ಚಿಕ್ಕಮಗಳೂರು , 24ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ನಿನ್ನೆ ಸಕಲೇಶಪುರಕ್ಕೆ ಭೇಟಿ ನೀಡಿ ಕರ್ನಾಟಕದ ಕಾಫಿ ಬೆಳೆಗಾರರಿಗೆ ಮಹತ್ವದ ಭರವಸೆ ನೀಡಿದ್ದಾರೆ. ಕರ್ನಾಟಕದ ಪಾಲಿಗೆ ಕಾಫಿ ಬೆಳೆಯೂ ಚಿನ್ನವಾಗಿ ಪರಿಣಮಿಸಲಿದೆ. ಅದಕ್ಕೆ ಬೇಕಾದ ಎಲ್ಲ ಅಗತ್ಯ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ಆದರೆ ಇತ್ತೀಚೆಗೆ ಮಳೆಯಿಂದ ಅಕಾಲಿಕ ಮಳೆಯಿಂದ ಕಟಾವು ಹಂತದಲ್ಲಿದ್ದ ಅರೇಬಿಕಾ ಕಾಫಿ ಹಣ್ಣುಗಳು ಧರೆಗೆ ಉರುಳಿದ್ದು, ಬೆಳೆಗಾರರಿಗೆ ಅಪಾರ ನಷ್ಟ ಉಂಟಾಗಿದೆ. ಮಳೆ ಕಡಿಮೆಯಾದರೂ ಕಷ್ಟ ಜಾಸ್ತಿಯಾದರೂ ಕಷ್ಟ ಎಂಬುವುದು ಕರ್ನಾಟಕದ ಕಾಫಿ ಬೆಳೆಗಾರರ ಸ್ಥಿತಿಯಾಗಿದೆ.
ಕಾಫಿ ಬೆಳೆಗೆ ಉತ್ತಮ ಧಾರಣೆ ಬಂದಿದೆ. ಅಳಿದುಳಿದ ಫಸಲು ಅಕಾಲಿಕ ಮಳೆಯಿಂದಾಗಿ ನೆಲಕ್ಕೆ ಬೀಳುತ್ತಿರುವುದರಿಂದ ಕಾಫಿಯ ಗುಣಮಟ್ಟ ಕಡಿಮೆ ಆಗುತ್ತಿದೆ.ಇದರಿಂದಾಗಿ ಉತ್ತಮ ಬೆಲೆ ಸಿಗದಂತಾಗಿದೆ
ಮೂಡಿಗೆರೆ ತಾಲೂಕಿನಲ್ಲಿ ಮೂಡಿಗೆರೆ, ಕೊಟ್ಟಿಗೆಹಾರ, ಬಣಕಲ್, ಬಾಳೂರ ಸೇರಿದಂತೆ ನಾನಾ ಕಡೆ ಕಾಫಿ ಬೆಳೆ ನೆಲಕ್ಕೆ ಬಿದ್ದು ನಾಶವಾಗುತ್ತಿದೆ. ಕೊಯ್ಲು ಸಮಯದಲ್ಲಿ ಮಳೆ ಬೀಳುತ್ತಿರುವುದು ಬೆಳೆನಾಶಕ್ಕೆ ಕಾರಣವಾಗಿದೆ.
ಮಲೆನಾಡಿನಲ್ಲಿ ಮಳೆ ಹೆಚ್ಚಾದರೆ ಅದರ ಪರಿಣಾಮ ಕಾಫಿ ಮೇಲೆ ಬೀರುತ್ತದೆ. ಮಳೆಗೆ ಕಾಫಿ ಫಸಲು ಉದುರುವುದು ರೋಬಸ್ಟಾ ಕಾಫಿಯಲ್ಲಿ ಕಂಡು ಬಂದರೆ ಅರೇಬಿಕಾ ಕಾಫಿ ಗಿಡಕ್ಕೆ ಕೊಳೆರೋಗ, ಕಾಂಡಕೊರಕ ಬಾಧಿಸುವ ಮೂಲಕ ಭಾರಿ ಹಾನಿಯನ್ನುಂಟು ಮಾಡುತ್ತದೆ. ಇದರಿಂದ ಕಾಫಿಯನ್ನು ನಂಬಿ ಜೀವನ ಸಾಗಿಸುವ ಬೆಳೆಗಾರರು ಸಂಕಷ್ಟ ಅನುಭವಿಸಬೇಕಾಗುತ್ತದೆ.
ಈ ಬಾರಿಯೂ ಭಾರಿ ಮಳೆಯ ಜೊತೆಗೆ ಗಾಳಿ ಆರ್ಭಟಕ್ಕೆ ಕಾಫಿ ಫಸಲು ಮಣ್ಣುಪಾಲಾಗಿದೆ. ಕಾಫಿ ಫಸಲಿನ ಜೊತೆಗೆ ಕಾಫಿ ಗಿಡಗಳು ಕೂಡ ತೀವ್ರ ಶೀತದಿಂದ ಸಾಯುತ್ತಿದ್ದು ಭವಿಷ್ಯದ ಬಗ್ಗೆ ಬೆಳೆಗಾರರು ಕಂಗಾಲಾಗಿದ್ದಾರೆ. ಡಿಸೆಂಬರ್-ಜನವರಿಯಲ್ಲಿ ಹಣ್ಣು ಆಗಬೇಕಿದ್ದ ಕಾಫಿ, ಈಗಾಗಲೇ ಕೆಂಪು ಬಣ್ಣಕೆ ತಿರುಗಿ ಹಣ್ಣಾಗಿದೆ. ಅಷ್ಟೇ ಅಲ್ಲದೇ ಇತ್ತೀಚೆಗೆ ಮಳೆಯ ಹೊಡೆತಕ್ಕೆ ಕಾಫಿ ಉದುರಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಈ ಬಾರಿ ಮಳೆ ಹೆಚ್ಚಾದ ಕಾರಣ ಕಾಂಡಕೊರಕ ಹೆಚ್ಚಾಗುವ ಸಾಧ್ಯತೆಯಿದ್ದು, ಇದರತ್ತ ರಾಜ್ಯ ಮತ್ತು ಕೇಂದ್ರ ಸರಕಾರಗಳು ಕಾಫಿ ಬಳೆಗಾರರ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗಿದೆ. ಕಾಂಡಕೊರಕ ಕೀಟದ ಹಾವಳಿಗೆ ಸ್ವಾಭಾವಿಕ ಕಾರಣಗಳಾದ ಹವಾಮಾನ ವೈಪರೀತ್ಯ, ಇಳಿಮುಖವಾದ ಮಳೆಯ ಪ್ರಮಾಣ, ಒಣ ಹವೆ ಹಾಗೂ ಸಕಾಲಕ್ಕೆ ಬಾರದ ಮುಂಗಾರು ಮಳೆಯ ಜೊತೆಗೆ, ಪೂರಕವೆಂಬಂತೆ ಮಾನವ ನಿರ್ಮಿತ ಕಾರಣಗಳಿವೆ.
ಹೀಗಾಗಿ ವಿಶೇಷ ಸಹಾಯ ಧನ ನೀಡಿ ಬೆಳೆಗಾರರಿಗೆ ಸಹಾಯ ಮಾಡುವಂತೆ ಬೆಳೆಗಾರರು ಮನವಿ ಮಾಡಿದ್ದಾರೆ.
ಕಾಫಿ ಬೆಳೆಗಾರರಿಗೆ ಸಹಾಯಧನ ನೀಡಲು 100 ಕೋಟಿ ರೂ. ಹೆಚ್ಚುವರಿ ಅನುದಾನದ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೇಂದ್ರ ಹಣಕಾಸು ಸಚಿವರೊಂದಿಗೆ ಚರ್ಚೆ ನಡೆಸಲಾಗುವುದು. ಈಗಾಗಲೇ ಸಲ್ಲಿಕೆಯಾಗಿರುವ 21,000 ಅರ್ಜಿಗಳಿಗೆ ಸಹಾಯಧನ ನೀಡಲಾಗುವುದು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ನಿನ್ನೆ ಸಕಲೇಶಪುರದಲ್ಲಿ ಕಾಫಿ ಬೆಳೆಗಾರರ ಒಕ್ಕೂಟ ಆಯೋಜಿಸಿದ್ದ ಕಾಫಿ ಬೆಳೆಗಾರರ ಸಮಾವೇಶದಲ್ಲಿ ಭರವಸೆ ನೀಡಿದ್ದಾರೆ. ಈ ಬಗ್ಗೆ ಕೇಂದ್ರ ಸರಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುವುದು ಕಾದು ನೋಡಬೇಕಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್