ಚೈತನ್ಯ ಯೋಜನೆಯಲ್ಲಿ ಹಣ ದುರುಪಯೋಗ, ಐವರ ಬಂಧನ
ಚೈತನ್ಯ ಯೋಜನೆಯಲ್ಲಿ ಹಣ ದುರುಪಯೋಗ, ಐವರ ಬಂಧನ
ಚಿತ್ರ - ಬಂಧಿತ ಆರೋಪಿಗಳು


ಕೋಲಾರ, 01 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಶ್ರೀ ದೇವರಾಜ ಅರಸು ಅಭಿವೃದ್ಧಿ ನಿಗಮ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ನಕಲಿ ದಾಖಲೆ ಸೃಷ್ಠಿಸಿ ಚೈತನ್ಯ ಮತ್ತು ಉದ್ಯೋಗಿನಿ ಯೋಜನೆಯಲ್ಲಿ ನಕಲಿ ಫಲಾನುಭವಿಗಳನ್ನು ತೋರಿಸಿ ಮಾರ್ಜಿನ್ ಮನಿ ಲಪಟಾಯಿಸಿದ ಐವರನ್ನು ಕೋಲಾರದ ಸೈಬರ್ ಪೊಲೀಸರು ಬಂಧಿಸಿದ್ದಾರೆ.

ದೇವರಾಜ ಅರಸು ಅಭಿವೃದ್ಧಿ ನಿಗಮದಲ್ಲಿ ಐದು ಲಕ್ಷ ರೂವರೆಗೆ ಕುರಿ ಸಾಕಾಣಿಕೆಗೆ ಆರ್ಥಿಕ ನೆರವು ಕಲ್ಪಿಸಲಾಗುತ್ತದೆ. ಅಲ್ಲದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಉದ್ಯೋಗಿನಿ ಯೋಜನೆಯಲ್ಲಿ ಮೂರು ಲಕ್ಷದವರೆಗೂ ಆರ್ಥಿಕ ನೆರವು ಕಲ್ಪಿಸಲಾಗುತ್ತದೆ. ಆರೋಪಿಗಳು ನಕಲಿ ದಾಖಲೆಗಳು ಮತ್ತು ಫಲಾನುಭವಿಗಳನ್ನು ಸೃಷ್ಠಿ ಮಾಡಿ ಕುರುಬ ಜನಾಂಗಕ್ಕೆ ಸೇರಿದವರೆಂದು ಚೈತನ್ಯ ಯೋಜನೆಯಲ್ಲಿ ೫ ಲಕ್ಷ ರೂ. ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉದ್ಯೋಗಿನಿ ಯೋಜನೆಯಲ್ಲಿ ೩ ಲಕ್ಷ ರೂ. ಸಂಚು ನಡೆಸಿದ್ದರು.

ಕೋಲಾರದ ಹೊನ್ನೇನಹಳ್ಳಿ ತರಬೇತಿ ಕೇಂದ್ರದಲ್ಲಿ ನಕಲಿ ವ್ಯಕ್ತಿಗಳಿಗೆ ತರಬೇತಿ ಸಹ ನೀಡಲಾಗಿತ್ತು. ಈ ಬಗ್ಗೆ ಕೋಲಾರ ತಾಲ್ಲೂಕಿನ ಬೆಳಮಾರನಹಳ್ಳಿ ಗ್ರಾಮದ ಶ್ರೀದೇವಿ ಎಂಬುವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತನಿಖೆ ಆರಂಭಿಸಿದ ಪೊಲೀಸರು ೨೦೧೮ರಿಂದ ೨೦೨೦ನೇ ಸಾಲಿನಲ್ಲಿ ದೇವರಾಜ ಅರಸು ಅಭಿವೃದ್ಧಿ ನಿಗಮದ ಚೈತನ್ಯ ಮಾರ್ಜಿಮನಿ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉದ್ಯೋಗಿನಿ ಯೋಜನೆಯ ಹಲವಾರು ನೈಜ ಫಲಾನುಭವಿಗಳಿಗೆ ಸೇರಬೇಕಾದ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದರು.

ನಕಲಿ ಫಲಾನುಭವಿಗಳಿಗೆ ಹಣ ಪಾವತಿ ಮಾಡುವ ಮೂಲಕ ವಂಚನೆ ಮಾಡಿದ್ದರು. ತನಿಖೆ ಆರಂಭಿಸಿದ ಕೋಲಾರದ ಸೈಬರ್ ಪೊಲೀಸರು ಈ ಹಿಂದೆ ದೇವರಾಜ ಅರಸು ಅಭಿವೃದ್ಧಿ ನಿಗಮದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಿಲ್ಲಾ ವ್ಯವಸ್ಥಾಪಕ ಗಣೇಶ್, ಸಿಬ್ಬಂದಿ ಶಿವಾನಂದ, ಜೋತಿಲಕ್ಷ್ಮೀ ಹಾಗೂ ವೇಮಗಲ್ ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕ ಕುಚ್ಚಪ್ಪ ರವರನ್ನು ಬಂಧಿಸಿದ್ದಾರೆ.

ಈ ಹಗರಣದಲ್ಲಿ ಹಿಂದುಳಿದ ವರ್ಗಗಳ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಸಿಬ್ಬಂದಿ ಪಾಲ್ಗೊಂಡಿದ್ದಾರೆ. ಮಧ್ಯವರ್ತಿ ಕೆಜಿಎಫ್ ತಾಲ್ಲೂಕಿನ ಮೋತಕಪಲ್ಲಿ ಗ್ರಾಮದ ಕುಮಾರ್ ಎಂಬುವರನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಚಿತ್ರ - ಬಂಧಿತ ಆರೋಪಿಗಳು

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande