ಕಲ್ಲಂಗಡಿ ಬೆಳೆಯ ಸುಧಾರಿತ ಬೇಸಾಯ ಕ್ರಮ : ರೈತರಿಗೆ ಸಲಹೆ 
ಕೊಪ್ಪಳ, 26 ಡಿಸೆಂಬರ್ (ಹಿ.ಸ.) ಆ್ಯಂಕರ್: ಕಲ್ಲಂಗಡಿ ಬೆಳೆಯ ಸುಧಾರಿತ ಬೇಸಾಯ ಕ್ರಮಗಳ ಕುರಿತು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ಜಿಲ್ಲೆಯ ರೈತರಿಗೆ ಅಗತ್ಯ ಸಲಹೆಗಳನ್ನು ನೀಡಲಾಗಿದೆ ಎಂದು ಕೊಪ್ಪಳ ಕೃಷಿ ಇಲಾಖೆ ತಿಳಿಸಿದೆ. ಕೊಪ್ಪಳ ಜಿಲ್ಲೆಗೆ ಕಲ್ಲಂಗಡಿ ಒಂದು ಮುಖ್ಯವಾದ ಕುಂಬಳ ಜಾತಿಯ ಅತ್ಯಂತ
ಕಲ್ಲಂಗಡಿ ಬೆಳೆಯ ಸುಧಾರಿತ ಬೇಸಾಯ ಕ್ರಮ : ರೈತರಿಗೆ ಸಲಹೆ


ಕಲ್ಲಂಗಡಿ ಬೆಳೆಯ ಸುಧಾರಿತ ಬೇಸಾಯ ಕ್ರಮ : ರೈತರಿಗೆ ಸಲಹೆ


ಕಲ್ಲಂಗಡಿ ಬೆಳೆಯ ಸುಧಾರಿತ ಬೇಸಾಯ ಕ್ರಮ : ರೈತರಿಗೆ ಸಲಹೆ


ಕೊಪ್ಪಳ, 26 ಡಿಸೆಂಬರ್ (ಹಿ.ಸ.)

ಆ್ಯಂಕರ್: ಕಲ್ಲಂಗಡಿ ಬೆಳೆಯ ಸುಧಾರಿತ ಬೇಸಾಯ ಕ್ರಮಗಳ ಕುರಿತು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ಜಿಲ್ಲೆಯ ರೈತರಿಗೆ ಅಗತ್ಯ ಸಲಹೆಗಳನ್ನು ನೀಡಲಾಗಿದೆ ಎಂದು ಕೊಪ್ಪಳ ಕೃಷಿ ಇಲಾಖೆ ತಿಳಿಸಿದೆ.

ಕೊಪ್ಪಳ ಜಿಲ್ಲೆಗೆ ಕಲ್ಲಂಗಡಿ ಒಂದು ಮುಖ್ಯವಾದ ಕುಂಬಳ ಜಾತಿಯ ಅತ್ಯಂತ ಲಾಭದಾಯದ ಅಲ್ಪಾವಧಿ ಬೆಳೆಯಾಗಿದೆ. ಇತ್ತೀಚೆಗೆ ಕಲ್ಲಂಗಡಿಯನ್ನು ವರ್ಷಪೂರ್ತಿ ಬೆಳೆಯಲಾಗುತ್ತಿದ್ದು, ಹಲವಾರು ಕಂಪನಿಗಳು ಬೀಜೋತ್ಪಾದನೆಯಲ್ಲಿ ತೊಡಗಿಸಿಕೊಂಡಿವೆ.

ಕಲ್ಲಂಗಡಿ ಒಂದು ಚಳಿಗಾಲದ ಬೆಳೆಯಾಗಿದ್ದು, ಅಕ್ಟೋಬರ್ ನಿಂದ ಜನವರಿವರೆಗೂ ಉತ್ತಮ ಇಳುವರಿ ಪಡೆಯಬಹುದಾಗಿದೆ. ಶ್ರೀ ಗವಿಸಿದ್ದೇಶ್ವರ ಜಾತ್ರೆಗೆ ಹಣ್ಣುಗಳು ಬರುವಂತೆ ಯೋಜನೆ ಹಾಕಿಕೊಂಡಲ್ಲಿ ರೈತರಿಗೆ ಹೆಚ್ಚಿನ ಲಾಭ ದೊರೆಯುತ್ತದೆ.

ಕಲ್ಲಂಗಡಿಯನ್ನು ಸಾಮಾನ್ಯವಾಗಿ ಮಸಾರಿ ಮತ್ತು ಮರಳು ಮಿಶ್ರಿತ ಕಪ್ಪು ಮಣ್ಣು ಮತ್ತು ನೀರು ಬಸಿದು ಹೋಗುವ ಮಣ್ಣು ಮತ್ತು ಕೆರೆ ಹಾಗೂ ನದಿ ತೀರ ಪ್ರದೇಶಗಳಲ್ಲಿ ಉತ್ತಮವಾಗಿ ಬೆಳೆಯಬಹುದಾಗಿದೆ. ಮಣ್ಣಿನ ರಸ ಸಾರ 6 ರಿಂದ 7, ಉಷ್ಣಾಂಶ 15 ಡಿ.ಸೆ. ಯಿಂದ 40 ಡಿ.ಸೆ., ಆದ್ರ್ರತೆ ಶೇ. 60 ರಿಂದ 70 ಮತ್ತು ಮಳೆಯ ಪ್ರಮಾಣ 200 ಮಿ.ಮಿ. ಯಿಂದ 650 ಮಿ.ಮಿ., ಹೆಚ್ಚು ಉಷ್ಣ ಹಾಗೂ ಬಿಸಿಲು ಇರುವ ವಾತಾವರಣ ಸೂಕ್ತ.

ಕಲ್ಲಂಗಡಿಯಲ್ಲಿ ಮುಖ್ಯವಾದ ತಳಿಗಳಲ್ಲಿ ಎರಡು ವಿಧಗಳಿವೆ. ನಾಮಧಾರಿತರಹದ ತಳಿಗಳು, ಕಪ್ಪು ಬಣ್ಣದ ಕೆಂಪು ಮತ್ತು ಕಡು ಕೆಂಪು ತಿರುಳು ಹೊಂದಿರುವ ತಳಿಗಳು. ಅಲ್ಲದೇ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಿಂದ ಅರ್ಕಾ ಮಾಣಿಕ್ ಮತ್ತು ಅರ್ಕಾ ಮುತ್ತು ಎನ್ನುವ ತಳಿಗಳು ಪ್ರಮುಖವಾಗಿವೆ.

ಇದಲ್ಲದೇ ಅನೇಕ ಖಾಸಗಿ ಕಂಪನಿಗಳ ಸಂಕರಣ ತಳಿಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ. ಕಲ್ಲಂಗಡಿ ಬೆಳೆಯನ್ನು 2.5 ಮೀ ರಿಂದ 3 ಮೀ * 1 ಮೀ ಅಂತರದಲ್ಲಿ ಏರು ಮಡಿ ಮಾಡಿ ಪ್ಲಾಸ್ಟಿಕ್ ಹೊದಿಕೆ ಹಾಕಿ ಬೆಳೆಯುವುದು ಆಧುನಿಕ ಪದ್ದತಿಯಾಗಿದೆ. ಇದರಿಂದ ಕೀಟ ಮತ್ತು ರೋಗಗಳ ಪರಿಣಾಮಕಾರಿ ನಿಯಂತ್ರಣ ಮಾಡಬಹುದಾಗಿದೆ. ಎಕರೆಗೆ ಬೇಕಾಗುವ ಬೀಜಗಳ ಪ್ರಮಾಣ ಸಂಕರಣ ತಳಿಗಳಾದಲ್ಲಿ 300 ರಿಂದ 400 ಗ್ರಾಂ ಮತ್ತು ಇತರೆ ತಳಿಗಳಾದಲ್ಲಿ 750 ಗ್ರಾಂ.

ಆದಷ್ಟು ಕೊಟ್ಟಿಗೆ ಮತ್ತು ಸಾವಯವ ಗೊಬ್ಬರ ಅಲ್ಲದೇ ಎರೆಹುಳು ಗೊಬ್ಬರಗಳನ್ನು ಜೈವಿಕ ಗೊಬ್ಬರಗಳಾದ ಟ್ರೈಕೊಡರ್ಮ, ಸೂಡೊಮೋನಾಸ್ ಮತ್ತು ವ್ಯಾಮ್ ನೊಂದಿಗೆ ಸಮೃದ್ಧಿಗೊಳಿಸಿ ಬಳಸುವುದರಿಂದ ರೋಗ ಮತ್ತು ಕೀಟದ ಬಾಧೆಯನ್ನು ತಡೆಗಟ್ಟಬಹುದು.

ಪ್ರತಿ ಎಕರೆಗೆ 1 ಕ್ವಿ. ಬೇವಿನ ಹಿಂಡಿ ಬೆರೆಸುವುದು ಸೂಕ್ತ. ಬಿತ್ತನೆ ಮಾಡಿದ 20 ರಿಂದ 30 ದಿನಗಳೊಳಗೆ ಕುಡಿ ಚಿವುಟುವದರಿಂದ ಹೆಚ್ಚಿನ ಇಲುಕುಗಳು ಬಿಟ್ಟು ಇಳುವರಿ ಹೆಚ್ಚಾಗುವುದು ಅಲ್ಲದೇ ಕೀಟಗಳ ಬಾಧೆಯನ್ನು ತಡೆಗಟ್ಟಬಹುದು. ಬಳ್ಳಿಗೆ 7 ರಿಂದ 8 ಗಿಣ್ಣುಗಳ ಬಿಡುವ ಹೂವುಗಳು ಫಲಪ್ರದವಾಗಿರುತ್ತವೆ ಮತ್ತು 11 ಗಿಣ್ಣಿನ ನಂತರ ಬರುವ ಹೆಣ್ಣು ಹೂವುಗಳನ್ನು ತೆಗೆಯುವುದು ಸೂಕ್ತ.

ಹೆಚ್ಚಿನ ಇಳುವರಿಗಾಗಿ ಸಲಹೆ: ಹೆಚ್ಚಿನ ಇಳುವರಿಗಾಗಿ ಕೆಲವು ಸಲಹೆಗಳನ್ನು ಅನುಸರಿಸಲು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳು ತಿಳಿಸುತ್ತಾರೆ. ಥ್ರಿಪ್ಸ್ ನುಸಿಯನ್ನು ಆರಂಭ ಹಂತದಿಂದಲೇ ನಿಯಂತ್ರಿಸುವುದು ಬಹಳ ಮುಖ್ಯ. ಕಸ ರಹಿತ ತೋಟ ಕೀಟಗಳನ್ನು ಹತೋಟಿ ಮಾಡುತ್ತದೆ.

ಹೊಲದ ಸುತ್ತಲೂ 1 ತಿಂಗಳ ಮೊದಲೇ ಮೆಕ್ಕೆ ಜೋಳ ಅಥವಾ ಸಜ್ಜೆ ಬೀಜಗಳನ್ನು 4 ಸಾಲು ಬಿತ್ತನೆ ಮಾಡಬೇಕು. ಎರಡು ವರ್ಷಗಳ ನಂತರ ಬೆಳೆ ಪರಿವರ್ತನೆ ಮಾಡಬೇಕು ಇದಕ್ಕಾಗಿ ದ್ವಿದಳ ಧಾನ್ಯಗಳನ್ನು ಬೆಳೆಯುವುದು ಸೂಕ್ತ. ಕೀಟ ನಾಶಕಗಳನ್ನು ಬಳಸುವಾಗ ಬಳ್ಳಿಗಳ ತುದಿಗಳ ಮೇಲೆ ಸಿಂಪಡಿಸಬೇಕು. 2 ರಿಂದ 3 ಬಾರಿ ಬಳ್ಳಿಯ ತುದಿಗಳನ್ನು ಅಂತರ ವ್ಯಾಪಿ ಕೀಟ ನಾಶಕಗಳಲ್ಲಿ ಅದ್ದಿ ತೆಗೆಯಬೇಕು.

ಎಕರೆಗೆ 4 ರಿಂದ 6 ಹಳದಿ ಮತ್ತು ನೀಲಿ ಬಣ್ಣದ ಅಂಟು ಕಾರ್ಡುಗಳನ್ನು ಬಳಸಬೇಕು. ಲಘು ಪೋಷಕಾಂಶಗಳಾದ ಬೋರಾನ್ ಮತ್ತು ಕ್ಯಾಲ್ಸಿಯಂನ್ನು ತಜ್ಞರ ಸಲಹೆಯಂತೆ ಬಳಸಬೇಕು. ನೀರಿನ ನಿರ್ವಹಣೆ ಬಹಳ ಮುಖ್ಯವಾಗಿರುವುದರಿಂದ ಹೂವಾಡವು ಹಂತದಲ್ಲಿ, ಹಣ್ಣು ಬಿಡುವ ಹಂತದಲ್ಲಿ ಮತ್ತು ಹಣ್ಣು ಬಲಿಯುವ ಹಂತದಲ್ಲಿ ಮಣ್ಣನ್ನು ಆದರಿಸಿ ನೀರು ಕೊಡಬೇಕು.

ಬಿತ್ತನೆ, ನಾಟಿ ಮಾಡಿದ 15 ದಿನಗಳ ನಂತರ ನೀರಿನಲ್ಲಿ ಕರಗುವ ಗೊಬ್ಬರಗಳನ್ನು ಸಿಂಪಡಿಸುವುದರಿಂದ ಹೆಚ್ಚಿನ ಇಳುವರಿಯನ್ನು ಪಡೆಯಬಹುದಾಗಿದೆ. ಪ್ರತಿ ಎಕರೆಗೆ 1 ರಿಂದ 2 ಜೇನು ಪೆಟ್ಟಿಗೆಗಳನ್ನು ಇಡುವುದರಿಂದ ಉತ್ತಮ ಇಳುವರಿ ಪಡೆಯಬಹುದು. ಪ್ರತಿ ಬಳ್ಳಿಗೆ 2 ಆರೋಗ್ಯಯುತ ಕಾಯಿಗಳನ್ನು ಬಿಟ್ಟು ಉಳಿದವುಗಳನ್ನು ಕತ್ತರಿಸಬೇಕು. ಕಾಯಿಗಳು ನಿಂಬೆಹಣ್ಣಿನ ಗಾತ್ರದಲ್ಲಿದ್ದಾಗ ಜಿಬ್ಬರ್ಲಿಕ್ ಆಮ್ಲ 20 ಪಿ.ಪಿ.ಎಮ್. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಕೃಷಿ ವಿಸ್ತರಣಾ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಎಂ.ವಿ.ರವಿ ಮೊ.ನಂ. 9480247745 ಮತ್ತು ಸಹಾಯಕ ಪ್ರಾಧ್ಯಾಪಕ ವಾಮನಮೂರ್ತಿ ಮೊ.ನಂ. 8217696837 ಇವರನ್ನು ಸಂಪರ್ಕಿಸಬಹುದಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande