ಸಂಡೂರು, 07 ನವೆಂಬರ್ (ಹಿ.ಸ.) :
ಆ್ಯಂಕರ್ : ಬಡವರ ಪರ ಕಾರ್ಯಕ್ರಮ ರೂಪಿಸದ. ಬಡವರಿಗೆ ಒಂದು ಮನೆಯನ್ನೂ ಮಂಜೂರು ಮಾಡದ ಬಿಜೆಪಿಯನ್ನು ಸಂಡೂರಿನಲ್ಲಿ ಸೋಲಿಸಿ ಕಾಂಗ್ರೆಸ್ ಗೆಲ್ಲಿಸಿ ಎಂದು ಮುಖ್ಯಮಂತ್ರಿ ಮನವಿ ಮಾಡಿದರು. ಕ್ಷೇತ್ರದ ಬೊಮ್ಮಾಘಟ್ಟದಲ್ಲಿ ಇಂದು ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರ ಪರವಾಗಿ ಭರ್ಜರಿ ಮತಯಾಚನೆ ಮಾಡಿ ಅವರು ಮಾತನಾಡಿದರು.
ಬಿಜೆಪಿಯವರು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಎಂಎಲ್‌ಎಗಳನ್ನು ಖರೀದಿ ಮಾಡಿ ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದರು. ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಆದ್ದರಿಂದ ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಿ ಎಂದು ಹೇಳಿದರು.
ಬಿಜೆಪಿಯವರು ಬಡವರ ಪರ ಒಂದೂ ಕಾರ್ಯಕ್ರಮ ಮಾಡಲಿಲ್ಲ. ಅವರಿಗೆ ಮಾನ ಮರ್ಯಾದೆ ಇಲ್ಲ. ಅನ್ನಭಾಗ್ಯ, ಶಾದಿ ಭಾಗ್ಯ, ಮೈತ್ರಿ, ಮನಸ್ವಿನಿ, ಶೂ ಭಾಗ್ಯ, ಪಶುಭಾಗ್ಯ, ಇಂದಿರಾ ಕ್ಯಾಂಟೀನ್ ಇಂತಹ ಹಲವಾರು ಯೋಜನೆ ಜಾರಿ ಮಾಡಿದ್ದು ಕಾಂಗ್ರೆಸ್. ಬಿಜೆಪಿಯವರು ಮಾಡಲಿಲ್ಲ. ಮೋದಿ ಅಥವಾ ಯಡಿಯೂರಪ್ಪ ಅವರು ಮಾಡಲಿಲ್ಲ. ಹಾಗಾಗಿ ಬಿಜೆಪಿ ಓಟು ಕೊಡಬೇಡಿ ಎಂದು ವಿವರಿಸಿದರು.
ನಾವು ಚುನಾವಣೆಗೆ ಮೊದಲು ನೀಡಿದ ವಾಗ್ದಾನದಂತೆ ಐದು ಗ್ಯಾರಂಟಿ ಜಾರಿ ಮಾಡಿದೆವು. ಆದರೆ ಈ ಗ್ಯಾರಂಟಿಗಳನ್ನು ಕಾಂಗ್ರೆಸ್ ನಿಲ್ಲಿಸುತ್ತದೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡ್ತಾ ಇದ್ದಾರೆ. ಆದರೆ ರಾಜ್ಯದಲ್ಲಿ ಯಾವುದೇ ಗ್ಯಾರಂಟಿ ನಿಲ್ಲುವುದಿಲ್ಲ. ಬಡವರ ಮನೆ ಹಾಳು ಮಾಡುವ ಬಿಜೆಪಿಯನ್ನು ಸೋಲಿಸಿ ಎಂದರು.
ಬಡವರು ತಿನ್ನುವ ಅನ್ನಕ್ಕೆ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಕೊಡಲು ಕೇಂದ್ರದ ಬಿಜೆಪಿ ಸರ್ಕಾರ ಕೇಳಿದೆವು. ಆದರೆ ಅವರು ಅಕ್ಕಿ ಕೊಡಲಿಲ್ಲ. ಪುಕ್ಕಟೆ ಕೊಡಬೇಡಿ ಹಣ ಕೊಡ್ತಿವಿ ಕೊಡಿ ಎಂದು ಮನವಿ ಮಾಡಿದೆವು. ಆದರೂ ಕೊಡಲಿಲ್ಲ ಆದರೆ ನಾವೇ ಬಡವರಿಗೆ ಅಕ್ಕಿ ಬದಲು ಹಣ ನೀಡಿದೆವು ಎಂದು ಮುಖ್ಯಮಂತ್ರಿಗಳು ಹೇಳಿದರು.
ನಾವು ಯಾವತ್ತೂ ಜನರಿಗೆ ಮೋಸ ಮಾಡಲಿಲ್ಲ. ಬಡವರಿಗೆ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಕೊಟ್ಟರೆ ಅವರು ಆರ್ಥಿಕವಾಗಿ, ಸಾಮಾಜಿಕವಾಗಿ ಬಲಿಷ್ಠರಾಗುತ್ತಾರೆ ಎಂದು ಬಿಜೆಪಿಯವರು ಅವರ ಪರವಾಗಿ ಯಾವುದೇ ಕಾರ್ಯಕ್ರಮಗಳನ್ನು ನೀಡುವುದಿಲ್ಲ ಎಂದು ದೂರಿದರು.
ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಆದರೆ ಬಿಜೆಪಿಯವರು ಸುಳ್ಳು ಹೇಳ್ತಾನೇ ಇದ್ದಾರೆ. ಅವರಿಗೆ ಸುಳ್ಳೇ ಮನೆ ದೇವರು. ಮೋದಿಯವರು ಹೇಳಿದ್ದಂತೆ ಎಲ್ಲರ ಖಾತೆ ಹದಿನೈದು ಲಕ್ಷ ಹಾಕ್ತೇವೆ ಎಂದು. ಎಲ್ಲಿ ಆ ಹದಿನೈದು ಲಕ್ಷ. ಯಾರ ಖಾತೆಗೆ ಬಂದಿದೆ ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.
ಅನ್ನಪೂರ್ಣ ಅವರು ಗೆದ್ದರೆ ಸಂಡೂರಿನ ಅಭಿವೃದ್ಧಿಯಾಗಲಿದೆ. ಅವರ ಪತಿ ಸಂಸದರಾಗಿದ್ದಾರೆ. ಇಬ್ಬರೂ ಸೇರಿದಂತೆ ಒಳ್ಳೆಯ ಕೆಲಸಗಳಾಗಲಿವೆ. ಒಳ್ಳೆಯ ಹೆಣ್ಣು ಮಗಳು ಅವರನ್ನು ಗೆಲ್ಲಿಸಿ. ಅವರಿಗೆ ಆಶೀರ್ವಾದ ಮಾಡಿ ಎಂದರು. ಸಂಡೂರಿನಲ್ಲಿ ರಸ್ತೆ, ಸೇತುವೆ ಆಗಿದ್ದರೆ. ಉದ್ಯೋಗ ಸಿಕ್ಕಿದ್ದರೆ ಅದಕ್ಕೆ ಕಾರಣ ತುಕಾರಾಂ ಅವರು ಎಂದು ಹೊಗಳಿದರು.
ಬಿ ಖರಾಬು ಸರಿಪಡಿಸುವ ಕೆಲಸವನ್ನು ನಾವು ಮಾಡ್ತೇವೆ. ರೈತರಿಗೆ ತೊಂದರೆ ಮಾಡುವುದಿಲ್ಲ. ಬಗರ್ ಹುಕುಂನಲ್ಲೂ ಯಾರನ್ನೂ ಒಕ್ಕಲೆಬ್ಬಿಸುವುದಿಲ್ಲ ಎಂದರು.
ಈ ವೇಳೆ ಸಂಸದ ಈ ತುಕಾರಾಮ್ , ಸಚಿವರಾದ ಕೆ. ಎನ್ ರಾಜಣ್ಣನವರು, ಸಂತೋಷ್ ಲಾಡ್ ರವರು, ಮಾಜಿ ಸಚಿವರಾದ ನಾಗೇಂದ್ರ, ಪಿ.ಟಿ ಪರಮೇಶ್ವರ್ ನಾಯ್ಕರವರು, ಸೇರಿದಂತೆ ರಾಜ್ಯದ ನಾನಾ ಭಾಗದ ಶಾಸಕರು, ಕಾಂಗ್ರೆಸ್ ನಾಯಕರು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್