
ವಾಷಿಂಗ್ಟನ್, 06 ಜನವರಿ (ಹಿ.ಸ.) :
ಆ್ಯಂಕರ್ : ಇರಾನ್ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿಲುವು ಅಂತಾರಾಷ್ಟ್ರೀಯ ವಲಯದಲ್ಲಿ ಹೊಸ ಕುತೂಹಲಕ್ಕೆ ಕಾರಣವಾಗಿದೆ.
“ಮೇಕ್ ಇರಾನ್ ಗ್ರೇಟ್ ಅಗೆನ್” ಎಂಬ ವಾಕ್ಯವುಳ್ಳ ಟೋಪಿಯನ್ನು ಹಿಡಿದಿರುವ ಟ್ರಂಪ್ ಅವರ ಇತ್ತೀಚಿನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಗಮನ ಸೆಳೆದಿದೆ. ಆದರೆ, ಇರಾನ್‌ನಾದ್ಯಂತ ನಡೆಯುತ್ತಿರುವ ಸರ್ಕಾರ ವಿರೋಧಿ ಪ್ರತಿಭಟನೆಗಳ ಬಗ್ಗೆ ಟ್ರಂಪ್ ಇನ್ನೂ ಯಾವುದೇ ನೇರ ಪ್ರತಿಕ್ರಿಯೆ ನೀಡಿಲ್ಲ.
ಇರಾನ್ ಇಂಟರ್ನ್ಯಾಷನಲ್ ವರದಿಯ ಪ್ರಕಾರ, ಅಮೆರಿಕದ ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ ಅವರು ತಮ್ಮ ಎಕ್ಸ ಖಾತೆಯಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಏರ್ ಫೋರ್ಸ್ ಒನ್ ವಿಮಾನದಲ್ಲಿ ಇಬ್ಬರು ನಗುತ್ತಿರುವ ದೃಶ್ಯವಿದ್ದು, ಟ್ರಂಪ್ ಕೈಯಲ್ಲಿ ಆ ಟೋಪಿಯನ್ನು ಹಿಡಿದಿರುವುದು ಕಾಣಿಸುತ್ತದೆ.
ಈ ಹಿಂದೆ, ಜೂನ್ ತಿಂಗಳಲ್ಲಿ ನಡೆದ 12 ದಿನಗಳ ಯುದ್ಧದ ವೇಳೆ, ಇರಾನ್i ಆಡಳಿತಗಾರರು ದೇಶವನ್ನು “ಮತ್ತೆ ಶ್ರೇಷ್ಠರನ್ನಾಗಿ” ಮಾಡಲು ವಿಫಲರಾದರೆ ಆಡಳಿತ ಬದಲಾವಣೆ ಕುರಿತು ಪರಿಗಣಿಸಬೇಕೆಂದು ಟ್ರಂಪ್ ಹೇಳಿಕೆ ನೀಡಿದ್ದರು.
ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಉಲ್ಲೇಖಿಸಿ ಸೆನೆಟರ್ ಲಿಂಡ್ಸೆ ಗ್ರಹಾಂ,“ಸರ್ವಾಧಿಕಾರದ ವಿರುದ್ಧ ಎದ್ದು ನಿಂತಿರುವ ಇರಾನ್‌ನ ಧೈರ್ಯಶಾಲಿ ಜನರನ್ನು ದೇವರು ಆಶೀರ್ವದಿಸಿ ರಕ್ಷಿಸಲಿ” ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಈ ವಿದ್ಯಮಾನಗಳ ಕುರಿತು ಪ್ರತಿಕ್ರಿಯಿಸಿರುವ ವಾಷಿಂಗ್ಟನ್ ಇನ್‌ಸ್ಟಿಟ್ಯೂಟ್‌ನ ಇರಾನ್ ವ್ಯವಹಾರಗಳ ತಜ್ಞೆ ಹಾಲಿ ಡಾಗ್ರೆಸ್, ಈ ಫೋಟೋವನ್ನು ವಿಭಿನ್ನ ರೀತಿಯಲ್ಲಿ ಅರ್ಥೈಸಬಹುದಾದರೂ, ಕನಿಷ್ಠ ಮಟ್ಟದಲ್ಲಿ ಇರಾನ್ ವಿಷಯವು ಅಧ್ಯಕ್ಷ ಟ್ರಂಪ್ ಅವರ ಗಮನದಲ್ಲಿದೆ ಎಂಬುದನ್ನು ಇದು ಸೂಚಿಸುತ್ತದೆ ಎಂದು ಹೇಳಿದ್ದಾರೆ.
“ಈ ಹೊತ್ತಿನಲ್ಲಿ ಜಾಗತಿಕ ಗಮನ ಹೆಚ್ಚಿನ ಮಟ್ಟದಲ್ಲಿ ವೆನೆಜುವೆಲಾದ ಮೇಲೆ ನೆಟ್ಟಿದೆ. ಆದರೆ ಈ ಟೋಪಿಯೊಂದಿಗೆ ಫೋಟೋಗೆ ಪೋಸ್ ನೀಡುವ ಮೂಲಕ ಟ್ರಂಪ್ ಇರಾನ್‌ನತ್ತಲೂ ತಮ್ಮ ಗಮನವನ್ನು ಸೂಚಿಸಿದ್ದಾರೆ. ಆದರೂ, ಅಧ್ಯಕ್ಷರ ಮುಂದಿನ ನಡೆ ಯಾವಾಗಲೂ ಊಹಿಸಲು ಕಷ್ಟಕರ” ಎಂದು ಡಾಗ್ರೆಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದ ವೇಳೆ, ಇರಾನ್‌ನಾದ್ಯಂತ ಪ್ರತಿಭಟನಾಕಾರರು ದೇಶದ ಸರ್ವೋಚ್ಚ ನಾಯಕನ ವಿರುದ್ಧ ಘೋಷಣೆಗಳನ್ನು ಹಾಕುತ್ತಿರುವುದು ಗಮನಾರ್ಹವಾಗಿದೆ. ಪ್ರತಿಭಟನಾಕಾರರ ಮೇಲೆ ದೌರ್ಜನ್ಯ ನಡೆದರೆ ಅಮೆರಿಕ ಕಠಿಣ ಪ್ರತಿಕ್ರಿಯೆ ನೀಡಲಿದೆ ಎಂದು ಟ್ರಂಪ್ ಎರಡು ಬಾರಿ ಎಚ್ಚರಿಕೆ ನೀಡಿದ್ದಾರೆ.
ಮಾನವ ಹಕ್ಕುಗಳ ಕಾರ್ಯಕರ್ತರ ಸುದ್ದಿ ಸಂಸ್ಥೆಯ ಪ್ರಕಾರ, ಪ್ರತಿಭಟನೆಗಳ ಒಂಬತ್ತನೇ ದಿನದಂದು ಕನಿಷ್ಠ 19 ಪ್ರತಿಭಟನಾಕಾರರು ಹಾಗೂ ಒಬ್ಬ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa