ವಾಷಿಂಗ್ಟನ್, 06 ನವೆಂಬರ್(ಹಿ.ಸ.) :
ಆ್ಯಂಕರ್ : ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಮತದಾನ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಲಕ್ಷಾಂತರ ಮತದಾರರು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರ ನಡುವೆ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಅಮೆರಿಕದ ಕಾಲಮಾನದ ಪ್ರಕಾರ ನಿನ್ನೆ ಮುಂಜಾನೆಯಿಂದಲೇ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನ ಪ್ರಕ್ರಿಯೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಪೂರ್ವ ರಾಜ್ಯಗಳು ಮತ್ತು ಎಲ್ಲಾ ಆರು ವಲಯಗಳಲ್ಲಿ ಮತದಾನ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಡೊನಾಲ್ಡ್ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಫ್ಲೋರಿಡದಾ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಮೆರಿಕದ ಮತದಾರರು ತಮಗೆ ಜಯ ತಂದುಕೊಡಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಈ ನಡುವೆ ಕಮಲಾ ಹ್ಯಾರಿಸ್, ಇ-ಮೇಲ್ ಮುಖಾಂತರ ತಮ್ಮ ಹಕ್ಕು ಚಲಾಯಿಸಿದ್ದು, ಪ್ರತಿಯೊಬ್ಬ ಅಮೆರಿಕನ್ನರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ. ಚುನಾವಣಾ ದಿನದ ಮೊದಲೇ ೮೩ ದಶಲಕ್ಷಕ್ಕೂ ಅಧಿಕ ಮತದಾರರು ತಮ್ಮ ಮೇಲ್ ಅಥವಾ ಖುದ್ದಾಗಿ ಮತ ಚಲಾಯಿಸಿದ್ದಾರೆ.
ಮತದಾನ ಪೂರ್ಣಗೊಳ್ಳುತ್ತಿದ್ದಂತೆಯೇ ಚುನಾವಣಾ ಫಲಿತಾಂಶ ನಿರೀಕ್ಷಿಸಬಹುದಾದರೂ ಮುಂದಿನ ಅಮೆರಿಕಾ ಅಧ್ಯಕ್ಷರು ಯಾರೆಂದು ತಕ್ಷಣ ನಿರ್ಧಾರವಾಗುವುದಿಲ್ಲ. ಅಮೆರಿಕಾದಲ್ಲಿ, ಅಧ್ಯಕ್ಷರ ಚುನಾವಣಾ ಪ್ರಕ್ರಿಯೆಯು ಎಲೆಕ್ಟೋರಲ್ ಕಾಲೇಜ್ ಎಂಬ ಪರೋಕ್ಷ ಚುನಾವಣಾ ವ್ಯವಸ್ಥೆಯಿಂದ ನಡೆಯುವುದು. ಮುಂದಿನ ಅಧ್ಯಕ್ಷರಾಗಲು ಬಯಸುವ ಅಭ್ಯರ್ಥಿಗೆ ೫೩೮ ಎಲೆಕ್ಟೋರಲ್ ಕಾಲೇಜು ಮತಗಳಲ್ಲಿ ೨೭೦ ಅಥವಾ ಹೆಚ್ಚಿನ ಮತಗಳ ಸಂಪೂರ್ಣ ಬಹುಮತದ ಅಗತ್ಯವಿದೆ. ಮುಂದಿನ ವರ್ಷ ಜನವರಿ ೬ ರಂದು ಅಮೆರಿಕ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಚುನಾವಣಾ ಮತಗಳ ಎಣಿಕೆ ಕಾರ್ಯ ನಡೆಯಲಿದೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್