
ಬೆಂಗಳೂರು, 03ಸೆಪ್ಟೆಂಬರ್(ಹಿ.ಸ.):
ಆ್ಯಂಕರ್:
ದೇಶದ ಪ್ರಮುಖ ಕ್ರೀಡಾಕೂಟಗಳಲ್ಲಿ ಒಂದಾದ 13ನೇ ಆವೃತ್ತಿಯ ವಿಪ್ರೋ ಬೆಂಗಳೂರು ಮ್ಯಾರಥಾನ್ ಸೆಪ್ಟೆಂಬರ್ 27ರಂದು ಬೆಂಗಳೂರಿನಲ್ಲಿ ನಡೆಯಲಿದೆ. ದೇಶ-ವಿದೇಶಗಳಿಂದ 45 ಸಾವಿರಕ್ಕೂ ಅಧಿಕ ಓಟಗಾರರು, ಸ್ಪಿರಿಟ್ ಆಫ್ ವಿಪ್ರೋ ರನ್ ಸದಸ್ಯರು ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಎನ್‌ಇಬಿ ಸ್ಪೋರ್ಟ್ಸ್ ಸಂಸ್ಥೆಯು ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್, ವಿಪ್ರೋ ಬೆಂಗಳೂರು ಹಾಗೂ ಶ್ರೀರಾಂ ಪ್ರಾಪರ್ಟೀಸ್ ಸಹಯೋಗದಲ್ಲಿ ಮ್ಯಾರಥಾನ್ ಆಯೋಜಿಸಿದೆ. ಕಂಠೀರವ ಕ್ರೀಡಾಂಗಣದಿಂದ ಆರಂಭವಾಗುವ ಓಟವು ವಿಧಾನಸೌಧ, ಕಬ್ಬನ್ ಪಾರ್ಕ್, ಎಂ.ಜಿ. ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಲಿದೆ.
ಬದುಕಿನ ಕಠಿಣ ಸವಾಲುಗಳನ್ನು ಮೆಟ್ಟಿ ನಿಂತು ಓಟದ ಮೂಲಕ ಸಾಧನೆ ಮಾಡಿದ 10 ಮಂದಿ ವಿಶೇಷ ಸಾಧಕರನ್ನು ಈ ಬಾರಿಯ ಮ್ಯಾರಥಾನ್‌ನ ಬ್ರ್ಯಾಂಡ್ ರಾಯಭಾರಿಗಳಾಗಿ ನೇಮಿಸಲಾಗಿದೆ.
ಫುಲ್ ಮ್ಯಾರಥಾನ್, ಹಾಫ್ ಮ್ಯಾರಥಾನ್, 10ಕೆ ಹಾಗೂ 5ಕೆ ವಿಭಾಗಗಳಲ್ಲಿ ಓಟ ನಡೆಯಲಿದೆ. 21ನೇ ವರ್ಷಕ್ಕೆ ಕಾಲಿಟ್ಟಿರುವ ಸ್ಪಿರಿಟ್ ಆಫ್ ವಿಪ್ರೋ ರನ್ ಕೂಡ ನಡೆಯಲಿದ್ದು, ಜಗತ್ತಿನ 70ಕ್ಕೂ ಹೆಚ್ಚು ನಗರಗಳಲ್ಲಿ ಏಕಕಾಲಕ್ಕೆ ಆಯೋಜಿಸಲಾಗುತ್ತದೆ. ವಿಪ್ರೋ ಉದ್ಯೋಗಿಗಳು, ಕುಟುಂಬಸ್ಥರು, ಗ್ರಾಹಕರು ಹಾಗೂ ಪಾಲುದಾರರು ಇದರಲ್ಲಿ ಭಾಗವಹಿಸಲಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R