ಮಲೇರಿಯ ಮುಕ್ತ ಜಿಲ್ಲೆಯನ್ನಾಗಿಸಲು ಸಹಕರಿಸಿ: ಡಿಹೆಚ್ಓ
ಬಳ್ಳಾರಿ, 25 ಏಪ್ರಿಲ್ (ಹಿ.ಸ): ಆ್ಯಂಕರ್ : ಸಾರ್ವಜನಿಕರಿಗೆ ಯಾವುದೇ ಜ್ವರವಿರಲಿ, ರಕ್ತಲೇಪನ ಪರೀಕ್ಷೆ ಮಾಡಿಸುವ ಮೂಲ
  ಮಲೇರಿಯ ಮುಕ್ತ ಜಿಲ್ಲೆಯನ್ನಾಗಿಸಲು ಸಹಕರಿಸಿ: ಡಿಹೆಚ್‍ಓ  


ಬಳ್ಳಾರಿ, 25 ಏಪ್ರಿಲ್ (ಹಿ.ಸ):

ಆ್ಯಂಕರ್ : ಸಾರ್ವಜನಿಕರಿಗೆ ಯಾವುದೇ ಜ್ವರವಿರಲಿ, ರಕ್ತಲೇಪನ ಪರೀಕ್ಷೆ ಮಾಡಿಸುವ ಮೂಲಕ ರೋಗ ತಡೆಗಟ್ಟಲು ಇಲಾಖೆಯೊಂದಿಗೆ ಕೈಜೋಡಿಸಲು ಹಾಗೂ ಶೂನ್ಯ ಮಲೇರಿಯ ಗುರಿಯನ್ನು ತಲುಪಲು ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ಹೇಳಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕಚೇರಿ ಇವರ ಸಂಯುಕ್ತಾಶ್ರಯದಲ್ಲಿ ‘ವಿಶ್ವ ಮಲೇರಿಯಾ ದಿನಾಚರಣೆ’ ಅಂಗವಾಗಿ ನಗರದ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಗಳ ಕಚೇರಿ ಆವರಣದಿಂದ ಏರ್ಪಡಿಸಿದ್ದ ಟ್ಯಾಬ್ಲೋ ಜಾಥಾಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಮಲೇರಿಯಾ ರೋಗಕ್ಕೆ ಉಚಿತವಾಗಿ ರಕ್ತ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬಹುದು ಹಾಗೂ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಮಲೇರಿಯಾ ಜ್ವರಕ್ಕೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಗಣನೀಯವಾಗಿ ಮಲೇರಿಯಾ ಪ್ರಕರಣಗಳು ಇಳಿಕೆಯಾಗಿದ್ದು, ಯಾರಿಗಾದರೂ ವಿಪರೀತ ಜ್ವರದೊಂದಿಗೆ ಮಲೇರಿಯಾ ರೋಗದ ಲಕ್ಷಣ ಕಂಡುಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ ಮಲೇರಿಯಾ ಜ್ವರಕ್ಕೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಆರ್.ಅಬ್ದುಲ್ಲಾ ಅವರು ಮಾತನಾಡಿ, ಮಲೇರಿಯಾ ಜ್ವರವು ಪ್ಲಾಸ್ಮೋಡಿಯಂ ಎಂಬ ಪರಾವಲಂಭಿ ಸೂಕ್ಷ್ಮಾಣುವಿನಿಂದ ಉಂಟಾಗುತ್ತದೆ ಹಾಗೂ ಹೆಣ್ಣು ಅನಾಫಿಲೀಸ್ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುವಂತ ರೋಗವಾಗಿದ್ದು, ಚಳಿ, ನಡುಕ, ಬಿಟ್ಟು ಬಿಟ್ಟು ಜ್ವರ ಬರುವುದು, ವಾಕರಿಕೆ, ಮೈ ಬೆವರುವುದು ಮಲೇರಿಯಾ ರೋಗ ಲಕ್ಷಣಗಳಾಗಿದ್ದು, ಈ ಲಕ್ಷಣಗಳು ಕಂಡು ಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆಗೆ ಒಳಪಟ್ಟು ಸೂಕ್ತ ಉಚಿತ ಚಿಕಿತ್ಸೆಯನ್ನು ಪಡೆಯಬಹುದು ಎಂದು ಹೇಳಿದರು.

ಮಲೇರಿಯಾ ಪ್ರಕರಣಗಳು ಕಂಡು ಬಂದಲ್ಲಿ ಮನೆಯ ಸುತ್ತಮುತ್ತಲು ಇಲಾಖೆಯಿಂದ ಕೈಗೊಳ್ಳುವ ಕೀಟನಾಶಕ ಸಿಂಪರಣೆಗೆ ಸಾರ್ವಜನಿಕರು ಅವಕಾಶ ನೀಡಬೇಕು. ಸ್ವಯಂ ರಕ್ಷಣಾ ಕ್ರಮಗಳಾದ ಮಲಗುವಾಗ ಸೊಳ್ಳೆ ಪರದೆಗಳನ್ನು ಬಳಕೆ ಮಾಡುವುದು, ಕಿಟಕಿಗಳಿಗೆ ಸೊಳ್ಳೆಗಳು ನುಸುಳದಂತೆ ಜಾಲರಿ ಅಳವಡಿಸುವುದು ಮತ್ತು ಇಲಾಖೆಯಿಂದ ನೀಡಲ್ಪಡುವ ಲಾರ್ವಹಾರಿ ಗಪ್ಪಿ ಮತ್ತು ಗಂಬೂಷಿಯಾ ಮೀನುಗಳನ್ನು ಶಾಶ್ವತವಾಗಿ ನೀರು ನಿಲ್ಲುವ ಸ್ಥಳಗಳಲ್ಲಿ ಬಿಡಲು ಉಚಿತವಾಗಿ ಪಡೆಯಬಹುದು ಎಂದು ತಿಳಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ಮಾತನಾಡಿ, ಮಲೇರಿಯಾ ರೋಗ ತಡೆಗಟ್ಟಲು ನವೀನ ವಿಧಾನಗಳನ್ನು ಬಳಸಿ ಮಲೇರಿಯಾ ಪ್ರಕರಣಗಳನ್ನು ಶೂನ್ಯಕ್ಕೆ ತರಲು ಮತ್ತು 2025ರ ವೇಳೆಗೆ ಮಲೇರಿಯಾ ಮುಕ್ತ ಜಿಲ್ಲೆಯನ್ನಾಗಿಸಲು ಸಮುದಾಯದ ಸಹಭಾಗಿತ್ವ ಮಹತ್ವದ್ದಾಗಿದೆ ಎಂದರು.

ಇದೇ ವೇಳೆ ಮಲೇರಿಯಾ ಜಾಗೃತಿಯ ಕುರಿತ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಲಾಯಿತು.

ಟ್ಯಾಬ್ಲೋ ಜಾಗೃತಿ ಜಾಥವು ನಗರ ಪ್ರದೇಶದ ಎಲ್ಲಾ ಪ್ರಮುಖ ಬೀದಿಗಳಲ್ಲಿ ಹಾಗೂ ವಾರ್ಡ್ಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಮಲೇರಿಯಾ ರೋಗದ ಕುರಿತು ಮಾಹಿತಿ ನೀಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಆರ್ಸಿಹೆಚ್ ಅಧಿಕಾರಿ, ಡಾ.ಹನುಮಂತಪ್ಪ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ವೀರೇಂದ್ರಕುಮಾರ್, ಜಿಲ್ಲಾ ಕೀಟಶಾಸ್ತ್ರಜ್ಞ ನಂದಾಕಡಿ, ಜಿಲ್ಲಾ ವಿಬಿಡಿಸಿ ಸಮಾಲೋಚಕ ಪ್ರತಾಪ್.ಹೆಚ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶಕುಂತಲಾ ಮ್ಯಾಳಿ, ನಾಗರಾಜ, ರವೀಂದ್ರ ಜಿನಗ, ಮರಿಬಸವನಗೌಡ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಅಂಭುಜ, ನಂದಿನಿ, ಶಕುಂತಲಾ ಸೇರಿದಂತೆ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳು, ವಿಬಿಡಿಸಿ ಸಿಬ್ಬಂದಿ ವರ್ಗದವರು, ತಾಲೂಕು ಆರೋಗ್ಯಾಧಿಕಾರಿಗಳ ಸಿಬ್ಬಂದಿಗಳು, ಮಲೇರಿಯಾ ಲಿಂಕ್ ವಾಲಂಟೀಯರ್ಸ್ ಮತ್ತು ಇತರೆ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಸಿಬ್ಬಂದಿಗಳು ಭಾಗವಹಿಸಿದ್ದರು.


 rajesh pande