
ಬಳ್ಳಾರಿ, 03 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮದ ವತಿಯಿಂದ 2026-27ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳಿಂದ ಸೇವಾ ಸಿಂಧು ಪೋರ್ಟಲ್ ಮೂಲಕ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ಹಿಂದುಳಿದ ವರ್ಗಗಳ ಸವಿತಾ ಸಮಾಜ ಹಾಗೂ ಅದರ ಉಪಜಾತಿಗಳಿಗೆ ಸೇರಿದ ಅರ್ಹ ನಿರುದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ಈ ಕೆಳಕಂಡ ಯೋಜನೆಗಳ ಪ್ರಯೋಜನ ಪಡೆಯಬಹುದಾಗಿದೆ.
*ಸ್ವಯಂ ಉದ್ಯೋಗ ಸಾಲ ಯೋಜನೆ:*
ಉದ್ದೇಶ: ಕೃಷಿ ಅವಲಂಬಿತ ಚಟುವಟಿಕೆ, ವ್ಯಾಪಾರ, ಕೈಗಾರಿಕೆ, ಸಾರಿಗೆ ಮತ್ತು ಸೇವಾ ವಲಯದಲ್ಲಿ ಆರ್ಥಿಕ ಚಟುವಟಿಕೆ ಕೈಗೊಳ್ಳಲು ನೆರವು.
ಸಾಲ ಹಾಗೂ ಸಬ್ಸಿಡಿ ಮೊತ್ತ: ಗರಿಷ್ಠ ರೂ. 2 ಲಕ್ಷಗಳವರೆಗೆ ಆರ್ಥಿಕ ನೆರವು. ರೂ. 1 ಲಕ್ಷದವರೆಗಿನ ಸಾಲಕ್ಕೆ ಶೇ. 20ರಷ್ಟು (ಗರಿಷ್ಠ ರೂ. 20,000) ಸಬ್ಸಿಡಿ ಹಾಗೂ ರೂ. 1.01 ಲಕ್ಷದಿಂದ ರೂ. 2 ಲಕ್ಷದವರೆಗೆ ಶೇ. 15ರಷ್ಟು (ಕನಿಷ್ಠ ರೂ. 20,000 ದಿಂದ ಗರಿಷ್ಠ ರೂ. 30,000/-ವರೆಗೆ) ಸಬ್ಸಿಡಿ ದೊರೆಯಲಿದೆ. ಉಳಿಕೆ ಮೊತ್ತವನ್ನು ಶೇ. 4ರ ಬಡ್ಡಿದರದಲ್ಲಿ ನಿಗಮದಿಂದ ಸಾಲವಾಗಿ ನೀಡಲಾಗುತ್ತದೆ.
ಅರ್ಹತೆ: ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಮಿತಿಯಲ್ಲಿರಬೇಕು. ಕುಟುಂಬದ ವಾರ್ಷಿಕ ಆದಾಯ ಗ್ರಾಮಾಂತರ ಪ್ರದೇಶದವರಿಗೆ ಗರಿಷ್ಠ ರೂ. 98,000 ಹಾಗೂ ಪಟ್ಟಣ ಪ್ರದೇಶದವರಿಗೆ ರೂ. 1,20,000 ಗಳ ಒಳಗಿರಬೇಕು.
*ಅರಿವು - ಶೈಕ್ಷಣಿಕ ಸಾಲ ಯೋಜನೆ:*
ಉದ್ದೇಶ: ಸಿಇಟಿ ಮತ್ತು ನೀಟ್ ಮೂಲಕ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಇಂಜಿನಿಯರಿ0ಗ್, ವೈದ್ಯಕೀಯ, ದಂತ ವೈದ್ಯಕೀಯ ಸೇರಿದಂತೆ 28 ವೃತ್ತಿಪರ ಕೋರ್ಸ್ಗಳ ವ್ಯಾಸಂಗಕ್ಕೆ ಆರ್ಥಿಕ ನೆರವು.
ಸಾಲದ ಮೊತ್ತ: ವಾರ್ಷಿಕ ರೂ. 1 ಲಕ್ಷದಂತೆ ಪೂರ್ಣ ಕೋರ್ಸ್ಗೆ ಗರಿಷ್ಠ ರೂ. 4 ಲಕ್ಷದಿಂದ ರೂ. 5 ಲಕ್ಷದವರೆಗೆ ಶೇ. 2ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುವುದು.
ಅರ್ಹತೆ: ವಿದ್ಯಾರ್ಥಿಯ ವಯಸ್ಸು 30 ವರ್ಷದೊಳಗಿರಬೇಕು ಹಾಗೂ ಕುಟುಂಬದ ವಾರ್ಷಿಕ ಆದಾಯ ರೂ. 3.50 ಲಕ್ಷಗಳ ಮಿತಿಯಲ್ಲಿರಬೇಕು.
*ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಸಾಲ ಯೋಜನೆ:*
ಉದ್ದೇಶ: ಪ್ರತಿಷ್ಠಿತ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ, ಪಿಎಚ್.ಡಿ ಹಾಗೂ ಪೋಸ್ಟ್ ಡಾಕ್ಟರಲ್ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ನೆರವು.
ಸಾಲದ ಮೊತ್ತ: ವಾರ್ಷಿಕ ಗರಿಷ್ಠ ರೂ. 25 ಲಕ್ಷ ಹಾಗೂ ಪೂರ್ಣ ಕೋರ್ಸ್ಗೆ ಗರಿಷ್ಠ ರೂ. 50 ಲಕ್ಷಗಳವರೆಗೆ ಬಡ್ಡಿರಹಿತ ಸಾಲ ನೀಡಲಾಗುತ್ತದೆ.
*ಅರ್ಹತೆ ಮತ್ತು ಷರತ್ತುಗಳು:*
ಕಿಖ್ ವರ್ಲ್ಡ್ ರ್ಯಾಂಕಿ0ಗ್ 1000 ರೊಳಗೆ ಬರುವ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದಿರಬೇಕು. ಹಿಂದಿನ ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ ಶೇ. 60 ಅಂಕ ಪಡೆದಿರಬೇಕು. ಕುಟುಂಬದ ವಾರ್ಷಿಕ ಆದಾಯ ರೂ. 15 ಲಕ್ಷದೊಳಗಿರಬೇಕು.
ವಯೋಮಿತಿ: ಸ್ನಾತಕೋತ್ತರ ಪದವಿಗೆ 32 ವರ್ಷ ಹಾಗೂ ಪಿಎಚ್.ಡಿಗೆ 35 ವರ್ಷಗಳ ಮಿತಿ ಇರುತ್ತದೆ. ಸಾಲದ ಭದ್ರತೆಗೆ ಸ್ಥಿರಾಸ್ತಿಯನ್ನು ನಿಗಮಕ್ಕೆ ಆಧಾರ ಮಾಡಬೇಕಾಗುತ್ತದೆ.
ಅರ್ಜಿದಾರರು ಆಧಾರ್ ಜೋಡಣೆಯಾದ ಚಾಲ್ತಿ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಆಧಾರ್ ಕಾರ್ಡ್ನಲ್ಲಿರುವಂತೆ ಹೆಸರು, ಜಾತಿ/ಆದಾಯ ಪ್ರಮಾಣ ಪತ್ರ ಹಾಗೂ ಬ್ಯಾಂಕ್ ಪಾಸ್ಬುಕ್ ವಿವರಗಳು ತಾಳೆಯಾಗಬೇಕು. ಈ ಹಿಂದೆ ನಿಗಮದ ಯಾವುದೇ ಯೋಜನೆಯಲ್ಲಿ ಸೌಲಭ್ಯ ಪಡೆದವರು ಹಾಗೂ ಅವರ ಕುಟುಂಬದವರು ಮರು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. 2024-25 ಮತ್ತು 2025-26ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿ ಸೌಲಭ್ಯ ಸಿಗದೇ ಬಾಕಿ ಇರುವ ಅರ್ಜಿದಾರರು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ.
ಅರ್ಹರು ಅರ್ಜಿ ಸಲ್ಲಿಸಲು ಸಮೀಪದ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ನಾಗರಿಕ ಸೇವಾ ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಸೆ.30 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ನಿಗಮದ ಸಹಾಯವಾಣಿ ಸಂಖ್ಯೆ: 080-22374832, 8050770004, 8050770005 ಅಥವಾ ಜಿಲ್ಲಾ ಕಚೇರಿ ಸಂಪರ್ಕ ಸಂಖ್ಯೆ (ಬಳ್ಳಾರಿ): 08392-267038 ಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್