ಆನೆಕೊಂಡ ಬಸವೇಶ್ವರ ಸ್ವಾಮಿ ಕಾರ್ಣಿಕೋತ್ಸವ: ಕೆಂಪಗೊಂಡಿ ಹಾವಳಿ ಹೆಚ್ಚಾದೀತಲೇ
‘ಕೆಂಪಗೊಂಡಿ ಹಾವಳಿ ಹೆಚ್ಚಾದೀತಲೇ’
ಆನೆಕೊಂಡ ಬಸವೇಶ್ವರ ಸ್ವಾಮಿ ಕಾರ್ಣಿಕೋತ್ಸವ: ಕೆಂಪಗೊಂಡಿ ಹಾವಳಿ ಹೆಚ್ಚಾದೀತಲೇ


ದಾವಣಗೆರೆ, 08 ಸೆಪ್ಟೆಂಬರ್(ಹಿ.ಸ.)

ಆ್ಯಂಕರ್:

ನಗರದ ಐತಿಹಾಸಿಕ ಕ್ಷೇತ್ರ ಶ್ರೀ ಆನೆಕೊಂಡ ಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಕಾರ್ಣಿಕೋತ್ಸವವು ನಗರದ ಮರಡಿ ಬಸವೇಶ್ವರ ಸ್ವಾಮಿ ಆವರಣದಲ್ಲಿ ಶ್ರದ್ಧಾಭಕ್ತಿಯಿಂದ ಹಾಗೂ ವಿಜೃಂಭಣೆಯಿಂದ ನೆರವೇರಿತು.

ಶ್ರಾವಣ ಮಾಸದ ಕೊನೆಯ ಸೋಮವಾರ ನಡೆಯುವ ಪ್ರಸಿದ್ಧ ಕಾರ್ಣಿಕೋತ್ಸವವನ್ನು ವೀಕ್ಷಿಸಲು ದಾವಣಗೆರೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.

ಕಾರ್ಣಿಕೋತ್ಸವದ ಸಂದರ್ಭದಲ್ಲಿ ‘ರಾಮ ರಾಮ ಅಂದು ನುಡಿದಿತ್ತಲೆ, ಶೃಂಗಾರದ ವನಕೆ ಮುತ್ತೈದೆಯರು ಸೇರಗ ಹೊಡೆದರಲೇ, ನರಲೋಕದ ಜನಕೆ ಆನೆ ಆಶೀರ್ವಾದ ಮಾಡಿತ್ತಲೆ, ಕೆಂಪಗೊಂಡಿ ಹಾವಳಿ ಹೆಚ್ಚಾದಿತಲೇ, ಎಚ್ಚರ ಎಚ್ಚರ ಎಚ್ಚರ’ ಎಂಬ ಕಾರ್ಣಿಕ ನುಡಿ ಮೊಳಗಿತು.

ಬಾತಿ, ನೀಲಾನಹಳ್ಳಿ ಶ್ರೀ ಆಂಜನೇಯಸ್ವಾಮಿ, ಆನೆಕೊಂಡದ ಶ್ರೀ ಬಸವೇಶ್ವರಸ್ವಾಮಿ, ನಿಟುವಳ್ಳಿಯ ಶ್ರೀ ತಾಯಿ ದುರ್ಗಾಂಬಿಕಾ ದೇವಿ, ಶ್ರೀ ಕನಕದುರ್ಗಾದೇವಿ ಸೇರಿದಂತೆ ವೆಂಕಭೋವಿ ಕಾಲೋನಿ ಹಾಗೂ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ದೇವರುಗಳ ಸಮ್ಮುಖದಲ್ಲಿ ಕಾರ್ಣಿಕೋತ್ಸವ ನಡೆಯಿತು.

ಶ್ರೀ ಬಸವೇಶ್ವರ ಸ್ವಾಮಿಯ ಕಾರ್ಣಿಕಕ್ಕೆ ಈ ಭಾಗದಲ್ಲಿ ವಿಶೇಷ ಮಹತ್ವವಿದೆ. ರಾಜಕೀಯ, ಆರ್ಥಿಕ ಪರಿಸ್ಥಿತಿ, ಮಳೆ-ಬೆಳೆ ಸೇರಿದಂತೆ ಹಲವು ವಿಚಾರಗಳ ಕುರಿತು ಕಾರ್ಣಿಕದ ನುಡಿಯನ್ನು ಭಕ್ತರು ಕುತೂಹಲದಿಂದ ಗಮನಿಸುತ್ತಾರೆ.

ಕಾರ್ಣಿಕೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆದವು.ಕಾರ್ಣಿಕೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಜಾತ್ರಾ ವಾತಾವರಣ ನಿರ್ಮಾಣವಾಗಿತ್ತು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande