
ಕೋಲಾರ, ೦೮ ಸೆಪ್ಟೆಂಬರ್ (ಹಿ.ಸ)
ಆಂಕರ್ : ಸಮಾಜದ ಏಳಿಗೆ ಹಾಗೂ ಜನರರಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಲು ಸಾಕ್ಷರತೆ ಅತ್ಯಂತ ಅವಶ್ಯಕವಾಗಿದೆ. ಕೋಲಾರ ಜಿಲ್ಲೆಯನ್ನು ಶೇ. ೧೦೦ರಷ್ಟು ಸಾಕ್ಷರತಾ ಜಿಲ್ಲೆಯನ್ನಾಗಿಸಲು ಎಲ್ಲಾ ಇಲಾಖೆಗಳು ಹಾಗೂ ಸಾರ್ವಜನಿಕರು ಕೈಜೋಡಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಪ್ರವೀಣ್ ಪಿ. ಬಾಗೇವಾಡಿ ಕರೆ ನೀಡಿದರು.
ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ `ಸಾಕ್ಷರತಾ ದಿನಾಚರಣೆ' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ದೇಶಕ್ಕೆ ಸ್ವಾತಂತ್ರ÷್ಯ ಬಂದಾಗ ಕೇವಲ ಶೇ. ೧೮ ರಷ್ಟಿದ್ದ ಸಾಕ್ಷರತೆ ಪ್ರಮಾಣ ಇಂದು ಶೇ. ೮೦ರ ಸನಿಹ ತಲುಪಿದೆ. ಸಮಾಜ ವಿಕಸಿತವಾಗಲು ಶಿಕ್ಷಣವೇ ಬುನಾದಿಯಾಗಿದೆ ಅಂದಿನ ಕಠಿಣ ಪರಿಸ್ಥಿತಿಯಲ್ಲಿ ಮಹಿಳೆಯರಿಗೆ ಶಿಕ್ಷಣ ನೀಡಲು ಶ್ರಮಿಸಿದ ಸಾವಿತ್ರಿಬಾಯಿ ಫುಲೆ ಹಾಗೂ ದಮನಿತರ, ಶೋಷಿತರ ಏಳಿಗೆಗಾಗಿ ೩೨ ಡಿಗ್ರಿಗಳನ್ನು ಪಡೆದು ಇಡೀ ಸಮಾಜಕ್ಕೆ ಪ್ರೇರಣೆಯಾದ ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳು ನಮಗೆಲ್ಲರಿಗೂ ದಾರಿದೀಪವಾಗಬೇಕು ಎಂದರು.
ಮನೆಯಲ್ಲಿ ಗಂಡು-ಹೆಣ್ಣು ಎಂಬ ತಾರತಮ್ಯ ಮಾಡದೆ, ಇಬ್ಬರಿಗೂ ಸಮಾನ ಅವಕಾಶ ನೀಡುವಂತಹ ಮನಸ್ಥಿತಿ ಪ್ರತಿಯೊಬ್ಬರಲ್ಲೂ ಬೆಳೆಯಬೇಕು. ಕೇವಲ ಓದು, ಬರಹ ಮತ್ತು ಸಹಿ ಮಾಡುವುದಷ್ಟೇ ಸಾಕ್ಷರತೆಯಲ್ಲ; ಬದಲಾಗಿ ಮೂಢನಂಬಿಕೆಗಳನ್ನು ತೊಡೆದುಹಾಕಿ ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳುವುದು ಹಾಗೂ ಯಾವುದೇ ಸಮಸ್ಯೆಯನ್ನು ತಾರ್ಕಿಕವಾಗಿ ವಿಶ್ಲೇಷಿಸುವುದು ನಿಜವಾದ ಶಿಕ್ಷಣ. ಪ್ರಸ್ತುತ ಜಿಲ್ಲೆಯಲ್ಲಿ ಶೇ. ೮೦ರಷ್ಟು ಸಾಕ್ಷರತೆ ಸಾಧಿಸಲಾಗಿದ್ದು, ಇದನ್ನು ಶೇ. ೧೦೦ಕ್ಕೆ ಕೊಂಡೊಯ್ಯಲು ಇದೊಂದು ಇಲಾಖೆಯ ಕಾರ್ಯಕ್ರಮವಾಗದೆ ಇಡೀ ಸಮಾಜದ ಕಾರ್ಯಕ್ರಮವಾಗಿ ರೂಪುಗೊಳ್ಳಬೇಕು. ತಮ್ಮ ಮಗಳನ್ನು ಕೂಡ ಇಷ್ಟದಂತೆ ರಾಷ್ಟ್ರೀಯ ಫುಟ್ಬಾಲ್ ಕ್ರೀಡಾ ಪಟುವಾಗಿ ನಿರ್ಮಾಣ ಮಾಡಿದ್ದು, ಹಾಗೆ ಹೆಣ್ಣುಮಕ್ಕಳಿಗೆ ಸ್ವಾತಂತ್ರ÷್ಯ ಸಿಕ್ಕಾಗ ಮಾತ್ರ ಸಮಸಮಾಜ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.
ಸಾಕ್ಷರತಾ ಪ್ರತಿಜ್ಞಾ ಬೋಧಿಸಿದ ಅಪರ ಜಿಲ್ಲಾಧಿಕಾರಿ ಎಸ್.ಎಂ. ಮಂಗಳ, ಶಿಕ್ಷಣದಿಂದ ಮಾತ್ರ ಮಹಿಳಾ ಸಬಲೀಕರಣ ಸಾಧ್ಯ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಹಾಗೂ ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಲು ಶಿಕ್ಷಣವೇ ಪ್ರಮುಖ ಅಸ್ತç. ಜಿಲ್ಲೆಯ ೧೮ ಪಂಚಾಯಿತಿಗಳಲ್ಲಿ ಈಗಾಗಲೇ ಸಾಕ್ಷರತೆ ಕುರಿತು ಜಾಗೃತಿ ಮೂಡಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಮಹಿಳೆಯರನ್ನು ಅಕ್ಷರಸ್ಥರನ್ನಾಗಿಸುವ ಕಾರ್ಯ ವ್ಯಾಪಕವಾಗಿ ನಡೆಯಬೇಕಿದೆ ಎಂದು ಆಶಿಸಿದರು.
ಇದೇ ವೇಳೆ, ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಕ್ಷರ ಕಲಿತ ನವಸಾಕ್ಷರರಾದ ಮುನಿರಾಜು, ಪದ್ಮ, ವೆಂಕಟಮ್ಮ, ಬೋಧಕರಾದ ರಂಜಿತಾ, ತನುಶ್ರೀರನ್ನು ಗೌರವಿಸಲಾಯಿತು.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ನಾಗರಾಜ್ ಮಾತನಾಡಿ, ವಯಸ್ಕರ ಶಿಕ್ಷಣ ನಡೆದು ಬಂದ ಹಾದಿ ಇಲಾಖೆಯಿಂದ ಸಾಕ್ಷರತೆ ವೃದ್ದಿಗೆ ಕೈಗೊಂಡ ಕ್ರಮಗಳ ಕುರಿತು ತಿಳಿಸಿ, ಸಾರ್ವಜನಿಕರು,ಗ್ರಾಮಪಂಚಾಯಿತಿಯ ಸಂಪೂರ್ಣ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.
ಕೋಲಾರ ಡಯಟ್ನ ಉಪನ್ಯಾಸಕ ಬಾಲಾಜಿ ಕಾರ್ಯಕ್ರಮದ ಮಹತ್ವ ಸಾಕ್ಷರತಾ ಪ್ರಗತಿ ನಡೆದು ಬಂದ ದಾರಿ ಹಾಗೂ ಸಾಕ್ಷರತೆಯ ಪ್ರಸ್ತುತ ಪ್ರಪಂಚಿಕ ಸತ್ವತೆಯನ್ನ ವಿವರವಾಗಿ ಸಭೆಗೆ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ(ಆಡಳಿತ) ಉಪನಿರ್ದೇಶಕಿ ಅಲ್ಮಾಸ್ ಪರ್ವಿನ್ ತಾಜ್, ಡಯಟ್ ಅಭಿವೃದ್ಧಿ ವಿಭಾಗದ ಉಪನಿರ್ದೇಶಕ ಎನ್. ನಂಜು0ಡಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಉಮಾ,ಅಕ್ಷರದಾಸೋಹ ಶಿಕ್ಷಣಾಧಿಕಾರಿ ತಿಮ್ಮರಾಯಪ್ಪ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್