ರಾಯಚೂರು, 29 ನವೆಂಬರ್ (ಹಿ.ಸ.) :
ಆ್ಯಂಕರ್ : ವಕ್ಫ್ ಆಸ್ತಿಗಳ ಒತ್ತುವರಿ ವಿಚಾರ ಮುಂದಿಟ್ಟುಕೊಂಡು ಯತ್ನಾಳ್ ನೇತೃತ್ವದ ತಂಡ ನಡೆಸುತ್ತಿರುವ ಹೋರಾಟ ಕೇವಲ ಅವರ ರಾಜಕೀಯ ಅಸ್ತಿತ್ವ ಪಡೆಯುವ ಉದ್ದೇಶದ್ದೇ ಹೊರತು ಯಾವುದೇ ಜನಪರ ಕಾಳಜಿಯನ್ನು ಹೊಂದಿಲ್ಲ. ಯತ್ನಾಳ್ ಅವರು ಮೊದಲು ತಮ್ಮ ಪಕ್ಷದಲ್ಲೇ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಹೋರಾಟ ನಡೆಸಿ ಯಶಸ್ವಿಯಾಗಲಿ *ಎಂದು ರಾಜ್ಯ ಕಾಂಗ್ರೆಸ್ ಯುವ ಮುಖಂಡರಾದ ರವಿ ಭೋಸರಾಜು ಹೇಳಿದ್ದಾರೆ.*
ರಾಯಚೂರಿನಲ್ಲಿ ‘ವಕ್ಫ್ ಭೂ ಕಬಳಿಕೆ ವಿರೋಧಿ ಜನಜಾಗೃತಿ ಹೋರಾಟ’ ಸಮಾವೇಶದಲ್ಲಿ ಯತ್ನಾಳ್ ನೇತೃತ್ವದ ತಂಡ ಕಾಂಗ್ರೆಸ್ ವಿರುದ್ದ ನಡೆಸಿದ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ವಕ್ಫ್ ಆಸ್ತಿಗಳ ಒತ್ತುವರಿ ತೆರವು ವಿಚಾರವಾಗಿ ರಾಜ್ಯ ಬಿಜೆಪಿ ನಾಯಕರ ಹೋರಾಟ ಬೂಟಾಟಿಕೆಯಿಂದ ಕೂಡಿದ್ದು, ಹಿಂದೂ-ಮುಸ್ಲಿಂ ಸೌಹಾರ್ದತೆಯನ್ನು ಹಾಳು ಮಾಡುವ ಹುನ್ನಾರ ಹೊಂದಿದೆ. ವಕ್ಫ್ ಆಸ್ತಿಗಳ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಹಾಗೂ ಬಿಜೆಪಿ ಲೋ ಕಮಾಂಡ್‌ನ ನಾಯಕರ ಮಧ್ಯೆ ಬಹಳಷ್ಟು ಭಿನ್ನಾಭಿಪ್ರಾಯವಿದೆ. ತಮ್ಮ ರಾಜಕೀಯ ಅಸ್ತಿತ್ವವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಈ ಹೋರಾಟಗಳನ್ನು ಮಾಡುತ್ತಿದ್ದಾರೆಯೇ ಹೊರತು ಯಾವುದೇ ಜನರ ಕಾಳಜಿಗೋಸ್ಕರ ಅಲ್ಲ.
ಬಸನಗೌಡ ಪಾಟೀಲ ಯತ್ನಾಳ್ ಅವರೇ, ಈ ಹಿಂದೆ ನಿಮ್ಮ ಪಕ್ಷದ ಮುಖಂಡರಾದ ಬಿ. ಎಸ್. ಯಡಿಯೂರಪ್ಪರವರು ಹಾಗೂ ಬಸವರಾಜ ಬೊಮ್ಮಾಯಿ ಅವರು ರಾಜ್ಯಾದ್ಯಂತ ಎರಡು ಸಾವಿರಕ್ಕೂ ಹೆಚ್ಚು ರೈತರು ಮತ್ತು ಭೂಮಾಲೀಕರಿಗೆ ನೋಟಿಸ್ ನೀಡಿದ್ದಾಗ ಎಲ್ಲಿದ್ದೀರಿ? ಯಾವ ಬಿಲದಲ್ಲಿ ಅಡಗಿಕೊಂಡಿದ್ದೀರಿ? ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ 2008ರಲ್ಲಿ ಅಧಿಕಾರಕ್ಕೆ ಏರಿದ ಕೆಲವೇ ದಿನಗಳಲ್ಲಿ ವಕ್ಫ್ ಆಸ್ತಿ ಅಕ್ರಮ ಪರಭಾರೆ ಮತ್ತು ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿತ್ತು. ಆಗ ಏನು ಮಾಡುತ್ತಿದ್ದೀರಿ ಯತ್ನಾಳ್ ಅವರೇ? ಆಗ ನಿಮ್ಮ ರೈತರ ಮೇಲಿನ ಕಾಳಜಿ, ಹಿಂದೂಗಳ ಮೇಲಿನ ಪ್ರೀತಿ ಯಾವುದೂ ಇರಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ, ನಿಮ್ಮ ಆರಾಧ್ಯ ದೈವ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ವಕ್ಫ್ ಆಸ್ತಿ ರಕ್ಷಣೆ ವಿಚಾರವಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಘೋಷಿಸಿದಾಗ ನೀವೇನು ಮಾಡುತ್ತಿದ್ದೀರಿ? ಆಗ ನಿಮ್ಮ ವಿವೇಕ ಸತ್ತು ಹೋಗಿತ್ತೆ? ಆಗ ನಿಮ್ಮ ಹಿಂದೂ ಪರ ಕಳಕಳಿ ಇಂಗಿ ಹೋಗಿತ್ತೆ? ಎಂದು ವ್ಯಂಗ್ಯವಾಡಿದ್ದಾರೆ.
ನೀವೆಷ್ಟೇ ಸುಳ್ಳು ಹೇಳಿದರೂ, ಮುಸ್ಲಿಮರ ವಿರುದ್ಧ ದ್ವೇಷ ಬಿತ್ತಿದರೂ ಹಿಂದೂ-ಮುಸ್ಲಿಂ ಸೌಹಾರ್ದತೆಯನ್ನು ಕದಡಲು ಸಾಧ್ಯವಿಲ್ಲ. ನಿಮ್ಮ ಪ್ರತಿ ನಡೆಯೂ ಕುತಂತ್ರದಿಂದ ಕೂಡಿದೆ ಎಂಬುದು ಜನರಿಗೆ ಗೊತ್ತಾಗಿದೆ. ಅದಕ್ಕಾಗಿ ನೀವು ಹೋದಲ್ಲೆಲ್ಲಾ ಜನ ವೇದಿಕೆಯಿಂದಲೇ ಕೆಳಗಿಳಿಸಿ ಹೊರಗೆ ಅಟ್ಟುತ್ತಿದ್ದಾರೆ. ಇನ್ನೂ ರಾಯಚೂರು ಜಿಲ್ಲಾ ಬಿಜೆಪಿ ಅಧ್ಯಕ್ಷರು ಹಾಗೂ ಸ್ಥಳೀಯ ಶಾಸಕರಾದ ಶಿವರಾಜ್ ಪಾಟೀಲ್ ನಿಮ್ಮ ಹೋರಾಟದಲ್ಲಿ ಪಾಲ್ಗೊಳ್ಳದೇ ಇರುವ ಮೂಲಕ ನಿಮ್ಮಲ್ಲೇ ಇರುವ ದ್ವಂದ್ವ ನೀತಿಯನ್ನು ಎತ್ತಿ ತೋರಿಸಿದ್ದಾರೆ. ಹಾಗೆಯೇ, ನಿಮ್ಮದೆ ಪಕ್ಷ ಅಧಿಕಾರದಲ್ಲಿರುವ ಮಹರಾಷ್ಟ್ರ ಸರಕಾರ ವಕ್ಫ್ ಹಿತಾಸಕ್ತಿಗೆ 10 ಕೋಟಿ ರೂಪಾಯಿಗಳ ಹಣ ಮೀಸಲಿಡುವ ಮೂಲಕ ನಿಮ್ಮ ದ್ವಿಮುಖ ನೀತಿ ಬಯಲಾಗಿದೆ. ಬಿಜೆಪಿ ಎರಡು ಮುಖದ ಹಾವು ಎನ್ನುವುದು ಇಲ್ಲಿ ಸ್ಪಷ್ಟವಾಗಿದೆ.
ತೋರಿಕೆಗೆ ಸಂವಿಧಾನಕ್ಕೆ ನಮಸ್ಕರಿಸಿ ಬಳಿಕ ಸಂವಿಧಾನದ ಆಶಯಗಳಿಗೆ ಇರಿಯುವ ಬಿಜೆಪಿಗರ ಹೀನಬುದ್ಧಿಯ ಅರಿವು ಜನರಿಗಾಗುತ್ತಿದೆ. ನಿಜಕ್ಕೂ ನಿಮಗೆ ಸಂವಿಧಾನದ ಮೇಲೆ ಗೌರವ ಇಲ್ಲ, ಸಂವಿಧಾನದ ಬಗ್ಗೆ ಮಾತನಾಡುವ ಕನಿಷ್ಠ ಅರ್ಹತೆಯೂ ನಿಮಗೇ ಇಲ್ಲ, ಸಮುದಾಯಗಳ ಮಧ್ಯೆ ಹುಳಿ ಹಿಂಡುವ ಮೂಲಕ ರಾಜಕೀಯ ಅಸ್ತಿತ್ವವನ್ನು ಪಡೆಯುವ ನಿಮ್ಮ ಬೂಟಾಟಿಕೆಯನ್ನು ಮೊದಲು ನಿಲ್ಲಿಸಿ, ಇನ್ನಾದರೂ ಘನತೆಯ ರಾಜಕಾರಣವನ್ನ ಮಾಡಿ ಎಂದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್