ಕಾಡಸಿದ್ಧೇಶ್ವರ ಜಾತ್ರೆಯಲ್ಲಿ ಬೃಹತ್ ಪಟಾಕಿ ಸಿಡಿಸಿ ಸಂಭ್ರಮಿಸಿದ ಭಕ್ತರು
ಬಾಗಲಕೋಟೆ, 30 ಸೆಪ್ಟೆಂಬರ್ (ಹಿ.ಸ.) ಉತ್ತರ ಕರ್ನಾಟಕದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿರುವ ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ಶ್ರೀ ಕಾಡಸಿದ್ಧೇಶ್ವರ ಜಾತ್ರೆ ಸಂಭ್ರಮ, ಸಡಗರ ಹಾಗೂ ಭಕ್ತಿಭಾವದಿಂದ ಜರುಗಿತು. ಜಾತ್ರೆಯ ಪ್ರಮುಖ ಆಕರ್ಷಣೆಯಾಗಿರುವ ರಥೋತ್ಸವದ ಅಂಗವಾಗಿ ಮಧ್ಯಾಹ್ನ ನಡೆದ ಬೃಹತ್ ಪಟಾಕಿ ಪ್
ಸನ್ಮಧ್ರಮ


ಬಾಗಲಕೋಟೆ, 30 ಸೆಪ್ಟೆಂಬರ್ (ಹಿ.ಸ.)

ಉತ್ತರ ಕರ್ನಾಟಕದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿರುವ ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ಶ್ರೀ ಕಾಡಸಿದ್ಧೇಶ್ವರ ಜಾತ್ರೆ ಸಂಭ್ರಮ, ಸಡಗರ ಹಾಗೂ ಭಕ್ತಿಭಾವದಿಂದ ಜರುಗಿತು. ಜಾತ್ರೆಯ ಪ್ರಮುಖ ಆಕರ್ಷಣೆಯಾಗಿರುವ ರಥೋತ್ಸವದ ಅಂಗವಾಗಿ ಮಧ್ಯಾಹ್ನ ನಡೆದ ಬೃಹತ್ ಪಟಾಕಿ ಪ್ರದರ್ಶನ ಜಾತ್ರೆಯ ಸಂಭ್ರಮವನ್ನು ಮತ್ತಷ್ಟು ಇಮ್ಮಡಿಗೊಳಿಸಿತು.

ಉತ್ತರ ಕರ್ನಾಟಕದ ‘ಮದ್ದಿನ (ಪಟಾಕಿ) ಜಾತ್ರೆ’ ಎಂದೇ ಖ್ಯಾತಿ ಪಡೆದಿರುವ ಬನಹಟ್ಟಿ ಕಾಡಸಿದ್ಧೇಶ್ವರ ಜಾತ್ರೆಯಲ್ಲಿ ಮಂಗಳವಾರ ಮಧ್ಯಾಹ್ನ ಲಕ್ಷಾಂತರ ರೂ. ಮೌಲ್ಯದ ಪಟಾಕಿಗಳನ್ನು ಸಿಡಿಸುವ ಮೂಲಕ ವಿಶೇಷ ಸಂಭ್ರಮ ಆಚರಿಸಲಾಯಿತು.

ಆಕಾಶದೆತ್ತರಕ್ಕೆ ಚಿಮ್ಮಿದ ಬಣ್ಣಬಣ್ಣದ ಪಟಾಕಿಗಳು, ನಿರಂತರವಾಗಿ ಕೇಳಿಬಂದ ಸಿಡಿಮದ್ದಿನ ಸದ್ದು ಹಾಗೂ ಜಾತ್ರೆಯ ವಾತಾವರಣದಲ್ಲಿ ಮೂಡಿದ ಉತ್ಸಾಹ ಭಕ್ತರು ಮತ್ತು ಸಾರ್ವಜನಿಕರ ಗಮನ ಸೆಳೆಯಿತು.

ಜಾತ್ರಾ ರಥೋತ್ಸವದ ಹಿನ್ನೆಲೆಯಲ್ಲಿ ಶ್ರೀ ಕಾಡಸಿದ್ಧೇಶ್ವರ ದೇವಸ್ಥಾನದ ಸುತ್ತಮುತ್ತ ಭಕ್ತರ ದಟ್ಟಣೆ ಕಂಡುಬಂದಿತು. ಅಲಂಕೃತ ರಥದ ದರ್ಶನ ಪಡೆಯಲು ಹಾಗೂ ರಥೋತ್ಸವದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಬೆಳಗ್ಗಿನಿಂದಲೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ರಥೋತ್ಸವದ ಬಳಿಕ ನಡೆದ ಪಟಾಕಿ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ನಗರದ ವಿವಿಧ ಭಾಗಗಳಲ್ಲಿ ಜನರು ಜಮಾಯಿಸಿದ್ದರು.

ಹತ್ತಾರು ಊರುಗಳಿಂದ ಹರಿದು ಬಂದ ಭಕ್ತಸಾಗರ

ಬನಹಟ್ಟಿಯ ಕಾಡಸಿದ್ಧೇಶ್ವರ ಜಾತ್ರೆಯ ವೈಭವವನ್ನು ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಗ್ರಾಮಗಳು ಹಾಗೂ ಪಟ್ಟಣಗಳಿಂದ ಮಾತ್ರವಲ್ಲದೆ ವಿವಿಧ ತಾಲೂಕು, ಜಿಲ್ಲೆ ಮತ್ತು ರಾಜ್ಯಗಳ ಭಾಗಗಳಿಂದಲೂ ಭಕ್ತರು ಆಗಮಿಸಿದ್ದರು. ರಬಕವಿ, ಮಹಾಲಿಂಗಪುರ, ರಾಮಪುರ, ಹೊಸೂರ, ಯಲ್ಲಟ್ಟಿ, ಆಸಂಗಿ, ಆಸ್ಕಿ, ಜಗದಾಳ, ನಾವಲಗಿ, ಚಿಮ್ಮಡ, ಹನಗಂಡಿ, ಹಳಿಂಗಳಿ, ತೇರದಾಳ, ಜಮಖಂಡಿ ಸೇರಿದಂತೆ ಹತ್ತಾರು ಊರುಗಳಿಂದ ಜನರು ಆಗಮಿಸಿ ಜಾತ್ರೆಯಲ್ಲಿ ಪಾಲ್ಗೊಂಡರು.

ಜಾತ್ರೆಯ ಹಿನ್ನೆಲೆಯಲ್ಲಿ ಬನಹಟ್ಟಿಯ ಪ್ರಮುಖ ರಸ್ತೆಗಳು ಜನರಿಂದ ಕಿಕ್ಕಿರಿದು ತುಂಬಿದ್ದವು. ನಗರದ ಹಲವು ಕಡೆಗಳಲ್ಲಿ ವಾಹನ ಹಾಗೂ ಜನದಟ್ಟಣೆ ಕಂಡುಬಂದಿದ್ದು, ಜಾತ್ರೆಯ ವಾತಾವರಣಕ್ಕೆ ಮತ್ತಷ್ಟು ಮೆರಗು ನೀಡಿತು. ಕುಟುಂಬ ಸಮೇತರಾಗಿ ಆಗಮಿಸಿದ್ದ ಭಕ್ತರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ರಥೋತ್ಸವ ವೀಕ್ಷಿಸಿ, ಬಳಿಕ ಪಟಾಕಿ ಪ್ರದರ್ಶನವನ್ನು ಕಣ್ತುಂಬಿಕೊಂಡರು.

ಜಾತ್ರೆಯ ಪ್ರಮುಖ ಆಕರ್ಷಣೆಯಾದ ಪಟಾಕಿ ಪ್ರದರ್ಶನ

ಬನಹಟ್ಟಿ ಕಾಡಸಿದ್ಧೇಶ್ವರ ಜಾತ್ರೆಯಲ್ಲಿ ಪಟಾಕಿ ಪ್ರದರ್ಶನಕ್ಕೆ ವಿಶೇಷ ಮಹತ್ವವಿದೆ. ವರ್ಷದಿಂದ ವರ್ಷಕ್ಕೆ ಜಾತ್ರೆಯ ಸಂದರ್ಭದಲ್ಲಿ ನಡೆಯುವ ಈ ಮದ್ದಿನ ಪ್ರದರ್ಶನವನ್ನು ವೀಕ್ಷಿಸಲು ದೂರದ ಊರುಗಳಿಂದಲೂ ಜನರು ಆಗಮಿಸುತ್ತಾರೆ.

ಮಂಗಳವಾರ ನಡೆದ ಪಟಾಕಿ ಪ್ರದರ್ಶನದಲ್ಲಿಯೂ ವಿವಿಧ ರೀತಿಯ ಪಟಾಕಿಗಳು ಸಿಡಿದು, ಕೆಲಕಾಲ ಆಕಾಶವು ಬಣ್ಣಬಣ್ಣದ ಬೆಳಕುಗಳಿಂದ ಕಂಗೊಳಿಸಿತು.

ಪಟಾಕಿಗಳ ಸದ್ದು ಕೇಳುತ್ತಿದ್ದಂತೆ ನೆರೆದಿದ್ದ ಜನರು ಹರ್ಷ ವ್ಯಕ್ತಪಡಿಸಿದರು. ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲ ವಯೋಮಾನದವರು ಪಟಾಕಿ ಪ್ರದರ್ಶನವನ್ನು ವೀಕ್ಷಿಸಿ ಸಂಭ್ರಮಿಸಿದರು. ಜಾತ್ರೆಯ ಧಾರ್ಮಿಕ ಆಚರಣೆಗಳ ಜೊತೆಗೆ ಇಂತಹ ಸಾಂಪ್ರದಾಯಿಕ ಕಾರ್ಯಕ್ರಮಗಳು ಜಾತ್ರೆಯ ವೈಶಿಷ್ಟ್ಯವನ್ನು ಮತ್ತಷ್ಟು ಹೆಚ್ಚಿಸಿವೆ.

‘ಬನಹಟ್ಟಿ ಕಾಡಸಿದ್ಧೇಶ್ವರ ಜಾತ್ರೆಯ ರಥೋತ್ಸವ ಹಾಗೂ ಪಟಾಕಿ ಪ್ರದರ್ಶನ ವೀಕ್ಷಿಸಲು ಪ್ರತಿವರ್ಷ ಸುತ್ತಮುತ್ತಲಿನ ಅನೇಕ ಊರುಗಳಿಂದ ಭಕ್ತರು ಆಗಮಿಸುತ್ತಾರೆ. ಈ ಬಾರಿಯೂ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದು, ರಥೋತ್ಸವದ ನಿಮಿತ್ತ ನಗರದ ಎಲ್ಲ ಪ್ರಮುಖ ರಸ್ತೆಗಳಲ್ಲೂ ಭಕ್ತರ ಸಂಚಾರ ಹೆಚ್ಚಾಗಿತ್ತು’ ಎಂದು ರಾಮಪ್ಪ ಮುಂಡರಗಿ ತಿಳಿಸಿದ್ದಾರೆ.

ಜಾತ್ರೆಯ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಅಂಗಡಿ-ಮುಂಗಟ್ಟುಗಳು, ವಿವಿಧ ವಸ್ತುಗಳ ಮಳಿಗೆಗಳು ಹಾಗೂ ತಿಂಡಿ-ತಿನಿಸುಗಳ ಅಂಗಡಿಗಳಲ್ಲೂ ವ್ಯಾಪಾರ ಚಟುವಟಿಕೆಗಳು ಗರಿಗೆದರಿದ್ದವು. ಒಟ್ಟಾರೆ ಭಕ್ತಿ, ಸಂಭ್ರಮ ಹಾಗೂ ಪಟಾಕಿಗಳ ಸದ್ದಿನ ನಡುವೆ ಬನಹಟ್ಟಿ ಶ್ರೀ ಕಾಡಸಿದ್ಧೇಶ್ವರ ಜಾತ್ರೆ ಅದ್ಧೂರಿಯಾಗಿ ನಡೆಯಿತು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande