
ಗದಗ, 03 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:- ಆಧ್ಯಾತ್ಮಿಕ ಸಾಧನೆ, ಸಮಾಜಮುಖಿ ಸೇವೆ ಹಾಗೂ ಮಾನವೀಯ ಮೌಲ್ಯಗಳ ಬೋಧನೆಯ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದ ಸದ್ಗುರು ಶರಣಾನಂದರು ಮಹಾನ್ ತಪಸ್ವಿಗಳಾಗಿದ್ದರು ಎಂದು ಗದಗ-ಬೆಟಗೇರಿಯ ಮುಕ್ಕಣ್ಣೇಶ್ವರ ಮಠದ ಪೀಠಾಧಿಪತಿ ಶಂಕರಾನಂದ ಸ್ವಾಮಿಗಳು ಹೇಳಿದರು.
ಗದಗ-ಬೆಟಗೇರಿಯ ಕರಿಯಮ್ಮ ದೇವಿ ಬಡಾವಣೆಯ ಮುಕ್ಕಣ್ಣೇಶ್ವರ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಸದ್ಗುರು ಶರಣಾನಂದ ಸ್ವಾಮಿಗಳ 32ನೇ ಪುಣ್ಯಾರಾಧನೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಸದ್ಗುರು ಶರಣಾನಂದರು ತಮ್ಮ ಬದುಕನ್ನೇ ಸಮಾಜದ ಒಳಿತಿಗಾಗಿ ಮುಡಿಪಾಗಿಟ್ಟಿದ್ದರು. ಅವರ ಆಧ್ಯಾತ್ಮಿಕ ಚಿಂತನೆಗಳು, ಸಮಾಜಮುಖಿ ಕಾರ್ಯಗಳು ಹಾಗೂ ಮಾನವೀಯ ಮೌಲ್ಯಗಳ ಬೋಧನೆ ಇಂದಿಗೂ ಜನರಿಗೆ ಮಾರ್ಗದರ್ಶನ ನೀಡುತ್ತಿವೆ ಎಂದರು.
ಸದ್ಗುರು ಶರಣಾನಂದರು ಸಮಾಜದಲ್ಲಿ ಶಾಂತಿ, ಸಮಾನತೆ ಮತ್ತು ಕಾಯಕ ನಿಷ್ಠೆ ನೆಲೆಸಬೇಕು ಎಂಬ ಆಶಯ ಹೊಂದಿದ್ದರು. ಮನುಷ್ಯನ ಬದುಕಿನಲ್ಲಿ ಆಧ್ಯಾತ್ಮಿಕತೆ ಹಾಗೂ ನೈತಿಕ ಮೌಲ್ಯಗಳು ಮಹತ್ವದ ಪಾತ್ರ ವಹಿಸುತ್ತವೆ. ಇಂದಿನ ವೇಗದ ಹಾಗೂ ಒತ್ತಡದ ಜೀವನಶೈಲಿಯಲ್ಲಿ ಮನುಷ್ಯ ನೆಮ್ಮದಿ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಸದ್ಗುರುಗಳ ವಿಚಾರಧಾರೆಗಳು ಮತ್ತಷ್ಟು ಪ್ರಸ್ತುತವಾಗಿವೆ ಎಂದು ಹೇಳಿದರು.
ತ್ಯಾಗ, ಕರುಣೆ, ಸರಳತೆ ಹಾಗೂ ಸನ್ಮಾರ್ಗದ ಬದುಕಿನ ಮೂಲಕ ಸಮಾಜಕ್ಕೆ ಮಾದರಿಯಾದ ಶ್ರೀಗಳ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿಶೇಷವಾಗಿ ಯುವಜನತೆ ಸದ್ಗುರುಗಳ ಜೀವನ ಹಾಗೂ ಬೋಧನೆಗಳನ್ನು ಅರಿತುಕೊಂಡು ಉತ್ತಮ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಅವರ ವಿಚಾರಗಳು ಮಾನವ ಕುಲಕ್ಕೆ ಸದಾ ದಾರಿದೀಪವಾಗಿವೆ ಎಂದು ಶಂಕರಾನಂದ ಸ್ವಾಮಿಗಳು ಸ್ಮರಿಸಿದರು.
ಮುಳಗುಂದದ ಆರ್.ಎನ್. ದೇಶಪಾಂಡೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ರಮೇಶ ಕಲ್ಲನಗೌಡ್ರ ಮಾತನಾಡಿ, ಶ್ರಾವಣ ಮಾಸದಲ್ಲಿ ಕೇಳುವ ಉತ್ತಮ ವಿಚಾರಗಳನ್ನು ಕೇವಲ ಕೇಳುವುದಕ್ಕೆ ಸೀಮಿತಗೊಳಿಸದೆ, ಅವುಗಳನ್ನು ಮನನ ಮಾಡಿಕೊಂಡು ಜೀವನದಲ್ಲಿ ಧಾರಣೆ ಮಾಡಿಕೊಳ್ಳಬೇಕು. ಸದ್ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಆಧ್ಯಾತ್ಮಿಕ ಕಾರ್ಯಕ್ರಮಗಳ ಉದ್ದೇಶ ಸಾರ್ಥಕವಾಗುತ್ತದೆ ಎಂದರು.
ಜೀವನದಲ್ಲಿ ಗುರಿ ಸಾಧಿಸಲು ದಾರಿಗಳು ಹಲವು ಇರಬಹುದು. ಆದರೆ ಸತ್ಯ, ಧರ್ಮ ಹಾಗೂ ಸನ್ಮಾರ್ಗದ ಮೂಲಕ ಸಾಗುವುದು ಮುಖ್ಯ. ‘ಒಂದು, ದಾರಿ ಹಲವು’ ಎಂಬ ಸಂದೇಶವನ್ನು ನೀಡಿದ ಅವರು, ಮುಕ್ಕಣ್ಣಜ್ಜನವರು ಮೂರನೇ ಕಣ್ಣು ಹೊಂದಿದ ಮಹಾನ್ ಸಾಧಕರಾಗಿದ್ದು, ಅವರ ಸಾಧನೆ ಅಸಾಮಾನ್ಯವಾದುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಂಕರ ಹಾನಗಲ್ ಮಾತನಾಡಿ, ಗದಗ ನಗರದ ಕರಿಯಮ್ಮ ದೇವಿ ಬಡಾವಣೆಯಲ್ಲಿರುವ ಮುಕ್ಕಣ್ಣೇಶ್ವರ ಮಠವು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರವಾಗಿ ತನ್ನದೇ ಆದ ಮಹತ್ವ ಹೊಂದಿದೆ. ಮಠದ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಕುರಿತು ವಿವರಿಸಿದರು. ಮಠದ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಮಹಾದ್ವಾರ ನಿರ್ಮಾಣ ಮಾಡುವ ಸಂಕಲ್ಪವನ್ನು ವ್ಯಕ್ತಪಡಿಸಿದರು.
ಸದ್ಗುರು ಶರಣಾನಂದರ ಪುಣ್ಯಸ್ಮರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಉಪನ್ಯಾಸಗಳು ಭಕ್ತರು ಹಾಗೂ ಸಾರ್ವಜನಿಕರ ಗಮನ ಸೆಳೆದವು. ಆಧ್ಯಾತ್ಮಿಕ ವಿಚಾರಧಾರೆಗಳು, ಸದ್ಗುರುಗಳ ಜೀವನಾದರ್ಶಗಳು ಹಾಗೂ ಮಾನವೀಯ ಮೌಲ್ಯಗಳ ಕುರಿತು ಚಿಂತನೆ ನಡೆಯಿತು.
ಇದೇ ಸಂದರ್ಭದಲ್ಲಿ ಸಂತ ರಾಮಕೃಷ್ಣ ಕಲ್ಯಾಣಿ ಅವರ ನೇತೃತ್ವದಲ್ಲಿ ಜ್ಞಾನೇಶ್ವರಿ ಪಾರಾಯಣ ಭಕ್ತಿಭಾವದಿಂದ ನಡೆಯಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸದ್ಗುರು ಶರಣಾನಂದರ ಸ್ಮರಣೆ ಮಾಡಿದರು. ಕಾರ್ಯಕ್ರಮವು ಆಧ್ಯಾತ್ಮಿಕ ವಾತಾವರಣದಲ್ಲಿ ಅರ್ಥಪೂರ್ಣವಾಗಿ ಜರುಗಿತು.
ಕಾರ್ಯಕ್ರಮದಲ್ಲಿ ನಗರಸಭಾ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್, ರಾಮಕೃಷ್ಣ ಕಲ್ಯಾಣಿ, ನೀಲಕಂಠಪ್ಪ ಬುಟ್ಟಾ, ಮಲ್ಲೇಶಪ್ಪ ಅಣ್ಣಿಗೇರಿ, ವಿಜಯಕುಮಾರ ಚೋಳಿನ, ಐಶ್ವರ್ಯ ಹೂಲಿ, ಶವಶಂಕರ ದೊಡ್ಡಮನಿ ಸೇರಿದಂತೆ ಮಠದ ಭಕ್ತರು, ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP