ಮಕ್ಕಳಿಗೆ ಸಂಸ್ಕಾರ ಕಲಿಸಿದರೆ ವೃದ್ಧಾಶ್ರಮದ ಅವಶ್ಯಕತೆ ಇರುವುದಿಲ್ಲ: ಎಂ.ಎಸ್.ದಿವಾಕರ ಸಲಹೆ
ಹೊಸಪೇಟೆ, 01 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ತಂದೆ, ತಾಯಿ ಮತ್ತು ಪೋಷಕರು ತಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸಿದರೆ ಅವರು ತಂದೆ, ತಾಯಿಯರನ್ನು ಕಳೆದುಕೊಳ್ಳಲು ಇಚ್ಚಿಸುವುದಿಲ್ಲ. ಆಗ ಯಾವುದೇ ವೃದ್ಧಾಶ್ರಮದ ಅವಶ್ಯಕತೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅವರು ಹೇಳಿದ್ದಾರೆ. ಜಿಲ್ಲಾಡಳ
ಮಕ್ಕಳಿಗೆ ಸಂಸ್ಕಾರ ಕಲಿಸಿದರೆ ವೃದ್ಧಾಶ್ರಮದ ಅವಶ್ಯಕತೆ ಇರುವುದಿಲ್ಲ: ಎಂ.ಎಸ್.ದಿವಾಕರ ಸಲಹೆ


ಹೊಸಪೇಟೆ, 01 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ತಂದೆ, ತಾಯಿ ಮತ್ತು ಪೋಷಕರು ತಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸಿದರೆ ಅವರು ತಂದೆ, ತಾಯಿಯರನ್ನು ಕಳೆದುಕೊಳ್ಳಲು ಇಚ್ಚಿಸುವುದಿಲ್ಲ. ಆಗ ಯಾವುದೇ ವೃದ್ಧಾಶ್ರಮದ ಅವಶ್ಯಕತೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅವರು ಹೇಳಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿಶೇಷಚೇತನರಿಗೆ ಮತ್ತು ಹಿರಿಯ ನಾಗರಿಕರಿಗಾಗಿ ಶ್ರಮಿಸುತ್ತಿರುವ ವಿವಿಧ ಸಂಘ ಸಂಸ್ಥೆಗಳು ಇವರು ಸಂಯುಕ್ತಾಶ್ರಯದಲ್ಲಿ ಅಕ್ಟೋಬರ್ 01 ರಂದು ಹೊಸಪೇಟೆಯ ಚರ್ಚ್ ಭವನದಲ್ಲಿ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಹಿರಿಯರಿಗೆ ಮನೆಗಳಲ್ಲಿ ಅಗೌರವ ತೋರುವುದು ಕಂಡುಬರುತ್ತಿದೆ. ಹಿರಿಯರು ತಮ್ಮದೇ ಆದ ರೀತಿಯಲ್ಲಿ ಸಾಧನೆ ಮಾಡಿರುತ್ತಾರೆ. ಅವರಿಗೆ ಗೌರಸಲ್ಲಿಸಬೇಕು ಎನ್ನುವ ಸಂದೇಶ ರವಾನಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಸಮಾಜದಲ್ಲಿ ಯಾವ ಕುಟುಂಬಗಳಲ್ಲಿ ಹಿರಿಯ ನಾಗರಿಕರಿಗೆ ಗೌರವ ನೀಡುವುದಿಲ್ಲಯೋ ಅಂತಹ ಕುಟುಂಬಗಳು ಸಂತೋಷ, ನೆಮ್ಮದಿಯಿಂದಿರಲು ಸಾಧ್ಯವಿಲ್ಲ ಎಂದರು.

ಪೋಷಕರು ಮಕ್ಕಳಿಗಾಗಿ ಆಸ್ತಿ ಮಾಡುವುದನ್ನು ನಿಲ್ಲಿಸಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿದರೆ ಅವರು ಮುಂದೆ ಪೋಷಕರನ್ನು ಮಕ್ಕಳ ರೀತಿ ನೋಡಿಕೊಳ್ಳುತ್ತಾರೆ. ಹಿರಿಯ ನಾಗರಿಕರು ಜೀವನದಲ್ಲಿ ಎಲ್ಲವನ್ನು ತಿಳಿದ ಮುಗ್ಧರಂತೆ ಇರುತ್ತಾರೆ. ಅವರನ್ನು ಅಷ್ಟೇ ಮುಗ್ಧತೆಯಿಂದ ನೋಡಿಕೊಳ್ಳುವುದು ಮಕ್ಕಳ ಜವಾಬ್ದಾರಿ ಎಂದು ತಿಳಿಸಿದರು.

ಪೋಷಕರಿಗೆ ಮಕ್ಕಳ ಮೇಲೆ ಅತಿಯಾದ ಪ್ರೀತಿ, ವ್ಯಾಮೋಹ ಇರಬಾರದು. ಅತಿಯಾದ ಪ್ರೀತಿ, ವ್ಯಾಮೋಹವೇ ಮುಂದೆ ಮಕ್ಕಳಿಗೆ ಕೆಲವೊಮ್ಮೆ ಕಲ್ಲುಮುಳ್ಳಿನ ಹಾದಿಯಾಗುತ್ತದೆ ಎಂದು ಎಚ್ಚರಿಸಿದರು. ಹಿರಿಯರು ಅಗಾದವಾದ ಅನುಭವವನ್ನು ಹೊಂದಿರುತ್ತಾರೆ. ಈಗಿನ ಯುವಕರಲ್ಲಿಯೂ ನಿಮ್ಮ ಅನುಭವನ್ನು ಹಂಚಿಕೊಂಡು ಅವರನ್ನು ಸಮಾಜದ ಉತ್ತಮ ನಾಗರಿಕರನ್ನಾಗಿ ಮಾಡಬೇಕು ಎಂದು ಅವರು ಹಿರಿಯ ನಾಗರಿಕರಿಗೆ ಸಲಹೆ ಮಾಡಿದರು.

ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲೆಯ ರಂಗಭೂಮಿ, ಸಮಾಜಸೇವೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಗರಿಬೊಮ್ಮನಹಳ್ಳಿ ತಾಲೂಕಿನ ಕೆ. ಲಕ್ಷ್ಮೀಪತಿ, ಕೊಟ್ಟೂರು ತಾಲೂಕಿನ ಎಂ.ಶೇಖರಪ್ಪ, ಹೊಸಪೇಟೆ ತಾಲೂಕಿನ ಹನುಮಂತಪ್ಪ ನಾಯಕರ, ಹರಪನಹಳ್ಳಿ ತಾಲೂಕಿನ ಷಡಕ್ಷರಪ್ಪ, ಕೂಡ್ಲಿಗಿ ತಾಲೂಕಿನ ವೆಂಕಟೇಶ.ಕೆ ಹೂವಿಹಡಗಲಿ ತಾಲೂಕಿನ ಶಂಕ್ರಯ್ಯ ತೋಟದೇವರ ಮಠ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕಿನ ಚುಕ್ಕನಹಲ್ಲು ರಾಮಣ್ಣ ಇವರಿಗೆ ಸನ್ಮಾನಿಸಲಾಯಿತು.

ಇದೇ ವೇಳೆ ಈ ಹಿಂದೆ ಆಯೋಜಿಸಿದ್ದ, ಬಿರುಸಿನ ನಡಿಗೆ ಸ್ಪರ್ಧೆ, ಮ್ಯೂಸಿಕಲ್ ಚೇರ್ ಸ್ಪರ್ಧೆ, ಗಾಯನ ಸ್ಪರ್ಧೆ ಮತ್ತು ಏಕ ಪಾತ್ರಾಭಿನಯ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿಪತ್ರ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎನ್.ಎಫ್ ಇಮಾಮ್ ನಿಯಾಜಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಶ್ವೇತಾ ಎಸ್, ಜಿಲ್ಲಾ ಮಕ್ಕಳ ರಕ್ಷಾಣಾಧಿಕಾರಿಗಳಾದ ಸಂದೀಪ ಕುಮಾರ ಉಂಕಿ, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿಗಳಾದ ಅವಿನಾಶಲಿಂಗ ಎಸ್ ಗೋಟಖಿಂಡಿ, ಜಿಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂದು ಯಲಿಗಾರ ಮತ್ತು ಬ್ರಹ್ಮಕುಮಾರಿ ಮಾನಸಾ ಅವರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande