
ಬೆಂಗಳೂರು, 30 ಸೆಪ್ಟೆಂಬರ್ (ಹಿ.ಸ.):
ಅವಧಿ ಮುಗಿದ ಹಾಲು, ಮೊಸರು ಸೇರಿದಂತೆ ಆಹಾರ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಕಡಿಮೆ ದರದ ಹಿನ್ನೆಲೆಯಲ್ಲಿ ಜನರು ಅವುಗಳನ್ನು ಖರೀದಿಸಲು ಮುಗಿಬಿದ್ದಿರುವ ಘಟನೆ ವರದಿಯಾಗಿದೆ.
ಅವಧಿ ಮುಗಿದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿರುವ ಕುರಿತು ಸಾರ್ವಜನಿಕ ವಲಯದಲ್ಲಿ ಆತಂಕ ವ್ಯಕ್ತವಾಗಿದ್ದು, ಇಂತಹ ಉತ್ಪನ್ನಗಳ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆಯಿದೆ.
ಹೀಗಾಗಿ ಗ್ರಾಹಕರು ಹಾಲು, ಮೊಸರು ಸೇರಿದಂತೆ ಪ್ಯಾಕ್ ಮಾಡಿದ ಆಹಾರ ಉತ್ಪನ್ನಗಳನ್ನು ಖರೀದಿಸುವ ಮುನ್ನ ಉತ್ಪಾದನಾ ದಿನಾಂಕ, ಬಳಕೆಯ ಕೊನೆಯ ದಿನಾಂಕ ಮತ್ತು ಪ್ಯಾಕೇಜಿಂಗ್ ಪರಿಶೀಲಿಸುವಂತೆ ಸೂಚಿಸಲಾಗಿದೆ.
ಇತ್ತೀಚಿನ ಆಹಾರ ಸುರಕ್ಷತಾ ತಪಾಸಣೆಗಳಲ್ಲಿಯೂ ಅವಧಿ ಮೀರಿದ ಆಹಾರ ಪದಾರ್ಥಗಳು ಪತ್ತೆಯಾಗಿರುವ ಘಟನೆಗಳು ವರದಿಯಾಗಿವೆ.
ಶಿವಮೊಗ್ಗದಲ್ಲಿ ಅಧಿಕಾರಿಗಳ ತಪಾಸಣೆ ವೇಳೆ ಹೋಟೆಲ್ನಲ್ಲಿ ಅವಧಿ ಮುಗಿದ ಹಾಲು ಪತ್ತೆಯಾಗಿದ್ದು, ಆಹಾರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಅವಧಿ ಮೀರಿದ ಅಥವಾ ಅನುಮಾನಾಸ್ಪದ ಸ್ಥಿತಿಯಲ್ಲಿರುವ ಹಾಲು, ಮೊಸರು ಹಾಗೂ ಇತರ ಆಹಾರ ಪದಾರ್ಥಗಳನ್ನು ಕಡಿಮೆ ಬೆಲೆಗೆ ನೀಡಿದರೂ ಖರೀದಿಸಿ ಸೇವಿಸಬಾರದು.
ಇಂತಹ ವಸ್ತುಗಳ ಮಾರಾಟ ಕಂಡುಬಂದಲ್ಲಿ ಸಂಬಂಧಿಸಿದ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ದೂರು ನೀಡುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R