ವಿಜಯಪುರ:ಸ್ವಾಮೀಜಿ ಸಮಾಧಿ ತೆರವು ವೇಳೆ ವಿಸ್ಮಯಕಾರಿ ಘಟನೆ; ಪಾರ್ಥಿವ ಶರೀರ ಕೊಳೆಯದ ಸ್ಥಿತಿಯಲ್ಲಿ ಪತ್ತೆ
ವಿಜಯಪುರ, 03 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ ; ವಿಜಯಪುರ ಜಿಲ್ಲೆಯ ಮನಗೂಳಿ ಪಟ್ಟಣದಲ್ಲಿ ಎಂಟು ತಿಂಗಳ ಹಿಂದೆ ಸಮಾಧಿ ಮಾಡಲಾಗಿದ್ದ ಸ್ವಾಮೀಜಿಯವರ ಪಾರ್ಥಿವ ಶರೀರವನ್ನು ಸಮಾಧಿಯಿಂದ ಹೊರತೆಗೆದಾಗ ದೇಹ ಕೊಳೆಯದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಭಕ್ತರು ತಿಳಿಸಿದ್ದಾರೆ. ಈ ಘಟನೆ ಇದೀಗ ಮನಗೂಳಿ ಸೇರಿದಂತ
ಆಚಾರಿ


ವಿಜಯಪುರ, 03 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ ; ವಿಜಯಪುರ ಜಿಲ್ಲೆಯ ಮನಗೂಳಿ ಪಟ್ಟಣದಲ್ಲಿ ಎಂಟು ತಿಂಗಳ ಹಿಂದೆ ಸಮಾಧಿ ಮಾಡಲಾಗಿದ್ದ ಸ್ವಾಮೀಜಿಯವರ ಪಾರ್ಥಿವ ಶರೀರವನ್ನು ಸಮಾಧಿಯಿಂದ ಹೊರತೆಗೆದಾಗ ದೇಹ ಕೊಳೆಯದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಭಕ್ತರು ತಿಳಿಸಿದ್ದಾರೆ. ಈ ಘಟನೆ ಇದೀಗ ಮನಗೂಳಿ ಸೇರಿದಂತೆ ವಿಜಯಪುರ ಜಿಲ್ಲೆಯಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಮನಗೂಳಿ ಪಟ್ಟಣದ ಚೌಕಿಮಠದ ಬಳಿ ಈ ಘಟನೆ ನಡೆದಿದೆ. ಶ್ರೀ ರೇವಣಸಿದ್ದೇಶ್ವರ ಗದ್ದುಗೆ ಪೂಜಾರಿಯಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಮಲ್ಲಯ್ಯ ಸರೂರ ಸ್ವಾಮೀಜಿ ಅವರು 2025ರ ಡಿಸೆಂಬರ್ 31ರಂದು ನಿಧನರಾಗಿದ್ದರು. ಅವರ ನಿಧನದ ಬಳಿಕ 2026ರ ಜನವರಿ 1ರಂದು ಚೌಕಿಮಠದ ಬಳಿ ಅಂತ್ಯಕ್ರಿಯೆ ನೆರವೇರಿಸಿ, ಪಾರ್ಥಿವ ಶರೀರವನ್ನು ಸಮಾಧಿ ಮಾಡಲಾಗಿತ್ತು.

ಕನಸಿನಲ್ಲಿ ಬಂದು ಸೂಚನೆ ನೀಡಿದ್ದರು ಎನ್ನುವ ಭಕ್ತರು

ಮಲ್ಲಯ್ಯ ಸರೂರ ಸ್ವಾಮೀಜಿ ಅವರು ಶ್ರೀ ರೇವಣಸಿದ್ದೇಶ್ವರ ಗದ್ದುಗೆಗೆ ಹಲವು ವರ್ಷಗಳಿಂದ ಪೂಜೆ ಸಲ್ಲಿಸುತ್ತಿದ್ದರು. ಸ್ವಾಮೀಜಿಯವರ ನಿಧನದ ಬಳಿಕ, ಅವರು ತಮ್ಮ ಭಕ್ತರ ಕನಸಿನಲ್ಲಿ ಕಾಣಿಸಿಕೊಂಡು ಶ್ರೀ ರೇವಣಸಿದ್ದೇಶ್ವರ ಗದ್ದುಗೆ ಬಳಿಯೇ ತಮ್ಮ ಅಂತ್ಯಕ್ರಿಯೆ ನೆರವೇರಿಸುವಂತೆ ಸೂಚನೆ ನೀಡಿದ್ದರು ಎಂದು ಭಕ್ತರಾದ ವಿರೂಪಾಕ್ಷ ಕರ್ಪೂರಮಠ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸ್ವಾಮೀಜಿಯವರ ಆಸೆಯನ್ನು ಈಡೇರಿಸುವ ಉದ್ದೇಶದಿಂದ ಭಕ್ತರು ಸಮಾಧಿಯನ್ನು ತೆರೆಯಲು ಮುಂದಾಗಿದ್ದಾರೆ. ಸುಮಾರು ಎಂಟು ತಿಂಗಳ ಬಳಿಕ ಸಮಾಧಿ ತೆರೆದ ಸಂದರ್ಭದಲ್ಲಿ ಸ್ವಾಮೀಜಿಯವರ ಪಾರ್ಥಿವ ಶರೀರವು ಕೊಳೆಯದ ಸ್ಥಿತಿಯಲ್ಲಿ ಕಂಡುಬಂದಿದೆ ಎಂದು ಭಕ್ತರು ಹೇಳಿದ್ದಾರೆ.

ಕೊಳೆತ ವಾಸನೆಯೂ ಇರಲಿಲ್ಲ ಎಂದ ಭಕ್ತರು

ಸಮಾಧಿ ತೆರೆದ ವೇಳೆ ದೇಹದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕೊಳೆಯುವಿಕೆಯ ಲಕ್ಷಣಗಳು ಕಂಡುಬಂದಿಲ್ಲ ಹಾಗೂ ಯಾವುದೇ ಕೊಳೆತ ವಾಸನೆಯೂ ಇರಲಿಲ್ಲ ಎಂದು ಸ್ಥಳದಲ್ಲಿದ್ದ ಭಕ್ತರು ತಿಳಿಸಿದ್ದಾರೆ. ಇದರಿಂದ ಭಕ್ತರಲ್ಲಿ ಅಚ್ಚರಿ ಮೂಡಿದ್ದು, ಘಟನೆಯನ್ನು ಅವರು ವಿಸ್ಮಯಕಾರಿ ಸಂಗತಿ ಎಂದು ಬಣ್ಣಿಸಿದ್ದಾರೆ.

ಸ್ವಾಮೀಜಿಯವರ ದೇಹವನ್ನು ಸಮಾಧಿಯಿಂದ ಹೊರತೆಗೆದ ಬಳಿಕ ವಿಶೇಷ ಪೂಜೆ ಸಲ್ಲಿಸಿ, ಬಾಜಾ-ಭಜಂತ್ರಿಯೊಂದಿಗೆ ಮೆರವಣಿಗೆ ನಡೆಸಲಾಯಿತು. ಭಕ್ತರು ಹಾಗೂ ಸ್ಥಳೀಯರು ಮೆರವಣಿಗೆಯಲ್ಲಿ ಪಾಲ್ಗೊಂಡು ಶ್ರೀ ರೇವಣಸಿದ್ದೇಶ್ವರ ಗದ್ದುಗೆ ಬಳಿಗೆ ಪಾರ್ಥಿವ ಶರೀರವನ್ನು ಕೊಂಡೊಯ್ದರು.ನಂತರ ಸ್ವಾಮೀಜಿಯವರ ಆಸೆಯಂತೆ ಶ್ರೀ ರೇವಣಸಿದ್ದೇಶ್ವರ ಗದ್ದುಗೆ ಪಕ್ಕದಲ್ಲೇ ಮರು ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಭಕ್ತರು ತಿಳಿಸಿದ್ದಾರೆ.

ಮನಗೂಳಿಯಲ್ಲಿ ಭಕ್ತರಲ್ಲಿ ಕುತೂಹಲ

ಎಂಟು ತಿಂಗಳ ಅವಧಿಯ ಬಳಿಕ ಸಮಾಧಿ ತೆರೆದಾಗ ದೇಹ ಕೊಳೆಯದ ಸ್ಥಿತಿಯಲ್ಲಿ ಕಂಡುಬಂದಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಮನಗೂಳಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಕುತೂಹಲ ಮೂಡಿದೆ. ಘಟನೆಯ ಕುರಿತು ಹಲವು ರೀತಿಯ ಚರ್ಚೆಗಳು ನಡೆಯುತ್ತಿದ್ದು, ಭಕ್ತರು ಇದನ್ನು ಸ್ವಾಮೀಜಿಯವರ ಆಧ್ಯಾತ್ಮಿಕ ಶಕ್ತಿ ಹಾಗೂ ಮಹಿಮೆಗೆ ಸಂಬಂಧಿಸಿದ ಘಟನೆ ಎಂದು ನಂಬುತ್ತಿದ್ದಾರೆ.

ಆದರೆ ದೇಹದ ಸ್ಥಿತಿ ಏಕೆ ಹೀಗಿದೆ ಎಂಬುದಕ್ಕೆ ಈ ಹಂತದಲ್ಲಿ ಯಾವುದೇ ವೈಜ್ಞಾನಿಕ ಅಥವಾ ವೈದ್ಯಕೀಯ ಕಾರಣ ದೃಢಪಟ್ಟಿಲ್ಲ. ದೇಹದ ಸಂರಕ್ಷಣೆ, ಸಮಾಧಿಯಲ್ಲಿನ ಮಣ್ಣಿನ ಸ್ವರೂಪ, ತೇವಾಂಶ, ತಾಪಮಾನ, ಆಮ್ಲಜನಕದ ಪ್ರಮಾಣ ಸೇರಿದಂತೆ ಹಲವು ಪರಿಸರ ಹಾಗೂ ಜೈವಿಕ ಅಂಶಗಳು ದೇಹದ ಕೊಳೆಯುವಿಕೆಯ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ಘಟನೆಯ ಕುರಿತು ವೈಜ್ಞಾನಿಕ ಪರಿಶೀಲನೆ ನಡೆದ ಬಳಿಕವೇ ನಿಖರ ಕಾರಣ ತಿಳಿದುಬರಬೇಕಿದೆ.

ಇದೀಗ ಭಕ್ತರು ಮಾತ್ರ ಈ ಘಟನೆಯನ್ನು ಅಪರೂಪದ ಹಾಗೂ ವಿಸ್ಮಯಕಾರಿ ಘಟನೆ ಎಂದು ಪರಿಗಣಿಸುತ್ತಿದ್ದು, “ಸ್ವಾಮೀಜಿಯವರ ಇಚ್ಛೆಯಂತೆ ಗದ್ದುಗೆ ಬಳಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ” ಎಂದು ಹೇಳುತ್ತಿದ್ದಾರೆ.

ಎಂಟು ತಿಂಗಳ ಬಳಿಕ ಸಮಾಧಿ ತೆರೆದಾಗ ಪಾರ್ಥಿವ ಶರೀರ ಕೊಳೆಯದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎನ್ನಲಾದ ಈ ಘಟನೆ ಮನಗೂಳಿ ಪಟ್ಟಣದಲ್ಲಿ ಮಾತ್ರವಲ್ಲದೆ ವಿಜಯಪುರ ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande