
ಬೆಂಗಳೂರು, 08ಸೆಪ್ಟೆಂಬರ್(ಹಿ.ಸ.)
ಆ್ಯಂಕರ್:
ರಾಜಧಾನಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಜಾಲ ವಿಸ್ತರಣೆಯಾಗುತ್ತಿದ್ದು, ನೇರಳೆ, ಹಸಿರು ಹಾಗೂ ಹಳದಿ ಮಾರ್ಗಗಳಲ್ಲಿ ನಿತ್ಯ ಸುಮಾರು 10 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಮೆಜೆಸ್ಟಿಕ್ ಸೇರಿದಂತೆ ನಗರದ ಹೃದಯಭಾಗದಲ್ಲಿರುವ ಪ್ರಮುಖ ನಿಲ್ದಾಣಗಳು ಸದಾ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದರೆ, ನಗರದ ಹೊರವಲಯದಲ್ಲಿರುವ ಹಲವು ಮೆಟ್ರೋ ನಿಲ್ದಾಣಗಳು ಮಾತ್ರ ಪ್ರಯಾಣಿಕರ ಕೊರತೆಯಿಂದ ಬಿಕೋ ಎನ್ನುತ್ತಿವೆ.
ಮೆಟ್ರೋ ನಿಲ್ದಾಣಗಳಿಗೆ ಸಮರ್ಪಕ ಸಂಪರ್ಕ ವ್ಯವಸ್ಥೆ, ಫೀಡರ್ ಬಸ್ಗಳ ಕೊರತೆ, ಪಾದಚಾರಿ ಮೇಲ್ಸೇತುವೆ ಸೇರಿದಂತೆ ಮೂಲಸೌಕರ್ಯಗಳ ಅಭಾವ ಹಾಗೂ ಮೆಟ್ರೋ ಪ್ರಯಾಣ ದರ ಹೆಚ್ಚಿರುವುದು ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಲು ಪ್ರಮುಖ ಕಾರಣ ಎನ್ನಲಾಗಿದೆ.
ಫೀಡರ್ ಬಸ್ಗಳ ಕೊರತೆಜಾಲಹಳ್ಳಿ, ಪೀಣ್ಯ, ಜ್ಞಾನಭಾರತಿ, ಬೆರಟೇನ ಅಗ್ರಹಾರ ಸೇರಿದಂತೆ ನಗರದ ಹೊರವಲಯದ ಹಲವು ನಿಲ್ದಾಣಗಳಿಗೆ ಸುತ್ತಮುತ್ತಲಿನ ಪ್ರದೇಶಗಳಿಂದ 1–2 ಕಿ.ಮೀ. ದೂರ ನಡೆದು ಅಥವಾ ಆಟೋದಲ್ಲಿ ಬರಬೇಕಾದ ಪರಿಸ್ಥಿತಿ ಇದೆ. ಮೆಟ್ರೋ ಫೀಡರ್ ಬಸ್ಗಳ ಸಂಖ್ಯೆ ಕಡಿಮೆ ಇರುವುದರಿಂದ ಪ್ರಯಾಣಿಕರು ಸ್ವಂತ ವಾಹನ ಅಥವಾ ಬಿಎಂಟಿಸಿ ಬಸ್ಗಳನ್ನೇ ಅವಲಂಬಿಸುತ್ತಿದ್ದಾರೆ.
ಮೆಟ್ರೋ ನಿಲ್ದಾಣದವರೆಗೆ ತಲುಪಲು ಫೀಡರ್ ಬಸ್ಗಳ ವ್ಯವಸ್ಥೆ ಸಮರ್ಪಕವಾಗಿಲ್ಲ. ಆಟೋದಲ್ಲಿ ಬಂದರೆ ಹೆಚ್ಚುವರಿ ಹಣ ಖರ್ಚಾಗುತ್ತದೆ. ಕೆಲವೊಮ್ಮೆ ಬಿಎಂಟಿಸಿ ಬಸ್ ಪ್ರಯಾಣಕ್ಕಿಂತ ಮೆಟ್ರೋ ಪ್ರಯಾಣವೇ ದುಬಾರಿಯಾಗುತ್ತದೆ. ಹೀಗಾಗಿ ಸಾರ್ವಜನಿಕರು ಮೆಟ್ರೋ ಬಳಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೆದ್ದಾರಿ ದಾಟಲು ಹರಸಾಹಸಪೀಣ್ಯ ಕೈಗಾರಿಕಾ ಪ್ರದೇಶ, ನಾಗಸಂದ್ರ, ಜಾಲಹಳ್ಳಿ ಹಾಗೂ ದಾಸರಹಳ್ಳಿ ಭಾಗದ ಮೆಟ್ರೋ ನಿಲ್ದಾಣಗಳಿಂದ ಇಳಿಯುವ ಪ್ರಯಾಣಿಕರು ತುಮಕೂರು ರಸ್ತೆಯ ರಾಷ್ಟ್ರೀಯ ಹೆದ್ದಾರಿ ದಾಟಬೇಕಾದ ಪರಿಸ್ಥಿತಿ ಇದೆ. ನಿಲ್ದಾಣಗಳಿಂದ ಪ್ರಮುಖ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಸಮರ್ಪಕ ಪಾದಚಾರಿ ಮೇಲ್ಸೇತುವೆ ಇಲ್ಲದಿರುವುದು ಪ್ರಯಾಣಿಕರಿಗೆ ತೊಂದರೆಯಾಗಿದೆ.
ಮೆಟ್ರೋದಲ್ಲಿ ಪ್ರಯಾಣಿಸಿದರೂ ನಿಲ್ದಾಣದಿಂದ ಹೊರಬಂದ ಬಳಿಕ ರಸ್ತೆ ದಾಟುವುದು ದೊಡ್ಡ ಸಮಸ್ಯೆಯಾಗಿದೆ. ಸುರಕ್ಷಿತ ಪಾದಚಾರಿ ಸಂಪರ್ಕ ಕಲ್ಪಿಸಿದರೆ ಹೆಚ್ಚಿನ ಜನರು ಮೆಟ್ರೋ ಬಳಸುವ ಸಾಧ್ಯತೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕೇಂದ್ರ ಭಾಗದ ನಿಲ್ದಾಣಗಳಿಗೆ ಮಾತ್ರ ಆದ್ಯತೆ?ಮೆಜೆಸ್ಟಿಕ್, ಕೆ.ಆರ್.ಪುರಂ, ಚಿಕ್ಕಪೇಟೆ, ಎಂಜಿ ರಸ್ತೆ, ವಿಧಾನಸೌಧ, ವಿಜಯನಗರ, ಸಿಲ್ಕ್ಬೋರ್ಡ್ ಜಂಕ್ಷನ್ ಹಾಗೂ ಜಯನಗರದಂತಹ ಪ್ರಮುಖ ನಿಲ್ದಾಣಗಳಲ್ಲಿ ಬಸ್ ಸಂಪರ್ಕ, ಪಾದಚಾರಿ ಮೇಲ್ಸೇತುವೆ ಸೇರಿದಂತೆ ಹಲವು ಸೌಲಭ್ಯಗಳಿವೆ. ಆದರೆ ಹೊರವಲಯದ ನಿಲ್ದಾಣಗಳಲ್ಲಿ ಇದೇ ರೀತಿಯ ಸೌಲಭ್ಯಗಳ ಕೊರತೆ ಕಂಡುಬರುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ನಗರದ ಹೃದಯಭಾಗದ ನಿಲ್ದಾಣಗಳಿಗೆ ನೀಡುವಷ್ಟೇ ಆದ್ಯತೆಯನ್ನು ಹೊರವಲಯದ ನಿಲ್ದಾಣಗಳಿಗೂ ನೀಡಬೇಕು. ಪ್ರಯಾಣಿಕರ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಮೂಲಸೌಕರ್ಯ ಕಲ್ಪಿಸದೇ ಇರುವುದು ಸರಿಯಲ್ಲ. ಸೌಲಭ್ಯ ಕಲ್ಪಿಸಿದರೆ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಲಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಡಿಮೆ ಪ್ರಯಾಣಿಕರಿರುವ ನಿಲ್ದಾಣಗಳುನೇರಳೆ, ಹಸಿರು ಮತ್ತು ಹಳದಿ ಮಾರ್ಗಗಳ ನಗರದಿಂದ ದೂರವಿರುವ ಸುಮಾರು 20 ನಿಲ್ದಾಣಗಳಲ್ಲಿ ನಿರೀಕ್ಷಿತ ಪ್ರಮಾಣದ ಪ್ರಯಾಣಿಕರ ಸಂಚಾರ ಕಂಡುಬರುತ್ತಿಲ್ಲ.
ಹಳದಿ ಮಾರ್ಗದ ಬೆರಟೇನ ಅಗ್ರಹಾರ ನಿಲ್ದಾಣದಲ್ಲಿ ದಿನಕ್ಕೆ ಕೇವಲ 1,243 ಮಂದಿ, ಸಿಂಗಸಂದ್ರದಲ್ಲಿ 2,539, ಹೊಸೂರು ರಸ್ತೆಯಲ್ಲಿ 3,168, ಮಂಜುನಾಥ ನಗರದಲ್ಲಿ 1,411, ಪೀಣ್ಯ ಇಂಡಸ್ಟ್ರಿಯಲ್ಲಿ 2,676, ತಲಘಟ್ಟಪುರದಲ್ಲಿ 3,349, ನಾಯಂಡಹಳ್ಳಿಯಲ್ಲಿ 2,645, ಹೋಪ್ಫಾರ್ಮ್ನಲ್ಲಿ 3,190 ಹಾಗೂ ದೀಪಾಂಜಲಿ ನಗರದಲ್ಲಿ 4,610 ಮಂದಿ ಮಾತ್ರ ಸಂಚರಿಸುತ್ತಿದ್ದಾರೆ ಎನ್ನಲಾಗಿದೆ.
ಇದಲ್ಲದೆ ಹೊಂಗಸಂದ್ರ, ಕೂಡ್ಲುಗೇಟ್, ಎಲೆಕ್ಟ್ರಾನಿಕ್ ಸಿಟಿ, ಮಾದಾವರ, ಚಿಕ್ಕಬಿದರಕಲ್ಲು, ಜ್ಞಾನಭಾರತಿ ಹಾಗೂ ಮಹಾಕವಿ ಕುವೆಂಪು ರಸ್ತೆ ನಿಲ್ದಾಣಗಳಲ್ಲೂ ನಿರೀಕ್ಷಿತ ಪ್ರಮಾಣದ ಪ್ರಯಾಣಿಕರ ಸಂಚಾರವಾಗುತ್ತಿಲ್ಲ.
ಫೀಡರ್ ಬಸ್ ಹೆಚ್ಚಳಕ್ಕೆ ಆಗ್ರಹಹೊರವಲಯದ ನಿಲ್ದಾಣಗಳ ಪ್ರಯಾಣಿಕರ ಸಂಖ್ಯೆ ಹೆಚ್ಚಿಸಲು ಹೆಚ್ಚಿನ ಸಂಖ್ಯೆಯಲ್ಲಿ ಫೀಡರ್ ಬಸ್ಗಳನ್ನು ಒದಗಿಸುವುದು, ಹಾಲಿ ಬಸ್ಗಳ ಸಂಖ್ಯೆಯನ್ನು ಹೆಚ್ಚಿಸುವುದು, ಸುರಕ್ಷಿತ ಪಾದಚಾರಿ ಮಾರ್ಗ ಹಾಗೂ ಸ್ಕೈವಾಕ್ಗಳನ್ನು ನಿರ್ಮಿಸುವುದು ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.
ಮೆಟ್ರೋ ಜಾಲ ವಿಸ್ತರಿಸುವುದಷ್ಟೇ ಸಾಕಾಗುವುದಿಲ್ಲ. ಪ್ರತಿ ನಿಲ್ದಾಣಕ್ಕೂ ಕೊನೆಯ ಹಂತದ ಸಂಪರ್ಕ ವ್ಯವಸ್ಥೆ (ಲಾಸ್ಟ್ ಮೈಲ್ ಕನೆಕ್ಟಿವಿಟಿ) ಕಲ್ಪಿಸಬೇಕು. ಹೊರವಲಯದ ನಿಲ್ದಾಣಗಳತ್ತ ಹೆಚ್ಚಿನ ಗಮನ ಹರಿಸಿದರೆ ಮಾತ್ರ ಮೆಟ್ರೋ ಯೋಜನೆಯ ಸಂಪೂರ್ಣ ಪ್ರಯೋಜನ ಜನರಿಗೆ ತಲುಪಲಿದೆ ಎಂದು ಸಾರ್ವಜನಿಕರು ಹೇಳಿದ್ದಾರೆ.
ಹೊರವಲಯದ ಮೆಟ್ರೋ ನಿಲ್ದಾಣಗಳಲ್ಲಿ ಮೂಲಸೌಕರ್ಯ ಹಾಗೂ ಸಂಪರ್ಕ ವ್ಯವಸ್ಥೆ ಸುಧಾರಿಸಿ, ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಮೂಲಕ ಮೆಟ್ರೋ ಬಳಕೆಯನ್ನು ಹೆಚ್ಚಿಸುವ ಅಗತ್ಯವಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R