ಉದ್ಯಾನವನಗಳ ತಿದ್ದುಪಡಿ ವಿಧೇಯಕ ವಿರೋಧಿಸಿ ಬಿಜೆಪಿ ಪ್ರತಿಭಟನೆ: ಆರ್.ಅಶೋಕ್
ಬಿಜೆಪಿ ಪ್ರತಿಭಟನೆ: ಆರ್.ಅಶೋಕ್ ಎಚ್ಚರಿಕೆ
ಉದ್ಯಾನವನಗಳ ತಿದ್ದುಪಡಿ ವಿಧೇಯಕ ವಿರೋಧಿಸಿ ಬಿಜೆಪಿ ಪ್ರತಿಭಟನೆ: ಆರ್.ಅಶೋಕ್


ಬೆಂಗಳೂರು, 03ಸೆಪ್ಟೆಂಬರ್(ಹಿ.ಸ.)

ಆ್ಯಂಕರ್:

ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) ತಿದ್ದುಪಡಿ ವಿಧೇಯಕ-2026ನ್ನು ವಿರೋಧಿಸಿ ಸೆಪ್ಟೆಂಬರ್ 5 ಮತ್ತು 6ರಂದು ಬೆಂಗಳೂರಿನ ಎಲ್ಲ ಉದ್ಯಾನವನಗಳಲ್ಲಿ ‘ಪಾರ್ಕ್ ಉಳಿಸಿ, ಬೆಂಗಳೂರು ರಕ್ಷಿಸಿ’ ಅಭಿಯಾನದಡಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾರಾಂತ್ಯದ ಶನಿವಾರ ಮತ್ತು ಭಾನುವಾರ ನಗರದ ಎಲ್ಲಾ ಪಾರ್ಕ್ಗಳಲ್ಲಿ ಈ ಪ್ರತಿಭಟನೆ ನಡೆಯಲಿದ್ದು, ಸಾರ್ವಜನಿಕರಿಂದ ಸಹಿ ಸಂಗ್ರಹಿಸಿ ರಾಜ್ಯಪಾಲರಿಗೆ ಸಲ್ಲಿಸಲಾಗುವುದು ಎಂದರು. ಈ ಅಭಿಯಾನದಲ್ಲಿ ಬಿಜೆಪಿಯ ಎಲ್ಲಾ ಶಾಸಕರು, ಮಾಜಿ ಶಾಸಕರು ಹಾಗೂ ಪಕ್ಷದ ಮುಖಂಡರು ಸಕ್ರಿಯವಾಗಿ ಭಾಗವಹಿಸಲಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.

ರಿಯಲ್ ಎಸ್ಟೇಟ್ ಮಾಫಿಯಾ ಆರೋಪ: ರಿಯಲ್ ಎಸ್ಟೇಟ್ ಮಾಫಿಯಾದ ತಾಳಕ್ಕೆ ತಕ್ಕಂತೆ ಸರ್ಕಾರ ನಡೆಯುತ್ತಿದೆ ಎಂದು ಆಪಾದಿಸಿದ ಆರ್.ಅಶೋಕ್, ಉದ್ಯಾನವನಗಳ ಕಬಳಿಕೆಗೆ ಈ ವಿಧೇಯಕದ ಮೂಲಕ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ದೂರಿದರು. ಆರಂಭದಲ್ಲಿ ಶೇ. 5ರಷ್ಟು ಎಂದು ಹೇಳಿ ಮುಂದೆ ಇದನ್ನು ಶೇ. 50ಕ್ಕೆ ಏರಿಸಬಹುದು ಎಂದು ಆತಂಕ ವ್ಯಕ್ತಪಡಿಸಿದರು. ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಗಾರ್ಡನ್ ಸಿಟಿಯನ್ನು ನಾಶ ಮಾಡಿದರೆ ಬೆಂಗಳೂರು ಕೂಡ ದೆಹಲಿಯಂತೆ ತೀವ್ರ ವಾಯುಮಾಲಿನ್ಯದ ನಗರವಾಗಲಿದೆ ಎಂದು ಎಚ್ಚರಿಸಿದರು.

ವಿಧೇಯಕ ಸಂಪೂರ್ಣ ಹಿಂಪಡೆಯಲು ಆಗ್ರಹ: ಕಾಂಗ್ರೆಸ್ ಸರ್ಕಾರವು 40 ವರ್ಷಗಳ ಹಿಂದೆಯೂ ಪಾರ್ಕ್ ಹಾಗೂ ಕ್ರೀಡಾಂಗಣಗಳನ್ನು ಅನ್ಯ ಉದ್ದೇಶಗಳಿಗೆ ಬಳಸಲು ಕಾನೂನು ತಂದು, ನಂತರ ತೀವ್ರ ಹೋರಾಟದ ಬಳಿಕ ವಾಪಸ್ ಪಡೆದಿತ್ತು. ಈಗಲೂ ಅದೇ ರೀತಿಯ ಕಾನೂನು ತರಲು ಹೊರಟಿದೆ. ಕೇವಲ ಚರ್ಚೆಗೆ ಅವಕಾಶ ನೀಡುತ್ತೇವೆ ಎನ್ನುವ ಸರ್ಕಾರದ ಹೇಳಿಕೆಯನ್ನು ತಳ್ಳಿಹಾಕಿದ ಅವರು, ಚರ್ಚೆ ಬೇಡ, ತಕ್ಷಣವೇ ಮಸೂದೆಯನ್ನು ಸಂಪೂರ್ಣವಾಗಿ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಸುರಂಗ ರಸ್ತೆ ಯೋಜನೆ ಮತ್ತು ಅದಾನಿ ಭೇಟಿ ಪ್ರಸ್ತಾಪ: ಸುರಂಗ ರಸ್ತೆ ಯೋಜನೆಯಲ್ಲಿ ಪಾರ್ಕಿಂಗ್ ಅಗತ್ಯವಿಲ್ಲದಿದ್ದರೂ, ಲಾಲ್ಬಾಗ್ ಜಾಗವನ್ನು ಮಾಲ್ ನಿರ್ಮಾಣಕ್ಕೆ ಬಳಸಲು ನಿರ್ಧರಿಸಲಾಗಿದೆ ಎಂದು ಆರೋಪಿಸಿದರು. ಈ ಯೋಜನೆ ಗುತ್ತಿಗೆ ಪಡೆದಿರುವ ಗೌತಮ್ ಅದಾನಿ ಅವರನ್ನು ಮನೆಗೆ ಕರೆಸಿ ಆತಿಥ್ಯ ನೀಡಿರುವುದನ್ನು ಪ್ರಸ್ತಾಪಿಸಿದ ಅವರು, ದೆಹಲಿಯಲ್ಲಿ ರಾಹುಲ್ ಗಾಂಧಿ ಅದಾನಿಯನ್ನು ಟೀಕಿಸುತ್ತಾರೆ ಆದರೆ ಇಲ್ಲಿಯ ಪರಿಸ್ಥಿತಿ ಬೇರೆಯಾಗಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande