
ಕ್ಯಾರಕಾಸ್, 07 ಜನವರಿ (ಹಿ.ಸ.) :
ಆ್ಯಂಕರ್ : ವೆನೆಜುವೆಲಾದ ರಾಜಕೀಯ ಭವಿಷ್ಯ ಕುರಿತು ಅನಿಶ್ಚಿತತೆ ಮುಂದುವರಿದಿರುವ ನಡುವೆ, ದೇಶದ ಪ್ರಮುಖ ಪ್ರತಿ ಪಕ್ಷಗಳ ಮೈತ್ರಿಕೂಟದ ನಾಯಕಿ ಹಾಗೂ ಪ್ರಜಾಪ್ರಭುತ್ವ ಪರ ಹೋರಾಟಗಾರ್ತಿ ಮಾರಿಯಾ ಕೊರಿನಾ ಮಚಾದೊ, ನಿವೃತ್ತ ರಾಜತಾಂತ್ರಿಕ ಎಡ್ಮಂಡೊ ಗೊನ್ಸಾಲೆಜ್ ವೆನೆಜುವೆಲಾವನ್ನು ಮುನ್ನಡೆಸಲು ಉತ್ತಮ ಆಯ್ಕೆಯಾಗಬಹುದು ಎಂದು ಹೇಳಿದ್ದಾರೆ.
ಸಿಬಿಎಸ್ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ಭದ್ರತಾ ಕಾರಣಗಳಿಂದಾಗಿ ಬಹಿರಂಗಪಡಿಸದ ಸ್ಥಳದಲ್ಲಿ ವಾಸಿಸುತ್ತಿರುವ ಮಚಾದೊ, 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ತಮಗೆ ಸ್ಪರ್ಧಿಸಲು ಅವಕಾಶ ನಿರಾಕರಿಸಲಾಯಿತು ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ, ವಿರೋಧ ಪಕ್ಷದ ಅಭ್ಯರ್ಥಿಯಾಗಿ ಎಡ್ಮಂಡೊ ಗೊನ್ಸಾಲೆಜ್ ಅವರನ್ನು ಕಣಕ್ಕಿಳಿಸಲಾಯಿತು ಎಂದು ಅವರು ವಿವರಿಸಿದರು.
ಮತ ಎಣಿಕೆಯಲ್ಲಿ ಅಕ್ರಮ ನಡೆದಿರುವ ಆರೋಪಗಳ ಹಿನ್ನೆಲೆಯಲ್ಲಿ, ಅಮೆರಿಕ ಸೇರಿದಂತೆ ಕೆಲವು ದೇಶಗಳು ಗೊನ್ಸಾಲೆಜ್ ಅವರನ್ನು ಚುನಾವಣೆಯ ವಿಜೇತರಾಗಿ ಗುರುತಿಸಿವೆ ಎಂದು ಮಚಾದೊ ಹೇಳಿದರು.
ವೆನೆಜುವೆಲಾದ ವಿರೋಧ ಪಕ್ಷಗಳು ದೇಶದ ಜನತೆಗೆ ಸೇವೆ ಸಲ್ಲಿಸಲು ಸಂಪೂರ್ಣವಾಗಿ ಸಿದ್ಧವಾಗಿವೆ ಎಂದು ಅವರು ಹೇಳಿದರು. ಪ್ರಜಾಪ್ರಭುತ್ವಾತ್ಮಕವಾಗಿ ಹೊಸ ಅಧ್ಯಕ್ಷೀಯ ಚುನಾವಣೆ ನಡೆದರೆ ತಾವೂ ಸ್ಪರ್ಧಿಸಲು ಸಿದ್ಧವಿರುವುದಾಗಿ ಮಚಾದೊ ಸ್ಪಷ್ಟಪಡಿಸಿದರು.
ಈ ನಡುವೆ, ಮಚಾದೊ ಅವರ ಆಪ್ತ ಮಿತ್ರೆಯಾಗಿರುವ ಡೆಲ್ಸಿ ರೊಡ್ರಿಗಸ್ ಹಂಗಾಮಿ ಅಧ್ಯಕ್ಷರಾಗಿದ್ದಾರೆ ಎಂಬ ಕುರಿತು ಪ್ರತಿಕ್ರಿಯಿಸಿದ ಅವರು, “ವೆನೆಜುವೆಲಾದ ಜನರು ರೊಡ್ರಿಗಸ್ ಅವರನ್ನು ನಂಬುವುದಿಲ್ಲ” ಎಂದು ಹೇಳಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳಿಗೂ ಮಚಾದೊ ಪ್ರತಿಕ್ರಿಯಿಸಿದ್ದು, ತಮ್ಮ ನಾಯಕತ್ವ ಸಾಮರ್ಥ್ಯದ ಕುರಿತು ಟ್ರಂಪ್ ಸಂಶಯ ವ್ಯಕ್ತಪಡಿಸಿದ್ದರೂ, ವೆನೆಜುವೆಲಾದಲ್ಲಿ ರಾಜಕೀಯ ಬದಲಾವಣೆಗೆ ಸಂಬಂಧಿಸಿದ ಅಮೆರಿಕದ ನಿಲುವಿಗೆ ಅವರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಕೆಲವೇ ವಾರಗಳ ಹಿಂದೆ ಇದು ಅಸಾಧ್ಯ ಎಂದು ಭಾವಿಸಲಾಗುತ್ತಿತ್ತು, ಆದರೆ ಇತ್ತೀಚಿನ ಬೆಳವಣಿಗೆಗಳು ಪ್ರಜಾಪ್ರಭುತ್ವ ಪುನರ್ ಸ್ಥಾಪನೆಗೆ ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮಾರಿಯಾ ಕೊರಿನಾ ಮಚಾದೊ ವೆನೆಜುವೆಲಾದ ಪ್ರಮುಖ ವಿರೋಧ ಪಕ್ಷದ ನಾಯಕಿಯಾಗಿದ್ದು, ಸರ್ವಾಧಿಕಾರದ ವಿರುದ್ಧದ ಹೋರಾಟ ಮತ್ತು ಪ್ರಜಾಪ್ರಭುತ್ವ ಪುನರ್ ಸ್ಥಾಪನೆಗಾಗಿ ನಡೆಸುತ್ತಿರುವ ಅವರ ಪ್ರಯತ್ನಗಳಿಗೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಈ ಹಿನ್ನೆಲೆ, ಅವರಿಗೆ 2025ರ ನೊಬೆಲ್ ಶಾಂತಿ ಪ್ರಶಸ್ತಿ ಸೇರಿದಂತೆ ಹಲವು ಅಂತರರಾಷ್ಟ್ರೀಯ ಗೌರವಗಳು ಲಭಿಸಿದ್ದಾಗಿ ವರದಿಯಾಗಿದೆ. ಜೊತೆಗೆ, 2024ರಲ್ಲಿ ವ್ಯಾಕ್ಲಾವ್ ಹ್ಯಾವೆಲ್ ಮಾನವ ಹಕ್ಕುಗಳ ಪ್ರಶಸ್ತಿ ಹಾಗೂ ಸಖರೋವ್ ಪ್ರಶಸ್ತಿಯನ್ನೂ ಅವರು ಪಡೆದಿದ್ದಾರೆ ಎನ್ನಲಾಗಿದೆ.
ಮಡುರೊ ಆಡಳಿತದ ಪತನದ ನಂತರ ತಾವು ಶೀಘ್ರದಲ್ಲೇ ವೆನೆಜುವೆಲಾಗೆ ಮರಳುವುದಾಗಿ ಮಚಾದೊ ಘೋಷಿಸಿದ್ದಾರೆ. ಅವರ ‘ದಿ ಫ್ರೀಡಂ ಮ್ಯಾನಿಫೆಸ್ಟೋ’ ಎಂಬ ಕೃತಿ ಶೀಘ್ರದಲ್ಲೇ ಪ್ರಕಟಗೊಳ್ಳಲಿದೆ. ಅವರು ‘ವೆಂಟೆ ವೆನೆಜುವೆಲಾ’ ಪಕ್ಷದ ಸ್ಥಾಪಕರಾಗಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa