ಆದಾಯ ತೆರಿಗೆ ನಿಯಮದಲ್ಲಿ ಬದಲಾವಣೆ ಆಗಬೇಕಾ? ನೀವೂ ಸಲಹೆ ನೀಡಿ
ಆದಾಯ ತೆರಿಗೆ ಕಾಯ್ದೆಯಲ್ಲಿ ಅಮೂಲಾಗ್ರ ಪರಿಷ್ಕರಣೆಗೆ ಸರ್ಕಾರ ನಿರ್ಧಾರ; ಪೋರ್ಟಲ್​ನಲ್ಲಿ ಸಾರ್ವಜನಿಕರ ಅಭಿಪ್ರಾಯಕ್ಕೂ ಅವಕಾಶ
Income tax act


ನವದೆಹಲಿ, 09 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಆದಾಯ ತೆರಿಗೆ ಕಾಯ್ದೆಯನ್ನು ಸಾಧ್ಯವಾದಷ್ಟೂ ಸರಳಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆ ನಿಟ್ಟಿನಲ್ಲಿ ಕೇಂದ್ರೀಯ ನೇರ ತೆರಿಗೆ ಮಂಡಳಿ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತದೆ. ಆದಾಯ ತೆರಿಗೆ ಕಾಯ್ದೆಯಲ್ಲಿ ಬಳಸಲಾಗಿರುವ ಭಾಷೆಯನ್ನು ಸರಳಗೊಳಿಸುವುದು; ವ್ಯಾಜ್ಯ ಕಡಿಮೆಗೊಳಿಸುವುದು; ನಿಯಮ ನಿಬಂಧನೆಗಳನ್ನು ಸರಳಗೊಳಿಸುವುದು; ನಿರುಪಯುಕ್ತ ಅಂಶಗಳನ್ನು ತೆಗೆದುಹಾಕುವುದು, ಈ ಅಂಶಗಳನ್ನು ಪರಿಶೀಲಿಸಿ ಸುಧಾರಣೆಗಳನ್ನು ತರಲು ಯತ್ನಿಸಲಾಗುತ್ತಿದೆ. ಈ ಕಾರ್ಯಕ್ಕಾಗಿ ಕೇಂದ್ರೀಯ ನೇರ ತೆರಿಗೆ ಮಂಡಳಿ ಒಂದು ಆಂತರಿಕ ಸಮಿತಿಯನ್ನು ರಚಿಸಿದೆ. ಹಾಗೆಯೇ, ಸಾರ್ವಜನಿಕರೂ ಕೂಡ ಈ ಕಾರ್ಯದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಆದಾಯ ತೆರಿಗೆ ಕಾಯ್ದೆ ಪರಿಷ್ಕರಣೆಗೆ ಸಾರ್ವಜನಿಕರಿಂದ ಸಲಹೆಗಳನ್ನು ಯಾಚಿಸಲಾಗಿದೆ. ಆದಾಯ ತೆರಿಗೆ ಪೋರ್ಟಲ್​ನಲ್ಲಿ ಇದಕ್ಕೆ ಅವಕಾಶ ಕೊಡಲಾಗಿದೆ. ನಾಲ್ಕು ನಿರ್ದಿಷ್ಟ ವಿಚಾರದ ಬಗ್ಗೆ ಮಾತ್ರವೇ ಸಾರ್ವಜನಿಕರು ಸಲಹೆ ನೀಡಲು ಅವಕಾಶ ಹೊಂದಿರುತ್ತಾರೆ.

ಆದಾಯ ತೆರಿಗೆ ಪೋರ್ಟಲ್​ನ ಮುಖ್ಯಪುಟದಲ್ಲಿ ಎಡಬದಿಯಲ್ಲಿರುವ ಕ್ವಿಕ್ ಲಿಂಕ್ಸ್ ಪಟ್ಟಿಯಲ್ಲಿ ಮೊದಲಿಗೆ ‘ಸಜೆಶನ್ಸ್ ಫಾರ್ ರೀವ್ಯಾಂಪ್​ ಆಫ್ ಐಟಿ ಆ್ಯಕ್ಟ್’ ಕಾಣಬಹುದು. ಅದರ ನೇರ ಲಿಂಕ್ ಇಲ್ಲಿದೆ: eportal.incometax.gov.in/iec/foservices/#/pre-login/ita-

ಸಾರ್ವಜನಿಕರು ಈ ಪೋರ್ಟಲ್ ಲಿಂಕ್ ಬಳಸಿ ತಮ್ಮ ಅನಿಸಿಕೆಗಳನ್ನು ಪೋಸ್ಟ್ ಮಾಡಬಹುದು. ಮೊದಲಿಗೆ ಮೊಬೈಲ್ ನಂಬರ್ ನಮೂದಿಸಿ ಅದನ್ನು ಒಟಿಪಿ ಮೂಲಕ ದೃಢೀಕರಿಸಬೇಕು. ಆ ಬಳಿಕ ಆದಾಯ ತೆರಿಗೆ ಕಾಯ್ದೆಯಲ್ಲಿರುವ ಯಾವುದಾದರೂ ನಿಯಮದಲ್ಲಿ ಬದಲಾವಣೆ ಆಗಬೇಕಿದ್ದರೆ ಅದನ್ನು ನಿರ್ದಿಷ್ಟಪಡಿಸಬೇಕು.

ಕಳೆದ ಬಾರಿಯ ಬಜೆಟ್​ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆದಾಯ ತೆರಿಗೆ ಕಾಯ್ದೆಯಲ್ಲಿ ವ್ಯಾಜ್ಯಗಳು ಮತ್ತು ವಿವಾದಗಳು ತಲೆದೋರದ ಹಾಗೆ ಸ್ಪಷ್ಟತೆ ತರುವ ಗುರಿ ಇದೆ ಎಂದು ಹೇಳಿದ್ದರು. 2025ರ ಜನವರಿಯೊಳಗೆ ಈ ಸುಧಾರಣೆ ಆಗಬೇಕೆಂದು ಅವರು ಗುರಿ ನಿಗದಿ ನಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande