
ಬೆಂಗಳೂರು, 08ಸೆಪ್ಟೆಂಬರ್(ಹಿ.ಸ.)
ಆ್ಯಂಕರ್:
ಕಳೆದ 15 ವರ್ಷಗಳಿಂದ ಪ್ಲಾಸ್ಟಿಕ್ ಮುಕ್ತವಾಗಿ ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿರುವ ‘ಬೆಂಗಳೂರು ಗಣೇಶೋತ್ಸವ’ ಈ ಬಾರಿ 64ನೇ ಆವೃತ್ತಿಯಲ್ಲಿ ಶೂನ್ಯ ತ್ಯಾಜ್ಯ ಹಾಗೂ ಸುಸ್ಥಿರ ಆಚರಣೆಗೆ ಹೆಚ್ಚಿನ ಆದ್ಯತೆ ನೀಡಿದೆ.
ಶ್ರೀ ವಿದ್ಯಾರಣ್ಯ ಯುವಕ ಸಂಘದ ವತಿಯಿಂದ ಆಯೋಜಿಸಲಾಗುತ್ತಿರುವ ಉತ್ಸವದಲ್ಲಿ ತ್ಯಾಜ್ಯ ವಿಂಗಡಣೆ, ಮರುಬಳಕೆ ಹಾಗೂ ಮರುಚಕ್ರಬಳಕೆಗೆ ಒತ್ತು ನೀಡಲಾಗುತ್ತಿದೆ.
ಪರಿಸರ ಸಂರಕ್ಷಣೆಯ ಸಂದೇಶ ಸಾರುವ ನಿಟ್ಟಿನಲ್ಲಿ ಬಿದಿರು, ಹುಲ್ಲು ಹಾಗೂ ಜೇಡಿಮಣ್ಣಿನಂತಹ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿ 21 ಅಡಿ ಎತ್ತರದ ಬೃಹತ್ ಗಣೇಶ ಮೂರ್ತಿಯನ್ನು ನಿರ್ಮಿಸಲಾಗುತ್ತಿದೆ.
ಗಣೇಶ ಮೂರ್ತಿ ನಿರ್ಮಾಣಕ್ಕೆ ಗಂಗಾ ನದಿಯಿಂದ ತರಿಸಲಾದ ಮಣ್ಣು ಹಾಗೂ ಮರಳನ್ನು ಬಳಸಲಾಗುತ್ತಿದ್ದು, ಪರಿಸರ ಸ್ನೇಹಿ ಆಚರಣೆಯತ್ತ ಉತ್ಸವ ಆಯೋಜಕರು ಗಮನಹರಿಸಿದ್ದಾರೆ.
ಶ್ರೀ ವಿದ್ಯಾರಣ್ಯ ಯುವಕ ಸಂಘವು 1967ರಿಂದ ಬೆಂಗಳೂರಿನಲ್ಲಿ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಯೋಜಿಸಿಕೊಂಡು ಬರುತ್ತಿದೆ. ಈ ಬಾರಿ ಪರಿಸರ ಸ್ನೇಹಿ ಉಪಕ್ರಮಕ್ಕೆ ಮತ್ತಷ್ಟು ಉತ್ತೇಜನ ನೀಡುವ ಉದ್ದೇಶದಿಂದ ಶೂನ್ಯ ತ್ಯಾಜ್ಯ ಪರಿಕಲ್ಪನೆಯನ್ನು ಅಳವಡಿಸಿಕೊಳ್ಳಲಾಗಿದೆ.
ಅರಣ್ಯ, ಜೈವಿಕ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಅವರು ಮಂಗಳವಾರ ಉತ್ಸವ ಸ್ಥಳಕ್ಕೆ ಭೇಟಿ ನೀಡಿ ಪರಿಸರ ಸ್ನೇಹಿ ಉಪಕ್ರಮಕ್ಕೆ ಪ್ರೋತ್ಸಾಹ ನೀಡಿದ್ದಾರೆ
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R