ಇಲಾಖೆಗಳು ನಿಗಧಿತ ಅವಧಿಯಲ್ಲಿ ಅನುದಾನ ವೆಚ್ಚ ಮಾಡಲು ಸೂಚನೆ
ಇಲಾಖೆಗಳು ನಿಗಧಿತ ಅವಧಿಯಲ್ಲಿ ಅನುದಾನ ವೆಚ್ಚ ಮಾಡಲು ಸೂಚನೆ
ಚಿತ್ರ - ಕೋಲಾರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಉಸ್ತುವಾರಿ ಕಾರ್ಯದರ್ಶಿಗಳಾದ ಡಾ. ಏಕ್ ರೂಪ್ ಕೌರ್ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದರು.


ಇಲಾಖೆಗಳು ನಿಗಧಿತ ಅವಧಿಯಲ್ಲಿ ಅನುದಾನ ವೆಚ್ಚ ಮಾಡಲು ಸೂಚನೆ

ಕೋಲಾರ, ಅ.೧೮ (ಹಿ.ಸ) ಆಂಕರ್ : ಪ್ರಸಕ್ತ ಸಾಲಿಗೆ ಇಲಾಖೆಗಳಿಗೆ ಬಿಡುಗಡೆಯಾಗಿರುವ ಅನುದಾನಕ್ಕೆ ಸಂಬಂಧಿಸಿದಂತೆ ಆಯಾ ಇಲಾಖೆಗಳು ಕ್ರಿಯಾಯೋಜನೆ, ಟೆಂಡರ್ ಪ್ರಕ್ರಿಯೆ, ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಬಿಡುಗಡೆಯಾಗಿರುವ ಅನುದಾನವನ್ನು ಸಂಪೂರ್ಣ ಖರ್ಚು ಮಾಡುವ ಮೂಲಕ ಶೇಕಡ ೧೦೦ ರಷ್ಟು ಆರ್ಥಿಕ ಮತ್ತು ಭೌತಿಕ ಪ್ರಗತಿ ಸಾಧಿಸಿ ಎಂದು ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಗಳು ಹಾಗೂ ಕೋಲಾರ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಗಳಾದ ಡಾ. ಏಕ್ ರೂಪ್ ಕೌರ್ ಅವರು ಹೇಳಿದರು.

ಕೋಲಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಇಲಾಖೆಗಳಿಗೆ ಬಿಡುಗಡೆಯಾದ ಹಣವನ್ನು ಸಂಪೂರ್ಣವಾಗಿ ಖರ್ಚು ಮಾಡಬೇಕು. ಮಾರ್ಚ್ ಅಂತ್ಯದವರೆಗೆ ಕಾಯದೆ ತ್ವರಿತವಾಗಿ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿ ಡಿಸೆಂಬರ್ ಅಂತ್ಯ ಅಥವಾ ಜನವರಿ ಮಾಹೆಯೊಳಗೆ ಶೇಕಡ ೧೦೦% ರಷ ಆರ್ಥಿಕ ಮತ್ತು ಭೌತಿಕ ಪ್ರಗತಿ ಸಾಧಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನರೇಗಾ ಯೋಜನೆಯ ಸದ್ಬಳಕೆ ಆಗಬೇಕು. ನರೇಗಾ ಯೋಜನೆಯಡಿ ಹಲವು ಇಲಾಖೆಗಳಿಗೆ ಅನುದಾನ ಬಿಡುಗಡೆ ಆಗುತ್ತದೆ. ಅನುದಾನ ಸದ್ಬಳಕೆಯಾಗಬೇಕು. ಅರಣ್ಯ ಇಲಾಖೆಯಲ್ಲಿ ನರೇಗಾ ಯೋಜನೆಯಡಿ ಗಿಡ ನೆಡುವ ಅರಣ್ಯೀಕರಣ ಕಾರ್ಯಕ್ರಮ ಒಂದು ಉತ್ತಮ ಯೋಜನೆಯಾಗಿದೆ. ಸಾಮಾಜಿಕ ಮತ್ತು ಪ್ರಾದೇಶಿಕ ಅರಣ್ಯ ವಿಭಾಗವು ಹೆಚ್ಚು ಹೆಚ್ಚು ಸಸಿಗಳನ್ನು ನಾಟಿ ಮಾಡಿ ಬೇಡಿಕೆ ಅನುಗುಣವಾಗಿ ರೈತರಿಗೆ, ಸಾರ್ವಜನಿಕರಿಗೆ ಹಂಚಬೇಕು. ಹಾಗೆಯೇ ವಿವಿಧ ವನಮಹೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸರ್ಕಾರಿ ಜಾಗಗಳಲ್ಲಿ, ಬೆಟ್ಟಗುಡ್ಡಗಳಲ್ಲಿ, ಪ್ರವಾಸಿ ತಾಣಗಳಲ್ಲಿ, ರಸ್ತೆ ಬದಿಗಳಲ್ಲಿ ಹೆಚ್ಚೆಚ್ಚು ಸಸಿಗಳನ್ನು ನೆಡಬೇಕು. ನೆಟ್ಟ ನಂತರ ಸಸಿಗಳನ್ನು ಪೋಷಿಸಿ ಬೆಳೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪ್ರಸ್ತುತ ಈಗಿರುವ ವಾತಾವರಣ ಪರಿಸ್ಥಿತಿಯಲ್ಲಿ ಹವಾಮಾನ ವೈಪರೀತ್ಯ, ಪರಿಸರ ಸಂರಕ್ಷಣೆ, ಪ್ರಕೃತಿ ಸಮತೋಲನ ಕಾಪಾಡಲು ಗಿಡ ಮರಗಳನ್ನು ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ ಪ್ರಸ್ತುತ ರಸಗೊಬ್ಬರ ಕೊರತೆ ಇರುವುದಿಲ್ಲ. ಸೆಪ್ಟೆಂಬರ್ ಮಾಹೆಯಲ್ಲಿ ಮಳೆ ಕೊರತೆ ಆಗಿದೆ. ಆದರೆ ಪ್ರಸಕ್ತ ಮಾಹೆಯಲ್ಲಿ ಸಾಕ? ಮಳೆಯಾಗಿದೆ ಎಂದು ಕೃಷಿ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.

ಎಸ್.ಎಸ್.ಎಲ್.ಸಿ, ಪಿಯುಸಿ ಯಲ್ಲಿ ಈ ವರ್ಷ ಉತ್ತಮ ಫಲಿತಾಂಶ ಬರಲು ಯೋಜನೆ ರೂಪಿಸಿ. ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸರ್ಕಾರಿ ಶಾಲೆಗಳನ್ನು ದತ್ತು ನೀಡಿ. ಶಾಲಾ ಕಾಲೇಜು ಶಿಕ್ಷಕರಿಗೆ, ಮುಖ್ಯೋಪಾಧ್ಯಾಯರಾಗಿ, ಪ್ರಾಂಶುಪಾಲರಿಗೆ ಸೂಕ್ತ ತರಬೇತಿ, ಮಾರ್ಗಸೂಚಿಗಳನ್ನು ನೀಡಿ, ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು. ಕಂಪೌಂಡ್ ಗೋಡೆ ನಿರ್ಮಿಸಲು ಹಾಗೂ ಆಟದ ಮೈದಾನಗಳನ್ನು ನಿರ್ಮಿಸಲು ಕ್ರಮ ವಹಿಸಿ, ಮಕ್ಕಳಿಗೆ ಆಟದ ಪರಿಕರಗಳನ್ನು ಒದಗಿಸಲು ಕ್ರಮ ವಹಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಯಲ್ಲಿ ಈಗಾಗಲೇ ಕ್ರೀಡಾಕೂಟಗಳನ್ನು ಏರ್ಪಡಿಸಲಾಗಿದೆ ಎಂದು ಸಹಾಯಕ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು. ಕಾರ್ಯದರ್ಶಿಗಳು ಹಾಸ್ಟೆಲ್ ಗಳಲ್ಲಿ ಕ್ರೀಡಾ ಚಟುವಟಿಕೆಗಳನ್ನು ನಡೆಸಲು ಒತ್ತು ನೀಡಬೇಕು. ಖಾಸಗಿ ಸಂಸ್ಥೆಗಳೊಂದಿಗೆ ಸಹಕರಿಸಿ ಕ್ರೀಡಾಂಗಣ ವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಆರೋಗ್ಯ ಇಲಾಖೆಯಲ್ಲಿ ೧೮ ವೈದ್ಯರ ಕೊರತೆ ಇರುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಸಭೆಗೆ ತಿಳಿಸಿದರು.ಅದಕ್ಕೆ ಕಾರ್ಯದರ್ಶಿಗಳು ಹೊರಗುತ್ತಿಗೆ ಮೂಲಕ ತುಂಬಲು ಕ್ರಮ ವಹಿಸಲು ಸೂಚಿಸಿದರು.

ಡೆಂಗ್ಯೂ ಪ್ರಕರಣಗಳು ಗಣನಿಯವಾಗಿ ಕೆಡಿಮೆಯಾಗಿರುವುದಕ್ಕೆ ಅಭಿನಂದಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕೇಂದ್ರಗಳಲ್ಲಿ ಪುಸ್ತಕಗಳ ಕೊರತೆ ಇದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.

ಅಂಗನವಾಡಿಗಳಲ್ಲಿ ಸಮಯಕ್ಕೆ ಸರಿಯಾಗಿ ಯಾರೂ ಬರುವುದಿಲ್ಲ. ಎಲ್ಲಾ ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ನೀಡಲು ಸೂಚಿಸಿದರು.

ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಜೂನ್ ೨೦೨೪ರವರೆಗೆ ಪಾವತಿ ಮಾಡಲಾಗಿದೆ. ಅದರಲ್ಲಿ ೩೧೯೦ ವಿಫಲ ಪ್ರಕಾರಣಗಳಿದ್ದು ಅವುಗಳನ್ನು ಶೀಘ್ರದಲ್ಲೇ ಸರಿಪಡಿಸಿ ಪಾವತಿಮಾಡಲು ಕ್ರಮ ವಹಿಸಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲಗಳಲ್ಲಿ ಆಟದ ಪರಿಕರಗಳನ್ನು ಇತರೆ ಕೆಲಸಗಳಿಗಾಗಿ ಬಳಸಲಾಗುತ್ತಿದೆ. ಅಂತಹ ಪ್ರಕರಣ ಕಂಡುಬಂದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಆಹಾರ ಇಲಾಖೆಯ ಅನ್ನಭಾಗ್ಯ ಯೋಜನೆಯಡಿಯಲ್ಲಿ ಜುಲೈ ವರೆಗೆ ಅನುದಾನ ಬಿಡುಗಡೆಯಗಿದ್ದು, ೧೦೭೫ಕೋಟಿ ಮೊತ್ತದ ಅನುದಾನ ಫಲಾನುಭವಿಗಳಿಗೆ ವಿತರಣೆ ಮಾಡಲಾಗಿದೆ ಎಂದು ಸಂಬಂದಿಸಿದ ಅಧಿಕಾರಿಗಳು ಸಭೆಗೆ ತಿಳಿಸಿದರು.

ಉಳಿದಂತೆ ರೇಷ್ಮೆ ಇಲಾಖೆ, ವಯಸ್ಕರ ಶಿಕ್ಷಣ, ಆಯುಷ್ ಇಲಾಖೆ, ವಿಕಲಚೇತನರ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮೀನುಗಾರಿಕೆ ಇಲಾಖೆ ಕೈಗಾರಿಕೆ ಇಲಾಖೆ, ಲೋಕೋಪಯೋಗಿ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಇದೇ ಸಂದರ್ಭದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಸದರಿ ಯೋಜನೆಗೆ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವುದರಿಂದ ಆಯ್ಕೆಯಾಗುವವರೆಗಿನ ಸಮಸ್ತ ಪ್ರಕ್ರಿಯೆ ಆನ್ ಲೈನ್ ನಲ್ಲಿ ಆಗಲಿದೆ. ಇದರ ಸದುಪಯೋಗ ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಅಕ್ರಂ ಪಾಷ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ. ನಿಖಿಲ್, ಉಪವಿಭಾಗಾಧಿಕಾರಿ ಡಾ. ಮೈತ್ರಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವಕುಮಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು, ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.

ಚಿತ್ರ - ಕೋಲಾರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಉಸ್ತುವಾರಿ ಕಾರ್ಯದರ್ಶಿಗಳಾದ ಡಾ. ಏಕ್ ರೂಪ್ ಕೌರ್ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande