
ಬಳ್ಳಾರಿ, 08 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯನ್ನು ನಗರದಲ್ಲಿ ಅತ್ಯಂತ ವಿಜೃಂಭಣೆ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಸಕಲ ಪೂರ್ವಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಸಂಬ0ಧಪಟ್ಟ ಇಲಾಖಾ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಅವರು ಸೂಚಿಸಿದರು.
ಜಿಲ್ಲಾ ಕೇಂದ್ರದಲ್ಲಿ ಸೆ.17 ರಂದು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕುರಿತು ಚರ್ಚಿಸಲು ನಗರದ ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬಂದು ಹೋಗಲು ಸುಲಭವಾಗುವ ದೃಷ್ಟಿಯಿಂದ ಈ ಬಾರಿಯೂ ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲೇ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದ್ದು, ಧ್ವಜಾರೋಹಣ ಮತ್ತು ಸಭಾ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ 371(ಜೆ) ಮಹತ್ವದ ಅರಿವು ಮೂಡಿಸಲು ಕಾರ್ಯಕ್ರಮಕ್ಕೆ ಕಾಲೇಜು ವಿದ್ಯಾರ್ಥಿಗಳನ್ನು ಗರಿಷ್ಠ ಸಂಖ್ಯೆಯಲ್ಲಿ ಆಹ್ವಾನಿಸಲು ಕ್ರಮ ಕೈಗೊಳ್ಳಬೇಕು. ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂವಿಧಾನದ 371(ಜೆ) ವಿಶೇಷ ಸ್ಥಾನಮಾನ ತಂದುಕೊಡಲು ನಡೆದ ಹೋರಾಟಗಳು ಹಾಗೂ ಅದರಿಂದ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಆಗಿರುವ ಪ್ರಯೋಜನಗಳ ಬಗ್ಗೆ ಇಂದಿನ ಯುವಪೀಳಿಗೆಗೆ ಸ್ಪಷ್ಟ ಅರಿವು ಮೂಡಿಸಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಸಾರ್ವಜನಿಕರು ಮತ್ತು ಅತಿಥಿಗಳಿಗೆ ಆಸನದ ವ್ಯವಸ್ಥೆಗಾಗಿ ಕನಿಷ್ಠ 1,000ಕ್ಕೂ ಹೆಚ್ಚು ಕುರ್ಚಿಗಳು ಹಾಗೂ ಅಗತ್ಯವಾದ ವಿಶಾಲ ಶ್ಯಾಮಿಯಾನವನ್ನು ಲೋಕೋಪಯೋಗಿ ಇಲಾಖೆ ವತಿಯಿಂದ ಅಚ್ಚುಕಟ್ಟಾಗಿ ಕಲ್ಪಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕಾರ್ಯಕ್ರಮದ ಸ್ಥಳದಲ್ಲಿ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ, ಬಿಸಿಲಿನ ತಾಪ ತಪ್ಪಿಸಿ ನೆರಳು ಹಾಗೂ ಸ್ವಚ್ಛತೆಯ ಬಗ್ಗೆ ವಿಶೇಷ ಗಮನಹರಿಸಬೇಕು. ಧ್ವಜಾರೋಹಣ, ರಾಷ್ಟಗೀತೆ, ನಾಡಗೀತೆ ಹಾಗೂ ಗೌರವ ವಂದನೆ ಪ್ರಕ್ರಿಯೆಗಳನ್ನು ಯಾವುದೇ ಗೊಂದಲವಿಲ್ಲದೆ ಶಿಷ್ಟಾಚಾರದ ಪ್ರಕಾರ ನಿಖರವಾಗಿ ನಿರ್ವಹಿಸಬೇಕು.
ವೇದಿಕೆ ಅಲಂಕಾರ, ಹೂವಿನ ಕುಂಡಗಳ ಜೋಡಣೆ ಮತ್ತು ಆಸನಗಳ ವ್ಯವಸ್ಥೆಯನ್ನು ಮುಂಚಿತವಾಗಿಯೇ ಪೂರ್ಣಗೊಳಿಸಬೇಕು. ಮುನ್ಸಿಪಲ್ ಮೈದಾನದಲ್ಲಿ ಸಾರ್ವಜನಿಕರಿಗೆ ಯಾವುದೇ ಅಡಚಣೆಯಾಗದಂತೆ ಸಕಲ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಪ್ರಮುಖ ಹೋರಾಟಗಾರರನ್ನು ಕಾರ್ಯಕ್ರಮದಲ್ಲಿ ಗೌರವಿಸಿ ಸನ್ಮಾನಿಸಲು ತೀರ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ, ಕವನ ಹಾಗೂ ಭಾಷಣ ಸ್ಪರ್ಧೆಗಳನ್ನು ನಡೆಸಿ, ವಿಜೇತರಾದ ಮಕ್ಕಳಿಗೆ ಪ್ರಮಾಣಪತ್ರ ಮತ್ತು ಪುಸ್ತಕ ನೀಡಿ ಪ್ರೋತ್ಸಾಹಿಸಲು ಸೂಚಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಭಾಗವಹಿಸಬೇಕು. ಹಾಜರಾತಿಯನ್ನು ಪರಿಶೀಲಿಸಲಾಗುತ್ತದೆ. ಪ್ರತಿಯೊಬ್ಬರೂ ತಪ್ಪದೇ ಹಾಜರಿರಬೇಕು. ಅದೇರಿತೀಯಾಗಿ ನಗರದ ಪ್ರಮುಖ ವೃತ್ತಗಳು ಹಾಗೂ ಸರ್ಕಾರಿ ಕಚೇರಿ ಕಟ್ಟಡಗಳನ್ನು ವಿದ್ಯುದ್ದೀಪಗಳಿಂದ ಆಕರ್ಷಕವಾಗಿ ಅಲಂಕರಿಸಬೇಕು ಎಂದರು.
ಉತ್ಸವದ ಹೆಸರಿನಲ್ಲಿ ಯಾರೂ ಕೂಡ ವೈಯಕ್ತಿಕ ಪ್ರಚಾರಕ್ಕಾಗಿ ನಗರದಾದ್ಯಂತ ರಸ್ತೆಗಳಲ್ಲಿ ಬ್ಯಾನರ್, ಫ್ಲೆಕ್ಸ್ ಅಥವಾ ಕಟೌಟ್ಗಳನ್ನು ಹಾಕುವಂತಿಲ್ಲ. ಕೇವಲ ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ಅಧಿಕೃತವಾಗಿ ಪ್ರಚಾರ ಫಲಕಗಳನ್ನು ಅಳವಡಿಸಬೇಕು. ಹಾಗೂ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಸಿರಿಗೇರಿ ಪನ್ನರಾಜ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್