ನವದೆಹಲಿ, 18 ನವೆಂಬರ್ (ಹಿ.ಸ.) :
ಆ್ಯಂಕರ್ : ಎಲೊನ್ ಮಸ್ಕ್ ಮಾಲೀಕತ್ವದ ಬಾಹ್ಯಾಕಾಶ ಸಂಸ್ಥೆ- ಸ್ಪೇಸ್ ಎಕ್ಸ್ ಇದೇ ಮಂಗಳವಾರ ಅಮೆರಿಕಾದ ಕೇಪ್ ಕೆನವೆರಲ್‌ನಿಂದ ಭಾರತದ ಭಾರಿ ತೂಕದ ಸಂವಹನ ಉಪಗ್ರಹ ಜಿಸ್ಯಾಟ್-೨೦ ಅನ್ನು ಉಡಾವಣೆ ಮಾಡಲಿದೆ.
ಈ ಕುರಿತು ಮಾಹಿತಿ ನೀಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಎಸ್.ಸೋಮನಾಥ್, ಸ್ಪೇಸ್ ಎಕ್ಸ್‌ನ ಫಾಲ್ಕಾನ್ ೯, ಇಸ್ರೋದ ಜಿಸ್ಯಾಟ್-೨೦ ಅನ್ನು ಇದೇ ೧೯ ರಂದು ಉಡಾವಣೆ ನಡೆಸಲಿದೆ ಎಂದು ಅವರು ವಿವರಿಸಿದ್ದಾರೆ.
ಉಪಗ್ರಹವು ೧೪ ವರ್ಷಗಳವರೆಗೆ ಕಾರ್ಯಾಚರಣೆ ನಡೆಸುವ ನಿರೀಕ್ಷೆಯಿದೆ. ಇದು ಭಾರತದ ಮೂಲೆ ಮೂಲೆಗೂ ಇಂಟರ್ನೆಟ್ ಸೇರಿದಂತೆ ಪ್ರಮುಖ ಸೇವೆಗಳನ್ನು ಒದಗಿಸಲಿದೆ. ೪ ಸಾವಿರದ ೭೦೦ ಕೆ.ಜಿ ತೂಕದ ಜಿಸ್ಯಾಟ್-೨೦, ಭಾರತದ ಅತ್ಯಂತ ಭಾರವಾದ ಸಂವಹನ ಉಪಗ್ರಹಗಳಲ್ಲಿ ಒಂದಾಗಿದೆ. ಜಿಸ್ಯಾಟ್-೨೦ ಬಾಹುಬಲಿ ಎಂದೇ ಹೆಸರುವಾಸಿಯಾಗಿದ್ದು, ಭಾರೀ ತೂಕದ ಕಾರಣ ಉಡಾವಣೆಗೆ ಸ್ಪೇಸ್ ಎಕ್ಸ್ ಅನ್ನು ಆಯ್ಕೆ ಮಾಡಲಾಗಿದೆ.
ಇಸ್ರೋದ ವಾಣಿಜ್ಯ ವಿಭಾಗದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಧಾಕೃಷ್ಣನ್ ದುರೈರಾಜ್ ಮಾತನಾಡಿ, ಸ್ಪೇಸ್ ಎಕ್ಸ್‌ನ ಫಾಲ್ಕನ್ ೯ ರಾಕೆಟ್‌ನಲ್ಲಿ ಭಾರೀ ತೂಕದ ಉಪಗ್ರಹವನ್ನು ಉಡಾವಣೆ ಮಾಡಲು ಇಸ್ರೋ ಉತ್ತಮ ಒಪ್ಪಂದ ಮಾಡಿಕೊಂಡಿದೆ ಎಂದು ಹೇಳಿದ್ದಾರೆ.
ಭಾರತ ಈವರೆಗೆ ಭಾರೀ ಗಾತ್ರದ ಉಪಗ್ರಹಗಳ ಉಡಾವಣೆಗೆ ಫ್ರೆಂಚ್ ಉಡಾವಣೆ ಸೇವಾ ಪೂರೈಕೆದಾರ ಏರಿಯಲ್ ಸ್ಪೇಸ್ ಅನ್ನು ಅವಲಂಬಿಸಿತ್ತು. ಪ್ರಸ್ತುತ ಅದು ಯಾವುದೇ ಕಾರ್ಯಾಚರಣೆಯ ರಾಕೆಟ್‌ಗಳನ್ನು ಹೊಂದಿಲ್ಲದ ಕಾರಣ ಭಾರತ ಸ್ಪೇಸ್ ಎಕ್ಸ್‌ನೊಂದಿಗೆ ಹೋಗಿರುವುದು ವಿಶ್ವಾಸಾರ್ಹ ಆಯ್ಕೆಯಾಗಿದೆ.
ಸ್ಪೇಸ್ ಎಕ್ಸ್‌ನ ಭಾರಿ ಗಾತ್ರದ ಉಪಗ್ರಹಗಳನ್ನು ಹೊತ್ತೊಯ್ಯಬಲ್ಲ ಫಾಲ್ಕಾನ್ ೯ ರಾಕೆಟ್ ೮ ಸಾವಿರದ ೩೦೦ ಕೆ.ಜಿ ಅಥವಾ ೮.೩ ಟನ್‌ಗಳಷ್ಟು ತೂಕದ ಪೇಲೋಡ್‌ಗಳನ್ನು ಭೂಸ್ಥಿರ ಕಕ್ಷೆಗೆ ಇಳಿಸುವ ಸಾಮರ್ಥ್ಯ ಹೊಂದಿದೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್