಿ ಮೂಡಿಸಲು ಆಫ್ರಿಕಾ ಮಲೇರಿಯಾ ದಿನವನ್ನು ವಿಶ್ವ ಮಲೇರಿಯಾ ದಿನ ಎಂದು ಮರುನಾಮಕರಣ ಮಾಡಲು ಮನವಿ ಮಾಡಿತ್ತು. ಇದು 2030 ರ ವೇಳೆಗೆ ಮಲೇರಿಯಾ ಪ್ರಕರಣಗಳು ಮತ್ತು ಸಾವುಗಳನ್ನು 90% ರಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಆ ಬಳಿಕ ಪ್ರತಿವರ್ಷ ಈ ದಿನವನ್ನು ಆಚರಿಸಲಾಗುತ್ತದೆ.

ಬೇಸಿಗೆ ಕಾಲ ಶುರವಾಗಿದೆ. ಎಲ್ಲೆಡೆ ಕೀಟಗಳ ಹಾವಳಿ ಆರಂಭವಾಗಿದೆ. ಅದರಲ್ಲಿಯೂ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಬದಲಾಗುತ್ತಿರುವ ಪರಿಸರವು ಅನೇಕ ರೋಗಗಳ ಅಪಾಯವನ್ನು ತಂದೊಡ್ಡುತ್ತಿದೆ. ಋತುವಿನ ಬದಲಾವಣೆಯು ಸೊಳ್ಳೆಗಳ ಸಂತಾನೋತ್ಪತ್ತಿಯ ಅಪಾಯವನ್ನು ಮತ್ತಷ್ಟು ಹೆಚ್ಚಿಸಿದೆ.

ಮಲೇರಿಯಾ ತಡೆ ಹೇಗೆ?

ಮಲೇರಿಯಾವನ್ನು ಹೇಗೆ ತಡೆಯ ಬೇಕು ಎಂಬುವುದರ ಬಗ್ಗೆ ಬೆಂಗಳೂರಿನ ಅಬ್ಬಿಗೇರಿಯ ಹೆಸರಾಂತ ಹಿರಿಯ ವೈದ್ಯ ತಜ್ಞರಾದ ಡಾ. ಬಾಲ್ಕಿಸ್ ಜಹಾನ್ ಮಾಹಿತಿ ನೀಡಿದ್ದಾರೆ. ಮಾರಣಾಂತಿಕ ಸೊಳ್ಳೆ ಕಡಿತದಿಂದ ದೂರವಿರುವುದೇ ಸದ್ಯಕ್ಕಿರುವ ಅತ್ಯುತ್ತಮ ಮಾರ್ಗ.

ನಿರ್ಲಕ್ಷಿಸಿದರೆ ಜೀವ ತೆಗೆಯಲೂ ಈ ರೋಗ ಹೇಸುವುದಿಲ್ಲ.ಎಲ್ಲೆಂದರಲ್ಲಿ ಕಸ ಬಿಸಾಕುವುದು, ಕೊಳಚೆ ನೀರು ನಿಲ್ಲದಂತೆ ಪರಿಸರವನ್ನು ಸ್ವಚ್ಛವಾಗಿಡುವುದು, ಹೂಕುಂಡ ಮುಂತಾದ ವಸ್ತುವಿನಲ್ಲಿ ಕೂಡ ನೀರು ಬಹಳದಿನಗಳ ಕಾಲ ನಿಲ್ಲದಂತೆ ಎಚ್ಚರ ವಹಿಸುವುದು ಸದ್ಯಕ್ಕೆ ನಾವು ಮಾಡಬೇಕಾದ ಕ್ರಮಗಳು. ಎಲ್ಲಕ್ಕಿಂತ ಮಕ್ಕಳಲ್ಲಿ ಈ ಕುರಿತು ಜಾಗ್ರತೆ ಮೂಡಿಸಬೇಕು.

ಈ ಸೊಳ್ಳೆ ಅತಿ ಹೆಚ್ಚು ಮಳೆ ಬೀಳುವ, ಚರಂಡಿ, ನದಿ ಕೆನಾಲ್, ಕಾಲುವೆ, ಭತ್ತದ ಗದ್ದೆ, ಬಾವಿ, ಕೆರೆ, ಅಶುದ್ದ ನೀರಿನಲ್ಲಿ ವಾಸವಾಗಿರುತ್ತದೆ. ಈ ಸೊಳ್ಳೆ ಸಾಮಾನ್ಯವಾಗಿ ಬೆಳಗ್ಗೆ ಮತ್ತು ಸಂಜೆ ಕಡಿಯುತ್ತದೆ.

ಸೊಳ್ಳೆಗಳ ನಿಯಂತ್ರಣಕ್ಕಾಗಿ, ಮನೆಯ ಸುತ್ತಮುತ್ತಲಿನ ಆವರಣಗಳಲ್ಲಿ ನೀರು ನಿಲ್ಲದಂತೆ ನಿಗಾ ವಹಿಸಬೇಕು. ನಿಂತ ನೀರಲ್ಲಿ ಅನಾಫಿಲಿಸ್ ಸೊಳ್ಳೆ ಮರಿಗಳು ಬೆಳೆದು ರೋಗ ವರ್ಧನೆಗೆ ಕಾರಣವಾಗಬಹುದು. ನೀರು ನಿಲ್ಲುವುದನ್ನು ತಡೆಗಟ್ಟಲು ಈ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.ಎಳನೀರು ಚಿಪ್ಪುಗಳನ್ನು ಕವಚಿ ಹಾಕಬೇಕು ಅಥವಾ ನಾಶಪಡಿಸಬೇಕು.ಟಯರ್ಗಳಲ್ಲಿ ನೀರು ನಿಲ್ಲದಂತೆ ಮಾಡಬೇಕು. ನೀರಿನ ಟ್ಯಾಂಕು ವಾರಕ್ಕೊಮ್ಮೆ ಖಾಲಿ ಮಾಡಿ ಸ್ವಚ್ಛಗೊಳಿಸಬೇಕು ಎಂದು ಸಾರ್ವಜನಿಕರಲ್ಲಿ ವೈದ್ಯ ತಜ್ಞರಾದ ಡಾ. ಡಾ. ಬಾಲ್ಕಿಸ್ ಜಹಾನ್ ಮನವಿ ಮಾಡಿದ್ದಾರೆ.

ಸಾಧ್ಯವಾದಷ್ಟು ಮಂದ ಬಣ್ಣದ ಉಡುಗೆಗಳನ್ನು ಧರಿಸಿ :

ಈ ಬೇಸಿಗೆಯ ಸಮಯದಲ್ಲಿ ಹಗುರವಾದ ಬಟ್ಟೆಗಳನ್ನು ಧರಿಸಲು ಇಷ್ಟ ಪಡುತ್ತಾರೆ. ಆದರೆ ಸಂಜೆಯಾಗುತ್ತಿದ್ದಂತೆ ಉದ್ದ ತೋಳುಗಳುಳ್ಳ ಬಟ್ಟೆಗಳು, ಸಾಕ್ಸ್, ಪೂರ್ಣವಾಗಿ ಕಾಲುಗಳನ್ನು ಮುಚ್ಚುವ ಪ್ಯಾಂಟ್ ಗಳನ್ನು ಧರಿಸುವುದನ್ನು ಮರೆಯದಿರಿ.

ಪೂರ್ಣವಾಗಿ ನಿಮ್ಮ ದೇಹವನ್ನು ಬಟ್ಟೆಯಿಂದ ಮುಚ್ಚಿಕೊಳ್ಳುವುದು ಸೊಳ್ಳೆ ಕಡಿತದಿಂದ ನಿಮ್ಮನ್ನು ರಕ್ಷಿಸುತ್ತದೆ.

ಮಂದ ಬಣ್ಣದ ಉಡುಗೆಗಳನ್ನು ಧರಿಸುವುದರಿಂದ ಸೊಳ್ಳೆಗಳನ್ನು ನಿಮ್ಮಿಂದ ದೂರ ಇರಿಸಬಹುದಾಗಿದೆ. ಇದು ಮಲೇರಿಯಾದಿಂದ ನಿಮ್ಮನ್ನು ಕಾಪಾಡಿಕೊಳ್ಳುವ ಸ್ವಾಭಾವಿಕ ಮಾರ್ಗವಾಗಿದೆ. ನೀವು ಗಾಢ ವರ್ಣದ ದಿರಿಸುಗಳನ್ನು ಧರಿಸಿದಾಗ ಸೊಳ್ಳೆಯು ಆಕರ್ಷಿತಗೊಂಡು ನಿಮ್ಮನ್ನು ಸಮೀಪಿಸುತ್ತದೆ ಆದ್ದರಿಂದ ಆದಷ್ಟು ಗಾಢ ವರ್ಣದ ಬಟ್ಟೆಗಳನ್ನು ಬಳಸದಿರಿ.

ನೈಸರ್ಗಿಕ ಮನೆ ಮದ್ದು:

•ಮಲೇರಿಯಾದ ತೀವ್ರತೆ ಮತ್ತು ಲಕ್ಷಣಗಳನ್ನು ತುಳಸಿಯು ಕಡಿಮೆ ಮಾಡುವುದು. ತುಳಸಿಯಲ್ಲಿ ಮಲೇರಿಯಾ ವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ತುಳಸಿ ಹಾಕಿದಂತಹ ಗಿಡಮೂಲಿಕೆ ಚಾ ತಯಾರಿಸಿಕೊಂಡು ಕುಡಿದರೆ ಅತ್ಯುತ್ತಮ ಲಾಭ ನಿಮಗೆ ಸಿಗುವುದು.

•ದಾಲ್ಚನಿಯನ್ನು ಹಲವಾರು ವರ್ಷಗಳಿಂದಲೂ ಮಲೇರಿಯಾಗೆ ಔಷಧಿ ಆಗಿ ಬಳಸಿಕೊಳ್ಳಬಹುದಾಗಿದೆ. ಈ ದಾಲ್ಚನಿಯಲ್ಲಿ ಉರಿಯೂತ ಶಮನಕಾರಿ, ಆಂಟಿಆಕ್ಸಿಡೆಂಟ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಇದು ಮಲೇರಿಯಾದ ಲಕ್ಷಣಗಳ ವಿರುದ್ಧ ಹೋರಾಡುತ್ತದೆ. ಬಿಸಿ ನೀರಿಗೆ ಸ್ವಲ್ಪ ದಾಲ್ಚಿನಿ ಪುಡಿ, ಜೇನುತುಪ್ಪ ಹಾಕಿಕೊಂಡು ದಾಲ್ಚಿನಿಯ ಚಾ ತಯಾರಿಸಿ ಸೇವಿಸಿರಿ.

•ಹಲವಾರು ರೀತಿಯ ಔಷಧೀಯ ಗುಣಗಳನ್ನು ಹೊಂದಿರುವಂತಹ ಶುಂಠಿಯನ್ನು ನೀರನ್ನು ಕುದಿಸಿ ಅದನ್ನು ಕುಡಿದರೆ ಮಲೇರಿಯಾ ಇರುವವರಿಗೆ ಪರಿಣಾಮಕಾರಿ ಆಗಿರುತ್ತದೆ.

•ಮೆಂತೆ ಮಲೇರಿಯ ಜ್ವರವನ್ನು ಹೋಗಲಾಡಿಸುವ ಇನ್ನೊಂದು ನೈಸರ್ಗಿಕ ಮನೆ ಮದ್ದಾಗಿದೆ. ಆರಂಭಿಕ ಹಂತದಲ್ಲಿ ಮಲೇರಿಯಾ ಜ್ವರವನ್ನು ಹೊಂದಿರುವವರು 5 ಗ್ರಾಂ ಮೆಂತೆ ಕಾಳುಗಳನ್ನು ಇಡೀ ರಾತ್ರಿ ನೀರಿನಲ್ಲಿ ನೆನೆಸಿಟ್ಟು, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.

ಹಣ್ಣಿನ ಜ್ಯಾಸ್, ಎಳನೀರು ಹೆಚ್ಚು ಕುಡಿಯಿರಿ

ಮಲೇರಿಯಾ ಸೋಂಕಿತ ವ್ಯಕ್ತಿಗೆ ದೇಹದಲ್ಲಿ ನೀರಿನಂಶ ಕಡಿಮೆಯಾಗಿ ಜೊತೆಗೆ ಎಲೆಕ್ಟ್ರೋಲೈಟ್ ಅಂಶಗಳು ಇಲ್ಲದಂತಾಗಿ ದೇಹ ನಿರ್ಜಲೀಕರಣದ ಸಮಸ್ಯೆಗೆ ಗುರಿಯಾಗುವುದು ಸಾಮಾನ್ಯ ಸಂಗತಿ. ಆದ್ದರಿಂದ ಆತ ಹಣ್ಣಿನ ರಸಗಳು, ಸೂಪ್, ಅಕ್ಕಿ ಗಂಜಿ, ಎಳನೀರು, ಬೇಳೆ ಬೇಯಿಸಿದ ನೀರು ಕುಡಿದರೆ ಕಿತ್ತಳೆ ಹಣ್ಣು ಮತ್ತು ದ್ರಾಕ್ಷಿ ಹಣ್ಣುಗಳು ವಿಟಮಿನ್ ‘ಸಿ’ ಅಂಶಗಳನ್ನು ಹೊಂದಿದೆ. ಪ್ರತಿ ದಿನ ಕಿತ್ತಳೆ ಹಣ್ಣುಗಳನ್ನು ಯಥೇಚ್ಛವಾಗಿ ಸೇವಿಸಿ. ದ್ರಾಕ್ಷಿ ಹಣ್ಣಿನ ಜ್ಯೂಸ್ ಕುಡಿಯುವ ಮುಂಚೆ ಅದನ್ನು ಚೆನ್ನಾಗಿ ಕುದಿಸಿ ಸೋಸಿ ನಂತರ ಕುಡಿಯಬೇಕು

ಮಲೇರಿಯಾ ನಿಯಂತ್ರಣದ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸಿದ್ದೇವೆ. ಇದನ್ನು ತಿಳಿದುಕೊಂಡು ಮಲೇರಿಯಾ ಹತ್ತಿರವೂ ಬರದಂತೆ ನೋಡಿಕೊಳ್ಳಿ....

ಹಿಂದೂಸ್ತಾನ್ ಸಮಾಚಾರ್


 rajesh pande