ಬೆಂಗಳೂರು, 18 ನವೆಂಬರ್ (ಹಿ.ಸ.) :
ಆ್ಯಂಕರ್ : ಕನಕದಾಸ ಜಯಂತಿಯು ಪೂಜ್ಯ ಸಂತ, ಕವಿ ಮತ್ತು ದಾರ್ಶನಿಕ ಕನಕದಾಸರನ್ನು ಗೌರವಿಸುವುದಕ್ಕಾಗಿ ಪ್ರತೀ ವರ್ಷ ನವೆಂಬರ್ 18ರಂದು ಆಚರಿಸಲಾಗುವ ಪ್ರಮುಖ ದಿನವಾಗಿದೆ.
ಅಪೂರ್ವ ಕೊಡುಗೆ ನೀಡಿದ ಕನಕದಾಸರ ʼಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ, ಕುಲದ ನೆಲೆಯನೆನಾದರೂ ಬಲ್ಲಿರಾ...ʼ ಎಂಬ ಕೀರ್ತನೆ ಸದಾಕಾಲಕ್ಕೂ ಪ್ರಸ್ತುತ.
ಕೆಲವರ ಪ್ರಕಾರ, 2024 ರ ಕನಕದಾಸ ಜಯಂತಿಯು 530 ರ ವಾರ್ಷಿಕೋತ್ಸವವಾದರೆ, ಇನ್ನು ಕೆಲವರ ಪ್ರಕಾರ, 525ರ ವಾರ್ಷಿಕೋತ್ಸವವಾಗಿದೆ. ಕನಕದಾಸರು ಕರ್ನಾಟಕದಲ್ಲಿ 15-16ನೇ ಶತಮಾನದಲ್ಲಿ ಜನಪ್ರಿಯವಾಗಿದ್ದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರಾಗಿದ್ದಾರು.
ದಾಸಶ್ರೇಷ್ಠ ಕನಕದಾಸರು 1509 ರಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ಬಚ್ಚಮ್ಮ ಮತ್ತು ಬೀರಪ್ಪ ಎಂಬ ದಂಪತಿಯ ಮಗನಾಗಿ ಜನಿಸಿದರು. ಕನಕದಾಸರ ಮೂಲ ಹೆಸರು ತಿಮ್ಮಪ್ಪನಾಯಕ. ಬಾಡ ಗ್ರಾಮ ಕನಕದಾಸರ ಜನ್ಮಭೂಮಿಯಾದರೆ, ಬ್ಯಾಡಗಿ ತಾಲೂಕಿನ ಕಾಗಿನೆಲೆ ಕನಕದಾಸರ ಕರ್ಮಭೂಮಿ. ವಿಜಯನಗರ ಅರಸರ ಆಡಳಿತದಲ್ಲಿ ದಂಡನಾಯಕನಾಗಿದ್ದ ತಿಮ್ಮಪ್ಪ ನಾಯಕನಿಗೆ ಚಿನ್ನ ಸಿಕ್ಕಿದ್ದರಿಂದ ಕನಕನಾಗುತ್ತಾನೆ. ನಂತರ ಯುದ್ಧದಲ್ಲಿ ಪಾಲ್ಗೊಂಡು ಅಲ್ಲಿ ಕಂಡ ಹಿಂಸೆಯಿಂದ ಕನಕ ಕನಕದಾಸರಾಗುತ್ತಾರೆ ಎಂದು ಇತಿಹಾಸದಲ್ಲಿ ಉಲ್ಲೇಖವಾಗಿದೆ.
ಕನಕದಾಸರ ಕಾವ್ಯಗಳು ಕರ್ನಾಟಕ ಶೈಲಿಯಲ್ಲಿ ರಚನೆಯಾದ ಕಾವ್ಯಗಳಾಗಿವೆ. ಅವರು ತಮ್ಮ ಎಲ್ಲಾ ಹಾಡುಗಳಿಗೆ ‘ಕಾಗಿನೆಲೆ ಆದಿಕೇಶವ’ ಎಂಬ ಕಾವ್ಯನಾಮವನ್ನು ಬಳಸಿದ್ದಾರೆ. ನಳಚರಿತ್ರೆ, ಹರಿಭಕ್ತಿಸಾರ, ನೃಸಿಂಹಸ್ತವ, ರಾಮಧಾನ್ಯಚರಿತ್ರೆ ಮತ್ತು ಮೋಹನತರಂಗಿಣಿ ಅವರ ಕೆಲವು ಪ್ರಸಿದ್ಧ ಕೃತಿಗಳು.
ಕನಕದಾಸರು ಶ್ರೀಕೃಷ್ಣನ ಪರಮ ಭಕ್ತರಾದ್ದರಿಂದ ಅವರಿಗೂ ಉಡುಪಿಯ ಶ್ರೀಕೃಷ್ಣ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಕನಕದಾಸರು ಮೂಲತಃ ಕುರುಬ ಸಮುದಾಯಕ್ಕೆ ಸೇರಿದ ವ್ಯಕ್ತಿಯಾಗಿದ್ದರು. ಅಂದಿನ ಸಮಾಜ ಜಾತಿಗೆ ಹೆಚ್ಚು ಪ್ರಾಧಾನ್ಯತೆಯನ್ನು ನೀಡುತ್ತಿದ್ದರಿಂದ ಅವರನ್ನು ದೇವಸ್ಥಾನದ ಒಳಗೆ ಪ್ರವೇಶಿಸಲು ಬಿಡಲಿಲ್ಲ. ಕನಕದಾಸರು ಶ್ರೀಕೃಷ್ಣನನ್ನು ಎಷ್ಟು ಪ್ರೀತಿಸುತ್ತಿದ್ದರೋ ಅಷ್ಟೇ ಶ್ರೀಕೃಷ್ಣನು ಅವರನ್ನು ಪ್ರೀತಿಸುತ್ತಿದ್ದ ಕಾರಣ ಕೃಷ್ಣನ ದರ್ಶನ ಭಾಗ್ಯ ಪಡೆಯದೇ ಹತಾಶೆಯಿಂದ ದೇವಸ್ಥಾನದಿಂದ ಹೊರಡುತ್ತಿದ್ದ ಕನಕದಾಸರಿಗೆ ಶ್ರೀಕೃಷ್ಣನು ತಿರುಗಿ ಗೋಡೆಯ ಒಂದು ಕಿಂಡಿಯ ಮೂಲಕ ತನ್ನ ದರ್ಶನವನ್ನು ಕರುಣಿಸುತ್ತಾನೆ. ಇಂದಿಗೂ ಕೃಷ್ಣನ ದೇವಸ್ಥಾನದ ಮುಖ್ಯ ಬಾಗಿಲು ಶಾಶ್ವತವಾಗಿ ಮುಚ್ಚಿದ್ದು, ಶ್ರೀಕೃಷ್ಣನ ವಿಗ್ರಹವು ದೇವಸ್ಥಾನದ ಹಿಂಭಾಗಕ್ಕೆ ಮುಖ ಮಾಡಿದೆ ಎಂದು ಹೇಳಲಾಗುತ್ತದೆ. ಮೇಲಾಗಿ, ಗೋಡೆಯಲ್ಲಿನ ಬಿರುಕು ಅಂದಿನಿಂದ ಕನಕನ ಕಿಟಕಿ ಎಂಬರ್ಥದ ‘ಕನಕನ ಕಿಂಡಿ’ ಎಂದು ಹೆಸರನ್ನು ಪಡೆದುಕೊಂಡಿತು. ಇಂದಿಗೂ ಭಕ್ತರು ಈ ಕಿಟಕಿಯ ಮೂಲಕ ಶ್ರೀಕೃಷ್ಣನನ್ನು ಭೇಟಿಯಾಗಿ ದರ್ಶನವನ್ನು ಪಡೆದುಕೊಳ್ಳುತ್ತಾರೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್