ಧಾರವಾಡ ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ
ಧಾರವಾಡ, 18 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಅಕ್ಟೋಬರ ಆರಂಭದಿಂದ ನಿರಂತರವಾಗಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಸಾಕಷ್ಟು ಹಾನಿ ಆಗಿದೆ. ಈ ಕುರಿತು ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಇಂದು ಭೇಟಿ ನೀಡಿ, ಪರಿಶೀಲಿಸಿದರು. ಪ್ರವಾಸ ಸಂದರ್ಭದಲ್ಲಿ ವಿವಿಧ ಗ್ರಾಮಗಳ ರೈ
Visit


ಧಾರವಾಡ, 18 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಅಕ್ಟೋಬರ ಆರಂಭದಿಂದ ನಿರಂತರವಾಗಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಸಾಕಷ್ಟು ಹಾನಿ ಆಗಿದೆ. ಈ ಕುರಿತು ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಇಂದು ಭೇಟಿ ನೀಡಿ, ಪರಿಶೀಲಿಸಿದರು.

ಪ್ರವಾಸ ಸಂದರ್ಭದಲ್ಲಿ ವಿವಿಧ ಗ್ರಾಮಗಳ ರೈತರನ್ನು, ಜನಪ್ರತಿನಿಧಿಗಳನ್ನು ಮತ್ತು ಸಾರ್ವಜನಿಕರನ್ನು ಭೇಟಿ ಆಗಿ ಅಹವಾಲು ಕೇಳಿದರು. ಮನವಿ ಸ್ವೀಕರಿಸಿದರು. ಬೆಳೆಹಾನಿ ಬಗ್ಗೆ ತುರ್ತಾಗಿ ಜಂಟಿ ಸಮೀಕ್ಷೆ ಮಾಡಲು ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ. ಮನೆ ಹಾನಿ ಮತ್ತು ಮನೆಗಳಿಗೆ ನೀರು ನುಗ್ಗಿ ಹಾನಿ ಆಗಿರುವ ಬಗ್ಗೆ ವರದಿ ಸಲ್ಲಿಸಿ, ಅದಕ್ಕೆ ಪರಿಹಾರ ಕ್ರಮ ಜರುಗಿಸಲು ಗ್ರಾಮ ಪಂಚಾಯತ ಮತ್ತು ತಹಶೀಲ್ದಾರ ಅವರಿಗೆ ಸೂಚಿಸಲಾಗಿದೆ ಎಂದು ಗ್ರಾಮಸ್ಥರ ಭೇಟಿ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.

ತುಪರಿ ಹಳ್ಳಕ್ಕೆ ಅಯಟ್ಟಿ ಮತ್ತು ಶಿರೂರ ಮದ್ಯ ನಿರ್ಮಿಸಿರುವ ಸೇತುವೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಶಿರೂರ ಹಾಗೂ ಆಯಟ್ಟಿ ಗ್ರಾಮಸ್ಥರಿಂದ ಮನವಿ ಸ್ವೀಕರಿಸಿದರು. ಸೇತುವೆ ಎತ್ತರಗೊಳಿಸಲು ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಹಾರೊಬೆಳವಡಿ ಆಯಟ್ಟಿ ರಸ್ತೆ ಅಭಿವೃದ್ಧಿ ಬಗ್ಗೆ ಪರಿಶೀಲಿಸುವದಾಗಿ ಅವರು ತಿಳಿಸಿದರು. ನಂತರ ಅವರು ಆಯಟ್ಟಿ ಗ್ರಾಮದ ಫಕ್ಕೀರಪ್ಪ ಜೋಗನ್ನವರ ತೋಟದಲ್ಲಿ ಹಳ್ಳದ ನೆರೆ ಹಾಗೂ ಅತಿ ಮಳೆಯಿಂದಾಗಿ ಹಾಳಾಗಿರುವ ಹತ್ತಿ ಬೆಳೆ ಮತ್ತು ಕಡ್ಲಿ ಬೆಳೆ ಪರಿಶೀಲಿಸಿದರು.

ತುಪ್ಪರಿಹಳ್ಳದ ನೆರೆ ಹಾವಳಿಯಿಂದ ಶಿರೂರ ಗ್ರಾಮದ ಶಾಲೆ ಆವರಣ ಹಾಗೂ 100 ಕ್ಕೂ ಹೆಚ್ಚು ಮನೆಗಳಿಗೆ ನೀರು ಬಂದಿದೆ. ಇದನ್ನು ತೆರವುಗೊಳಿಸಿ, ಸ್ವಚ್ಛಗೊಳಿಸಬೇಕು. ಹಾಳಾಗಿರುವ ರಸ್ತೆ ದುರಸ್ತಿ ಮಾಡಬೇಕು. ಹೆಚ್ಚುವರಿ ಆಗಿ ಹೆಸರು ಕಾಳು ಖರೀದಿ ಮಾಡಬೇಕು ಮತ್ತು ಬೆಳೆ ಹಾನಿ ಪರಿಹಾರ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಶಾಲಾ ಆವರಣ, ಮನೆಗಳಿಗೆ ನೀರು ಬಂದಿರುವ ಕುರಿತು ಸ್ವಚ್ಛತೆ ಕೈಗೊಳ್ಳು ತಾಲ್ಲೂಕು ಪಂಚಾಯತ ಇಓ ಹಾಗೂ ಬಿಇಓ ಅವರಿಗೆ ಈಗಾಗಲೇ ಪಿ.ಆರ್.ಇ.ಡಿ ವಿಭಾಗಗಳಿಗೆ ತಿಳಿಸಲಾಗಿದೆ ಎಂದರು. ಬೆಳೆ ಹಾನಿ ಕುರಿತು ಜಂಟಿ ಸಮೀಕ್ಷೆ ಮಾಡಿ ಅದರ ವರದಿಯನ್ನು ಗ್ರಾಮ ಪಂಚಾಯತ, ತಹಶೀಲ್ದಾರ ಕಚೇರಿ, ರೈತ ಸಂಪರ್ಕ ಕೇಂದ್ರ, ಜಿಲ್ಲಾಧಿಕಾರಿಗಳ ಕಚೇರಿ ವೆಬ್‍ಸೈಟದಲ್ಲಿ ಪ್ರಕಟಿಸಲಾಗುತ್ತದೆ. ಹೆಸರು ಬಿಟ್ಟು ಹೋಗಿದ್ದರೆ ರೈತರು ಆಕ್ಷೇಪಣೆ ಸಲ್ಲಿಸಲು ಒಂದು ವಾರದ ಅವಕಾಸ ನೀಡಲಾಗಿರುತ್ತದೆ. ರೈತರು ಪರಿಶೀಲಿಸಿ, ತಮ್ಮ ಹೆಸರು, ಜಮೀನು ಬೆಳೆಹಾನಿ ವಿವರ ಪ್ರಕಟವಾಗಿರದಿದ್ದಲ್ಲಿ ಮನವಿ ಆಕ್ಷೇಪಣೆ ಸಲ್ಲಿಸಬೇಕು. ಮರು ಸಮೀಕ್ಷೆ ಮಾಡಿ ಅರ್ಹವಿದ್ದಲ್ಲಿ ಪಟ್ಟಿಗೆ ಸೆರ್ಪಡೆ ಮಾಡುವದಾಗಿ ಅವರು ತಿಳಿಸಿದರು.

ಅಮ್ಮಿನಭಾವಿ-ಶಿರೂರ ರಸ್ತೆ ನಿರ್ಮಾಣದ ಬಗ್ಗೆ ದೂರುಗಳಿದ್ದಲ್ಲಿ ಲಿಖಿತವಾಗಿ ಸಲ್ಲಿಸಿದರೆ ಪರಿಶೀಲಿಸಿ, ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು. ಶಿರೂರ ಗ್ರಾಮ ಪಂಚಾಯತರ ಉಪಾಧ್ಯಕ್ಷ ಸಂಗನಗೌಡ ತೋಟದ, ಸದಸ್ಯ ಈರಣ್ಣ ಕಡೆಮನಿ, ರೈತ ಮುಖಂಡ ಮಲ್ಲನಗೌಡ ಸೇರಿದಂತೆ ಇತರರು ಇದ್ದರು.

ನಿರಂತರ ಮಳೆಯಿಂದಾಗಿ ಹಾನಿಗಿಡಾಗಿರುವ ತೀರ್ಲಾಪುರ-ಮೊರಬ ಸಂಪರ್ಕ ರಸ್ತೆ ಪರಿಶೀಲಿಸಿ ಪಿಡಬ್ಲ್ಯೂಡಿ ಸೆಕ್ಷನ್ ಆಫೀಸರ ಕಲ್ಮೇಶ ಅವರಿಗೆ ತಕ್ಷಣ ದುರಸ್ತಿಗೆ ಕ್ರಮವಹಿಸಲು ಸೂಚಿಸಿದರು. ಇಲಾಖೆ ಅನುದಾನ ಬಳಿಸಿ, ಜನರ ಸಂಚಾರಕ್ಕೆ ಅಡಚಣೆ ಆಗದಂತೆ ದುರಸ್ತಿ ಕೈಗೊಳ್ಳಲು ಜಿಲ್ಲಾಧಿಕಾರಿಗಳು ತಿಳಿಸಿದರು.

ಮಳೆಯಿಂದಾಗಿ ಸುಮಾರು 8 ಎಕರೆ ಹತ್ತಿ ಬೆಳೆದಿದ್ದ ಮೊರಬ ಗ್ರಾಮದ ರೈತ ಮಹಾದೇವಪ್ಪ ಗೊಡಿಕಟ್ಟಿ ಅವರ ಹತ್ತಿ ಬೆಳೆ ಮಳೆ ನೀರಿನಿಂದಾಗಿ ಹಾಳಾಗಿದೆ. ಹತ್ತಿ ಬಿಡು ಬಿಟ್ಟಿದ್ದು, ಹತ್ತಿಕಾಯಿಯಲ್ಲಿ ಮಳೆ ನೀರು ಸೇರಿ ಹತ್ತಿ ನಾಶವಾಗುತ್ತಿದೆ. ಇಂತಹ ಎಲ್ಲ ಬೆಳೆಗಳನ್ನು ಸರಿಯಾಗಿ ಸಮೀಕ್ಷೆ ಮಾಡಿ, ದಾಖಲಿಸಬೇಕು. ರೈತರಿಗೆ ಅನ್ಯಾಯವಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಮಳೆ ನೀರಿನಿಂದ ತುಂಬಿ ಕೋಡಿ ಬಿದಿದ್ದ ತೀರ್ಲಾಪುರ ಕೆರೆಗೆ ಭೇಟಿ ನೀಡಿ, ಕೆರೆ ಅಭಿವೃದ್ಧಿಗಾಗಿ ಗ್ರಾಮಸ್ಥರ ಮನವಿ ಸ್ವೀಕರಿಸಿ, ಕೆರೆ ಹೂಳೆತ್ತುವ, ತಡೆಗೊಡೆ ನಿರ್ಮಾಣ, ಗೇಟ್ ಅಳವಡಿಕೆ ಬಗ್ಗೆ ಗ್ರಾಮ ಪಂಚಾಯತಿಯಿಂದ ಪ್ರಸ್ತಾವನೆ ಪಡೆದು ಕ್ರಮಜರುಗಿಸುವದಾಗಿ ತಿಳಿಸಿದರು.

ಹಾನಿಗೀಡಾದ ಮನೆಗಳಿಗ ಭೇಟಿ: ತೀರ್ಲಾಪುರ ಗ್ರಾಮದ ಎಸ್.ಸಿ ಕಾಲೋನಿಯ ವಡ್ಡರ ಓಣಿಯ ಮನೆಗಳಿಗೆ ಭೇಟಿ ನೀಡಿ, ಹಾನಿ ಪರಿಶೀಲಿಸಿದರು.

ರೇಣುಕಾ ಹದ್ದಣ್ಣವರ, ತಾಯ್ಯವ್ವ ನಂದೆಪ್ಪನವರ ಮನೆಗಳಿಗೆ ಭೇಟಿ ನೀಡಿ ಗೊಡೆ ಕುಸಿದ, ಮನೆಗೆ ನೀರು ನುಗ್ಗಿದ ಪ್ರಕರಣಗಳನ್ನು ಪರಿಶೀಲಿಸಿದರು. ಕಾಲೋನಿಯ 150 ಕ್ಕೂ ಹೆಚ್ಚು ಮನೆಗಳಲ್ಲಿ ನೀರಿನ ಜವುಗು ಎದ್ದು ನೀರಾಡುತ್ತವೆ. ಮಳೆ ನೀರು ಮನೆಗಳಿಗೆ ನುಗ್ಗುತ್ತದೆ. ಶಾಶ್ವತ ಪರಿಹಾರ ಕೈಗೊಳ್ಳಲು ಗ್ರಾಮಸ್ಥರು ವಿನಂತಿಸಿದಾಗ ನಿಗಮ ಮತ್ತು ಪಂಚಾಯತಿಯಿಂದ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.

ಯಮನೂರ ಬ್ರಿಡ್ಜ್ ಪಕ್ಕದ ಜಮೀನು ವೀಕ್ಷಣೆ: ತುಪ್ಪರಿ ಹಳ್ಳ ಮತ್ತು ಬೆಣ್ಣಿಹಳ್ಳಗಳಿಂದ ಬರುವ ಬಾರಿ ಪ್ರಮಾಣದ ನೀರಿನಿಂದ ಮುಳುಗಡೆ ಆಗಿರುವ ಬ್ರಿಡ್ಜ ಪಕ್ಕದ ಜಮೀನುಗಳನ್ನು ಜಿಲ್ಲಾಧಿಕಾರಿಗಳು ವೀಕ್ಷಣೆ ಮಾಡಿದರು. ತ್ವರಿತವಾಗಿ ಪರಿಹಾರ ನೀಡಲು ರೈತರು ಮನವಿ ಸಲ್ಲಿಸಿದರು.

ಯಮನೂರ ಗ್ರಾಮ ಪಂಚಾಯತ ವ್ಯಾಪ್ತಿಯ ಅರೆಕುರಹಟ್ಟಿ ಗ್ರಾಮದ ಜನರಿಗೆ ಕುಡಿಯುಲು ನೀರು ಪೂರೈಸುವ ಗ್ರಾಮದ ಕೆರೆಗೆ ಭೇಟಿ ನೀಡಿ, ಜಿಲ್ಲಾಧಿಕಾರಿಗಳು ಪರಿಶೀಲಿಸಿದರು.

ಕೆರೆಗೆ ನೀರು ತುಂಬಿಸಲು ಉತ್ತಮವಾದ ಕಾಂಕ್ರೀಟ ಕಾಲುವೆ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕೆರೆ ನೀರನ್ನು ಸ್ವಚ್ಛಗೊಳಿಸಿ, ಕುಡಿಯಲು ಯೋಗ್ಯವಾಗಿರುವದನ್ನು ಖಾತ್ರಿ ಪಡಿಸಿಕೊಂಡು ನೀರು ಸರಬರಾಜು ಮಾಡಿ, ಕೆರೆಯಲ್ಲಿ ಕಳೆ ಬೆಳೆದಿರುವದನ್ನು ಸ್ವಚ್ಛಗೊಳಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ಕಿರೆಸೂರ ಗ್ರಾಮದ ಶೇಂಗಾ, ಈರುಳ್ಳಿ, ಹತ್ತಿ ಹೊಲಗಳಿಗೆ ಭೇಟಿ: ಜಿಲ್ಲಾಧಿಕಾರಿಗಳು ತಮ್ಮ ನೆರೆ ಪ್ರವಾಸ ಸಂದರ್ಭದಲ್ಲಿ ಕೆರೆಸೂರ ಗ್ರಾಮದ ಶೇಂಗಾ (ನೆಲಗಡಲೆ), ಈರುಳ್ಳಿ ಮತ್ತು ಹತ್ತಿ ಹೊಲಗಳಿಗೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿದರು.

ರಸ್ತೆ ಪಕ್ಕದಲ್ಲಿ ಈರುಳ್ಳಿ ರಾಶಿ ಸ್ವಚ್ಛಗೊಳಿಸುತ್ತಿದ್ದ ರಫೀಕಸಾಬ ಮತ್ತೆಸಾಬನವರ ಹೊಲಕ್ಕೆ ಭೇಟಿ ನೀಡಿ ಮಳೆ ನೀರು ಹಾಗೂ ತಂಪು ವಾತಾವರಣದಿಂದ ಈರುಳ್ಳಿ ಕೊಳೆಯುತ್ತಿರುವುದನ್ನು ಸ್ವತಃ ಪರಿಶೀಲಿಸಿದರು. ಅಲ್ಲಿಂದ ಶೇಂಗಾ ಬೆಳೆ ಒಕ್ಕಲು ಹಾಕಿದ್ದನ್ನು ಹೊರ ತೆಗೆಯುತ್ತಿದ್ದ ಕಿರೆಸೂರ ರೈತ ಶಿವಾನಂದ ಇನಾಮತಿ ಅವರ ಶೇಂಗಾ ಬೆಳೆ ವೀಕ್ಷಿಸಿದರು.

ರೈತರು ಬಂದಿರುವ ಬೆಳೆ ರಕ್ಷಿಸಿಕೊಳ್ಳಲು ಸಾಧ್ಯವಾಗದಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವಿವರಿಸಿದರು. ಬಿತ್ತಿರುವ ಹಿಂಗಾರು ಬೆಳೆ ನಾಟಿ ಹುಟ್ಟದಿರುವ ಮತ್ತು ಖಾಲಿ ಜಮೀನಲ್ಲಿ ಮಳೆ ನೀರು ನಿಂತಿರುವ ಬಗ್ಗೆ ದಾರಿಯುದ್ದಕ್ಕೂ ಗಮನಿಸಲಾಯಿತು.

ಜಿಲ್ಲಾಧಿಕಾರಿಗಳ ನೆರೆ ಹಾನಿ ಪ್ರದೇಶ ಭೇಟಿ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ತಹಶೀಲ್ದಾರ ಸುಧೀರ ಸಾಹುಕಾರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಪ್ರಕಾಶ ನಾಶಿ, ರಾಜು ಮಾವರಕರ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಅಜಿತಕುಮಾರ ಮಶಾಲ್ದಿ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ವಿವಿಧ ಗ್ರಾಮ ಪಂಚಾಯತ ಸದಸ್ಯರು, ಕೃಷಿ, ತೋಟಗಾರಿಕೆ, ಲೋಕೋಪಯೋಗಿ, ಪಂಚಾಯತ ರಾಜ, ಅಗ್ನಿಶಾಮಕ ಸೇರಿದಂತೆ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದು, ಹಾನಿ ವರದಿ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande