
ಗದಗ, 03 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:- ಆತ್ಮವಿಶ್ವಾಸವು ಮಕ್ಕಳಲ್ಲಿ ಇತರರೊಂದಿಗೆ ಬೆರೆಯುವ ಗುಣ, ಸ್ವಯಂಪ್ರೇರಣೆ, ಕಲಿಕೆಯ ಆಸಕ್ತಿ, ಅನ್ವೇಷಣಾ ಪ್ರವೃತ್ತಿ, ಪ್ರಶ್ನಿಸುವ ಮನೋಭಾವ ಹಾಗೂ ಸೃಜನಶೀಲತೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಮಕ್ಕಳು ಆತ್ಮವಿಶ್ವಾಸದಿಂದ ಶೈಕ್ಷಣಿಕ ಸಾಧನೆಯತ್ತ ಮುನ್ನಡೆಯಬೇಕು ಎಂದು ಚಿಂತಕಿ ಅನ್ನಪೂರ್ಣ ವರವಿ ಹೇಳಿದರು.
ಗದಗ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 15ರಲ್ಲಿ ಗದಗ ಜಿಲ್ಲಾ ಶರಣ ಸಂಕುಲದ ಶರಣೆ ಅಕ್ಕಮಹಾದೇವಿಯ ಕದಳಿ ವೇದಿಕೆ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಿದ್ದ ‘ಅಮೃತಭೋಜನ–ಜ್ಞಾನ ಸಿಂಚನ’ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಿಹಿ ಭೋಜನ ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಹಾಗೂ ತಂತ್ರಜ್ಞಾನ ಆಧಾರಿತ ಯುಗದಲ್ಲಿ ಮಕ್ಕಳು ಹಲವು ರೀತಿಯ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಬೇಕಾಗಿದೆ. ಅದಕ್ಕಾಗಿ ಬಾಲ್ಯದಿಂದಲೇ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವುದು ಅಗತ್ಯ. ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಆತ್ಮವಿಶ್ವಾಸವು ಯಶಸ್ಸಿನ ಮುನ್ನುಡಿಯಾಗಿ ಕಾರ್ಯನಿರ್ವಹಿಸುತ್ತದೆ. ಯಾವುದೇ ವಿಷಯವನ್ನು ಕಲಿಯುವಾಗ ಪ್ರಶ್ನಿಸುವ, ಹೊಸ ವಿಚಾರಗಳನ್ನು ತಿಳಿದುಕೊಳ್ಳುವ ಹಾಗೂ ಪ್ರಯತ್ನಿಸುವ ಮನೋಭಾವವನ್ನು ಮಕ್ಕಳು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಿವೃತ್ತ ಶಿಕ್ಷಕಿ ಸುವರ್ಣ ಗುರಮ್ಮನವರ ಅವರು ಮಕ್ಕಳಿಗೆ ಗಾದೆಮಾತುಗಳ ಕುರಿತು ತಿಳುವಳಿಕೆ ನೀಡಿದರು. ಹಿರಿಯರ ಅನುಭವದ ಸಾರವೇ ಗಾದೆಮಾತುಗಳಾಗಿದ್ದು, ಅವು ಚಿಕ್ಕದಾಗಿದ್ದರೂ ಆಳವಾದ ಹಾಗೂ ಅರ್ಥಪೂರ್ಣ ಜೀವನ ಸಂದೇಶವನ್ನು ಒಳಗೊಂಡಿರುತ್ತವೆ. ಪ್ರತಿಯೊಂದು ಗಾದೆಯ ಹಿಂದೆಯೂ ಬದುಕಿನ ಅನುಭವ ಅಡಗಿದ್ದು, ಅವುಗಳ ಅರ್ಥವನ್ನು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕದಳಿಶ್ರೀ ವೇದಿಕೆಯ ಸಂಚಾಲಕಿ ಕವಿತಾ ದಂಡಿನ ಮಾತನಾಡಿ, ಶ್ರಾವಣ ಮಾಸದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರನ್ನು ಸರ್ಕಾರಿ ಶಾಲೆಗಳಿಗೆ ಆಹ್ವಾನಿಸಿ, ಮಕ್ಕಳಿಗೆ ಜೀವನ ಮೌಲ್ಯಗಳು, ಶಿಕ್ಷಣದ ಮಹತ್ವ ಹಾಗೂ ಪ್ರೇರಣಾದಾಯಕ ವಿಚಾರಗಳನ್ನು ತಿಳಿಸುವ ಕಾರ್ಯವನ್ನು ವೇದಿಕೆ ನಡೆಸುತ್ತಿದೆ ಎಂದರು.
ಸರ್ಕಾರಿ ಶಾಲೆಗಳ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸುವುದು ಹಾಗೂ ಸಮುದಾಯವನ್ನು ಸರ್ಕಾರಿ ಶಾಲೆಗಳತ್ತ ಆಕರ್ಷಿಸುವ ಉದ್ದೇಶದಿಂದ ಸಿಹಿ ಭೋಜನದ ಜೊತೆಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ. ಮಕ್ಕಳ ಶೈಕ್ಷಣಿಕ ಮತ್ತು ಸೃಜನಶೀಲ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳನ್ನು ಮುಂದುವರಿಸಲಾಗುವುದು ಎಂದು ತಿಳಿಸಿದರು.
ವಿದ್ಯಾರ್ಥಿನಿಯರಾದ ಅರ್ಚನಾ ಯಂಡಿಗೇರಿ, ಲೋಕೇಶ್ವರಿ ಮುಧೋಳ ಹಾಗೂ ಮಲ್ಲಿಕಾ ದಹಿಂಡೆ ಅವರು ವಚನ ಪ್ರಾರ್ಥನೆ ನೆರವೇರಿಸಿದರು. ಮುಖ್ಯೋಪಾಧ್ಯಾಯಿನಿ ವಿ.ಎನ್. ಬಸಾಪೂರ ಸ್ವಾಗತಿಸಿದರು. ಬಿ. ಯಶೋಧಾ ನಿರೂಪಿಸಿದರು. ವಿ.ಬಿ. ಕರಬಸಗೌಡರ ವಂದಿಸಿದರು.
ಕಾರ್ಯಕ್ರಮದಲ್ಲಿ ರೇಣುಕಾ ಗೌಳಿಕೇರ, ಗಿರಿಜಾ ದಾಸರ, ಮಹಾದೇವಿ ಮೊಸಳಿ, ವಿನೋದಾ ಕೆಳಗಿನಮನಿ, ಪ್ರಿಯಾಂಕಾ ಲಮಾಣಿ, ರೇಖಾ ಮೂಗನೂರ, ರೇಣುಕಾ ಶಿಂಧೆ ಸೇರಿದಂತೆ ಶಿಕ್ಷಕರು, ವೇದಿಕೆಯ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP