ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 108 ಆರೋಗ್ಯ ಕವಚ ಸಿಬ್ಬಂದಿ ಸಾಮೂಹಿಕ ರಾಜೀನಾಮೆಗೆ ನಿರ್ಧಾರ
15 ದಿನಗಳಲ್ಲಿ ಬೇಡಿಕೆ ಈಡೇರಿಸದಿದ್ದರೆ 108 ಸಿಬ್ಬಂದಿಗಳ ಸಾಮೂಹಿಕ ರಾಜೀನಾಮೆ ಎಚ್ಚರಿಕೆ
108-ambulance-staff-warn-of-mass-resignation-if-demands-not-met-within-15-days


ಬೆಂಗಳೂರು, 08ಸೆಪ್ಟೆಂಬರ್(ಹಿ.ಸ.)

ಆ್ಯಂಕರ್:

ರಾಜ್ಯಾದ್ಯಂತ ಆರೋಗ್ಯ ಕವಚ 108 ಆಂಬುಲೆನ್ಸ್ ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 3,500ಕ್ಕೂ ಹೆಚ್ಚು ಸಿಬ್ಬಂದಿಗಳು ತಮ್ಮ ವಿವಿಧ ಬೇಡಿಕೆಗಳನ್ನು 15 ದಿನಗಳೊಳಗೆ ಈಡೇರಿಸದಿದ್ದರೆ ಸಾಮೂಹಿಕ ರಾಜೀನಾಮೆ ನೀಡಿ ಹೋರಾಟಕ್ಕೆ ಇಳಿಯುವುದಾಗಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಕಳೆದ ಮೂರು ವರ್ಷಗಳಿಂದ ಸಿಬ್ಬಂದಿಗಳ ಹಲವು ಪ್ರಮುಖ ಬೇಡಿಕೆಗಳನ್ನು ರಾಜ್ಯ ಸರ್ಕಾರ ಹಾಗೂ ಸಂಬಂಧಪಟ್ಟ ಸಂಸ್ಥೆ ನಿರ್ಲಕ್ಷ್ಯ ಮಾಡಿದೆ ಎಂದು ಆರೋಪಿಸಿರುವ ಸಿಬ್ಬಂದಿಗಳು, ಈ ಸಂಬಂಧ ಆರೋಗ್ಯ ಇಲಾಖೆಗೆ ಮನವಿ ಸಲ್ಲಿಸಿ ತಕ್ಷಣ ಮಧ್ಯಪ್ರವೇಶಿಸುವಂತೆ ಆಗ್ರಹಿಸಿದ್ದಾರೆ.

ಸಿಬ್ಬಂದಿಗಳ ಪ್ರಕಾರ, ನೇಮಕಾತಿ ಸಂದರ್ಭದಲ್ಲಿ ವಾರ್ಷಿಕ ವೇತನ ಹೆಚ್ಚಳ ಹಾಗೂ ದಿನಕ್ಕೆ ಎರಡು ಪಾಳಿಗಳಲ್ಲಿ 12 ಗಂಟೆಗಳ ಕರ್ತವ್ಯದ ಷರತ್ತಿನಡಿ ನೇಮಕ ಮಾಡಿಕೊಳ್ಳಲಾಗಿತ್ತು. 2008ರಿಂದ 2017ರವರೆಗೆ ವಾರ್ಷಿಕ ವೇತನ ಹೆಚ್ಚಳ ನೀಡಲಾಗುತ್ತಿತ್ತು. ಆದರೆ 2017ರಿಂದ 2022ರವರೆಗೆ ಯಾವುದೇ ವೇತನ ಹೆಚ್ಚಳ ನೀಡಿಲ್ಲ ಎಂದು ಅವರು ದೂರಿದ್ದಾರೆ.

ಈ ಕುರಿತು ನಡೆದ ಪ್ರತಿಭಟನೆಗಳ ಬಳಿಕ ಆರೋಗ್ಯ ಇಲಾಖೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ಇಎಂಆರ್ಐ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಂಘಟನೆಯ ಪ್ರತಿನಿಧಿಗಳ ಸಭೆ ನಡೆದಿದ್ದು, ಬಾಕಿ ಉಳಿದ ವೇತನ ಹೆಚ್ಚಳಕ್ಕೆ ಪರ್ಯಾಯವಾಗಿ ಮೂರು ವರ್ಷಗಳಿಗೆ ಒಟ್ಟು ಶೇ.45ರಷ್ಟು ವೇತನ ಹೆಚ್ಚಳ ನೀಡಲು ಒಪ್ಪಿಗೆ ಸೂಚಿಸಲಾಗಿತ್ತು ಎಂದು ಸಿಬ್ಬಂದಿಗಳು ಹೇಳಿದ್ದಾರೆ. ಆದರೆ ಈ ಹೆಚ್ಚಳವನ್ನು ಕೆಲವೇ ತಿಂಗಳು ಜಾರಿಗೊಳಿಸಿ ಬಳಿಕ ವೇತನ ಕಡಿತ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಇದರ ಜೊತೆಗೆ, ಕರ್ತವ್ಯದ ಅವಧಿಯನ್ನು ಎಂಟು ಗಂಟೆಗೆ ಸೀಮಿತಗೊಳಿಸಿ ಹೊಸ ಪಾಳಿ ವ್ಯವಸ್ಥೆ ಜಾರಿಗೊಳಿಸಿರುವುದು ಹಾಗೂ ವಲಯವಾರು ವೇತನ ವ್ಯವಸ್ಥೆ ಅನುಷ್ಠಾನಗೊಳಿಸಿರುವುದು ಸಿಬ್ಬಂದಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಇದರಿಂದ ಜೇಷ್ಠತೆಗೆ ಧಕ್ಕೆಯಾಗಿದ್ದು, ವೇತನದಲ್ಲಿ ಅಸಮಾನತೆ ಉಂಟಾಗಿದೆ ಎಂದು ಸಂಘಟನೆ ಆರೋಪಿಸಿದೆ.

2025ರ ಜನವರಿಯಿಂದ ಜಾರಿಗೊಳಿಸಿರುವ ಹೊಸ ಪಾಳಿ ವ್ಯವಸ್ಥೆಯಿಂದ ಸಿಬ್ಬಂದಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಬೆಳಗ್ಗೆ 6 ಗಂಟೆಗೆ ಕರ್ತವ್ಯಕ್ಕೆ ಹಾಜರಾಗುವುದು ಮತ್ತು ರಾತ್ರಿ 10 ಗಂಟೆಯ ಬಳಿಕ ಮನೆಗೆ ಮರಳಲು ಸಮರ್ಪಕ ಸಾರಿಗೆ ಸೌಲಭ್ಯ ಇಲ್ಲದಿರುವುದು ಪ್ರಮುಖ ಸಮಸ್ಯೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಪಾಳಿ ಸಮಯವನ್ನು ಮರುಪರಿಶೀಲಿಸಬೇಕು ಅಥವಾ ರಾತ್ರಿ ಹಾಗೂ ಮುಂಜಾನೆ ಪಾಳಿಯ ಸಿಬ್ಬಂದಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಲಾಗಿದೆ.ಪ್ರಮುಖ ಬೇಡಿಕೆಗಳುಸಿಬ್ಬಂದಿಗಳು ಸರ್ಕಾರದ ಮುಂದೆ ಹಲವು ಪ್ರಮುಖ ಬೇಡಿಕೆಗಳನ್ನು ಮಂಡಿಸಿದ್ದು, ನೇಮಕಾತಿ ಸಂದರ್ಭದಲ್ಲಿ ನಿಗದಿಪಡಿಸಿದ್ದ ವೇತನಕ್ಕೆ ಅನುಗುಣವಾಗಿ ವಾರ್ಷಿಕ ವೇತನ ಹೆಚ್ಚಳದೊಂದಿಗೆ ವೇತನ ಪರಿಷ್ಕರಣೆ, ವಲಯವಾರು ವೇತನ ವ್ಯವಸ್ಥೆ ರದ್ದುಪಡಿಸಿ ಏಕರೂಪ ವೇತನ ಜಾರಿ, ಕರ್ತವ್ಯದ ವೇಳೆ ಮೃತಪಟ್ಟ ಅಥವಾ ಶಾಶ್ವತ ಅಂಗವೈಕಲ್ಯಕ್ಕೊಳಗಾದ ಸಿಬ್ಬಂದಿ ಕುಟುಂಬಕ್ಕೆ ₹50 ಲಕ್ಷ ಪರಿಹಾರ, ಜೇಷ್ಠತೆಯ ಆಧಾರದ ಮೇಲೆ ವೇತನ ನಿಗದಿ ಹಾಗೂ ಪ್ರತಿತಿಂಗಳು ನಿಗದಿತ ಅವಧಿಯೊಳಗೆ ವೇತನ ಪಾವತಿ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

ಇದೇ ವೇಳೆ, ರಾಜ್ಯದ ಎಲ್ಲ ಆಂಬುಲೆನ್ಸ್ ಕೇಂದ್ರಗಳಲ್ಲಿ ಸಿಬ್ಬಂದಿಗಳಿಗೆ ವಿಶ್ರಾಂತಿ ಕೊಠಡಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಹಾಗೂ ಹೊಸ ಪಾಳಿ ವ್ಯವಸ್ಥೆಯನ್ನು ಸಿಬ್ಬಂದಿಗಳಿಗೆ ಅನುಕೂಲವಾಗುವಂತೆ ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಾರ್ವಜನಿಕರ ತುರ್ತು ಆರೋಗ್ಯ ಸೇವೆಯಲ್ಲಿ ಹಗಲಿರುಳು ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳ ಸಮಸ್ಯೆಗಳಿಗೆ ಸರ್ಕಾರ ಹಾಗೂ ಆರೋಗ್ಯ ಇಲಾಖೆ 15 ದಿನಗಳೊಳಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಸಂಘಟನೆ ಆಗ್ರಹಿಸಿದೆ. ನಿಗದಿತ ಅವಧಿಯಲ್ಲಿ ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಜ್ಯಾದ್ಯಂತ 3,500ಕ್ಕೂ ಹೆಚ್ಚು ಸಿಬ್ಬಂದಿಗಳು ಸಾಮೂಹಿಕ ರಾಜೀನಾಮೆ ನೀಡಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande